ಬೆಂಗಳೂರು, ಸೆ. 23– ಐದೂವರೆ ಶತಕಗಳ ಕಾಲ, ಇಪ್ಪತ್ತೈದು ತಲೆಮಾರುಗಳಲ್ಲಿ, ಮೈಸೂರನ್ನು ಆಳಿದ ಯದುವಂಶದ ಕಡೆಯ ಅರಸು ಮಾಜಿ ಮಹಾರಾಜ ಜಯಚಾಮರಾಜ ಒಡೆಯರ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರೆಂದು ವರದಿ ಮಾಡಲು ವಿಷಾದಿಸುತ್ತೇವೆ.
ಮೂರು ದಿನಗಳಿಂದ ತುಸು ಅಸ್ವಸ್ಥರಾಗಿದ್ದ 55ರ ಹರೆಯದ ಒಡೆಯರ್ ಅವರಿಗೆ ನಿನ್ನೆ ರಾತ್ರಿಯಿಂದ ಶ್ವಾಸಕೋಶದ ನ್ಯುಮೋನಿಯಾ ಉಲ್ಬಣಿಸಿ, ಇಂದು ಬೆಳಿಗ್ಗೆ 9.20ಕ್ಕೆ ಅಂತ್ಯದ ಗಳಿಗೆ ಪ್ರಾಪ್ತವಾಯಿತು.
ಜನತೆ ಸುರಿಸಿತು ಅಶ್ರುಧಾರೆ: ಇಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರು ಅರಮನೆಯಿಂದ ಮರಳಿ ಬಾರದ ಜಾಗ ಸೇರಲು ಹೊರಟ ಮೈಸೂರಿನ ಮಾಜಿ ಆತ್ಮೀಯ ಆಳರಸ ಜಯಚಾಮರಾಜ ಒಡೆಯರ್ ಅವರಿಗೆ, ಧಾವಿಸಿಬಂದ ಜನತೆ ಸುರಿಸಿದ ಕಂಬನಿ ಬಹುಕಾಲ ಸ್ಮರಣೀಯ.
ಅರಮನೆಯ ಅಂಗಣದಿಂದ ಹಿಡಿದು, ಮೈಸೂರುವರೆಗಿನ 87 ಮೈಲಿ ದೂರದ ಮಾರ್ಗದುದ್ದಕ್ಕೂ ಹಲವರು ಗೊಳೋ ಎಂದು ಅತ್ತರು; ಆ ಅಳು ಧ್ವನಿಯಲ್ಲೇ ‘ಗೋವಿಂದಾ ಗೋವಿಂದಾ’ ಎಂದು ಕರೆದರು. ‘ಜಯಚಾಮರಾಜ ಒಡೆಯರಿಗೆ ಜಯವಾಗಲಿ’ ಎಂದು ಕೂಗಿದರು.
ತಂದೆಗೂ ಮಗನಿಗೂ ಒಂದೇ ಬಗೆ ಸಾವು
ಬೆಂಗಳೂರು, ಸೆ. 23– ತಂದೆಗೂ ಮಗನಿಗೂ ಒಂದೇ ಕಾಯಿಲೆಯಿಂದ ಮೃತ್ಯು. ಇದೊಂದು ವಿಧಿ ವೈಚಿತ್ರ್ಯ.
36 ವರ್ಷದ ಹಿಂದೆ, ಸಂಸಾರಸಮೇತ ರಾಗಿ ವಿಶ್ವಪರ‍್ಯಟನೆಗೆ ಹೊರಟ ಕಂಠೀರವ ನರಸಿಂಹರಾಜ ಒಡೆಯರ್ ಅವರು, ಮುಂಬೈ ಯಲ್ಲಿ ನ್ಯುಮೋನಿಯಾಕ್ಕೆ ಬಲಿಯಾದರು.
ಮೊನ್ನೆ ಶುಕ್ರವಾರ ತಾನೇ ಶೃಂಗೇರಿಯಿಂದ ತೀರ್ಥಯಾತ್ರೆ ಮುಗಿಸಿ ಬಂದ ಜಯಚಾಮರಾಜ ಒಡೆಯರ್, ದಾರಿಯಲ್ಲೇ ಅಸ್ವಸ್ಥರಾಗಿದ್ದರು. ವೈದ್ಯರು ಅವರ ಸಾವಿಗೆ ಕೊಟ್ಟ ಕಾರಣ ನ್ಯುಮೋನಿಯಾ.