ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪ್ರಶ್ನೆಗಳು ಬೇಡವಾದ ಹೊತ್ತಿನಲ್ಲಿ...

ಧರ್ಮ ಮತ್ತು ದೇವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯವು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗದ ಸಂದರ್ಭ ಸೃಷ್ಟಿಸುವಲ್ಲಿ ಸಫಲವಾಗುತ್ತಿದೆ
Last Updated 14 ಜುಲೈ 2022, 19:30 IST
ಅಕ್ಷರ ಗಾತ್ರ

‘ವಿಜ್ಞಾನದಿಂದ ನೀವು ಇದುವರೆಗೂ ಕಲಿತಿರುವುದೇನು’ ಎಂಜಿನಿಯರಿಂಗ್ ಓದಿನ ವೇಳೆ ಈ ಪ್ರಶ್ನೆಯನ್ನು ಅಧ್ಯಾಪಕರೊಬ್ಬರು ವಿದ್ಯಾರ್ಥಿಗಳತ್ತ ತೂರಿದ್ದರು. ಈ ಅನಿರೀಕ್ಷಿತ ಪ್ರಶ್ನೆಗೆ ನಮ್ಮ ಕಡೆಯಿಂದ ಸೂಕ್ತ ಉತ್ತರ ದೊರಕದೇ ಹೋದಾಗ, ಕೊನೆಗೆ ಅವರೇ ‘ವಿಜ್ಞಾನ ನಮಗೆ ಪ್ರಶ್ನಿಸುವುದನ್ನು ಕಲಿಸುತ್ತದೆ. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡ ಎಂಬ ಸಲಹೆ ನೀಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳಾದ ನೀವು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವಿಜ್ಞಾನಕ್ಕೆ ಗೌರವ ಸಲ್ಲಿಸಬೇಕು’ ಎಂದು ನಮಗೆಲ್ಲರಿಗೂ ತಿಳಿಸಿದ್ದರು.

ಅದರ ಜೊತೆಗೆ ‘ಧಾರ್ಮಿಕ ಪಠ್ಯಗಳಿಗೂ ವಿಜ್ಞಾನದ ಪಠ್ಯಗಳಿಗೂ ಇರುವ ವ್ಯತ್ಯಾಸವೇನು ಹೇಳಿ’ ಎಂದು ಮತ್ತೊಂದು ಪ್ರಶ್ನೆ ಹರಿಯಬಿಟ್ಟಿದ್ದರು. ಅದಕ್ಕೂ ನಮ್ಮಿಂದ ಉತ್ತರ ಬಾರದೇ ಹೋದಾಗ, ಅವರೇ ‘ಧಾರ್ಮಿಕ ಪಠ್ಯದಲ್ಲಿರುವುದೆಲ್ಲ ಅಂತಿಮ ಸತ್ಯವೆಂದು ಜನ ನಂಬುತ್ತಾರೆ ಅಥವಾ ಹಾಗೆಂದು ನಂಬಿಸಲಾಗುತ್ತದೆ. ಆದರೆ ವಿಜ್ಞಾನದಲ್ಲಿ ಅಂತಿಮ ಸತ್ಯವೆಂಬುದೇ ಇಲ್ಲ. ಅದುವರೆಗೂ ನಿರೂಪಿತವಾಗಿರುವ ವೈಜ್ಞಾನಿಕ ವಿವರಣೆಯನ್ನು ಅದು ಹಾಗಲ್ಲ ಹೀಗೆ ಎಂದು ಯಾರಾದರೂ ಪ್ರಯೋಗಗಳ ಮೂಲಕ ಸಾಬೀತುಪಡಿಸಿದರೆ, ವೈಜ್ಞಾನಿಕ ಸತ್ಯವೆಂಬುದು ಕೂಡ ಬದಲಾವಣೆಗೆ ಒಳಪಡುತ್ತದೆ. ಅದೇ ಧಾರ್ಮಿಕ ಪಠ್ಯವು ಎಂದೋ ಯಾರೋ ಹೇಳಿರುವುದನ್ನೇ ಅಂತಿಮ ಸತ್ಯವೆಂದು ನಂಬಿಕೊಳ್ಳುವ ಅನಿವಾರ್ಯ ಸೃಷ್ಟಿಸುತ್ತದೆ’ ಎಂದು ವಿವರಿಸಿದ್ದರು.

ಕೊನೆಗೆ ‘ಪ್ರಶ್ನೆಗಳು ಮತ್ತು ಬದಲಾವಣೆಗೆ ತನ್ನನ್ನು ತೆರೆದುಕೊಂಡಿರುವ ವಿಜ್ಞಾನ ಮತ್ತು ಪ್ರಶ್ನೆಗಳನ್ನು ಸಹಿಸದ ಹಾಗೂ ಬದಲಾವಣೆಗೆ ತೆರೆದುಕೊಳ್ಳದ ಧರ್ಮ ಇವೆರಡರಲ್ಲಿ ಯಾವುದು ಮನುಕುಲಕ್ಕೆ ಸೂಕ್ತವೆಂದು ನೀವೇ ನಿರ್ಧರಿಸಿ’ ಎಂದಿದ್ದರು.

ಧಾರ್ಮಿಕ ಭಾವನೆಗಳ ನೆಪ ಮುಂದಿಟ್ಟುಕೊಂಡು ಜನ ಬಡಿದಾಡುತ್ತಿರುವ ವರ್ತಮಾನವನ್ನು ಗಮನಿಸಿದರೆ, ಅಂದು ಅಧ್ಯಾಪಕರು ನಮ್ಮೆದುರು ಮಂಡಿಸಿದ್ದ ಆಯ್ಕೆಗಳಲ್ಲಿ ಧರ್ಮವೇ ಸೂಕ್ತವೆಂದು ಬಹುತೇಕರು ನಿರ್ಧರಿಸಿಬಿಟ್ಟರೇನೊ ಎನ್ನುವ ಅನುಮಾನ ಕಾಡದಿರದು. ಶೈಕ್ಷಣಿಕ ಪಠ್ಯದ ಭಾಗವಾಗಿ ವಿಜ್ಞಾನವನ್ನು ಓದುವ ಮತ್ತು ಬೋಧಿಸುವ ಅದೆಷ್ಟು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಶ್ನಿಸುವ, ಪ್ರಶ್ನಿಸುವವರನ್ನು ಗೌರವಿಸುವ ಮನೋಭಾವ ಹೊಂದಿದ್ದಾರೆ? ಸಾಮಾಜಿಕ ಜಾಲತಾಣಗಳು ಮತ್ತು ವೈಯಕ್ತಿಕ ಮಾತುಕತೆಗಳಲ್ಲಿ ಹೊರಹೊಮ್ಮತೊಡಗಿರುವ ಧಾರ್ಮಿಕ ದ್ವೇಷದ ನಂಜಿನ ತೀವ್ರತೆಯನ್ನು ಗಮನಿಸಿದರೆ, ವಿಜ್ಞಾನದ ಓದು ಇವರ ಮೇಲೆ ಯಾವುದೇ ಪರಿಣಾಮ ಬೀರಿರುವ ಸೂಚನೆ ಸಿಗಲಾರದು.

ಧರ್ಮ ಮತ್ತು ದೇವರ ಹೆಸರಿನಲ್ಲಿ ನಡೆಯು ತ್ತಿರುವ ರಾಜಕೀಯವು ಧರ್ಮ ಮತ್ತು ದೇವರು ಪ್ರಭಾವಶಾಲಿಯೋ ಅವುಗಳ ಅನುಯಾಯಿಗಳು ಪ್ರಭಾವಶಾಲಿಗಳೋ ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಳ್ಳಲಾಗದ ಸಂದರ್ಭ ಸೃಷ್ಟಿಸುವಲ್ಲಿ ಸಫಲವಾಗುತ್ತಿದೆ. ದೇವರು ಭಕ್ತರನ್ನು ಕಾಪಾಡಬೇಕೋ ಭಕ್ತರೇ ದೇವರನ್ನು ಕಾಪಾಡಬೇಕೋ? ಧರ್ಮವು ಅನುಯಾಯಿಗಳನ್ನು ರಕ್ಷಿಸುವುದೋ ಅನುಯಾಯಿಗಳೇ ಧರ್ಮವನ್ನು ರಕ್ಷಿಸಬೇಕೋ ತಿಳಿಯದಾಗಿದೆ.

ನಮ್ಮನ್ನು ಬಾಧಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳೆಲ್ಲವನ್ನೂ ಬದಿಗಿರಿಸಿ ನಾವಿಂದು ಹೆಚ್ಚೆಚ್ಚು ಚರ್ಚಿಸತೊಡಗಿರುವ ದೇವರು ಮತ್ತು ಧರ್ಮದ ಕುರಿತಾದ ವಿಚಾರಗಳನ್ನು ಒಂದಿಷ್ಟು ಸಂಯಮದಿಂದ ಅವಲೋಕಿಸತೊಡಗಿದರೆ, ದೇವರು ಮತ್ತು ಧರ್ಮವನ್ನು ಮನುಷ್ಯರೇ ರಕ್ಷಿಸಬೇಕೆಂಬ ನಿಲುವಿಗೆ ನಮ್ಮನ್ನು ಜೋತು ಬೀಳಿಸುವ ರಾಜಕೀಯದ ದರ್ಶನ ವಾಗಲಿದೆ. ಯಾರೋ ಏನೋ ಹೇಳಿದ ಮಾತ್ರಕ್ಕೆ ಧಕ್ಕೆಯಾಗುವಷ್ಟು ದೇವರು-ಧರ್ಮ ದುರ್ಬಲವೇ? ಟೀಕೆಗಳನ್ನು ಜೀರ್ಣಿಸಿಕೊಳ್ಳುವ ವ್ಯವಧಾನವು ಧರ್ಮ ಮತ್ತು ದೇವರಿಗೆ ಇಲ್ಲವೋ ಅಥವಾ ಇದು ಅನುಯಾಯಿಗಳು ಸೃಷ್ಟಿಸುತ್ತಿರುವ ಬಿಕ್ಕಟ್ಟೋ? ಧಾರ್ಮಿಕ ವಿಷಯಗಳು ಇಂದು ನಮಗೆ ನೆಮ್ಮದಿ ಕರುಣಿಸುತ್ತಿವೆಯೇ ಅಥವಾ ಕೆಡಿಸುತ್ತಿವೆಯೇ ಎಂಬುದನ್ನು ಅವಲೋಕಿಸಬೇಕಿದೆ.

ಪ್ರಶ್ನೆಗಳನ್ನು ಎದುರಿಸಲು ಸಿದ್ಧರಿಲ್ಲದ ಜನನಾಯಕರೇ ಧಾರ್ಮಿಕ ವಿಚಾರಗಳನ್ನು ಮುಂದು ಮಾಡಿ ಜನಬೆಂಬಲ ದಕ್ಕಿಸಿಕೊಳ್ಳುತ್ತಿರುವುದು ಏನನ್ನು ಸೂಚಿಸುತ್ತದೆ? ಪರೋಕ್ಷವಾಗಿ ಇವರೂ ದೇವರು ಮತ್ತು ಧರ್ಮದಂತೆ ತಾವು ಕೂಡ ಪ್ರಶ್ನಾತೀತ ಎನ್ನುವ ಸಂದೇಶ ರವಾನಿಸತೊಡಗಿದ್ದಾರೆಯೇ? ಪ್ರಶ್ನೆಗಳು ಮತ್ತು ಪ್ರಶ್ನಿಸುವವರನ್ನು ಸಹಿಸದ ಸಮಾಜದ ಚಲನೆ ಯಾವ ದಿಕ್ಕಿನತ್ತ ತಿರುಗಬಹುದು? ಅಂದು ನಮಗೆ ಅಧ್ಯಾಪಕರೊಬ್ಬರು ಕೇಳಿದ ಪ್ರಶ್ನೆಗಳನ್ನೇ ಇಂದಿನ ಅಧ್ಯಾಪಕರೂ ತಮ್ಮ ವಿದ್ಯಾರ್ಥಿಗಳಿಗೆ ಕೇಳಬಹುದೆ?

ಧಾರ್ಮಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಮೌಲ್ಯ ಗಳನ್ನು ಅಳವಡಿಸಲು ಹೊರಟಿರುವುದಾಗಿ ಬಿಂಬಿಸಿಕೊಳ್ಳುವವರು, ಅಸಲಿಗೆ ಬಿತ್ತುತ್ತಿರುವುದು ಪ್ರಶ್ನಿಸದೇ ಒಪ್ಪಿಕೊಳ್ಳುವ ಮನಃಸ್ಥಿತಿಯ ಬೀಜಗಳನ್ನಲ್ಲವೇ? ಪ್ರಶ್ನೆಗಳನ್ನು ಎತ್ತುವ ಮೂಲಕ ನೀವು ಕಲಿಯುತ್ತಿರುವ ವಿಜ್ಞಾನಕ್ಕೆ ಗೌರವ ಸಲ್ಲಿಸಿ ಎಂದು ಆತ್ಮವಂಚನೆ ಇಲ್ಲದೆ ಹೇಳಬಹುದಾದ ಶಿಕ್ಷಕರು ನಮ್ಮಲ್ಲಿ ಎಷ್ಟಿದ್ದಾರೆ?

ಪ್ರಶ್ನೆಗಳು ಬೇಡವಾದ ಹೊತ್ತಿನಲ್ಲಿ, ಆಡುವ ಮಾತಿನಲ್ಲೆಲ್ಲ ಧಾರ್ಮಿಕ ಭಾವನೆಗಳು ಇಣುಕುವುದು, ಮನಸ್ಸುಗಳು ಕೆರಳುವುದು, ಕೊಲೆಗಳಾಗುವುದು ಎಲ್ಲವೂ ಸಹಜವಲ್ಲವೇ? ಮನುಷ್ಯರನ್ನು ಕೊಲ್ಲು ವುದೂ ಸಹಜವೇ ಆದ ಸಮಾಜದ ನಿರ್ಮಾಣ ಶಿಕ್ಷಣದ ಆದ್ಯತೆಯೇ? ಹಾಗಲ್ಲದಿದ್ದರೆ ಪ್ರಶ್ನೆಗಳು ಮತ್ತು ಪ್ರಶ್ನಿಸುವವರ ಪರವಾಗಿ ನಿಲ್ಲುವ ಸ್ಥೈರ್ಯ ಶಿಕ್ಷಿತರಲ್ಲಿ ಮೈಗೂಡಬೇಕಿತ್ತಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT