ನವದೆಹಲಿ, ಮೇ 13– ರೈಲ್ವೆ ನೌಕರರ ಮುಷ್ಕರ ಇಂದು ಆರನೆಯ ದಿನಕ್ಕೆ ಕಾಲಿಟ್ಟಂತೆ, ಹಿರಿಯ ಕಾರ್ಮಿಕ ನಾಯಕರೂ ರೈಲ್ವೆ ನೌಕರರ ಒಕ್ಕೂಟದ ಅಧ್ಯಕ್ಷರೂ ಆದ ರಾಷ್ಟ್ರಪತಿ ವಿ.ವಿ. ಗಿರಿಯವರು ಮಧ್ಯಪ್ರವೇಶ ಮಾಡಿ ವಿವಾದ ಬಗೆಹರಿಸಬೇಕೆಂದು ಸಂಸತ್ತಿನ ವಿರೋಧ ಪಕ್ಷಗಳ ನಾಯಕರು ಆಗ್ರಹಪಡಿಸಿದ್ದಾರೆ.
ಆರು ವಿರೋಧ ಪಕ್ಷಗಳಿಗೆ ಸೇರಿದ ಎಂಟು ಮಂದಿ ಸಂಸತ್ ಸದಸ್ಯರು ಇಂದು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಅವರ ಮಧ್ಯಪ್ರವೇಶಕ್ಕೆ ಒತ್ತಾಯಪಡಿಸುವ ಮನವಿ ಪತ್ರವನ್ನು ಸಲ್ಲಿಸಿದರು.
ಮುಂಬೈನಲ್ಲಿ 5 ಸಾವಿರ ಮಂದಿ ವಜಾ
ನವದೆಹಲಿ, ಮೇ 13– ಮುಷ್ಕರದಲ್ಲಿ ಪಾಲ್ಗೊಂಡ ಸುಮಾರು ಐದು ಸಾವಿರ ಮಂದಿ ಹಂಗಾಮಿ ನೌಕರರನ್ನು ಸೇವೆಯಿಂದ ವಜಾ ಮಾಡಲು ಮಧ್ಯರೈಲ್ವೆಯು ನಿರ್ಧರಿಸಿದೆ.
ಪಶ್ಚಿಮ ರೈಲ್ವೆಯೂ ಮುಷ್ಕರದಲ್ಲಿ ಪಾಲ್ಗೊಂಡಿರುವ ನೌಕರರನ್ನು ವಜಾ ಮಾಡುವ ನಿರ್ಧಾರ ತಾಳಿದೆ. ಇವೆರಡೂ ಮುಂಬಯಿ ವಿಭಾಗದಲ್ಲಿ ಮುಷ್ಕರದ ತೀವ್ರ ಬಿಸಿ ತಾಕಿದ ರೈಲ್ವೆಗಳು.