ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ, ಕರ್ನಾಟಕ, ಈಗ ಏನಾಗಬೇಕು?

Last Updated 31 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಕನ್ನಡ ವಿಜೃಂಭಿಸುತ್ತಿದ್ದರೆ, ಅದರ ಪರಿಣಾಮ ರಾಜ್ಯದ ಇನ್ನುಳಿದ ಪ್ರದೇಶಗಳ ಮೇಲೆ ಆಗುತ್ತಿತ್ತು. ರಾಜ್ಯದಲ್ಲಿ ಪ್ರಭುತ್ವದ ಕೇಂದ್ರವಾದ ವಿಧಾನಸೌಧವು ಎಲ್ಲಿಯವರೆಗೆ ಕನ್ನಡವನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ಅದಕ್ಕೆ ವಿಧೇಯವಾಗಿ ನಡೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕನ್ನಡಕ್ಕೆ ಈ ರಾಜ್ಯದಲ್ಲಿ ದುರ್ಗತಿ ತಪ್ಪಿದ್ದಲ್ಲ.

ಇತಿಹಾಸದ ಯಾವ ಕಾಲ ಘಟ್ಟದಲ್ಲಿಯೂ ಕರ್ನಾಟಕವು ಒಂದೇ ಪ್ರಭುತ್ವಕ್ಕೆ ಒಳಪಟ್ಟಿರಲಿಲ್ಲ. ಕನ್ನಡ ಭಾಷೆಯನ್ನು ಆಡುತ್ತಿದ್ದ ಜನರ ಪ್ರದೇಶವನ್ನು ಕರ್ನಾಟಕ ಜನಪದವೆಂದು ಕರೆಯುತ್ತಿದ್ದರು.

ಈ ಕನ್ನಡ ನಾಡು, ರಾಷ್ಟ್ರಕೂಟರ ಕಾಲದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಬಹು ವಿಸ್ತಾರವಾಗಿ ಹಬ್ಬಿಕೊಂಡಿದ್ದಿತು. ಇಂಥ ಕನ್ನಡ ನಾಡು ತೀರಾ ಇತ್ತೀಚಿನವರೆಗೆ 22 ಪ್ರಭುತ್ವಗಳಲ್ಲಿ ವಿಂಗಡಿಸಿ ಹೋಗಿದ್ದಿತು.

ಕನ್ನಡ ಭಾಷೆಯು ಬೇರೆ ಬೇರೆ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಬೆಳವಣಿಗೆಯ ಅವಕಾಶವನ್ನು ಕಳೆದುಕೊಂಡು ನಡುಗಿ ಹೋಗಿದ್ದಿತು. ಆ ಗ್ರಹಣ ಸ್ಥಿತಿಯಿಂದ ಪಾರಾಗಿ ಬರುವುದು ದುಸ್ತರವಾಗಿದ್ದಿತು. ಅದರ ಮೇಲೆ ಆಧಿಪತ್ಯ ಹೊಂದಿದ ಸರ್ಕಾರಗಳು ಅದನ್ನು ತುಳಿದು ಇರಿಸಿದ್ದವು.

ಕನ್ನಡ ಭಾಷೆಯನ್ನು ಆಡುವ ಜನರು ಒಂದೇ ಪ್ರಭುತ್ವಕ್ಕೆ ಒಳಪಟ್ಟಿರಬೇಕೆನ್ನುವ ಕನಸನ್ನು 1825ರಷ್ಟು ಹಿಂದೆ ಮನ್ರೋ ಎಂಬ ಬ್ರಿಟಿಷ್ ಅಧಿಕಾರಿ ಕಂಡಿದ್ದನು. ಅದು ಎಷ್ಟರಮಟ್ಟಿಗೆ ಕೈಗೂಡುತ್ತಿತ್ತೋ ಏನೋ? ಅವನು ಮುಂಬಯಿ ಆಧಿಪತ್ಯಕ್ಕೆ ಒಳಪಟ್ಟ ಪ್ರದೇಶದಿಂದ ವರ್ಗಾವಣೆಗೊಂಡು ಮದ್ರಾಸಿಗೆ ಹೋದನು.

ತಾವು ಕರ್ನಾಟಕದವರೆನ್ನುವ ಭಾವನೆ ಧಾರವಾಡ ಪ್ರದೇಶದ ಜನರಲ್ಲಿ 1856ರಷ್ಟು ಹಿಂದೆ ಜಾಗೃತಗೊಂಡಿತು. ಆಗ ಚೆನ್ನಬಸಪ್ಪ ಅವರು ಧಾರವಾಡದಲ್ಲಿದ್ದ ನಾರ್ಮಲ್ ಸ್ಕೂಲಿಗೆ ಮುಖ್ಯ ಅಧ್ಯಾಪಕರಾಗಿ ಬಂದರು.

ಆ ಶಾಲೆಯೇ ಶಿಕ್ಷಕರ ತರಬೇತಿ ಶಾಲೆಯಾಯಿತು. ಆ ಚೆನ್ನಬಸಪ್ಪನವರೇ ಶಿಕ್ಷಣ ಇಲಾಖೆಯಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಆದರು. ಆ ಡೆಪ್ಯುಟಿ ಎನ್ನುವುದು ಮುಂದೆ ಅವರ ಹೆಸರಿನಲ್ಲಿ ಅಂಟಿಕೊಂಡಿತು.

ಮುಂಬಯಿ ಅಧಿಪತ್ಯಕ್ಕೆ ಒಳಪಟ್ಟಿದ್ದ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಬರುವಂತೆ ಅವರು ಕ್ರಮ ಕೈಗೊಂಡರು. ಆ ಶಾಲೆಗಳಲ್ಲಿ ಕಲಿಸುತ್ತಿದ್ದ ಶಿಕ್ಷಕರು ಡೆಪ್ಯುಟಿ ಚೆನ್ನಬಸಪ್ಪ ಅವರ ಪ್ರಭಾವದಿಂದ ಕನ್ನಡದ ರಾಯಭಾರಿಗಳಂತೆ ಕಾರ್ಯ ಮಾಡಿದರು.

ಅದರ ಪರಿಣಾಮವಾಗಿ ಕನ್ನಡವು ಹೊಸ ಜೀವ ಕಳೆಯನ್ನು ಪಡೆದುಕೊಂಡಿತು. ಆ ಪ್ರದೇಶಕ್ಕೆ ಅಂಟಿಕೊಂಡಿದ್ದ ದಕ್ಷಿಣ ಮಹಾರಾಷ್ಟ್ರವೆನ್ನುವ ಕಳಂಕ ಅಳಿದುಹೋಯಿತು. ಕನ್ನಡ ಜನರಲ್ಲಿದ್ದ ಕೀಳರಿಮೆ ಅವರಲ್ಲಿ ಉಳಿಯಲಿಲ್ಲ.

ಧಾರವಾಡದವರು ಕನ್ನಡ ನಾಯಕತ್ವದ ಪ್ರಶ್ನೆಯನ್ನು ತಮ್ಮ ಕೈಗೆ ಎತ್ತಿಕೊಂಡರೂ ಕನ್ನಡ ಭಾಷೆಯು ಕರ್ನಾಟಕವೆಂಬ ಪ್ರದೇಶದ ಎಲ್ಲೆಡೆಗಳಲ್ಲಿ ವಿಜೃಂಭಿಸಬೇಕೆಂದು ಧ್ವನಿ ಎತ್ತಿದರು. ಆ ಧ್ವನಿಯ ಪ್ರತೀಕವೇ 1890ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ವಿದ್ಯಾವರ್ಧಕ ಸಂಘ.

ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಪ್ರಥಮ ಎಂ.ಎ ಆದ ರಾಮಚಂದ್ರ ಹಣಮಂತ ದೇಶಪಾಂಡೆಯವರು ಆಗಿನ ಕಾಲದಲ್ಲಿ ಸಿಕ್ಕಬಹುದಾದ ದೊಡ್ಡ ಹುದ್ದೆಯ ಹುಚ್ಚನ್ನು ಬಿಟ್ಟು ಕನ್ನಡದ ಕೈಂಕರ್ಯವನ್ನು ಕೈಕೊಂಡರು.

ಕರ್ನಾಟಕ ವಿದ್ಯಾವರ್ಧಕ ಸಂಘ ಕೈಗೊಂಡ ಕನ್ನಡ ಜಾಗೃತಿಯ ಕಾರ್ಯವು, ಕರ್ನಾಟಕದ ವಿಭಿನ್ನ ಪ್ರದೇಶಗಳಲ್ಲಿ ಹಬ್ಬಿಕೊಂಡಿತು. ಇದರ ಪರಿಣಾಮವಾಗಿ ರಾಜ್ಯ ರಚನೆಗೋಸುಗ ಹೋರಾಟ ನಡೆದು, ಮೈಸೂರು ಎಂಬ ಹೆಸರನ್ನು ಪಡೆದು ಕನ್ನಡ ರಾಜ್ಯ, ನವೆಂಬರ್ ಒಂದು, 1956ರಂದು ರಚನೆಗೊಂಡಿತು. ನಾವು ಹೋರಾಟ ಮಾಡಿದುದು ಕರ್ನಾಟಕಕ್ಕೋಸುಗರ; ಆದರೆ ಪಡೆದುದು ಮೈಸೂರು!

ರಾಜ್ಯಕ್ಕಾಗಿ ನಡೆದ ಹೋರಾಟದಲ್ಲಿ, ಒಂದು ದೊಡ್ಡ ರಾಜ್ಯವಾದ ಮೈಸೂರು ನಮ್ಮಂದಿಗೆ ಇದ್ದಿದ್ದರೆ, ಕರ್ನಾಟಕದಲ್ಲಿ ಇರಬೇಕಾಗಿದ್ದ ಕಾಸರಗೋಡು, ನೀಲಗಿರಿ, ತಾಳವಾಡಿ, ಮಡಕಶಿರಾ, ಆಲೂರು, ಆದವಾನಿ, ರಾಯದುರ್ಗ, ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಹಾತಕಣಗಿಲೆ, ಶಿರೋಳ, ಗಡಹಿಂಗ್ಲಜ ಇವು ಕನ್ನಡಿಗರ ಕೈಬಿಟ್ಟು ಹೋಗುತ್ತಿರಲಿಲ್ಲ.
ರಾಜ್ಯ ಆದುದು ಕನ್ನಡ ಭಾಷೆ ಬದುಕಬೇಕು, ಬೆಳೆಯಬೇಕು.

ಕನ್ನಡಿಗರ ಬದುಕು ಬೆಳೆಯಬೇಕು, ಸಮೃದ್ಧಿಯನ್ನು ಪಡೆದು, ಅಭ್ಯುದಯದ ಮೆಟ್ಟಿಲನ್ನು ತುಳಿದು ಮೇಲೇರಿಕೊಂಡು ಹೋಗಬೇಕೆನ್ನುವುದೇ ಆಗಿದ್ದಿತು. ಆದರೆ ರಾಜ್ಯ ನಿರ್ಮಾಣಗೊಂಡು ಅರ್ಧ ಶತಮಾನಕ್ಕೆ ಮೇಲ್ಪಟ್ಟು ಕಾಲ ಕಳೆದುಹೋಗಿದ್ದರೂ ಅಭಿವೃದ್ಧಿಯನ್ನು ಕಾಣಬೇಕೆನ್ನುವ ನಮ್ಮ ಆಸೆ ಇನ್ನೂ ಆಸೆಯಾಗಿಯೇ ಉಳಿದುಕೊಂಡಿದೆ.

ಪ್ರಭುತ್ವದ ನಿರ್ಣಾಯಕ ಸ್ಥಾನದಲ್ಲಿರುವ ಹೆಚ್ಚಿನ ಜನರು ಕನ್ನಡದ ಬಗೆಗೆ ಪ್ರೀತಿಯನ್ನು ಇರಿಸಿಕೊಂಡಿಲ್ಲ. ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಮೇಲಿನ ಅಭಿಮಾನ ಅಷ್ಟಕಷ್ಟೇ. ಅಲ್ಲಿ ಕನ್ನಡವು ಅನಾಥ ಸ್ಥಿತಿಯನ್ನು ಅನುಭವಿಸುತ್ತಿದೆ.

ಬೆಂಗಳೂರಿನಲ್ಲಿ ಕನ್ನಡ ವಿಜೃಂಭಿಸುತ್ತಿದ್ದರೆ, ಅದರ ಪರಿಣಾಮ ರಾಜ್ಯದ ಇನ್ನುಳಿದ ಪ್ರದೇಶಗಳ ಮೇಲೆ ಆಗುತ್ತಿತ್ತು. ರಾಜ್ಯದಲ್ಲಿ ಪ್ರಭುತ್ವದ ಕೇಂದ್ರವಾದ ವಿಧಾನಸೌಧವು ಎಲ್ಲಿಯವರೆಗೆ ಕನ್ನಡವನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ಅದಕ್ಕೆ ವಿಧೇಯವಾಗಿ ನಡೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕನ್ನಡಕ್ಕೆ ಈ ರಾಜ್ಯದಲ್ಲಿ ದುರ್ಗತಿ ತಪ್ಪಿದ್ದಲ್ಲ.

ದೇಶಿಯ ಭಾಷೆಗಳು ವೈಭವದ ಸ್ಥಿತಿಯನ್ನು ಕಾಣಲೆನ್ನುವ ಉದ್ದೇಶದಿಂದಲೇ ಭಾಷಾನ್ವಯ ರಾಜ್ಯಗಳು ನಿರ್ಮಾಣಗೊಂಡವು. ಈ ಅರಿವು ಮಹಾರಾಷ್ಟ್ರದಲ್ಲಿದೆ, ಆಂಧ್ರಪ್ರದೇಶದಲ್ಲಿದೆ, ತಮಿಳುನಾಡಿನಲ್ಲಿದೆ, ಕೇರಳದಲ್ಲಿ ಇದೆ. ಆದರೆ ಆ ಅರಿವು ಕರ್ನಾಟಕದಲ್ಲಿ ಇಲ್ಲ.

ತನ್ನ ಅಸ್ತಿತ್ವಕ್ಕಾಗಿ ಅರ್ಜಿ ಬರೆದುಕೊಂಡು ತನ್ನನ್ನು ಬದುಕಿಸಬೇಕೆಂದು ಬೇಡಿಕೊಳ್ಳುವ ಅನಾಥ ಸ್ಥಿತಿ ಕನ್ನಡಕ್ಕೆ ಇದೆ. ಈ ದುರವಸ್ಥೆ ಮರಾಠಿಗೆ, ತೆಲುಗಿಗೆ, ತಮಿಳಿಗೆ, ಮಲಯಾಳಂ ಭಾಷೆಗಳಿಗೆ ಇಲ್ಲ.

ಪಂಡಿತರ ಮಾತಿಗೆ ಮಹಾರಾಷ್ಟ್ರದಲ್ಲಿ, ಆಂಧ್ರದಲ್ಲಿ, ತಮಿಳುನಾಡಿನಲ್ಲಿ, ಕೇರಳದಲ್ಲಿ ಪ್ರಾಧಾನ್ಯತೆ ಇದೆ. ಇಲ್ಲಿ ತಮಗೆ ಇರಬೇಕಾದ ಗೌರವವನ್ನು ನಮ್ಮ ಪಂಡಿತರು ಉಳಿಸಿಕೊಂಡಿಲ್ಲ. ಸರ್ಕಾರ ಕೊಡಮಾಡುವ ಸ್ಥಾನ ಪಡೆದುಕೊಳ್ಳಲು ಸದಾ ಸಲಾಂ ಹಾಕುತ್ತಿರುವ ಈ ಪಂಡಿತರು ಕನ್ನಡದ ಮಾನ ಹೆಚ್ಚಿಸಲು ಏನು ಮಾಡಬಲ್ಲರು?
ಕನ್ನಡಕ್ಕೆ ಕಾಲೇಜು ವಿಶ್ವವಿದ್ಯಾಲಯಗಳ ಮಟ್ಟದಲ್ಲಿಯೇ ಬದುಕುವ ಸ್ಥಿತಿ ಇಲ್ಲ.

ಕನ್ನಡ ಅಧ್ಯಾಪಕರು ನಿವೃತ್ತರಾಗಿ ಇಪ್ಪತ್ತು ವರ್ಷ ಕಳೆದಿದ್ದರೂ ಅವರ ನಿವೃತ್ತಿಯಿಂದ ತೆರವಾಗಿರುವ ಅವರ ಸ್ಥಳಗಳನ್ನು ತುಂಬುವುದು ಸರ್ಕಾರಕ್ಕೆ ಇದುವರೆಗೆ ಆಗಿಲ್ಲ. ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ ಹೆಮ್ಮೆ ಹೇಳಿಕೊಳ್ಳುವುದಕ್ಕೆ ಏನು ಅರ್ಥ?
ತಮ್ಮ ಭಾಷೆಗೆ ಶಾಸ್ತ್ರೀಯ (ಕ್ಲಾಸಿಕಲ್) ಭಾಷೆಯ ಸ್ಥಾನ ಸಿಕ್ಕಬೇಕೆಂದು ಹೋರಾಡಿದ್ದಾಯಿತು. ಆದರೆ ಏನಾಗಿದೆ? ತಳದಿಂದ ಹಿಡಿದು ತುದಿಯವರೆಗೆ ಅದನ್ನು ಎತ್ತಿ ನಿಲ್ಲಿಸುವವರು ಯಾರಿದ್ದಾರೆ?

ತಮಿಳರು ಉತ್ತರ ಭಾರತದ ಐದು ವಿಶ್ವವಿದ್ಯಾಲಯಗಳಲ್ಲಿ ತಮಿಳು ಪೀಠಗಳನ್ನು ತೆರೆದಿದ್ದಾರೆ. ಕರ್ನಾಟಕದಿಂದ ಒಂದೊಂದು ಪೀಠವನ್ನು ಉತ್ತರ ಭಾರತದ ಯಾವ ವಿಶ್ವವಿದ್ಯಾಲಯದಲ್ಲಿಯೂ ತರುವುದಕ್ಕೆ ಆಗಿಲ್ಲ.

ಬನಾರಸ್ ವಿಶ್ವವಿದ್ಯಾಲಯದಲ್ಲಿ ಇದ್ದ ಕನ್ನಡ ಅಧ್ಯಾಪಕರ ಹುದ್ದೆ, ಅಲ್ಲಿ ಪ್ರೊಫೆಸರ್ ಆಗಿದ್ದ ಶಿವಾನಂದ ಅವರು 13 ವರ್ಷಗಳ ಹಿಂದೆ ತೀರಿಹೋದ ಮೇಲೆ ಖಾಲಿಯಾಗಿಯೇ ಉಳಿದಿದೆ.

ಪಂಡಿತರೆಂದರೆ ಬೆಂಗಳೂರು, ಮೈಸೂರಲ್ಲಿ ಇರುವವರೇ ಅಲ್ಲ. ಅವರು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಾಪುರ, ರಾಯಚೂರು, ಬೀದರ, ಗುಲ್ಬರ್ಗ, ಉಡುಪಿ, ಮಂಗಳೂರಲ್ಲಿಯೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT