ಭಾನುವಾರ, ನವೆಂಬರ್ 29, 2020
19 °C
ವಿ.ವಿ.ಗಳ ಪ್ರತ್ಯೇಕ ಮಾರ್ಗಸೂಚಿಗಳಿಂದ ನಾನಾ ಗೊಂದಲ

ಸಂಗತ | ಪದವಿ ಕಲಿಕೆ: ಅಸಮಾನತೆ ಏಕೆ?

ರಾಮಲಿಂಗಪ್ಪ ಟಿ. ಬೇಗೂರು Updated:

ಅಕ್ಷರ ಗಾತ್ರ : | |

Prajavani

ಪದವಿ ಕಲಿಕೆಯ ವ್ಯವಸ್ಥೆಯಲ್ಲಿ ಇಂದು ಕರ್ನಾಟಕದಲ್ಲಿ ಹಲವು ರೀತಿಯ ವಿಶ್ವವಿದ್ಯಾಲಯಗಳು ಇರುವಂತೆಯೇ ಹಲವು ಬಗೆಯ ಅಸಮಾನತೆಗಳೂ ಇವೆ. ಇದಕ್ಕೆ ಮುಖ್ಯ ಕಾರಣ, ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಒಂದು ಯುಜಿ ಸಿಬಿಸಿಎಸ್‌ (ಅಂಡರ್‌ ಗ್ರ್ಯಾಜುಯೇಟ್‌ ಚಾಯ್ಸ್‌ ಬೇಸ್ಡ್‌ ಕ್ರೆಡಿಟ್‌ ಸಿಸ್ಟಮ್‌) ಮಾರ್ಗಸೂಚಿ ಇಲ್ಲದಿರುವುದು. ಅಂದರೆ, ಪದವಿ ಕಲಿಕೆಗೆ ಬೇಕಾದ ನಿರ್ದಿಷ್ಟ, ಸಮಾನ ಕಲಿಕಾ ನಿಯಮಾವಳಿಯೇ ಇಲ್ಲದಿರುವುದು. ಪ್ರತೀ ವಿಶ್ವವಿದ್ಯಾಲಯಕ್ಕೂ ತನ್ನದೇ ಆದ ಮಾರ್ಗಸೂಚಿಗಳಿವೆ. ಹಾಗಾಗಿ ಇಲ್ಲಿ ಪದವಿ ಶಿಕ್ಷಣದ ಪಠ್ಯಕ್ರಮದಲ್ಲಿ, ಪರೀಕ್ಷಾ ಪದ್ಧತಿಯಲ್ಲಿ, ಮೌಲ್ಯಮಾಪನ, ಮೌಲ್ಯಾಂಕನ ಹಾಗೂ ಪ್ರಮಾಣಪತ್ರ ನೀಡಿಕೆಗಳಲ್ಲಿ, ಕನಿಷ್ಠ ಪಕ್ಷ ಕಾರ್ಯನಿರ್ವಹಣಾ ಕ್ಯಾಲೆಂಡರ್‌ನಲ್ಲಿ ಸಮಾನತೆ ಇಲ್ಲವಾಗಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಮತ್ತು ಅಧ್ಯಾಪಕರಿಗೆ ತಾರತಮ್ಯ ಆಗುತ್ತಿದೆ. ಉದಾಹರಣೆಗೆ, ಬೋಧನಾ ಅವಧಿಗೆ ಸಂಬಂಧಿಸಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಐಚ್ಛಿಕ ಕನ್ನಡಕ್ಕೆ ಐದು ಅವಧಿಗಳನ್ನು ನಿಗದಿಪಡಿಸಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯವು ಮೊದಲ ಎರಡು ವರ್ಷಗಳಿಗೆ ಐದು ಗಂಟೆಗಳನ್ನೂ ಅಂತಿಮ ವರ್ಷಕ್ಕೆ ನಾಲ್ಕು ಗಂಟೆಗಳನ್ನೂ ಇರಿಸಿಕೊಂಡಿದೆ! ಮೈಸೂರು ವಿಶ್ವವಿದ್ಯಾಲಯವುಕನ್ನಡ ಭಾಷೆಗೆ ಮೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯವು ನಾಲ್ಕು ಗುಣಾಂಕಗಳನ್ನು ಇರಿಸಿಕೊಂಡಿವೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಭಾಷಾ ಕಲಿಕೆಗೆ ಮೂರು ಗಂಟೆಗಳನ್ನು ನಿಗದಿಪಡಿಸಿದ್ದರೆ, ಬೆಂಗಳೂರು, ಮೈಸೂರಿನಲ್ಲಿ ನಾಲ್ಕು ಗಂಟೆ, ಧಾರವಾಡದಲ್ಲಿ ಐದು ಗಂಟೆ ನಿಗದಿಪಡಿಸಲಾಗಿದೆ.

ಆಂತರಿಕ ಅಂಕಗಳ ನಿಗದಿ ವಿಚಾರದಲ್ಲೂ ಇದೇ ರೀತಿಯ ಗೊಂದಲಗಳಿವೆ. ಭಾಷೆಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 70 ಮತ್ತು 30ರ ಅನುಪಾತದಲ್ಲಿ ಪರೀಕ್ಷೆ ಮತ್ತು ಆಂತರಿಕ ಅಂಕಗಳಿದ್ದರೆ ಇತರ ವಿಷಯಗಳಲ್ಲಿ 80- 20ರ ಅನುಪಾತ ಇದೆ. ಕಲಾ ವಿಭಾಗಕ್ಕೆ ಒಂದು, ವಾಣಿಜ್ಯ ವಿಭಾಗಕ್ಕೆ ಇನ್ನೊಂದು ರೀತಿಯ ನಿಯಮಗಳನ್ನು ಜಾರಿಯಲ್ಲಿ ಇರಿಸಲಾಗಿದೆ. ಇನ್ನು ಇಲ್ಲಿ ವಾಣಿಜ್ಯ ಪದವಿಯಲ್ಲಿ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಇದ್ದರೆ ಅದೇ ನಿರ್ವಹಣಾ ಪದವಿಯಲ್ಲಿ ಅಂತಹ ಅವಕಾಶ ಇಲ್ಲ.

ಪದವಿಯಲ್ಲಿ ಕಲಿಕಾ ವಿಷಯಗಳನ್ನು ಕೋರ್‌ ಮತ್ತು ನಾನ್‌ ಕೋರ್‌ ಎಂದು ವಿಂಗಡಿಸಿರುವುದರಿಂದಲೂ ತೊಂದರೆಗಳಾಗಿವೆ. ನಾನ್‌ ಕೋರ್‌ ವಿಷಯಗಳನ್ನು ಯಾರು ಬೋಧಿಸಬೇಕು ಎಂಬ ಬಗ್ಗೆ ಸರಿಯಾದ ಮಾರ್ಗಸೂಚಿಗಳಿಲ್ಲ. ಈ ವಿಷಯಗಳನ್ನು ಮಲತಾಯಿ ಧೋರಣೆಯಿಂದ ನೋಡಲಾಗುತ್ತಿದೆ.

ಕರ್ನಾಟಕ ವಿಶ್ವವಿದ್ಯಾಲಯವು ಇತ್ತೀಚೆಗೆ ಕನ್ನಡ ಭಾಷಾ ಕಲಿಕೆಗೆ ಅವಧಿಗಳನ್ನು ಕಡಿತಗೊಳಿಸಲು ನಿರ್ಧರಿಸಿದ್ದನ್ನು ಅಧ್ಯಾಪಕರು ವಿರೋಧಿಸಿದ್ದಾರೆ. ಅಧ್ಯಯನ ಮಂಡಳಿಯ ಬದಲಿಗೆ ವಿಶ್ವವಿದ್ಯಾಲಯದ ಅಧಿಕಾರ ವರ್ಗ ನಿರ್ಧಾರ ತೆಗೆದುಕೊಳ್ಳುವುದು ಶೈಕ್ಷಣಿಕ ದುರಂತ. ಕನ್ನಡ ಭಾಷೆಯನ್ನು ಒಂದು ಕಡ್ಡಾಯ ವಿಷಯವಾಗಿ ಕಲಿಸಬೇಕೆಂಬ ತನ್ನ ಹಿಂದಿನ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ತಾನೇ ಉಲ್ಲಂಘಿಸಿ, ವಿಶ್ವವಿದ್ಯಾಲಯಗಳ ಯುಜಿ ಸಿಬಿಸಿಎಸ್‌ ಮಾರ್ಗಸೂಚಿಗಳನ್ನು ಅನುಮೋದಿಸಿದೆ. ಯಾವ ವಿಶ್ವವಿದ್ಯಾಲಯವೂ ಪದವಿಯಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕೆಂದು ನಿಯಮಾವಳಿ ಮಾಡಿಲ್ಲ! ಕರ್ನಾಟಕದ ಇತರ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಎಲ್ಲ ಕೋರ್‌ ಸಬ್ಜೆಕ್ಟ್‌ಗಳಿಗೂ ಅಂತಿಮ ಪದವಿಯಲ್ಲಿ ಎರಡು ಪತ್ರಿಕೆಗಳಿದ್ದರೆ ಧಾರವಾಡ ವಿಶ್ವವಿದ್ಯಾಲಯವು ಒಂದೇ ಪತ್ರಿಕೆ ನಿಗದಿ ಮಾಡಿದೆ! ಒಂದು ವಿಶ್ವವಿದ್ಯಾಲಯದಿಂದ ಇನ್ನೊಂದು ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಬಯಸುವವರಿಗೆ ಇದರಿಂದ ತೊಂದರೆ ಆಗುವುದಿಲ್ಲವೇ? ಪದವಿ ಅಂಕ ನೀಡಿಕೆಯಲ್ಲಿ ವ್ಯತ್ಯಾಸ ಆಗಿ ಮುಂದೆ ನೇಮಕಾತಿಯಲ್ಲೂ ಶೇಕಡ ಅಂಕಗಳಲ್ಲಿ ವ್ಯತ್ಯಾಸ ಆಗುವುದಿಲ್ಲವೇ?

