ಶನಿವಾರ, ಜುಲೈ 31, 2021
27 °C
ಕುಟುಂಬವೆಂಬ ಸಾಮಾಜಿಕ ವ್ಯವಸ್ಥೆಯು ಲಾಕ್‍ಡೌನ್ ವೇಳೆಯಲ್ಲಿ ಕೆಲವರಿಗೆ ಅಸುರಕ್ಷತೆಯ ತಾಣವಾಗಿ ರೂಪುಗೊಂಡಿರುವುದನ್ನು ಸಮೀಕ್ಷೆಗಳು ದೃಢಪಡಿಸಿವೆ

ಸಂಗತ | ಸುರಕ್ಷಾ ಭಾವದ ನೆಲೆಯೆಲ್ಲಿದೆ?

ನನ್ನಿ ವಿ.ಕೆ. Updated:

ಅಕ್ಷರ ಗಾತ್ರ : | |

Prajavani

ಕೇರಳ ಮಹಿಳಾ ಆಯೋಗದ ಸದಸ್ಯೆ ಶಾಹಿದ್ ಕಮಲ್ ಅವರಿಗೆ ಚೆನ್ನೈನಿಂದ ದೂರವಾಣಿ ಕರೆ ಮಾಡುವ ಅಣ್ಣನೊಬ್ಬ, ತನ್ನ ತಂಗಿಗೆ ಸಹಾಯ ಮಾಡುವಂತೆ ಗೋಳಾಡುವುದು ಹೀಗೆ: ‘ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನನ್ನ ತಂಗಿಯ ಕುಟುಂಬ ವಾಸವಿದೆ. ಗಂಡ– ಹೆಂಡಿರ ಜಗಳ ತಾರಕಕ್ಕೇರಿ, ನನ್ನ ತಂಗಿಯನ್ನು ಅವಳ ಗಂಡ ಹೊಡೆದು ಮನೆಯಿಂದ ಆಚೆ ಹಾಕಿದ್ದಾನೆ. ಅವಳು ತನ್ನ ಮಗಳೊಂದಿಗೆ ನಾಪತ್ತೆಯಾಗಿದ್ದು, ಕಾಡೊಂದರಲ್ಲಿ ಬಚ್ಚಿಟ್ಟುಕೊಂಡಿದ್ದಾಳೆಂಬ ಸುದ್ದಿ ಇದೆ. ದಯವಿಟ್ಟು ಆಕೆಯನ್ನು ರಕ್ಷಿಸಿ’.

ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಘೋಷಿಸಲಾದ ಲಾಕ್‍ಡೌನ್, ರಜೆಯ ಸ್ವರೂಪವನ್ನು ಪಡೆಯಿತು. ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಕಲೆತು ಹಾಡು, ಆಟ, ಬಗೆಬಗೆಯ ತಿಂಡಿ ತಯಾರಿಕೆ ಯಂತಹ ಕಾರ್ಯಗಳಲ್ಲಿ ಮಗ್ನರಾದರು. ತಮ್ಮ ಮೋಜಿನ ಗಳಿಗೆಗಳನ್ನು ಸೆರೆಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದರು. ಆದರೆ, ಇಲ್ಲಿ ಹರಿಯಬಿಟ್ಟ ಫೋಟೊಗಳು ಬಿಂಬಿಸುವಂತೆ ಎಷ್ಟು ಕುಟುಂಬಗಳು ಹಿಂಸೆಯಿಂದ ಮುಕ್ತವಾಗಿವೆ? ಎಷ್ಟು ಮಹಿಳೆಯರು ಖುಷಿಯ, ಸಮಾನತೆಯ
ಸಿಹಿಯುಣ್ಣುತ್ತಿದ್ದಾರೆ?

ಕುಟುಂಬವೆಂಬ ಸಾಮಾಜಿಕ ವ್ಯವಸ್ಥೆಯು ಸರ್ವ ರಿಗೂ ಸುರಕ್ಷಾ ಭಾವದ ನೆಲೆಯಾಗಿರದೆ, ಲಾಕ್‍ಡೌನ್ ವೇಳೆಯಲ್ಲಿ ಕೆಲವರಿಗಾದರೂ ಅಸುರಕ್ಷತೆಯ ತಾಣ ವಾಗಿ ರೂಪುಗೊಂಡಿದೆ ಎಂಬುದನ್ನು ಇತ್ತೀಚಿನ ಹಲವು ಸಮೀಕ್ಷೆಗಳು ದೃಢಪಡಿಸಿವೆ. ರಾಷ್ಟ್ರೀಯ ಮಹಿಳಾ ಆಯೋಗದ ವರದಿಯಂತೆ, ಕೌಟುಂಬಿಕ ದೌರ್ಜನ್ಯಗಳು ಏಪ್ರಿಲ್ ಮಧ್ಯಭಾಗದಲ್ಲಿ ಶೇಕಡ ನೂರರಷ್ಟು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿಯೆಂದರೆ, ಫೆಬ್ರುವರಿಯಿಂದ ಮಾರ್ಚ್‌ವರೆಗೆ ಇದ್ದ ದೂರುಗಳ ಸಂಖ್ಯೆ 123. ಆದರೆ ಲಾಕ್‍ಡೌನ್ ಘೋಷಣೆಯಾದ ಕೆಲವೇ ದಿನಗಳಲ್ಲಿ ದೇಶದಾದ್ಯಂತ ಹೊಸದಾಗಿ 239 ದೂರುಗಳು ದಾಖಲಾದವು.

ಗಮನಾರ್ಹ ಅಂಶವೆಂದರೆ, ಕೆಲವು ರಾಜ್ಯಗಳಲ್ಲಿ ಲಾಕ್‍ಡೌನ್ ಸಮಯದಲ್ಲಿ ದೂರುಗಳ ಸಂಖ್ಯೆ ಇಳಿಮುಖವಾಗಿರುವುದು. ಕೌಟುಂಬಿಕ ಹಿಂಸೆಯ ಪ್ರಮಾಣ ಕಡಿಮೆಯಾಗಿದೆಯೆಂಬ ಆಶಾದಾಯಕ ಮಾಹಿತಿಯಂತೆ ಇದು ಮೇಲ್ನೋಟಕ್ಕೆ ಕಂಡರೂ ವಾಸ್ತವ ಬೇರೆಯದೇ ಇದೆ. ಬಹುಪಾಲು ದೂರುಗಳು ಇ-ಮೇಲ್, ವಾಟ್ಸ್‌ಆ್ಯಪ್‌ಗಳ ಮೂಲಕ ಬಂದಿವೆ. ಹೀಗಾಗಿ, ಇವು ಬಂದಿರುವುದು ಸುಶಿಕ್ಷಿತ, ಮೇಲ್ವರ್ಗದ ಮಹಿಳೆಯರಿಂದಲೇ ವಿನಾ ಈ ಸೌಲಭ್ಯಗಳಿಂದ ವಂಚಿತರಾದ ತಳವರ್ಗದ ಮಹಿಳೆಯರಿಂದ ಅಲ್ಲ ಎಂಬುದು ನಿಚ್ಚಳವಾಗಿದೆ.

ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯಗಳೂ ಲಾಕ್‍ಡೌನ್ ಸಂದರ್ಭದಲ್ಲಿ ಏರಿಕೆಯಾಗಿವೆ. ಮಾರ್ಚ್ ಮತ್ತು ಏಪ್ರಿಲ್ ನಡುವೆ ಮಕ್ಕಳ ಸಹಾಯವಾಣಿಗೆ ಬಂದ ಕರೆಗಳನ್ನು ಆಧರಿಸಿ ದೇಶದಾದ್ಯಂತ ಹಲವಾರು ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಹಾಗೆಯೇ, ವಲಸೆ ಕಾರ್ಮಿಕರ ಸಂಘರ್ಷಮಯ ಜೀವನದಲ್ಲಿ ಕೌಟುಂಬಿಕ ಕಲಹವು ಅವರ ಜೀವನದ ಅವಿಭಾಜ್ಯ ಅಂಗವೆಂಬಂತೆ ಬೆರೆತುಹೋಗಿರುವುದನ್ನು ಲಾಕ್‍ಡೌನ್ ತೆರೆದಿರಿಸಿದೆ.

ಕೌಟುಂಬಿಕ ದೌರ್ಜನ್ಯಗಳ ಹೆಚ್ಚಳ ಕೇವಲ ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಯಾಗಿರದೆ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಬಿಡದೇ ಕಾಡುತ್ತಿದೆ. ಚೀನಾ, ಇಂಗ್ಲೆಂಡ್, ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳೂ ತತ್ತರಿಸಿವೆ. ಯುರೋಪ್‍ನಲ್ಲಿ ಸ್ವೀಕರಿಸಲಾಗುತ್ತಿರುವ ಮಹಿಳಾ ದೌರ್ಜನ್ಯ ಕುರಿತಾದ ಕರೆಗಳಲ್ಲಿ ಶೇ 60ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ, ಯುರೋಪ್‍ನ ಪ್ರಾದೇಶಿಕ ನಿರ್ದೇಶಕರು ಹೇಳಿದ್ದಾರೆ. ಆರ್ಥಿಕ ಪ್ರಗತಿಗೂ ಕೌಟುಂಬಿಕ ದೌರ್ಜನ್ಯಗಳಿಗೂ ನೇರ ಸಂಬಂಧವಿಲ್ಲ ಎನ್ನುವುದನ್ನು ಇದರಿಂದ ಅರ್ಥೈಸಿಕೊಳ್ಳಬಹುದು.

ದೈಹಿಕ ದೌರ್ಜನ್ಯವು ಕೌಟುಂಬಿಕ ಹಿಂಸೆಯ ಒಂದು ರೂಪವಷ್ಟೆ. ಮತ್ತೊಂದೆಡೆ, ಮರೆಮಾಚಿದಂತೆ ಕಾಣುವ, ಅಭಿವ್ಯಕ್ತಿಸಲು ತುಸು ಕಷ್ಟವೆನಿಸುವ ಮಾನಸಿಕ ಹಿಂಸೆಯು ಮಹಿಳೆಯನ್ನು ಸದಾಕಾಲ ಜರ್ಝರಿತಳನ್ನಾಗಿ ಮಾಡುತ್ತಲೇ ಬಂದಿದೆ. ಅಮೃತಾ, ಕಾರು ಓಡಿಸುವ ತನ್ನ ಇಂಗಿತವನ್ನು ಗಂಡನ ಬಳಿ ವ್ಯಕ್ತಪಡಿಸಿದಾಗ, ‘ಮೊದಲು ಕೈ ಸುಟ್ಟುಕೊಳ್ಳದೆ ಪರಾಟಾ ಬೇಯಿಸುವುದನ್ನು ಕಲಿ, ಆಮೇಲೆ ಕಾರು ಓಡಿಸುವೆಯಂತೆ’ ಎಂದು ಅವನು ಲಘುವಾಗಿ ಹೇಳುತ್ತಾನೆ. ಇದು ಫೆಬ್ರುವರಿಯಲ್ಲಿ ಬಿಡುಗಡೆಯಾದ ‘ಥಪ್ಪಡ್’ ಸಿನಿಮಾದ ದೃಶ್ಯ. ಸಂತೃಪ್ತ ಜೀವನದ ಸಾಕ್ಷಾತ್ಕಾರವು ಹಲವು ಹೊಂದಾಣಿಕೆಗಳೊಡನೆ, ಸಂತೋಷ ಬದಿಗಿರಿಸಿ, ಪುರುಷರ ಏಳಿಗೆಗಾಗಿ ಶ್ರಮಿಸಿದಾಗ ಮಾತ್ರ ಸಾಧ್ಯ ಎಂಬ ಭಾವನೆ ‘ಥಪ್ಪಡ್’ ಸಿನಿಮಾದಲ್ಲಿನ ಮಹಿಳೆಯರಲ್ಲಿ ವ್ಯಕ್ತವಾಗಿದೆ. ಆದರೆ, ಪುರುಷ ಪಾರಮ್ಯದ ಸತ್ಯವು ಮುಖಾಮುಖಿಯಾದಾಗ ಈ ಮಹಿಳೆಯರಿಗೆ ತಮ್ಮ ಅಸ್ಮಿತೆಯ ಪ್ರಶ್ನೆ ಎದುರಾಗುತ್ತದೆ.

ಸಹಬಾಳ್ವೆ, ಸಹಿಷ್ಣುತೆ, ಕರುಣೆ, ಕ್ಷಮೆಗಳನ್ನು ಸಾಕಾರಗೊಳಿಸುವುದು ಮಹಿಳೆಯ ಹೆಗಲ ಮೇಲೆ ಮಾತ್ರ ಹೊರಿಸಿದ ಭಾರದಂತೆ ಭಾಸವಾಗುತ್ತಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಆಧುನಿಕ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯದ ಹೊರತಾಗಿಯೂ ಮಹಿಳೆಯೇ ಅತಿ ಹೆಚ್ಚು ಶೋಷಿತಳಾಗಿ, ದುರ್ಬಲಳಾಗಿ ಕಂಡುಬರುತ್ತಿರುವುದು ಏಕೆ? ಈಗಲೂ, ಹೆಂಗಸನ್ನು ಬಾಯಿ ಬಡುಕಿಯಂತೆ, ಧಾರಾವಾಹಿ, ಅಡುಗೆಮನೆಯ ಹೊರತಾಗಿ ಬೇರೆ ಅಸ್ತಿತ್ವವಿಲ್ಲದವಳಂತೆ, ಅಸೂಯೆಯ ಮೂರ್ತಿಯಂತೆ, ಅಧೀನತೆ, ಪರತಂತ್ರಗಳಿಗೆ ಶರಣಾ ದವಳಂತೆ ಬಿಂಬಿಸುವ ಹಲವು ಜೋಕುಗಳು ಹರಿದಾಡುವುದಾದರೂ ಏಕೆ? ಮೈ ಮನಗಳಲ್ಲಿ ಹಾಸುಹೊಕ್ಕಾಗಿರುವ ಪುರುಷ ಪ್ರಾಧಾನ್ಯವನ್ನು ಸಮಾನತೆಯಿಂದ ಹತ್ತಿಕ್ಕಲು ಆಗುತ್ತಿಲ್ಲವೇಕೆ?

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ಇಂಗ್ಲಿಷ್‌ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳೇಬೀಡು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು