ಒಂದೇ ಎಕರೆ ಇದ್ದರೂ ಅರ್ಧ ಕ್ವಿಂಟಲ್ ಲೆವಿ; ರಾಗಿ ಎತ್ತುವಳಿ ರದ್ದು
ಬೆಂಗಳೂರು, ಆ. 23– 1974–75ನೇ ಸಾಲಿನ ಕರ್ನಾಟಕ ಧಾನ್ಯ ಎತ್ತುವಳಿ ಕಾರ್ಯಕ್ರಮವು ನೀರಾವರಿ ಕಾಲುವೆ, ಬಾವಿ ಹಾಗೂ ಮಳೆ ನೀರು ಕೃಷಿಯ ಒಂದು ಎಕರೆಗಿಂತ ಕಡಿಮೆ ಜಮೀನಿನ ರೈತರಿಗೂ ವ್ಯಾಪಿಸಲಿದ್ದು, ಅವರು ತಲಾ ಅರ್ಧ ಕ್ವಿಂಟಲ್‌ನಂತೆ ಲೆವಿ ಕೊಡಬೇಕಾಗುತ್ತದೆ.
ಈ ಸಾಲಿಗೆ ನಿಗದಿಪಡಿಸಲಾಗಿರುವ 2.75 ಲಕ್ಷ ಟನ್ ಭತ್ತ ಹಾಗೂ 1 ಲಕ್ಷ ಟನ್ ಜೋಳದ ಧಾನ್ಯ ಸಂಗ್ರಹ ಗುರಿಯನ್ನು ತಲುಪಲು ಸಹಾಯಕವಾಗುವಂತೆ ಅಧಿಕ ಎಕರೆಗಳ ಜಮೀನಿನ ಮೇಲೆ ಪುರೋಗತಿಯಲ್ಲಿ ತುಸು ಹೆಚ್ಚೆಚ್ಚು ಲೆವಿಯನ್ನು ವಿಧಿಸಲಾಗಿದೆ.
ಶಾಸಕರ ಸಲಹೆ ಹಾಗೂ ಆಗ್ರಹಗಳ ಮೇರೆಗೆ 1974–75ರ ಸಾಲಿನಲ್ಲಿ ರಾಗಿಯ ಲೆವಿಯನ್ನು ಸರ್ಕಾರವು ಕೈಬಿಟ್ಟಿದೆ ಎಂದು ಸಚಿವರು ಹೇಳಿದರು.
ಭಾರತಕ್ಕೆ ಭವ್ಯ ಭವಿಷ್ಯ: ಫಕ್ರುದ್ದೀನ್ ವಿಶ್ವಾಸ
ನವದೆಹಲಿ, ಆ. 23– ಭಾರತಕ್ಕೆ ‘ಭವ್ಯ ಭವಿಷ್ಯ’ ಇದೆಯೆಂದು ಫಕ್ರುದ್ದೀನ್ ಅಲಿ ಅಹಮದ್ ಅವರು ಇಂದು ಹೇಳಿದ್ದಾರೆ.
ರಾಷ್ಟ್ರಪತಿಯಾಗಿ ನಾಳೆ ಅಧಿಕಾರ ಸ್ವೀಕರಿಸಲಿರುವ ಅಹಮದ್ ಅವರು ಇಂದು ದೆಹಲಿ ಟೆಲಿವಿಜನ್ ಸಂದರ್ಶನವೊಂದರಲ್ಲಿ ಮಾತನಾಡಿ, ರಾಷ್ಟ್ರದಲ್ಲಿ ನುರಿತ ತಂತ್ರಜ್ಞರು ಮತ್ತು ವಿಜ್ಞಾನಿಗಳು ಹಾಗೂ ಅಪಾರ ನೈಸರ್ಗಿಕ ಸಂಪನ್ಮೂಲಗಳು ಇದ್ದು ‘ನಾವು ಶಿಸ್ತು, ನಿಷ್ಠೆ ಮತ್ತು ಒಗ್ಗಟ್ಟಿನಿಂದ ದುಡಿದರೆ ರಾಷ್ಟ್ರ ಮುನ್ನಡೆಯುವುದಕ್ಕೆ ಯಾವುದೇ ಅಡ್ಡಿಯೂ ಬರುವಂತಿಲ್ಲ’ ಎಂದು ನುಡಿದರು.