ಇನ್ನು ಬೆಂಗಳೂರು ವಿಶ್ವವಿದ್ಯಾಲಯವು ಮೂರಾಗಿ ವಿಭಜನೆಗೊಂಡು ಬೆಂಗಳೂರು ಉತ್ತರ ಮತ್ತು ಕೇಂದ್ರ ವಿಶ್ವವಿದ್ಯಾಲಯ ಪ್ರತ್ಯೇಕ ಅಧ್ಯಯನ ಮಂಡಳಿಗಳನ್ನು ರಚಿಸಿಕೊಂಡು ಹೊಸ ಪಠ್ಯಗಳನ್ನು ರಚಿಸಿಕೊಳ್ಳುತ್ತಿದ್ದರೆ ಮಾತೃ ವಿಶ್ವವಿದ್ಯಾಲಯವಾದ ಬೆಂಗಳೂರು ವಿಶ್ವವಿದ್ಯಾಲಯವು ಹಳೆ ಮಂಡಳಿಯನ್ನೇ ಹಳೆ ಪಠ್ಯಗಳನ್ನೇ ಮುಂದುವರಿಸಿದೆ.

ಇಂತಹ ಎಲ್ಲ ಬಗೆಯ ಗೊಂದಲಗಳಿಗೆ ಇತಿಶ್ರೀ ಹಾಡಲು ಸಾಧ್ಯವಿದೆ. ಹೊಸ ಶಿಕ್ಷಣ ನೀತಿಯ ಸಾಧಕಬಾಧಕ ಅವಲೋಕಿಸಿ ಕರ್ನಾಟಕ ಪದವಿ ಶಿಕ್ಷಣಕ್ಕೆ ಪ್ರತ್ಯೇಕವಾದ ಮತ್ತು ಇಡೀ ರಾಜ್ಯಕ್ಕೆ ಅನ್ವಯ ಆಗುವಂತಹ ಸಮಾನವಾದ, ರಾಜ್ಯ ಆಯ್ಕೆ ಆಧಾರಿತ ಗುಣಾಂಕ ಪದ್ಧತಿ ಮಾರ್ಗಸೂಚಿ, (ಸ್ಟೇಟ್ ಸಿಬಿಸಿಎಸ್‌ ರೆಗ್ಯುಲೇಶನ್ಸ್), ಸಮಾನ ಕಲಿಕಾ ಚೌಕಟ್ಟು (ಈಕ್ವಲ್‌ ಕರಿಕ್ಯುಲಮ್‌) ಮತ್ತು ಸಮಾನ ಕ್ಯಾಲೆಂಡರ್ (ಕಾಮನ್‌ ಕ್ಯಾಲೆಂಡರ್‌) ಜಾರಿ ಮಾಡಿದರೆ ಇಂತಹ ಬಹುಪಾಲು ಗೊಂದಲಗಳು ಬಗೆಹರಿಯುತ್ತವೆ. ಯುಜಿಸಿ ಇದೀಗ ಎಲ್ಲ ಕುಲಪತಿಗಳಿಗೆ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಕ್ರಮ ತಿಳಿಸಲು ಪತ್ರ ಬರೆದಿರುವುದರಿಂದ ಈಗ ಇದಕ್ಕೆ ಸಕಾಲವಾಗಿದೆ.

ಅಸಮಾನ ಕಲಿಕಾ ವ್ಯವಸ್ಥೆ ತೊಡೆದು ಕನಿಷ್ಠ ಸಮಾನ ಕಲಿಕಾ ಅವಕಾಶಗಳನ್ನಾದರೂ ನಿರ್ಮಿಸುವುದು ನಮ್ಮೆಲ್ಲರ ಹೊಣೆ. ಆನ್‌ಲೈನ್‌ ಜಂಜಾಟದಲ್ಲಿ ತೊಡಗಿರುವ ಈ ಕೋವಿಡ್‌ ಕಾಲದಲ್ಲಿಯಾದರೂ ಇಲಾಖೆ ಈ ಬಗ್ಗೆ ದೃಢವಾದ ಇಚ್ಛಾಶಕ್ತಿಯಿಂದ ಕಾರ್ಯಪ್ರವೃತ್ತ ಆಗುತ್ತದೆ ಎಂದು ನಿರೀಕ್ಷಿಸಬಹುದೇ? ದೇಶಕ್ಕೆಲ್ಲ ಅನ್ವಯ ಆಗುವಂತೆ ಒಂದು ಶಿಕ್ಷಣ ನೀತಿ ಬೇಕು ಎನ್ನುವುದಾದರೆ, ರಾಜ್ಯಕ್ಕೆ ಒಂದು ಪದವಿ ಶಿಕ್ಷಣ ನೀತಿ ಬೇಡವೇ? ಶೈಕ್ಷಣಿಕ ಸ್ವಾಯತ್ತತೆ ಎನ್ನುವುದು ಅಸಮಾನ ಕಲಿಕಾ ವ್ಯವಸ್ಥೆಯ ಕಡೆಗೆ ಚಲಿಸಬಾರದಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು