ಮಂಗಳವಾರ, ಅಕ್ಟೋಬರ್ 26, 2021
23 °C
ದೇಶದಾದ್ಯಂತ ವನ್ಯಜೀವಿ ಸಪ್ತಾಹ ನಡೆಯುತ್ತಿರುವ ಈ ಸಂದರ್ಭ, ಹುಲಿಗಳ ಆವಾಸ ಮತ್ತು ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಗಮನಹರಿಸಲು ಸಕಾಲ

ಸಂಗತ: ಹುಲಿಗಾಗಿ ಭಾರತ- ಮೂಡುವುದೇ ಸಹಮತ?

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದ್ದು, ವಿಶ್ವದ ವನ್ಯದಲ್ಲಿರುವ ಒಟ್ಟು ಹುಲಿಗಳ ಪೈಕಿ ಶೇ 75ರಷ್ಟು ನಮ್ಮ ಕಾಡುಗಳಲ್ಲೇ ಇವೆ ಎಂಬ ಸಿಹಿ ಸುದ್ದಿಯನ್ನು ಪ್ರಧಾನಿ ಕಳೆದ ವರ್ಷ ನೀಡಿದ್ದರು. 2022ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡುತ್ತೇವೆ ಎಂದು, ರಷ್ಯಾದ ಸೇಂಟ್ ಪೀಟರ್ಸ್‌ ಬರ್ಗ್‌ನ 2010ರ ಹುಲಿ ಶೃಂಗಸಭೆಯಲ್ಲಿ ಪಣ ತೊಟ್ಟಿದ್ದೆವು, ಅದನ್ನು ನಾಲ್ಕು ವರ್ಷಗಳ ಮುಂಚೆಯೇ ಸಾಧಿಸಿದ್ದೇವೆ ಎಂದು ಹೇಳಿದ್ದರು.

2018ರ ಹುಲಿ ಅಂದಾಜು ಗಣತಿಯಲ್ಲಿ ನಲವತ್ನಾಲ್ಕು ಸಾವಿರ ಜನ, ಹದಿನೈದು ತಿಂಗಳು, ಐದುನೂರಕ್ಕೂ ಹೆಚ್ಚು ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು ನಾಲ್ಕು ಲಕ್ಷ ಚದರ ಕಿ.ಮೀ. ವ್ಯಾಪ್ತಿಯ ಕಾಡುಗಳಲ್ಲಿ ಐದೂವರೆ ಲಕ್ಷ ಕಿ.ಮೀ.ನಷ್ಟು
ಕಾಲ್ನಡಿಗೆಯಲ್ಲೇ ಕ್ರಮಿಸಿ, 27,000 ಕ್ಯಾಮೆರಾ ಅಳವಡಿಸಿ 2,400 ಹುಲಿಗಳ ಚಿತ್ರ ತೆಗೆದಿದ್ದರು. ಸಂಖ್ಯೆಯ ಹೆಚ್ಚಳ ಎಲ್ಲರಲ್ಲೂ ಸಮಾಧಾನ ಉಂಟುಮಾಡಿತ್ತಾದರೂ, ಸ್ವತಂತ್ರ ತಜ್ಞರು ಗಣತಿಯ ಕ್ರಮದಲ್ಲಿ ದೋಷವಿದೆ ಎಂದು ಆರೋಪಿಸಿದ್ದರು.

ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ನ್ಯಾಷನಲ್ ಟೈಗರ್ ಎಸ್ಟಿಮೇಶನ್ (ಎನ್‌ಟಿಇ) ಪ್ರಕಾರ, ದೇಶದ ಕಾಡುಗಳಲ್ಲಿ ಒಟ್ಟು 2,967 ಹುಲಿಗಳಿವೆ ಎಂದು  ಕೇಂದ್ರ ಪರಿಸರ ಸಚಿವಾಲಯ ದೃಢಪಡಿಸಿತ್ತು. ವಿಶ್ವದ ವನ್ಯದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆ ಕೇವಲ 3,900. ಮುಕ್ಕಾಲುಪಾಲು ಹುಲಿಗಳು ನಮ್ಮಲ್ಲಿಯೇ ಇವೆ ಎಂಬುದು ಹೆಮ್ಮೆಯ ವಿಷಯವಾದರೂ ಹುಲಿಗಳ ಸಂಖ್ಯೆ ಏರಿದೆ ಎಂದು ಬಿಂಬಿಸುವುದರ ಹಿಂದೆ ಬೇರೆಯದೇ ಒತ್ತಡಗಳಿವೆ ಎಂದಿದ್ದಾರೆ ಸಂರಕ್ಷಣಾ ತಜ್ಞರು. ‘2010ರ ವಿಶ್ವ ಹುಲಿ ಶೃಂಗಸಭೆಯಲ್ಲಿ ಹುಲಿ ಸಂರಕ್ಷಣೆ ಮತ್ತು ಸಂಖ್ಯಾವೃದ್ಧಿಗೆಂದೇ ಕೋಟ್ಯಂತರ ಡಾಲರ್‌ಗಳ ನಿಧಿ ಮೀಸಲಿಡಲಾಗಿತ್ತು, ಅದರ ಸದ್ಬಳಕೆ ಆಗಿಲ್ಲವೆಂಬ ಅನುಮಾನ ಬರದಿರಲೆಂದು ಈ ರೀತಿಯ ಸಂಖ್ಯೆ ಹೆಚ್ಚಳವನ್ನು ತೋರಿಸಲಾಗುತ್ತಿದೆ’ ಎಂಬರ್ಥದ ಮಾತುಗಳನ್ನಾಡಿದ್ದರು.

ಅಭಿವೃದ್ಧಿ ಯೋಜನೆಗಳಿಗೆ ಕಾಡು ಕಡಿಯಲಾಗುತ್ತಿದೆ, ಒತ್ತುವರಿ ನಡೆಯುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಕೇಸಿನ ಮೇಲೆ ಕೇಸು ಬೀಳುತ್ತಿದ್ದರೂ, ಹುಲಿಗಳ ಸಂಖ್ಯೆ ಏರಿದೆ ಎಂದು ದಾಖಲೆ ನೀಡಿದರೆ, ಅಭಿವೃದ್ಧಿಗೆ ಅಡ್ಡ ನಿಂತಿರುವ ಪರಿಸರವಾದಿಗಳ ಬಾಯಿಯನ್ನು ಸುಲಭವಾಗಿ ಮುಚ್ಚಿಸಬಹುದು ಎಂಬುದು ಸರ್ಕಾರದ ತರ್ಕ ಎನ್ನಲಾಗುತ್ತಿದೆ. ಕಳೆದ 12 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ 33ರಷ್ಟು ವೃದ್ಧಿಸಿದೆ ಎಂದಿರುವುದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎಂದಿರುವ ತಜ್ಞರು, ಗಣತಿ ಮಾಡುವಾಗ ಹುಲಿಗೆ ಮೂರು ವರ್ಷ ತುಂಬಿದ್ದರೆ ಮಾತ್ರ ಅದನ್ನು ವಯಸ್ಕ ಹುಲಿ ಎಂದು ಪರಿಗಣಿಸಬೇಕು, ಸಮೀಕ್ಷೆ ನಡೆಸಿರುವವರು ಒಂದು ವರ್ಷ ಪ್ರಾಯದ ಮರಿಯನ್ನೂ ಪರಿಗಣಿಸಿರುವುದು ಸರಿಯಲ್ಲ ಎಂದಿದ್ದಾರೆ. ಸಂಖ್ಯೆ ಹೆಚ್ಚಳವಾಗಿದೆ ಎಂದು ಬಿಂಬಿಸಿ ಅಪಾರ ಧನಸಹಾಯ ಪಡೆಯಬಹುದೇ ಹೊರತು, ದೂರಗಾಮಿ ಯೋಜನೆಗಳಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ, ಸಂರಕ್ಷಣೆಯ ನಿಜವಾದ ಅರ್ಥವೇ ಮರೆ ಯಾಗುತ್ತದೆ ಎನ್ನುತ್ತಾರೆ.

2004ರಲ್ಲೂ ಹೀಗೆಯೇ ಆಗಿತ್ತು. ಹೆಜ್ಜೆ ಗುರುತನ್ನು ಆಧರಿಸಿ, ದೇಶದಲ್ಲಿ 3,642 ಹುಲಿಗಳಿವೆ ಎಂದು ಸರ್ಕಾರ ಹೇಳಿತ್ತು. ಎರಡು ವರ್ಷಗಳ ನಂತರ, ಇರುವುದು ಕೇವಲ 1,411, ಎಲ್ಲೋ ತಪ್ಪಾಗಿದೆ ಎಂದು ವಿವರಣೆ ನೀಡಿತ್ತು. ಈಗ ತೆಗೆಯಲಾಗಿರುವ ಚಿತ್ರಗಳಲ್ಲಿ ಹಲವು ರಿಪೀಟ್ ಆಗಿವೆ ಎಂದಿರುವ ತಜ್ಞರು, ಪ್ರತೀ ಏಳು ಹುಲಿಗಳಲ್ಲಿ ಒಂದು ಹಾಳೆಯ ಮೇಲಿನ ಅಂಕಿಯಾಗಿದೆ. ಹಾಗಾಗಿ ಸಮೀಕ್ಷೆಯ ಮಾದರಿಯಲ್ಲೇ ದೋಷವಿದೆ, ಇದನ್ನು ತೀವ್ರವಾಗಿ ಪರಾಮರ್ಶಿಸಬೇಕು ಎಂದಿದ್ದಾರೆ.

ಕಳ್ಳಬೇಟೆ, ಆವಾಸ ಒತ್ತುವರಿ, ಮಾನವ- ಪ್ರಾಣಿ ಸಂಘರ್ಷ, ಆಂತರಿಕ ಹೋರಾಟಗಳಿಂದಾಗಿ ವಯಸ್ಕ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ವರ್ಷ ಲಾಕ್‍ಡೌನ್ ಆಗಿ ಮಾಂಸ ಮಾರಾಟಕ್ಕೆ ನಿರ್ಬಂಧ ಹೇರಿದಾಗ, ಹುಲಿಯ ಬಲಿಪ್ರಾಣಿಯಾದ ಜಿಂಕೆಯನ್ನು ಬೇಟೆಯಾಡಿದ ಹಲವು ಪ್ರಕರಣಗಳು ದೇಶದಾದ್ಯಂತ ವರದಿಯಾಗಿದ್ದವು. ಶಿವಮೊಗ್ಗ, ಕೊಡಗು ಜಿಲ್ಲೆಯ ಹುಲಿ ಕಾಡುಗಳಲ್ಲಿ ಜಿಂಕೆ ಬೇಟೆಯಾಡಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹುಲಿಗಳ ಸ್ವರ್ಗ ಎಂದೇ ಖ್ಯಾತವಾಗಿದ್ದ ರಣಥಂಬೋರ್‌ನ ಕಾಡಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ 46 ವಯಸ್ಕ ಹುಲಿಗಳು ಕಾಣೆಯಾಗಿವೆ.

ಸ್ವಾಯತ್ತ ಸಂಸ್ಥೆಯಾದ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಅನುದಾನ ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹುಲಿ ಸಂರಕ್ಷಣೆಯ ಕೆಲಸಗಳಿಗೆ ಹಿನ್ನಡೆಯಾಗಲಿದೆ. ಜೀವಜಾಲದಲ್ಲೇ ಅಪರೂಪದ ಹಾಗೂ ಅನಿವಾರ್ಯ ಸ್ಥಾನ ಹೊಂದಿರುವ ಹುಲಿ ವಿನಾಶದ ಅಂಚಿಗೆ ಬಂದು ನಿಂತಿರುವುದು ಮಾನವನ ದಾಳಿಯ ಸಂಕೇತವೆನಿಸಿದೆ.

ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಹೆದ್ದಾರಿ, ಐಷಾರಾಮಿ ಪ್ರವಾಸೋದ್ಯಮ, ಹುಲಿ ಆಹಾರವಾದ ಜಿಂಕೆ, ಕಡವೆ, ಕಾಡುಹಂದಿಗಳ ನಿರಂತರ ಬೇಟೆ ನಿಂತಾಗ ನಮ್ಮಲ್ಲಿ ಹುಲಿಗಳ ಸಂಖ್ಯೆ ತಾನೇ ತಾನಾಗಿ ಹೆಚ್ಚುತ್ತದೆ. ತುರ್ತು ವೈಜ್ಞಾನಿಕ ವಿಧಾನಗಳನ್ನು ಬಳಸಿ ಹುಲಿ- ಮಾನವ ಸಂಘರ್ಷ ತಡೆಯಬೇಕಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು