ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಂಬಿಕೆ’ ಇರುವವರೂ ಸಮಿತಿಯಲ್ಲಿ ಇರಬೇಕಿತ್ತಲ್ಲವೇ?

Last Updated 6 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮೂಢನಂಬಿಕೆ ಕುರಿತು ವಿಧಾನ ಮಂಡಲದಲ್ಲಿ  ಇನ್ನೇನು ಚರ್ಚೆ ಆರಂಭವಾಗಲಿದೆ. ಅದಕ್ಕೆ ಕಾರಣ ಪ್ರೊ.ಎಸ್‌.ಜಾಫೆಟ್‌ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ಕರ್ನಾಟಕ ಮೂಢನಂಬಿಕೆ ಆಚರಣೆಗಳ ನಿಷೇಧ ಮಸೂದೆ ಕರಡು ರಚನಾ ಸಮಿತಿ. ಇದು ಈಗಾಗಲೇ ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಯಾರಿಗಾದರೂ ಭೌತಿಕ, ಮಾನಸಿಕ, ಆರ್ಥಿಕ, ಲೈಂಗಿಕ ಶೋಷಣೆಯಾ ಗುವ ಆಚರಣೆ ಇದ್ದರೆ, ಇಲ್ಲವೇ ಮಾನವೀಯ ಘನತೆಗೆ ಕುಂದು ತರುವಂತಿದ್ದರೆ ಅದನ್ನು ಈ ಸಮಿತಿ ಮೂಢನಂಬಿಕೆ ಎಂದು ಕರೆದಿದೆ. ವೈಜ್ಞಾ ನಿಕ ಆಧಾರದ ಮೇಲೆ ಇಂಥದೊಂದು ಕಾನೂನು ರಚನೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಈ ಸಮಿತಿ ಮತ್ತು ಕರಡು ಮಸೂದೆ ಬಗ್ಗೆ ಪ್ರಜ್ಞಾವಂತ ನಾಗರಿಕರಲ್ಲಿ ಕೆಲವು ಪ್ರಶ್ನೆಗಳು ಸಹಜವಾಗಿ ಏಳುತ್ತವೆ.

ಪ್ರಾಣಿಬಲಿ, ನರಬಲಿ, ಮಡೆಸ್ನಾನ, ಪಂಕ್ತಿ ಭೇದ, ಬೆತ್ತಲೆ ಸೇವೆ, ಮಾಟ ಮುಂತಾದ ವುಗಳನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ ಪ್ರಶ್ನೆ ಇರುವುದು ಸಮಿತಿಯ ಸಿಂಧುತ್ವದ ಬಗ್ಗೆ. ಸಮಾಜದಲ್ಲಿ ಇರುವ ಎಲ್ಲ ಜನಸಮುದಾಯ, ಧರ್ಮದ ಪ್ರತಿನಿಧಿಗಳೂ ಈ ಸಮಿತಿಯಲ್ಲಿ ಇರ ಬೇಕಿತ್ತು. ಕ್ರೈಸ್ತ ಮುಖಂಡರು, ಮುಸ್ಲಿಂ ಜನಾಂಗ ದವರು, ಹಿಂದೂ ಆಚರಣೆಯ ವೈದಿಕ, ವೀರ ಶೈವ ಇನ್ನಿತರ ಕರ್ನಾಟಕ ಮೂಲದ ಪಂಥದ ವರು ಸಮಿತಿಯಲ್ಲಿ ಇಲ್ಲದಿರುವುದು ಸರಿಯಲ್ಲ. ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ಬಹುತ್ವ ಹೇಗೆ ಎದ್ದು ಕಾಣುತ್ತದೆಯೋ ಮೂಢನಂಬಿಕೆ ಯಲ್ಲಿಯೂ ಹಾಗೇ ಬಹುತ್ವವಿದೆ. ಮೇಲ್ಜಾತಿ ಯವರ ಮೂಢನಂಬಿಕೆ, ದಲಿತರ ಮೂಢ ನಂಬಿಕೆ, ಅಲ್ಪಸಂಖ್ಯಾತರ ಮೂಢನಂಬಿಕೆ, ಆರ್ಥಿಕವಾಗಿ ಹಿಂದುಳಿದವರ ಮತ್ತು ಮುಂದು ವರಿದವರ ಮೂಢನಂಬಿಕೆಗಳು ಹೀಗೆ ಹಲವು ಸ್ತರಗಳಿವೆ. ಆದರೆ ಸರ್ಕಾರಕ್ಕೆ ಕರಡು ಸಲ್ಲಿಸಿರುವ ತಜ್ಞರ ಸಮಿತಿ ಇದ್ಯಾವುದನ್ನೂ ಪರಿಗಣಿಸದೆ ಬಹುಸಂಖ್ಯಾತ ಸಮಾಜದ ಕೆಲವು ಆಯ್ದ ಮೌಢ್ಯವನ್ನು ಮಾತ್ರ ಹೆಸರಿಸಿರುವುದು ಸರಿಯಲ್ಲ.

ಸಮಿತಿಯ ಸದಸ್ಯರಲ್ಲಿ ಬಹುತೇಕರು ಎಡ ಪಂಥದ ಧೋರಣೆಯವರು. ಆಸ್ತಿಕ ಧಾರ್ಮಿಕ ಸಮಾಜದ ದೃಷ್ಟಿಯಿಂದ ಇವರೇ ‘ಹೊರಗಿನ ವರು’. ಧಾರ್ಮಿಕರಾಗಿದ್ದೂ ವಿಶಾಲಮತಿಗಳಾ­ಗಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಅಂತಹ ಕೆಲವರನ್ನಾದರೂ ಸಂದರ್ಶಿಸದೆ, ಸಮಿತಿಯು ಮಂಡಿಸಿರುವ ಸಲಹೆ ಸೂಚನೆ­ಗಳನ್ನು ಅಸಮರ್ಪಕ ಎಂದೇ ಹೇಳಬೇಕು. ಏನೇ ಆದರೂ ಮೂಢನಂಬಿಕೆ ಮತ್ತು ನಂಬಿಕೆ ನಡುವೆ ಗೆರೆ ಹಾಕುವುದು ಹೇಗೆ?

ಕಮ್ಯುನಿಸ್ಟರಿಗೆ ಅವರ ವಿಚಾರ ವೈಜ್ಞಾನಿಕ. ಉಳಿದವರ ವಿಚಾರಧಾರೆ ಪ್ರತಿಗಾಮಿ. ಹಾಗೇ ಧಾರ್ಮಿಕರಿಗೆ ನಾಸ್ತಿಕರ ವಿಚಾರ ಪ್ರತಿಗಾಮಿ, ತಮ್ಮ ವಿಚಾರ ಅತ್ಯಂತ ಪ್ರಗತಿಪರ. ಈ ಸಮಿತಿಯ ಉದ್ದೇಶ ಎಷ್ಟೇ ಉದಾರವಾಗಿದ್ದರೂ ಅದು ಮಾಡಿ­ರುವ ಅಧ್ಯಯನ ಬಹು ವ್ಯಾಪಕ ವಿಷಯ­ವನ್ನು ಅರ್ಥಾತ್‌ ಜನರ ನಂಬಿಕೆಯ ವಿಷಯ­ವನ್ನು ತೀರಾ ಸೀಮಿತ ಅರ್ಥದಲ್ಲಿ ಗ್ರಹಿಸಿದೆ ಎಂದೇ ಹೇಳಬೇಕು.

ಈಗಲೂ ಕಾಲ ಮಿಂಚಿಲ್ಲ. ಆಧುನಿಕ ಪರಮಾನಸಶಾಸ್ತ್ರ (para psychology), ವೈಜ್ಞಾನಿಕ ಸಂಶೋಧನೆಗಳನ್ನು ಗಟ್ಟಿ ತಳಹ­ದಿಯ ಮೇಲೆ ಅಧ್ಯಯನ ಮಾಡಿದ, ಇನ್ನಷ್ಟು ‘ಬೇರೆ’ ವಿಚಾರದ ತಜ್ಞರನ್ನು ಸೇರಿದ ಹಾಗೆ ಸಮಿತಿಯನ್ನು ಸರ್ಕಾರ ಮರು ರಚನೆ ಮಾಡಲಿ. ಈಗಿರುವ ರೀತಿಯಲ್ಲಿ ಜನಗಳ ನಡುವೆ ಯಾವುದೇ ಚರ್ಚೆ, ಭಿನ್ನಾಭಿಪ್ರಾಯಕ್ಕೆ ಅವಕಾಶ­ವಿಲ್ಲದಂತೆ ಸರ್ವಾಧಿಕಾರಿ ಧೋರಣೆಯಂತೂ ಈಗಿನ ಸಮಿತಿಯ ಪ್ರಸ್ತಾವದಲ್ಲಿ ಕಾಣುತ್ತದೆ. ಯಾವುದೇ ಕಾನೂನು ಮೊದಲು ವ್ಯಾಪಕವಾಗಿ ಜನಗಳ ಮಧ್ಯೆ ಚರ್ಚೆ ವಾಗ್ವಾದವನ್ನು ಹುಟ್ಟು ಹಾಕಬೇಕಲ್ಲವೇ?
ಈ ಹಿಂದೆ ದೇವೇಗೌಡ, ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ನಡೆಸಿದ ಕಂದಾಚಾ ರಕ್ಕೆ, ಇಂದಿರಾ ಗಾಂಧಿ ಅವರು ಚಂದ್ರಾಸ್ವಾಮಿ ಎಂಬ ತಾಂತ್ರಿಕನನ್ನು ನಿಕಟವರ್ತಿಯನ್ನಾಗಿ ಮಾಡಿಕೊಂಡಿದ್ದಾಗ, ಈ ಸಮಿತಿಯ ಯಾವ ಸದಸ್ಯರೂ ಬಾಯಿ ಬಿಟ್ಟಿರಲಿಲ್ಲವೇಕೆ?

ಇಂಥ ಕಾನೂನಿನಲ್ಲಿ ತಮಗೆ ‘ಕಂಡರೆ ಆಗದೆ’ ಇರುವವರು ತಮ್ಮ ಮೇಲೆ ಮಾಟ ಮಾಡಿಸುತ್ತಿ ದ್ದಾರೆ ಎಂದು ವೃಥಾ ಆರೋಪ ಮಾಡಬಹು ದಲ್ಲವೇ? ಜನರ ಧಾರ್ಮಿಕ ಭಾವನೆಗಳೊಂದಿಗೆ  ಪ್ರಸ್ತುತ ಸರ್ಕಾರ ಆಟವಾಡುತ್ತಿದೆ ಎಂಬ ಅನುಮಾನವಂತೂ ಬರುತ್ತದೆ. ಕರ್ನಾಟಕದ ಎಷ್ಟೋ ಧಾರ್ಮಿಕ ಅಲ್ಪಸಂಖ್ಯಾತ ಪಂಗಡಗಳಲ್ಲಿ ಮಹಿಳೆಯರ ಮೇಲೆ ನಿತ್ಯವೂ ದೌರ್ಜನ್ಯ ‘ಧಾರ್ಮಿಕ ಆಚರಣೆ’ಯ ನೆಪದಲ್ಲಿ ನಡೆಯು ತ್ತಿದೆ. ಈ ಸಂಗತಿಯನ್ನು ಸರ್ಕಾರವಾಗಲಿ, ಸಮಿತಿಯವರಾಗಲಿ ಗಮನಿಸಿದಂತೆ ಇಲ್ಲ. ಓಕಳಿ ಹಾಕುವುದೂ ಈ ಸಮಿತಿಗೆ ಮೂಢನಂಬಿಕೆ ಯಾಗಿ ಕಾಣುವುದು ಆಶ್ಚರ್ಯಕರ. ಜಡವಾದಿ–ಮಾರ್ಕ್ಸ್‌ವಾದಿ–ಭೌತವಾದಿ ಶಕ್ತಿಗಳ ಕೈವಾಡ ಪ್ರಸ್ತುತ ಪ್ರಸ್ತಾವನೆಯ ಹಿಂದೆ ಇರುವುದು ಸತ್ಯ. ಜೈನ, ಬೌದ್ಧ, ನಾಥಪಂಥ, ಶಾಕ್ತ ಪಂಥ, ಭಕ್ತಿ ಪಂಥಗಳಲ್ಲಿರುವ ಜನಮುಖೀ ಧೋರಣೆಗಳನ್ನು ಸಮಿತಿಯಲ್ಲಿರುವ ಬುದ್ಧಿಜೀವಿಗಳು ದಯಮಾಡಿ ಗಮನಿಸಲಿ. ಪ್ಯಾರಾಸೈಕಾಲಜಿ, ಯೋಗ ವಿಜ್ಞಾ ನವು ಇವರು ಹೇಳುತ್ತಿರುವ ಮೂಢ ನಂಬಿಕೆ ಗಳನ್ನು ಹೇಗೆ ವಿವರಿಸಿವೆ ಎನ್ನುವುದನ್ನೂ ನೋಡಲಿ. ನಂಬಿಕೆ, ಶ್ರದ್ಧೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಅತಿರೇಕ, ಅತಿಜಾಣತನ ಮತ್ತು ಆತುರ ಸಲ್ಲದು.

ಈ ಸಮಯದಲ್ಲಿ ಸಮಿತಿಯವರಿಗೆ ಕುವೆಂಪು ಕುರಿತ ಒಂದು ಘಟನೆಯನ್ನು ನೆನಪಿಸಲು ಬಯ ಸುತ್ತೇನೆ. ತಮ್ಮ ಪ್ರಿಯ ಶಿಷ್ಯ ಪ್ರಭುಶಂಕರ ಜತೆ ಕುವೆಂಪು ಒಮ್ಮೆ ವಾಕಿಂಗ್‌ ಹೋಗುತ್ತಿದ್ದರು. ಆಗ ಮಲೆಮಾದೇಶ್ವರನಿಗೆ ಹರಕೆ ಹೊತ್ತ ಜನರ ಗುಂಪೊಂದು ಅವರೆದುರು ಹೋಯಿತು. ಆಗ ಕುವೆಂಪು ‘ಎಂಥ ಮೌಢ್ಯ’ ಎಂದು ಉದ್ಗಾರ ತೆಗೆದರು. ಅದಕ್ಕೆ ಪ್ರಭುಶಂಕರ ಅವರು ‘ಸರ್‌, ಅವರು ಮಲೆಮಾದೇಶ್ವರನಿಗೆ ಮೊರೆ ಹೋಗು ವುದು ಮೌಢ್ಯವಾದರೆ, ನಮ್ಮ ನಿಮ್ಮಂಥವರು ರಾಮಕೃಷ್ಣ ಪರಮಹಂಸರ ಭಜನೆ, ಆರತಿ ಮಾಡುವುದೂ ಮೌಢ್ಯವಲ್ಲವೇ?’ ಎಂದರು.

(ವಿವರಗಳಿಗೆ ‘ಹೀಗಿದ್ದರು ಕುವೆಂಪು’ ಪುಸ್ತಕ ನೋಡಿ). ಧರ್ಮವನ್ನು ಅಫೀಮು ಎಂದು ಕರೆದ ಕಾರ್ಲ್ಸ್ ಮಾರ್ಕ್ಸ್ ಚಿಂತನೆಯ ಹಿನ್ನೆಲೆಯಿಂದ ಬಂದವರು ಧಾರ್ಮಿಕ ವಿಷಯಗಳ ಬಗ್ಗೆ ಒರಟಾಗಿ, ಉರುಟಾಗಿ ನಡೆದುಕೊಳ್ಳುವುದು ತೀರಾ ಸಾಮಾನ್ಯ. ಆದರೆ ಜನರ ನಂಬಿಕೆ ಯಾವುದು, ಮೂಢನಂಬಿಕೆ ಯಾವುದು ಎನ್ನುವುದು ಮಾರ್ಕ್ಸ್‌ವಾದದ ಚೌಕಟ್ಟನ್ನು ಮೀರಿದ ಘನವಿಷಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT