ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 28–12–1994

Last Updated 27 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಸೋನಿಯಾ ಗೈರುಹಾಜರಿ

‌ನವದೆಹಲಿ, ಡಿ. 27 (ಯುಎನ್‌ಐ)– ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್‌ ಸಿಂಗ್ ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ರಾಜಕೀಯ ನಾಯಕರು ಮತ್ತಿತರ ಗಣ್ಯರ ಮಹಾಪೂರವೇ ಭಾಗವಹಿಸಿದ್ದರೂ ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.

ನವೆಂಬರ್ 10, ಜನಪಥ್‌ನಿಂದ ಗ್ಯಾನೀಜಿ ಅವರ ನಿವಾಸಕ್ಕಾಗಲೀ ಅಂತ್ಯಕ್ರಿಯೆ ನಡೆದ ಸ್ಥಳಕ್ಕಾಗಲೀ ಯಾರೊಬ್ಬರೂ ಭೇಟಿ ನೀಡಲಿಲ್ಲ ಎಂದು ಜೇಲ್‌ ಸಿಂಗ್ ಅವರ ಕುಟುಂಬದ ಮೂಲಗಳು ತಿಳಿಸಿವೆ.

ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಜೇಲ್‌ ಸಿಂಗ್ ಅವರು ರಾಷ್ಟ್ರಪತಿಯಾಗಿದ್ದರು. ಇವರಿಬ್ಬರ ಮಧ್ಯೆ ಸಂಬಂಧ ಅಷ್ಟೇನೂ ಮಧುರವಾಗಿರಲಿಲ್ಲ.

ಗ್ಯಾನೀಜಿ ಅವರ ಅಂತ್ಯಕ್ರಿಯೆಗೆ ಶ್ರೀಗಂಧದ ತುಂಡುಗಳು ಸೇರಿದಂತೆ ನಾಲ್ಕು ಕ್ವಿಂಟಲ್‌ಗಳಷ್ಟು ಕಟ್ಟಿಗೆ, ಏಳು ಡಬ್ಬ ಶುದ್ಧ ತುಪ್ಪ ಮತ್ತು 30 ಕಿ.ಗ್ರಾಂ. ಹವನ ಸಾಮ‌ಗ್ರಿಗಳನ್ನು ಬಳಸಲಾಯಿತು.

ವೀರಪ್ಪನ್‌ಗೆ ಮತ್ತೆ ಸಂದೇಶ

‌ಕೊಯಮತ್ತೂರು, ಡಿ. 27 (ಪಿಟಿಐ)– ಕೊಯಮತ್ತೂರು ಜಿಲ್ಲಾಧಿಕಾರಿ ಸಿ.ಎ. ಶಂಕರ್ ಅವರು ಇಂದು ಕುಖ್ಯಾತ ದಂತಚೋರ ವೀರಪ್ಪನ್‌ನಿಗೆ ಇನ್ನೊಂದು ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿರುವ ತಮಿಳುನಾಡಿನ ಡಿ.ಎಸ್.ಪಿ. ಹಾಗೂ ಅವರ ಸಂಬಂಧಿಗಳು ಕಳೆದ 24 ದಿನಗಳಿಂದ ಒತ್ತೆಯಾಳುಗಳಾಗಿಯೇ ಉಳಿದಿದ್ದಾರೆ.

ವೀರಪ್ಪನ್‌ನಿಂದ ಈ ಹಿಂದೆ ಸಂದೇಶ ತಂದಿರುವ ಬುಡಕಟ್ಟು ಜನಾಂಗದ ವ್ಯಕ್ತಿಯ ಮೂಲಕವೇ ಸಂದೇಶ ಕಳುಹಿಸಲಾಗಿದೆ. ಇಲ್ಲಿಗೆ ಮಾತುಕತೆಗಾಗಿ ಬಂದು, ಗುಂಡಿನ ಗಾಯಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ವೀರಪ್ಪನ್‌ನ ತಮ್ಮ ಅರ್ಜುನನ್‌ನಿಂದಲೂ ಈ ವ್ಯಕ್ತಿ ಸಂದೇಶ ಪಡೆದುಕೊಂಡು ಹೋಗಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಿಹಾರ ಶಾಸಕರಿಗೆ ‘ಚಿನ್ನದ ಕೈಗಡಿಯಾರ’

ಪಟ್ನಾ, ಡಿ. 27 (ಪಿಟಿಐ)– ಬಿಹಾರದಂತಹ ಬಡರಾಜ್ಯದಲ್ಲಿ ಸುಮಾರು 21 ಲಕ್ಷ ರೂ. ಮೌಲ್ಯದ ಚಿನ್ನದ ಕೈಗಡಿಯಾರಗಳನ್ನು ಶಾಸಕರಿಗೆ ಉಡುಗೊರೆಯಾಗಿ ಕೊಡಲಾಯಿತೆಂದರೆ ನಂಬುವಿರಾ!

ತಲಾ 7,000 ರೂ. ಬೆಲೆಯ ಕೈಗಡಿಯಾರಗಳನ್ನು ವಿಧಾನಸಭಾಧ್ಯಕ್ಷ ಘುಲಾಮ್‌ ಸರ್ವಾರ್ ಇತ್ತೀಚೆಗೆ ಶಾಸಕರಿಗೆ ಉಡುಗೊರೆಯಾಗಿತ್ತದ್ದು, ಈಗ ಅಲ್ಲಿ ಚರ್ಚೆಯ ವಿಷಾಯ. ಚಳಿಗಾಲದ ಅಧಿವೇಶನದ ಕೊನೆಯ ದಿನ ಈ ಮಿರುಗುವ ಗಡಿಯಾರಗಳು ಪ್ರಜಾಪ್ರತಿನಿಧಿಗಳ ಕೈಗಳನ್ನಲಂಕರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT