ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಕೆಪಿಸಿಸಿಗೆ ಎಸ್‌.ಎಂ. ಕೃಷ್ಣ ಅಧ್ಯಕ್ಷ

Published 20 ಫೆಬ್ರುವರಿ 2024, 19:24 IST
Last Updated 20 ಫೆಬ್ರುವರಿ 2024, 19:24 IST
ಅಕ್ಷರ ಗಾತ್ರ

ಪಾಕ್‌ ನೆಲದಲ್ಲಿ ವಾಜಪೇಯಿಗೆ ಅಭೂತಪೂರ್ವ ಸ್ವಾಗತ

ವಾಘ (ಲಾಹೋರ್‌ ಗಡಿ), ಫೆ. 20 (ಪಿಟಿಐ, ಯುಎನ್‌ಐ)– ಭಾರತ– ಪಾಕಿಸ್ತಾನ ನಡುವಿನ ಸ್ನೇಹ– ಬಾಂಧವ್ಯ ಬೆಳೆಸುವ ಮತ್ತು ಹಳೆಯ ಸಮಸ್ಯೆಗಳ ಇತ್ಯರ್ಥದತ್ತ ಅತ್ಯಂತ ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾದ, ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಎರಡು ದಿನಗಳ ಐತಿಹಾಸಿಕ ಭೇಟಿ ಇಂದು ಆರಂಭವಾಗಿದ್ದು, ಅವರು ಪಯಣಿಸಿದ ವಿಶೇಷ ಬಸ್ಸು ಸಂಜೆ 4 ಗಂಟೆ 8 ನಿಮಿಷಕ್ಕೆ ಪಾಕಿಸ್ತಾನದ ನೆಲವನ್ನು ಸ್ಪರ್ಶಿಸಿತು.

ಬಸ್ಸು ಪಾಕ್‌ ಗಡಿಯ ಕಬ್ಬಿಣದ ಗೇಟನ್ನು ದಾಟಿ ಪಾಕಿಸ್ತಾನದ ನೆಲ ತಲುಪುವುದನ್ನು ದೇಶ– ವಿದೇಶಗಳ ಟಿ.ವಿ.ಗಳು ಸೆರೆ ಹಿಡಿದು, ನೇರ ಪ್ರಸಾರ ಮಾಡಿದವು.

ವಾಜಪೇಯಿ ಅವರು ಬಸ್ಸಿನಿಂದ ಕೆಳಗಿಳಿದದ್ದೇ ಕಪ್ಪು ಶೇರ್ವಾನಿಯಲ್ಲಿದ್ದ ನೆರೆಯ ದೇಶದ ಪ್ರಧಾನಿ ನವಾಜ್‌ ಷರೀಫ್‌ ಅವರು ಅತ್ಯಂತ ಆತ್ಮೀಯವಾಗಿ ಆಲಿಂಗಿಸಿಕೊಂಡು ಅವರನ್ನು ಸ್ವಾಗತಿಸಿದರು. ನಂತರ ಉಭಯ ದೇಶಗಳ ಪ್ರಧಾನಿಗಳು ನಸುನಗುತ್ತ ಟಿ.ವಿ. ಕ್ಯಾಮೆರಾಗಳಿಗೆ ದೃಶ್ಯ ಸೆರೆಹಿಡಿಯಲು ಅವಕಾಶ ನೀಡಿದರು.

ಪ್ರಧಾನಿ ವಾಜಪೇಯಿ ಅವರು ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌, ಜಸ್ವಂತ್‌ ಸಿಂಗ್‌, ಚಿತ್ರನಟ ದೇವಾನಂದ್‌, ಶತ್ರುಘ್ನ ಸಿನ್ಹಾ, ಗಾಯಕ ಮಹೇಂದ್ರ ಕಪೂರ್‌, ಕ್ರಿಕೆಟ್‌ ಆಟಗಾರ ಕಪಿಲ್‌ ದೇವ್‌, ನೃತ್ಯಗಾರ್ತಿಮಲ್ಲಿಕಾ ಸಾರಾಭಾಯಿ, ಪತ್ರಕರ್ತ ಅರುಣ್‌ ಶೌರಿ ಮುಂತಾದವರೊಡನೆ ಬಸ್ಸಿನಿಂದ ಇಳಿದದ್ದೇ ಸಾಂಪ್ರದಾಯಿಕ
ನೃತ್ಯ ಮತ್ತು ಗಾಯನದ ಮೂಲಕ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು. 

ಪಾಕಿಸ್ತಾನದ ಸೇನೆಯಿಂದ ಪ್ರಧಾನಿ ವಾಜಪೇಯಿ ಅವರಿಗೆ ಗೌರವ ರಕ್ಷೆ ನೀಡಲಾಯಿತು.

ನಂತರ ತಂಪು ಪಾನೀಯವನ್ನು ವಿತರಿಸಲಾಯಿತು. 

ಕೆಪಿಸಿಸಿಗೆ ಎಸ್‌.ಎಂ. ಕೃಷ್ಣ ಅಧ್ಯಕ್ಷ 

ನವದೆಹಲಿ, ಫೆ. 20– ಕಾಂಗ್ರೆಸ್‌ನ ಹಿರಿಯ ನಾಯಕ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರ ಸಾರಥ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗಲು ಕಾಂಗ್ರೆಸ್‌ ಹೈಕಮಾಂಡ್‌ ಇಂದು ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಕರ್ನಾಟಕದಲ್ಲಿನ ಚುನಾವಣೆ ಚಟುವಟಿಕೆಗೆ ಹೊಸ ಚಾಲನೆ ನೀಡಿತು.

ಕೆಪಿಸಿಸಿಯ ನೂತನ ಅಧ್ಯಕ್ಷರ ನೇಮಕದ ನಂತರ ರಾಜ್ಯಸಭೆ ಸದಸ್ಯ ಬಿ.ಜನಾರ್ದನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ 32 ಮಂದಿ ಸದಸ್ಯರ ಪ್ರಚಾರ ಸಮಿತಿಯನ್ನು
ಪ್ರಕಟಿಸಲಾಯಿತು.

ಕರ್ನಾಟಕದಲ್ಲಿನ ಕಾಂಗ್ರೆಸ್‌ ಉಸ್ತುವಾರಿ ನೋಡಿಕೊಳ್ಳುವ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌ ಅವರು ಎಐಸಿಸಿ ಕಾರ್ಯಾಲಯದಲ್ಲಿ ತುರ್ತಾಗಿ ಕರೆದ
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಅವರ ನೇಮಕವನ್ನು ಪ್ರಕಟಿಸಿದರು.

ಅದೇ ವೇಳೆ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಧರ್ಮಸಿಂಗ್‌ ಅವರು ನೀಡಿರುವ ರಾಜೀನಾಮೆಯನ್ನು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT