ಮುಂಬೈ, ಸೆ. 27 (ಪಿಟಿಐ)– ‘ಮಾರುತಿ ಉದ್ಯೋಗ್ ಸಂಸ್ಥೆ’ಗೆ ಸೇರಿದ 38.97 ಕೋಟಿ ಹೆಚ್ಚುವರಿ ಹಣವನ್ನು ದುರುಪಯೋಗ ಮಾಡಿದ ಆಪಾದನೆಗಾಗಿ ಹರ್ಷದ್ ಮೆಹ್ತಾ ಮತ್ತು ಇತರ ಮೂವರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಇಂದು ಶಿಕ್ಷೆ ವಿಧಿಸಿತು.
ಶಿಕ್ಷೆಯ ಪ್ರಮಾಣ ಕುರಿತು ನ್ಯಾಯಾಲಯ ನಾಳೆ ಆದೇಶ ನೀಡಲಿದೆ.
ಏಳು ವರ್ಷಗಳ ಹಿಂದೆ ಇಡೀ ದೇಶವನ್ನು ತಲ್ಲಣಗೊಳಿಸಿದ ಕೋಟ್ಯಂತರ ರೂಪಾಯಿಯ ಷೇರು ಹಗರಣದ ಪ್ರಮುಖ ಆರೋಪಿ ಮೆಹ್ತಾ ಮಾರುತಿ ಸಂಸ್ಥೆ ಹಾಗೂ ಬ್ಯಾಂಕಿನ ಕೆಲವು ಅಧಿಕಾರಿಗಳ ಜತೆ ಶಾಮೀಲಾಗಿ 1989ರಿಂದ 91ರ ಅವಧಿಯಲ್ಲಿ ಮಾರುತಿಗೆ ಸೇರಿದ ರೂ 38.97 ಕೋಟಿ ಹೆಚ್ಚುವರಿ ಹಣವನ್ನು ದುರುಪಯೋಗ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿತು.
ಕಬಿನಿ, ಹಾರಂಗಿಗೆ ಕೇಂದ್ರ ತಂಡ ಭೇಟಿ
ಮೈಸೂರು, ಸೆ. 27– ಕಾವೇರಿ ಜಲಾನಯನ ಪ್ರದೇಶಗಳಾದ ಕಬಿನಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹಾಗೂ ಅಚ್ಚುಕಟ್ಟು ಪ್ರದೇಶದ ಬಗ್ಗೆ ಮಾಹಿತಿಯನ್ನು ಖುದ್ದು ಅರಿಯಲು ಕೇಂದ್ರದ ಕಾವೇರಿ ಉಸ್ತುವಾರಿ ಸಮಿತಿಯ ಇಬ್ಬರು ಸದಸ್ಯರ ಪ್ರತ್ಯೇಕ ಎರಡು ತಂಡಗಳು ಇಂದು ಆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದವು.
ಕೇಂದ್ರ ಜಲಸಂಪನ್ಮೂಲ ಆಯೋಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಆಂಟನಿ ಬಾಲನ್ ಹಾಗೂ ಕೆ.ಎಸ್. ಜೇಕಬ್ ಅವರು ಕಬಿನಿ ಜಲಾಶಯಕ್ಕೂ ಕೇಂದ್ರ ಕಾವೇರಿ ನಿಗಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸಿ.ಡಿ. ಕೋಚೆ ಮತ್ತು ಅದೇ ಸಮಿತಿಯ ರಾಜ್ಯ ಪ್ರತಿನಿಧಿ ಮುಖ್ಯ ಎಂಜಿನಿಯರ್ ವಶಿಷ್ಠ ಅವರು ಹಾರಂಗಿ ಜಲಾಶಯ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲಿಸಿದರು.