ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷಿ- ಪುರೋಹಿತ- ಅರ್ಚಕ ಮಾಫಿಯಾ

Last Updated 17 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಇದೊಂದು ಧನದಾಹಿ ಜಾಲ. ರಸ್ತೆಯ ಬದಿ ಉಪವನಗಳಲ್ಲಿ ಮದುವೆಯಿಂದ ಮಸಣದವರೆಗೆ ಎಲ್ಲೆಂದರಲ್ಲಿ ಸದ್ದುಗದ್ದಲವಿಲ್ಲದೆ ಬೆಳೆಯುತ್ತಿದೆ. ಈ ಮೂವರ ನೆಟ್‌ವರ್ಕ್ ಹುಟ್ಟು ಹಾಕಿದ ದಂಧೆ, ಹೈಟೆಕ್ ವಾಣಿಜ್ಯೋದ್ಯಮಕ್ಕೆ ಸವಾಲೆಸೆಯುತ್ತಿರುವ ಸಂಗತಿ ಆತಂಕಕಾರಿ.

ಇದು ಶಾಲಾ ಕಾಲೇಜುಗಳಲ್ಲಿ ಅರೆಬರೆ ಕಲಿತು ಮುಂದುವರಿಯಲಾಗದೆ ಹೊರಬಿದ್ದವರು ಕಟ್ಟಿಕೊಂಡ ಬದುಕು. ಇಲ್ಲಿ ಬಂಡವಾಳ ಹೂಡಿಕೆ ಇಲ್ಲ. ತರಬೇತಿಯ ಅಗತ್ಯವಿಲ್ಲ. ಅನುಭವ ಬೇಕೇ ಇಲ್ಲ. ಎಲ್ಲರೂ ಯಾದೃಚ್ಛಿಕವಾಗಿ ಪ್ರಾಪ್ತವಾಗುವ ಭಾಗ್ಯವಿಶೇಷ. ಅಲ್ಪ ಶ್ರಮ, ಅನಲ್ಪ ಲಾಭ.

ಸಂಸ್ಕೃತ, ವೇದಾಗಮ, ಪೌರೋಹಿತ್ಯದ ಗಂಧ ಗಾಳಿ ಬೀಸದ ಅಮಾಯಕರನ್ನು ಬಲೆಗೆ ಬೀಳಿಸುವಷ್ಟು ಮಾತು ಕಲಿತಿದ್ದರೆ ಸಾಕು, ಚಾವಟಿ ಇಲ್ಲದೆ ಬುಗುರಿ ಆಡಿಸಬಹುದು. ತೆರಿಗೆ ಇಲಾಖೆಯ ಕಣ್ಣಿಗೆ ಮಣ್ಣೆರಚಲೂಬಹುದು. ಈ ವಂಚನೆಯನ್ನು ಹತ್ತಿಕ್ಕಲಾರದ ಜಡತ್ವ ಬುದ್ಧಿಜೀವಿಗಳನ್ನು ಕಾಡುತ್ತಿದೆ.

ಧರ್ಮವೆಂಬುದು ಸೋಮಾರಿಯ ಅಫೀಮು. ಅದಕ್ಕೆ ಅಂಟಿಕೊಂಡ ಧಾರ್ಮಿಕ ಆಚರಣೆ ಆಲಸಿಯನ್ನು ನಶೆಯಲ್ಲಿ ಮುಳುಗಿಸುತ್ತದೆ. ದೈವಭೀತಿ, ಪಾಪಪ್ರಜ್ಞೆ, ಸ್ವರ್ಗನರಕಗಳ ಕಲ್ಪನೆ. ವಂಶೋನ್ನತಿ ಅವನತಿಗಳ ಬಗ್ಗೆ ಸಲ್ಲದ ಆತಂಕ, ಮುಪ್ಪರಿಗೊಂಡು ಅಸಹಾಯಕತೆಯ ಅಂಚಿಗೆ ಎಳೆದೊಯ್ಯುತ್ತದೆ. ಚಿತ್ತಸ್ವಾಸ್ಥ್ಯ ಕಳೆದುಕೊಂಡವ ತಳಮಳಿಸುತ್ತಾನೆ.
 
ಅದುವರೆಗೆ ನೇಪಥ್ಯದಲ್ಲಿರುವ ಜ್ಯೋತಿಷಿಯ ರಂಗಪ್ರವೇಶ. ಆ ಕ್ಷಣದಲ್ಲೇ `ನಮ್ಮ ಒಡಲಲ್ಲೆ ಇಂದ್ರಿಯಗಳೆಂಬ ಐವರು ಕಳ್ಳರು ಮನೆ ಮಾಡಿದ್ದಾರೆ. ಅವರಲ್ಲಿ ಐನಾತಿ ಕಳ್ಳನೆಂದರೆ ಕಣ್ಣು! ಅಣ್ಣಮ್ಮನ ಗುಡಿಯ ಆಸುಪಾಸು, ಬಳೇಪೇಟೆ, ಅರಳೆಪೇಟೆಯ ಸುತ್ತಮುತ್ತ, ಮಾಗಡಿರಸ್ತೆಯ ಈ ಅಂಚಿನಿಂದ ಸುಮನಹಳ್ಳಿಯ ಆ ಅಂಚಿನವರೆಗೆ ನೂರಾರು ಜ್ಯೋತಿಷ್ಯಾಲಯಗಳು ಕೈಬೀಸಿ ಕರೆಯುತ್ತವೆ.

ಕಣ್ಣು ನೋಡುತ್ತದೆ. ಮಿದುಳಿಗೆ ಸಂದೇಶವನ್ನು ಕಳುಹಿಸುವಲ್ಲಿ ತಡವಾಗುತ್ತದೆ. `ಇದು ಸರಿ, ಇದು ಠಕ್ಕು~ ಎಂಬ ತೀರ್ಮಾನಕ್ಕೆ ಬರುವಲ್ಲಿ ಬುದ್ಧಿ ಸೋಲುತ್ತದೆ. ಎಲ್ಲ ಜ್ಯೋತಿಷ್ಯಾಲಯಗಳೂ ತಮ್ಮ `ಅಡ್ಡೆ~ಯ ಮುಂದೊಡ್ಡಿರುವ ಫಲಕಗಳ ವಿನ್ಯಾಸ, ಒಕ್ಕಣೆ, ಏಕರೀತಿಯಾಗಿರುತ್ತದೆ.

ಎಲ್ಲದರಲ್ಲೂ ಒಬ್ಬನೇ ಕಲಾಕರನ ಕೈಚಳಕವಿರಬಹುದೆ! ಒಂದು ಕುಂಡಲಿ, ಅದರೊಳಗೆ ರಾಶ್ಯಾಧಿಪತಿಗಳ ಹೆಸರು. ಕೆಳಗೆ `ವಿದ್ಯೆ, ವಿವಾಹ, ಪ್ರೇಮ, ಕೋರ್ಟು ವ್ಯವಹಾರ, ವಿದೇಶ ಪ್ರವಾಸ, ಮಾಟ ಮಂತ್ರ, ದುಷ್ಟಗ್ರಹಗಳ ಪೀಡೆ ಪರಿಹಾರ, 21ದಿನಗಳಲ್ಲಿ ಖಾತರಿ~. ಇಲ್ಲಿನ ಹೆಸರುಗಳಲ್ಲಿಯೂ ವೈವಿಧ್ಯ. ಸಾಯಿ ರಾಘವೇಂದ್ರ, ಸಾಯಿ ರಾಮ, ಸಾಯಿ ದುರ್ಗೆ, ಸಾಯಿ ಹನುಮಂತ, ಹೀಗೆ ಥರಾವರಿ.

ಎಲ್ಲ ದೇವತೆಗಳು `ಸಾಯಿ ಸಾಯಿ~ ಎನ್ನುವವರೆ. ಯಾರು ಸತ್ತರೆ ಯಾರಿಗೆ ಲಾಭ? ಜ್ಯೋತಿಷಿಗೆ, ಪುರೋಹಿತನಿಗೆ, ಯತ್ಕಿಂಚಿತ್ ಅರ್ಚಕನಿಗೂ ಅಲ್ಲವೆ? ಈ ಅಂಗಡಿಗಳ ಮುಂದೆ ಒಂದರೆಕ್ಷಣ ನಿಲ್ಲಿ. ಬೆಚ್ಚಿ ಬೀಳಿಸುವ ಮಾಹಿತಿ ಸಿಗುತ್ತದೆ. ಈ ಜ್ಯೋತಿಷಿಗಳೆಲ್ಲ ಬಹುತೇಕ, ಕುಡ್ಲ, ಕೇರಳ, ಕೊಳ್ಳೇಗಾಲದವರೆ. ಎಲ್ಲರೂ ಪಂಡಿತರೆ.
 
ಅಥರ್ವವೇದವಿದರೆ, ಕುಟ್ಟಿಚ್ಚಾತ್ತನ್, ಚೋಟಾನಿಕರಾ ಭಗವತಿ, ಕಾಳಿ ಕಾಟ್ಟೇರಿಯ ಉಪಾಸಕರೆ. ಕೃಷಿಯಲ್ಲಿ ಕಸಿ, ನಾಟಿ ತಳಿಗಳಿರುವಂತೆ ಇಲ್ಲಿಲ್ಲ. ಇವೆಲ್ಲ ಟಿಶ್ಯೂಂ ಕಲ್ಚರ್ ತಳಿಗಳು. ಇವರಲ್ಲಿ ಎರಡು ಬಗೆ - ಸದಾಚಾರಿ ಮತ್ತು ವಾಮಚಾರಿ. ಎರಡನೆಯವನ ಬಲೆಗೆ ಬಿದ್ದರೆ ಕತೆ ಮುಗಿಯಿತು.

ಫುಟ್‌ಪಾತ್ ಜ್ಯೋತಿಷಿಗಳು ವಿಧಿಸುವ ಶುಲ್ಕ ನೂರರಿಂದ ನೂರೈವತ್ತರೊಳಗೆ. ಇದು ಗಿರಾಕಿಯ ಕೈ ಕಚ್ಚುವುದಿಲ್ಲ. `ಸುಸಜ್ಜಿತ ಹೋಟೆಲುಗಳಲ್ಲಿ ಒಂದು ದೋಸೆ, ಎರಡು ಇಡ್ಲಿ, ಕಾಫಿಗೆ ನೂರು ರೂಪಾಯಿ ಬಿಲ್ಲು ತೆರುತ್ತೇವಂತೆ, ಇಲ್ಲಿ ಕೊಟ್ಟರೇನು ಲುಕ್‌ಸಾನು~ ಎಂಬ ಭಾವ. ಜಾತಕನೋಡಿ, ಕೈಹಿಡಿದು, ಕವಡೆ ಹಾಕಿದರೆ ಮುಗಿಯಿತು ಖೆಡ್ಡಾ ಆಪರೇಷನ್.

`ನಿನ್ನ ವಿರುದ್ಧ ಹೆಣ್ಣೊಂದು ಕತ್ತಿ ಮಸೆಯುತ್ತಿದೆ, ಬಣ್ಣ ಕಪ್ಪು, ಗುಂಡು ಮೈ. ಹಿಂದಿನ ಜನ್ಮದಲ್ಲಿ ಸರ್ಪಹತ್ಯೆ ನಡೆದಿದೆ. ನಿನಗೆ ಪುತ್ರ ಸಂತಾನವಿಲ್ಲ. ನಿನಗೆ ದ್ವಿಕಳತ್ರಯೋಗ ಇದೆ~- ಇವು ಮಾಮೂಲಿ ತಂತ್ರಗಳು. ನೀವೇನೆನ್ನಬಹುದೆಂದು ನಿಮ್ಮನ್ನೇ ಕೆಕ್ಕರಿಸಿ ನೋಡುತ್ತಾನೆ.
 
`ನನಗೊಬ್ಬ ಮಗನಿದ್ದಾನೆ~ ಎಂದಿರೋ ಸಿಕ್ಕಿ ಬಿದ್ದಿರಿ. `ಅದು ನಿಮ್ಮ ಮಗನೆ ಅಲ್ಲ~ ಎಂದಾನು! ನಿಮಗೆ `ಚಿನ್ನವೀಡು~ ಇರುವ ಮರ್ಮ ಜ್ಯೋತಿಷಿಗೆ ತಿಳಿಯಿತಾದರೂ  ಹೇಗೆ? ನಿಮಗೆ ರೋಮಾಂಚನ. ನಿಮ್ಮ ಫಲಾಫಲಗಳಿಗೆ ಖಾತರಿಯಿಲ್ಲ. ಶುಲ್ಕದ ಮರುಪಾವತಿಯಿಲ್ಲ. ನಿಮಗರಿಯದಂತೆ ನೀವು ಮೋಸ ಹೋಗುತ್ತಿದ್ದೀರಿ.

ಇನ್ನು ಪರಿಹಾರ, ಈ ಹಂತದಲ್ಲೇ ಪುರೋಹಿತ ಎಂಟ್ರಿ ತೆಗೆದುಕೊಳ್ಳುತ್ತಾನೆ. ಜ್ಯೋತಿಷಿ ವಾಮಾಚಾರಿಯಾದರೆ ಆತನೆ ಅಮಾವಾಸ್ಯೆಯ ನಟ್ಟಿರುಳಲ್ಲೋ, ಗ್ರಹಣದಲ್ಲೋ, ನಿಮ್ಮನ್ನು ಮಸಣಕ್ಕೆ ಎಳೆದೊಯ್ದು, ಅರಿಶಿನ ಕುಂಕುಮ ಹಚ್ಚಿ ಹೂ ಮುಡಿಸಿದ ಮಣ್ಣಿನ ಬೊಂಬೆಯ ಮುಂದೆ ನಿಲ್ಲಿಸುತ್ತಾನೆ. ಬೇವಿನ ಸೊಪ್ಪಿನಿಂದ ಗಾಳಿ ಬೀಸುತ್ತಾನೆ.

ಜನಿವಾರವಿದ್ದರೆ ತೆಗೆದು ಹಾಕಿ, ಗೊಂಬೆಗೆ ಸೂಕರ ಬಲಿ ಕೊಟ್ಟು, ಹೊರ ತರುವಷ್ಟರಲ್ಲಿ ನೀವು ಅರೆಹುಚ್ಚರಾಗಿರುತ್ತೀರಿ. ಇದಕ್ಕೆಂತಲೆ `ಈವೆಂಟ್ ಮ್ಯಾನೇಜರ್‌ಗಳು, ಜ್ಯೋತಿಷಿಯೊಡನೆ ನಿರಂತರ ಮೊಬೈಲ್ ಸಂಪರ್ಕ ಇಟ್ಟುಕೊಂಡಿರುತ್ತಾರೆ. ನೀವು ಕೋಟ್ಯಧೀಶರಾಗಿದ್ದರೆ, ಲೊಕೇಷನ್ ಛೇಂಜ್ ಆಗಿರುತ್ತೆ. ಕಟ್ ಮಾಡಿದರೆ ಕೇರಳದ ನಂಬೂದರಿಯ ಮನೆಯಲ್ಲಿ ಅಷ್ಟಮಂಗಲ ಪ್ರಶ್ನೆ. ಕುಟ್ಟಿಚ್ಚಾತ್ತಾನ್ ಆವಾಹನೆ. ಶತ್ರುದಮನ ಹೋಮ. ಕೇವಲ ಐದೇ ಲಕ್ಷ ರೂಪಾಯಿ ವೆಚ್ಚದಲ್ಲಿ.

ಸ್ಥಳೀಯ ಜ್ಯೋತಿಷಿಗಳಿಗೆ ಇಬ್ಬಗೆಯ ಕಮಾಯಿ. ಒಂದು ಪುರೋಹಿತರಿಂದ, ಮತ್ತೊಂದು ಅರ್ಚಕರಿಂದ. ಇದೊಂದು ಲೇನಾ ದೇನಾ ವ್ಯವಹಾರ, ಇತ್ತೀಚೆಗೆ ಮಾಜಿ ಸಚಿವರೊಬ್ಬರ ಮನೆಯಲ್ಲಿ ಹಾವೊಂದು ಕಾಣಿಸಿತಂತೆ (ಕಳ್ಳ ಹಣ ಕೂಡಿಟ್ಟವರ ಕಣ್ಣಿಗೆ ಹಗ್ಗವೂ ಹಾವಾಗಿ ಕಾಡುತ್ತಿದೆ. ಆ ಮಾತು ಬೇರೆ). 

ಹಾವಾಡಿಗನನ್ನು ಕರೆಯಿಸಿ, ಹಾವು ಹಿಡಿಸುವುದನ್ನು ಬಿಟ್ಟು ಜ್ಯೋತಿಷಿಯ ಮೊರೆ ಹೊಕ್ಕಿದ್ದೇ ತಡ, ಆತ, ಪುರೋಹಿತನನ್ನ ಕರೆಯಿಸಿ ಹೋಮ ಹವನ ಅಂತ ರಂಗ ಹೂಡಿ ಲಕ್ಷಕ್ಕೂ ಮೇಲೆ ಕಕ್ಕಿಸಿಬಿಟ್ಟ. ನನ್ನ ಮನೆಯಲ್ಲೆ ಕೆಲವರುಷಗಳ ಹಿಂದೆ, ಘಟಸರ್ಪವೊಂದು ಹೊಕ್ಕು, ಎರಡುತಾಸುಗಳವರೆಗೆ ಮನೆಮಂದಿಯನ್ನು ದಿಕ್ಕೆಡಿಸಿತು. ಆಗ ನಾವ್ಯಾರು ಪರಿಹಾರಕ್ಕಾಗಿ ಜ್ಯೋತಿಷಿ, ಪುರೋಹಿತ ಅರ್ಚಕರ ಮನೆಬಾಗಿಲು ತಟ್ಟಲಿಲ್ಲ.

ನನಗೆ ರಾಹುದೆಶೆ. ಹಾಗಾಗಿ ಹಾವು ಕಾಣಿಸಿಕೊಂಡಿರಬಹುದು ಎಂದು ಯಾಕೋ ಮಿತ್ರರು ಆಡಿದ ಮಾತು ಕೇಳಿ `ಇರಬಹುದು, ಇರದೆಯೂ ಇರಬಹುದು~ ಎಂದುಕೊಂಡೆ. ಪುರೋಹಿತರ ಠಕ್ಕು ಬಯಲಾಗಿಡುವುದಕ್ಕಾದರೂ ನಾವು ಸಂಸ್ಕೃತ ಕಲಿಯಲೇಬೇಕು.  

`ಯತ್ಕಿಂಚಿಕ್ ದಕ್ಷಿಣಾಂ ಯಥೋಕ್ತ ದಕ್ಷಿಣಾಮಿನ ಸ್ವೀಕೃತ್ಯ~ ಎಂದು ಮನೆಯ ಯಜಮಾನನ ಬಾಯಲ್ಲಿ ಹೇಳಿಸುವಾಗ ಆ ಯತ್ಕಿಂಚಿತ್ ದಕ್ಷಿಣೆಯ ಗಾತ್ರವನ್ನು ಸ್ಪಷ್ಟಪಡಿಸುವುದಿಲ್ಲ. ಅದು ಸಾಪೇಕ್ಷ. ಐದರಿಂದ ಐದುನೂರರವರೆಗೂ ಆಗಬಹುದು. ಮತ್ತೆ ಈ ಬೃಹಸ್ಪತಿಗಳು, ಮತ್ತವರು ಕರೆತಂದ ಋತ್ವಿಕರ ಮಂತ್ರ ಘೋಷ ಕೇಳಿದಾಗ ಎದೆಯ ಮೇಲೆ ಜೆಸಿಬಿ ಹರಿದಂತಾಗುತ್ತದೆ.

`ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರ‌್ಯ~. ಆದರೆ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಪರಂಪರಾನುಗತವಾಗಿ ಅರ್ಚಕ ವೃತ್ತಿಗಂಟಿಕೊಂಡವರಿಂದ, ಅಗಮಶಾಸ್ತ್ರ ಪಾರಂಗತ್ಯವಾಗಲಿ ಅಖಂಡ ಶ್ರದ್ಧೆಯಾಗಲಿ ಉಳಿಯದೆ ಕೇವಲ ಜೀವನೋಪಾಯಕ್ಕೆ ಕಟ್ಟಿಕೊಂಡ ಬದುಕೆ ನಮ್ಮ ಕಣ್ಣಮುಂದೆ ಇದೆ.

ಹಿರಿಯ ಪರಂಪರೆಯ ಅರ್ಚಕರು, ಉದಯೋನ್ಮುಖ ಆಗಮಿಕರಿಗೆ ಮಂತ್ರ ಕರಣ ಇತ್ಯಾದಿಯ ತಿಳುವಳಿಕೆ ಕೊಡಬೇಕಾದುದು ಅವರ ಕರ್ತವ್ಯ. ಫುಟ್‌ಪಾತ್‌ಗಳಲ್ಲಿ ದಿಢೀರನೆ ಎದ್ದ ಗುಡಿಗಳಲ್ಲಿ ಸಂಕಷ್ಟಹರಣ ಚತುರ್ಥಿ, ಸತ್ಯನಾರಾಯಣ ಪೂಜೆ, ಗ್ರಹಣದಂದು ನಕ್ಷತ್ರ ಶಾಂತಿ ವಗೈರೆ ವಗೈರೆಗಳಲ್ಲಿ ಜ್ಯೋತಿಷಿಯ ಕೈವಾಡವೂ ಇದ್ದೀತು. ಇವೆಲ್ಲ ಪರಿಹಾರ ಕ್ರಮಗಳು ಇಲ್ಲಿ ಅಡ್ಡ ಕಸುಬಿಗಳದೇ ಅಬ್ಬರ ಆಡಂಬರ; ಇಂತಹ ಸಾಂಕ್ರಾಮಿಕ ಪಿಡುಗಿಗೆ ಮದ್ದೆಲ್ಲಿ?

ಒಂದು ಮಾತು: ದಶಕಗಳ ಕಾಲ ಜ್ಯೋತಿಷವನ್ನು ಪ್ರಾಯೋಗಿಕ ವಿಜ್ಞಾನವೆಂದು ಗೌರವಿಸಿ ಅಧ್ಯಯನ ಮಾಡಿದ, ಜಪತಪ ನೇಮನಿಷ್ಠೆಯಿಂದ ಫಲಭಾಗವನ್ನು ಸಿದ್ಧಿಸಿಕೊಂಡ ದೈವಜ್ಞರು, ಬಾರ್ಹಸ್ಪತ್ಯದಲ್ಲಿ ನಿಷ್ಠೆಯಿಂದ ದುಡಿದ ಕರ್ಮಠ ಪುರೋಹಿತರು, ದೈವಭೀರು ಆಗಮಿಕರು ಇಂದಿಗೂ ಕಾಣಸಿಗುತ್ತಾರೆ. ಆ ಎಲ್ಲಾ ಚೇತನಗಳಿಗೆ ನಮೋನ್ನಮಃ. ಈ ಲೇಖನ `ಅಂಥವರನ್ನು~ ಕುರಿತದ್ದಲ್ಲ.

ಈ ಮಹನೀಯರು ಅಲ್ಪತೃಪ್ತರು. ನಿತ್ಯತೃಪ್ತರು. ತೆರಿಗೆ ಇಲಾಖೆಯವರು ದಾಳಿ ಮಾಡುವ ಮಟ್ಟಿಗೆ, ಶೋಷಿತರನ್ನು ಶೋಷಿಸುವ ರಕ್ತಪಿಪಾಸುಗಳಲ್ಲ ಎಂಬುದೇ ನೆಮ್ಮದಿಯ ಸಂಗತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT