ಹೈದರಾಬಾದ್, ಸೆ. 15– ಶಾಸಕ ಹಾಗೂ ಸಿರ್ಪೂರ್ ವಿಧಾನಸಭಾ ಕ್ಷೇತ್ರದ ಆಡಳಿತಾರೂಢ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಪಿ. ಪುರುಷೋತ್ತಮ ರಾವ್ ಹಾಗೂ ಅವರ ಮೂವರು ಅಂಗರಕ್ಷಕರನ್ನು ನಕ್ಸಲೀಯರು ಆಂಧ್ರದ ಅದಿಲಾಬಾದ್ ಜಿಲ್ಲೆಯ ಸಿರ್ಪೂರ್ ಕಾಗದ ನಗರದಲ್ಲಿ ಇಂದು ಮುಂಜಾನೆ ಗುಂಡಿಟ್ಟು ಕೊಂದಿದ್ದಾರೆ.
ಈ ಹತ್ಯೆಯ ಹಿನ್ನೆಲೆಯಲ್ಲಿ ಸಿರ್ಪೂರ್ ಕ್ಷೇತ್ರದಲ್ಲಿ ಸೆ. 18ರಂದು ನಡೆಯಬೇಕಾಗಿದ್ದ ಮತದಾನ ರದ್ದಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧಿಕಾರದಾಹಿ ಕಾಂಗ್ರೆಸ್: ವಾಜಪೇಯಿ ಟೀಕೆ
ನವದೆಹಲಿ, ಸೆ. 15– ‘ಸಮ್ಮಿಶ್ರ ಸರ್ಕಾರ ಸ್ಥಿರತೆ ನೀಡಲಾರದು ಎಂದು ಹೇಳುವ ಕಾಂಗ್ರೆಸ್ ಪಕ್ಷವು ಅಧಿಕಾರದಾಹಿ ಪಕ್ಷ’ ಎಂದು ಬಣ್ಣಿಸಿರುವ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸಮ್ಮಿಶ್ರ ಸರ್ಕಾರಗಳು ಪೂರ್ಣಾವಧಿ ಬಾಳಲಾರವು ಎಂಬ ಕಾಂಗ್ರೆಸ್ ನಿಲುವಿಗೆ ತಮ್ಮ ಅಸಮ್ಮತಿ ಸೂಚಿಸಿದ್ದಾರೆ.
‘ವಿಶ್ವದ ಹಲವಾರು ದೇಶಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಭಾರತದಲ್ಲಿಯೂ ಕೆಲವು ರಾಜ್ಯಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿ ಸ್ಥಿರ ಸರ್ಕಾರ ಒದಗಿಸಿದೆ’ ಎಂದು ಅವರು ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.