ಬುಧವಾರ, ಸೆಪ್ಟೆಂಬರ್ 22, 2021
27 °C
ನಿವೃತ್ತಿಯು ನಮ್ಮ ಅಸ್ಮಿತೆ ಬಯಸಿದಂತೆ ಕೆಲಸ ಮಾಡುವುದಕ್ಕೆ ಸಿಗುವ ಅವಕಾಶ

ಸಂಗತ: ಇಲ್ಲ, ನನಗೆ ಹೆಚ್ಚು ವಯಸ್ಸಾಗಿಲ್ಲ!

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಇಸ್ರೇಲ್‍ನ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ವಯಸ್ಸಾಯಿತು ಎನ್ನುವ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ದೇಶದ ದೊಡ್ಡ ಮರುಭೂಮಿಯೊಂದರಲ್ಲಿ ನಡೆಯುತ್ತಿದ್ದ ಸಾಮೂಹಿಕ ಕೃಷಿ ಕಾರ್ಯದಲ್ಲಿ ತೊಡಗಿದರು. ರೈತರಿಗೆ ವೈಜ್ಞಾನಿಕ ಕೃಷಿ, ಹೈನುಗಾರಿಕೆಗೆ ಮಾರ್ಗದರ್ಶನ ಮಾಡಿದರು. ಕೃಷಿಕರೊಂದಿಗೆ ಕೃಷಿಕರಾಗಿ ಬದುಕಿದರು. ಯಾವುದೇ ಅಧಿಕಾರ ಇಲ್ಲದೇ, ಪುಟ್ಟ ದೇಶ ಇಸ್ರೇಲ್ ಅನ್ನು ಹೈಟೆಕ್ ಕೃಷಿಯಲ್ಲಿ ಜಗತ್ತಿಗೇ ಮಾದರಿಯಾಗಿ ರೂಪಿಸಿದರು. ಅವರು ‘ಇಸ್ರೇಲ್ ಪಿತಾಮಹ’ ಎಂದು ಹೆಸರು ಪಡೆದದ್ದು ನಿವೃತ್ತಿಯ ನಂತರ ಎಂಬುದು ಗಮನಾರ್ಹ.

ವಯಸ್ಸಾಯಿತು ಎನ್ನುವ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ‍ಪಡೆಯಲಾಯಿತು ಎಂಬ ಮಾತಿದೆ. ‘ರಾಜ್ಯಪಾಲನಾಗಿ ನೇಮಕಗೊಂಡು ರಾಜಭವನದಲ್ಲಿ ಆರಾಮದಾಯಕ ಜೀವನ ನಡೆಸಲಾರೆ. ಜನರ ನಡುವೆ ಇದ್ದು ಕೆಲಸ ಮಾಡುತ್ತೇನೆ’ ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದ್ದನ್ನು ಕೇಳಿ ಗುರಿಯನ್ ನೆನಪಾದರು.

ವಯಸ್ಸಾಗುವುದು ಒಂದು ಸಹಜ ಕ್ರಿಯೆ. ನಿವೃತ್ತಿ ಎಂಬುದು ನಾವೇ ಕಟ್ಟಿಕೊಳ್ಳುವ ಬಂಧನ. ಜಾಣ್ಮೆಯಿಂದ ಅದನ್ನು ಕಳಚಿಕೊಂಡು ಹೊಸ ಇನಿಂಗ್ಸ್‌ನತ್ತ ಹೆಜ್ಜೆ ಹಾಕಬೇಕು. ನಮ್ಮ ಅಸ್ಮಿತೆ ಬಯಸಿದಂತೆ ಕೆಲಸ ಮಾಡುವುದಕ್ಕೆ ನಿವೃತ್ತಿಯ ನಂತರ ಅವಕಾಶ ದೊರೆಯುತ್ತದೆ.

ಸರ್ಕಾರಿ ನೌಕರರು, ಸಂಘಟಿತ ಕಾರ್ಮಿಕರು 60ನೇ ವಯಸ್ಸಿಗೆ ನಿವೃತ್ತಿ ಹೊಂದುತ್ತಾರೆ. ಉಳಿದವರಿಗೆ ನಿವೃತ್ತಿಯೂ ಇಲ್ಲ, ಪಿಂಚಣಿಯೂ ಇಲ್ಲ. ಆದರೆ ಇವರೆಲ್ಲ ಪಿಂಚಣಿ ಪಡೆಯುವವರಿಗಿಂತ ಹೆಚ್ಚು ಆರೋಗ್ಯ ಹಾಗೂ ಕ್ರಿಯಾಶೀಲತೆಯಿಂದ ಇರುತ್ತಾರೆ. ಯಾಕೆಂದರೆ ನಿವೃತ್ತಿಯ ಬಗ್ಗೆ ಇವರು ಯೋಚನೆಯನ್ನೇ ಮಾಡುವುದಿಲ್ಲ.

ನಿವೃತ್ತರು ಕೆಲಸ ಮಾಡಬಾರದು, ಸುಖವಾಗಿ ಉಂಡು, ಹಾಯಾಗಿ ಮಲಗಿ ದಿನ ಕಳೆಯಬೇಕು ಎಂದು ಕೆಲವರು ಸಲಹೆ ಮಾಡುತ್ತಾರೆ. ಆದರೆ ಸುಖಲೋಲುಪತೆಯು ಜೀವನದ ಮುಖ್ಯ ಅಳತೆಗೋಲಲ್ಲ. ಆಸಕ್ತಿಯ ಕೆಲಸಗಳಲ್ಲಿ ತೊಡಗುವುದೊಂದೇ ಸಂತೋಷದ ಹಾದಿ.

ನಮ್ಮ ಹಳ್ಳಿಗಳಲ್ಲಿ ಒಂದು ಸುತ್ತು ಹಾಯ್ದುಬಂದರೆ ದನ ಮೇಯಿಸುವ, ಹಾಲು ಕರೆಯುವ, ಬಟ್ಟೆ ಹೊಲೆಯುವ, ಜಮೀನಿನಲ್ಲಿ ಕೆಲಸ ಮಾಡುವ ವಯಸ್ಸಾದ ಬಹಳಷ್ಟು ಜನರು ಕಣ್ಣಿಗೆ ಬೀಳುತ್ತಾರೆ. ಅವರ ಆರೋಗ್ಯ ಮತ್ತು ಉತ್ಸಾಹದ ಗುಟ್ಟು ದುಡಿಮೆ.

ಜಪಾನ್ ಹಾಗೂ ಇನ್ನು ಕೆಲವು ದೇಶಗಳಲ್ಲಿ ನಿವೃತ್ತಿಗೆ ವಯಸ್ಸನ್ನು ನಿಗದಿಪಡಿಸಿಲ್ಲ. ಶರೀರದ ಸದೃಢತೆಯೇ ನಿವೃತ್ತಿಯ ಮಾನದಂಡವಾಗಿದೆ.

ನಮ್ಮ ನೆರೆಮನೆಯ ಅಜ್ಜಿ ಖಾಲಿ ಜಾಗ ಕಂಡಲ್ಲೆಲ್ಲ ಗಿಡ ನೆಡುತ್ತಾರೆ. ಸದ್ದುಗದ್ದಲವಿಲ್ಲದೆ ಮರಗಳನ್ನು ಬೆಳೆಸಿ ‘ವನದೇವಿ’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ‘ಗಿಡ ನೆಡುವುದೇ ನನಗೆ ಪೂಜೆ’ ಎನ್ನುತ್ತಾರೆ.

‘ಸೂಪರ್‌ಮ್ಯಾನ್‌’ ಚಲನಚಿತ್ರದ ನಾಯಕ ಕ್ರಿಸ್ಟೊಫರ್ ರೀವ್, ಕುದುರೆಯಿಂದ ಬಿದ್ದು ತೀವ್ರ ಗಾಯಗೊಂಡು ಪಾರ್ಶ್ವವಾಯುವಿಗೆ ತುತ್ತಾದರು. ಕ್ರಮೇಣ ಆರೋಗ್ಯವನ್ನು ಮರಳಿ ಪಡೆದುಕೊಂಡ ರೀವ್‌, ಜನಸೇವೆಗಾಗಿ ಪ್ರತಿಷ್ಠಾನವೊಂದನ್ನು ಆರಂಭಿಸಿದರು. ಜಗತ್ತಿನೆಲ್ಲೆಡೆ ಪಾರ್ಶ್ವವಾಯುಪೀಡಿತರಿಗೆ ಸಹಾಯ, ಸಾಂತ್ವನ ನೀಡುತ್ತ ಧನ್ಯತೆಯನ್ನು ಅನುಭವಿಸಿದರು.

‘ಭಾರತ ಬಿಟ್ಟು ತೊಲಗಿ’ ಚಳವಳಿ ಆರಂಭಿಸಿದಾಗ ಗಾಂಧೀಜಿ ಮತ್ತು ಕಸ್ತೂರಬಾ ಅವರಿಗೆ ಸುಮಾರು 73ವರ್ಷವಾಗಿತ್ತು. ಅವರನ್ನು ರಕ್ತದೊತ್ತಡ, ಮಧುಮೇಹ ಬಾಧಿಸುತ್ತಿದ್ದವು. ದೇಶದ ಸ್ವಾತಂತ್ರ್ಯದ ಭವ್ಯ ಕನಸು ಹೊಂದಿದ್ದ ಈ ವೃದ್ಧ ದಂಪತಿಗೆ ವಯಸ್ಸು ಎಳ್ಳಷ್ಟೂ ಕಾಡಲಿಲ್ಲ.

60 ವರ್ಷದ ಗಡಿ ದಾಟಿದವರು ತಮ್ಮ ಕಥೆ ಮುಗಿಯಿತು ಎಂದು ನಿರಾಶರಾಗುವುದು ಉಚಿತವಲ್ಲ. ಜಗತ್ತು ಒಂದು ದೊಡ್ಡ ವೇದಿಕೆ. ಇದನ್ನು ಅಲ್ಲಮಪ್ರಭು ಬಯಲು ಎಂದು ಕರೆದಿದ್ದಾರೆ. ಈ ಬದುಕೆಂಬ ಬಯಲಿನಲ್ಲಿ ಕೊನೆಯ ಕ್ಷಣದವರೆಗೂ ಉತ್ಸಾಹದಿಂದ ಆಟ ಆಡಬೇಕು.

ನಿವೃತ್ತಿಯ ನಂತರ ಓದುವ, ಬರೆಯುವ, ಮಕ್ಕಳಿಗೆ ಪಾಠ, ಕಥೆ ಹೇಳುವ ಹವ್ಯಾಸ ರೂಢಿಸಿಕೊಳ್ಳಬೇಕು. ಅನೇಕ ವಯಸ್ಕರಿಗೆ ಮೊಬೈಲ್, ಕಂಪ್ಯೂಟರ್ ಆಪರೇಟ್ ಮಾಡಲು ಬರುವುದಿಲ್ಲ. ನಮಗ್ಯಾಕೆ ಎಂದು ನಿರಾಸಕ್ತಿಯಿಂದ, ಇಂದು ತೀರಾ ಅವಶ್ಯವಾಗಿರುವ ಈ ತಂತ್ರಜ್ಞಾನವನ್ನು ಅರಿತುಕೊಳ್ಳುವುದಿಲ್ಲ. ಬದುಕಿನುದ್ದಕ್ಕೂ ಕಲಿಯುತ್ತಲೇ ಇರಬೇಕು ಎನ್ನುವ ಮಾತಿನಲ್ಲಿ ಬಹುದೊಡ್ಡ ಶಕ್ತಿ ಅಡಗಿದೆ.

ಜಮಖಂಡಿಯ ನಿವೃತ್ತ ಶಿಕ್ಷಕ ಡಿ.ಎ.ಬಾಗಲಕೋಟ ತಮ್ಮ 75ನೇ ವಯಸ್ಸಿನಲ್ಲಿ ಪಿಎಚ್.ಡಿ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಈಗ ಅವರು ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಿ ಕನ್ನಡ ಸಾಹಿತ್ಯದ ಪಾಠ ಮಾಡುತ್ತಿದ್ದಾರೆ.

ಈಚೆಗೆ ವಯಸ್ಕರ ಕ್ರಿಯಾಶೀಲತೆ ಬಗ್ಗೆ ಒಂದು ಅಧ್ಯಯನ ವರದಿ ಪ್ರಕಟವಾಗಿದೆ. ನಿವೃತ್ತಿಯ ನಂತರ ಬೇರೆ ಉದ್ಯೋಗದಲ್ಲಿ ತೊಡಗುವ ಕೆಲಸಗಾರರು ಹೆಚ್ಚು ಕೆಲಸ ಮಾಡುತ್ತಾರೆ. ಸಂಸ್ಥೆಯ ಬೆಳವಣಿಗೆಗೆ ಅವರ ಅನುಭವ ಹೆಚ್ಚಿಗೆ ಲಭಿಸುತ್ತದೆ ಎಂದು ವರದಿ ತಿಳಿಸಿದೆ.

ನಿವೃತ್ತಿಯ ಕಲ್ಪನೆಯೇ ಒಂದು ನಕಾರಾತ್ಮಕ ಆಯಾಮ. ಅದು ಅನವಶ್ಯಕವಾಗಿ ಆತಂಕ, ನಿರಾಶೆಯನ್ನು ಸೃಷ್ಟಿಸುತ್ತದೆ. ಬದುಕು ಒಂದು ಅಖಂಡ ಪ್ರವಾಹ. ಪ್ರತಿಕ್ಷಣವೂ ಅದು ಹರಿಯುತ್ತದೆ. ಹರಿದುಹೋದ ಕ್ಷಣವನ್ನು ಎಂದೂ ಮರಳಿ ಪಡೆಯಲಾಗದು. ನಿರಂತರ ಹರಿಯುವ ಈ ಬದುಕಿನ ಪ್ರವಾಹ ನಿಲ್ಲಬಾರದು. ಏಕೆಂದರೆ, ಹರಿಯುವಿಕೆಯೇ ಜೀವನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು