ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯಗಳಿಗೆ ವಿಶ್ವಮಾನ್ಯತೆ ತಂದುಕೊಟ್ಟ 'ಮಿಲೆಟ್ ಮ್ಯಾನ್' ನಮ್ಮ ಕನ್ನಡಿಗ!

ಸಿರಿಧಾನ್ಯಗಳಿಗೆ ಕಂದೀಲು ಹಿಡಿದ ಪಿ.ವಿ.ಸತೀಶ್
Last Updated 31 ಮಾರ್ಚ್ 2023, 6:32 IST
ಅಕ್ಷರ ಗಾತ್ರ

ಸಿರಿಧಾನ್ಯಗಳಿಗೆ ವಿಶ್ವಮಾನ್ಯತೆ ತಂದುಕೊಟ್ಟ ‘ಮಿಲೆಟ್‌ ಮ್ಯಾನ್‌ ಆಫ್ ಇಂಡಿಯಾ‘ ಖ್ಯಾತಿಯ ಕನ್ನಡಿಗ ಪಿ.ವಿ. ಸತೀಶ್‌, ಮಾ. 19ರಂದು ನಿಧನರಾದರು. ‘ಸಿರಿಧಾನ್ಯಗಳನ್ನು ಭವಿಷ್ಯದ ಆಹಾರ‘ವೆಂದೇ ಪ್ರತಿಪಾದಿಸುತ್ತಿದ್ದ ಸತೀಶ್ ಅವರ ಕುರಿತ ಬರಹ ಇಲ್ಲಿದೆ...

***

‘ಒಂದು ಹೆಕ್ಟೇರ್‌ ಸಿರಿಧಾನ್ಯ, ನೂರು ಜನರ ಜೀವನಕ್ಕೆ ನೆರವಾಗುತ್ತದೆ. ಇವತ್ತು ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಜನರು ಸಿರಿಧಾನ್ಯ ಆಧಾರಿತ ಕೆಲಸಗಳ ಮೇಲೆ ಜೀವನ ನಡೆಸುತ್ತಿದ್ದಾರೆ. ನಿಮಗೆ ಗೊತ್ತಾ ? ಪರಿಸರ ರಕ್ಷಣೆಯಲ್ಲಿ ಸಿರಿಧಾನ್ಯಗಳು ಅದ್ಭುತವಾದ ಪಾತ್ರವಹಿಸುತ್ತಿವೆ...’

ಹದಿನಾಲ್ಕು ವರ್ಷಗಳ ಹಿಂದೆ ದೆಹಲಿಯ ನೆಹರೂ ಮೆಮೊರಿಯಲ್‌ ಮ್ಯೂಸಿಯಂ ಮತ್ತು ಲೈಬ್ರರಿ ಅಂಗಳದಲ್ಲಿ ಸಿರಿಧಾನ್ಯಗಳ ಉಪಯೋಗಗಳ ಬಗ್ಗೆ ಹೀಗೆ ಅಧಿಕೃತವಾಗಿ ಮಾತನಾಡುತ್ತಿದ್ದರು ಡೆಕ್ಕನ್‌ ಡೆವಲಪ್‌ಮೆಂಟ್‌ ಸೊಸೈಟಿಯ ಪಿ.ವಿ. ಸತೀಶ್. ‘ಮಿಲೆಟ್ಸ್‌ 2009’ – ಸಿರಿಧಾನ್ಯಗಳ ರಾಷ್ಟ್ರೀಯ ವಿಚಾರ ಸಂಕಿರಣ’ದಲ್ಲಿ ಅವರು ಆಡುತ್ತಿದ್ದ ಪ್ರತಿ ಮಾತು, ‘ಸಿರಿಧಾನ್ಯಗಳು ಭವಿಷ್ಯದ ಆಹಾರ‘ ಎಂದು ಪ್ರತಿಪಾದಿಸುತ್ತಿತ್ತು.

ಸಿರಿಧಾನ್ಯಗಳು ಪಡಿತರದ ಪಟ್ಟಿಗೆ ಸೇರಬೇಕು. ಆ ಮೂಲಕ ಆಹಾರದ ಪ್ರಮುಖ ಭಾಗವಾಗಬೇಕು, ಪರಿಸರ ರಕ್ಷಣೆಯಲ್ಲಿ ಮಹತ್ತರ ಪಾತ್ರವಹಿಸುವ ಈ ಧಾನ್ಯಗಳಿಗೆ ಪ್ರಾಮುಖ್ಯತೆ ಸಿಗಬೇಕು. ಇವುಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಬೇಕೆಂದು ಕನಸು ಕಾಣುತ್ತಾ, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ಜಾಗೃತಿ ಮೂಡಿಸಿದ ಹಲವು ದೇಶ–ವಿದೇಶಗಳ ತಜ್ಞರಿಂದ ‘ಮಿಲೆಟ್‌ ಮ್ಯಾನ್‌ ಆಫ್ ಇಂಡಿಯಾ‘ ಎಂದು ಕರೆಸಿಕೊಂಡ, ಕನ್ನಡ ನೆಲದ ಕ್ರಿಯಾಶೀಲ ವ್ಯಕ್ತಿ ಪಿ.ವಿ. ಸತೀಶ್‌, ಇತ್ತೀಚೆಗೆ (ಮಾ.19ರಂದು) ನಿಧನರಾದರು.

ಸತೀಶ್, ಸಿರಿಧಾನ್ಯಗಳ ಬಗ್ಗೆ ಮಾತ್ರವಲ್ಲ, ಕೃಷಿ- ಜೀವವೈವಿಧ್ಯ, ಆಹಾರ ಸಾರ್ವಭೌಮತ್ವ, ಆಹಾರ ಭದ್ರತೆ, ದಲಿತರ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಸಾಮಾಜಿಕ ನ್ಯಾಯ, ಮತ್ತು ಸ್ಥಳೀಯ ಜ್ಞಾನ ದಾಖಲಾತಿ.. ಇಂಥ ಹತ್ತಾರು ಸಾಮಾಜಿಕ ಕಾರ್ಯಗಳಲ್ಲಿ ನಾಲ್ಕು ದಶಕಗಳಿಂದ ದಣಿವರಿಯದೇ ತೊಡಗಿಸಿ ಕೊಂಡಿದ್ದರು. ಓದಿದ್ದು ಪತ್ರಿಕೋದ್ಯಮವಾದರೂ ತನ್ನ ಜೀವನದ ಮುಕ್ಕಾಲು ಭಾಗವನ್ನು ರೈತರು, ದಲಿತ ಸಮುದಾಯದ ವರು, ವಿಶೇಷವಾಗಿ ದುರ್ಬಲವರ್ಗದ ಮಹಿಳೆಯರ ಸಬಲೀಕರಣಕ್ಕಾಗಿ ಮೀಸಲಿಟ್ಟಿದ್ದರು.

****

ಪಿರಿಯಾಪಟ್ಟಣ ವೆಂಕಟಸುಬ್ಬಯ್ಯ ಸತೀಶ್‌ ಜನಿಸಿದ್ದು (ಜೂನ್ 18, 1945ರಂದು) ಮೈಸೂರಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ಮೈಸೂರಿನಲ್ಲಾಯಿತು. ನಂತರ ನವದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮಾಸ್‌ ಕಮ್ಯುನಿಕೇಷನ್‌ನಿಂದ ಪದವಿ ಪಡೆದರು. ಎರಡು ದಶಕಗಳ ಕಾಲ ದೂರದರ್ಶನದಲ್ಲಿ ಕಾರ್ಯನಿರ್ವಹಿಸಿದರು. ಆಗಿನ ಅವಿಭಜಿತ ಆಂಧ್ರಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಗ್ರಾಮಾಭಿವೃದ್ಧಿ ಮತ್ತು ಸಾಕ್ಷರತೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೈಗೊಂಡರು. ಸುಸ್ಥಿರ–ಸ್ವಾವಲಂಬಿ ಕೃಷಿ, ರೈತಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದರು.

ಪತ್ರಕರ್ತನ ವೃತ್ತಿ ಬದುಕಿಗೆ ವಿದಾಯ ಹೇಳಿದ ಸತೀಶ್, ಕೆಲವು ಸ್ನೇಹಿತರೊಡಗೂಡಿ 1983ರಲ್ಲಿ ಡೆಕ್ಕನ್‌ ಡೆವಲಪ್‌ಮೆಂಟ್ ಸೊಸೈಟಿ ಎಂಬ ಸ್ವಯಂ ಸೇವಾ ಸಂಸ್ಥೆ ಆರಂಭಿಸಿದರು. ಅಂದಿನ ಅವಿಭಜಿತ ಆಂಧ್ರಪ್ರದೇಶದ (ಜಹೀರಾಬಾದ್ ಸಮೀಪ) ಪಸ್ತಾಪುರ ಎಂಬ ಹಳ್ಳಿಯನ್ನು ಕೇಂದ್ರವಾಗಿಸಿಕೊಂಡು, ಸುತ್ತಲಿನ ಹಳ್ಳಿಗಳ ಬಡ ದಲಿತ ಮಹಿಳೆಯರ ಸಬಲೀಕರಣಕ್ಕೆ ಸಂಕಲ್ಪ ಮಾಡಿದರು. ಸುಸ್ಥಿರ ಕೃಷಿ, ಆಹಾರ ಭದ್ರತೆ, ನೆಲ–ಜಲಸಂರಕ್ಷಣೆ, ಕೃಷಿ– ಜೀವವೈವಿಧ್ಯ ರಕ್ಷಣೆ, ಆಹಾರ ಸಾರ್ವಭೌಮತೆ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ, ಸ್ಥಳೀಯ ಜ್ಞಾನ ದಾಖಲಾತಿ, ಸಮುದಾಯ ಮಾಧ್ಯಮ.. ಹೀಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಪಿ.ವಿ. ಸತೀಶ್ ಅವರ ದೀರ್ಘಕಾಲದ ಈ ಪ್ರಯತ್ನಗಳು ತೆಲಂಗಾಣದ 75 ಹಳ್ಳಿಗಳಲ್ಲಿ ಸಾವಿರಾರು ಬಡ ಮಹಿಳೆಯರ ಜೀವನ ಸುಧಾರಣೆಗೆ ಕಾರಣವಾಯಿತು. ರೈತಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದ ಡಿಡಿಎಸ್‌, ರೈತ ಮಹಿಳೆಯರ ಸಂಘಗಳು ಆರಂಭವಾದವು. ಇದೇ ಮಹಿಳಾ ಸಂಘಗಳ ಮೂಲಕ ಸಿರಿಧಾನ್ಯ ಆಧಾರಿತ ಮಿಶ್ರ ಕೃಷಿ, ಸಮುದಾಯ ಬೀಜ ಬ್ಯಾಂಕ್, ದೇಸಿ ಬೀಜ ಸಂರಕ್ಷಣೆ, ನೆಲ–ಜಲ ಸಂರಕ್ಷಣೆ ಯಂತಹ ಅನೇಕ ಚಟುವಟಿಕೆಗಳು ಮುನ್ನೆಲೆಗೆ ಬಂದವು.

ಮಹಿಳಾ ಸಂಘಗಳ ಮೂಲಕ ಸಿರಿಧಾನ್ಯಗಳ ಪುನಶ್ಚೇತನಕ್ಕೆ ಸಂಕಲ್ಪ ಮಾಡಿದ ಸತೀಶ್, ಇದಕ್ಕಾಗಿ ಸಾಕಷ್ಟು ಪ್ರಯೋಗಗಳನ್ನು ಮಾಡಿದರು. ಮಾದರಿಗಳನ್ನು ರೂಪಿಸಿದರು. ದೇಶದ ವಿವಿಧ ಭಾಗಗಳಲ್ಲಿ ಸಿರಿಧಾನ್ಯಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ 145 ಸಂಸ್ಥೆಗಳನ್ನು ಒಟ್ಟುಗೂಡಿಸಿ, ‘ಮಿಲ್ಲೆಟ್‌ ನೆಟ್‌ವರ್ಕ್ ಆಫ್ ಇಂಡಿಯಾ (MINI) ಒಕ್ಕೂಟ ಸ್ಥಾಪಿಸಿದರು. ಕುಲಾಂತರಿ ತಳಿ ವಿರೋಧಿಸುತ್ತಾ, ಜೀವವೈವಿಧ್ಯ ರಕ್ಷಣೆಗಾಗಿ ಸೌತ್ ಎಗೇನೆಸ್ ಜೆನೆಟಿಕ್ ಎಂಜಿನಿಯರಿಂಗ್ (SAGE) ನೆಟ್‌ವರ್ಕ್‌ ಆರಂಭಿಸಿದರು. ಪರಿಸರ ಸಂರಕ್ಷಣೆ, ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡುತ್ತಿದ್ದ ಕರ್ನಾಟಕದ ಹಲವು ಸ್ವಯಂ ಸೇವಾ ಸಂಸ್ಥೆಗಳು, ಮಾಧ್ಯಮದ ಗೆಳೆಯರನ್ನು ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಿದರು.

‌ಹಳ್ಳಿ ಮಹಿಳೆಯರ ಕೈಗೆ ಕ್ಯಾಮೆರಾ :

ಸಮೂಹ ಮಾಧ್ಯಮದಲ್ಲಿ ಕೆಲಸ ಮಾಡಿ ಅನುಭವವಿದ್ದ ಸತೀಶ್ ಅವರು, ತಮ್ಮೊಳಗಿನ ಸಂವಹನ ಕೌಶಲವನ್ನು ಸ್ಥಳೀಯ ದಲಿತ ಮಹಿಳೆಯರಿಗೆ ದಾಟಿಸಿದರು. ಡಿಡಿಎಸ್‌ ಅಡಿಯಲ್ಲಿ ಶುರುವಾದ‌ ‘ಕಮ್ಯುನಿಟಿ ಮೀಡಿಯಾ ಟ್ರಸ್ಟ್‌’ ಮೂಲಕ ಅಕ್ಷರ ಬಾರದ ದಲಿತ ಸಮುದಾಯದ ಮಹಿಳೆಯರಿಗೆ ವಿಡಿಯೊಗ್ರಫಿ ತರಬೇತಿ ನೀಡಿದರು. ಶೂಟಿಂಗ್, ಎಡಿಟಿಂಗ್, ಡಬ್ಬಿಂಗ್‌ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಈ ಮಹಿಳೆಯರು ಪರಿಣತಿ ಪಡೆದರು. ಸುತ್ತಲಿನ ಕೃಷಿ–ಗ್ರಾಮೀಣ ಕಥೆಗಳು ಇವರ ಕ್ಯಾಮೆರಾಗಳಲ್ಲಿ ಸೆರೆಯಾದವು. ಇವರು ಮಾಡಿದ ಸಾಕ್ಷ್ಯಚಿತ್ರಗಳು ದೇಶ ವಿದೇಶಗಳ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾದವು.

ಕ್ಯಾಮೆರಾ ಹಿಡಿದ ಮಹಿಳೆಯರ ಮೂಲಕ ಸಮುದಾಯ ರೇಡಿಯೊ ಕೇಂದ್ರ ಆರಂಭಿಸಿದರು ಸತೀಶ್. ‘ಸಂಘಂ‘ ಎಂಬ ಈ ರೇಡಿಯೊ ಕೇಂದ್ರದ ಸಂಪೂರ್ಣ ಉಸ್ತುವಾರಿ ಮಹಿಳೆಯರದ್ದು.

‘ಕೃಷಿ ಮತ್ತು ಶಿಕ್ಷಣವನ್ನು ಒಟ್ಟಾಗಿ ಕಲಿಸುವ ಶಾಲೆಗಳು ಬೇಕು. ಮಕ್ಕಳಿಗೆ ಶಾಲೆಯಲ್ಲಿ ಕೃಷಿ ಕೌಶಲ ಕಲಿಸಬೇಕು‘ ಎಂಬ ಉದ್ದೇಶದೊಂದಿಗೆ ‘ಪಚ್ಚೆ ಶಾಲೆ‘ ಎಂಬ ಶಾಲೆ ಆರಂಭಿಸಿದ್ದರು. ‘ಪರಿಸರ ಸ್ನೇಹಿ‘ ಕಟ್ಟಡಗಳಲ್ಲಿ ಹಸಿರೋದ್ಯಾನದ ನಡುವೆ ನಡೆಯುತ್ತಿದ್ದ ಶಾಲೆಯಲ್ಲಿ ಸದಾ ಸಂಭ್ರಮದ ವಾತಾವರಣ.

ರೈತ ತೀರ್ಪು – ವಿಶಿಷ್ಟ ಪರಿಕಲ್ಪನೆ

ರೈತರ ಏಳಿಗೆಗಾಗಿ ಅನುಷ್ಠಾನಗೊಳ್ಳುವ ಸಂಶೋಧನೆಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದನ್ನು ಪರಿಶೀಲಿಸಲು ‘ರೈತ ತೀರ್ಪು‘ ಎಂಬ ಕಾರ್ಯಕ್ರಮವನ್ನು ಸತೀಶ್ ಕರ್ನಾಟಕದಲ್ಲಿ ಆಯೋಜಿಸಿದ್ದರು. ಸಣ್ಣ ಹಿಡುವಳಿದಾರ ರೈತರೇ, ಕೃಷಿ ಕ್ಷೇತ್ರದಲ್ಲಿನ ಸಂಶೋಧನೆಗಳನ್ನು ಪರಿಶೀಲಿಸಿ ತೀರ್ಪು ನೀಡುವಂತಹ ಕಾರ್ಯಕ್ರಮವಿದು. ವಿಜ್ಞಾನಿಗಳಿಂದ ಸಲಹೆ ಕೇಳುತ್ತಿದ್ದ ಕೃಷಿಕ ವಲಯ,ಈ ಕಾರ್ಯಕ್ರಮದಲ್ಲಿ ತೀರ್ಪು ನೀಡುವ ಜಾಗದಲ್ಲಿ ಕುಳಿತಿದ್ದು, ರೈತ ಸಮುದಾಯಕ್ಕೆ ಒಂದು ಹೆಮ್ಮೆ ತಂದುಕೊಟ್ಟಿತ್ತು.

ಸಿರಿಧಾನ್ಯಗಳಿಗೆ ಮಹತ್ವ ನೀಡಿದವರು...

ಸಿರಿಧಾನ್ಯಗಳಾದ ನವಣೆ, ಸಾಮೆ, ಸಜ್ಜೆ, ಕೊರಲೆ, ಹಾರಕ ಬರಗು ಊದಲು.. ಧಾನ್ಯಗಳನ್ನು ಪ್ರಮುಖ ಬೆಳೆಯಾಗಿಸಿದರು. ಅವುಗಳ ಜೊತೆಗೆ, ಬೇರೆ ಬೆಳೆಗಳನ್ನು ಬೆಳೆಸುತ್ತಾ, ಅಕ್ಕಡಿ ಕೃಷಿಗೆ(ಮಿಶ್ರ ಕೃಷಿ ಪದ್ಧತಿಗೆ) ಉತ್ತೇಜನ ನೀಡಿದರು. ದೇಶದ ಬೇರೆ ಬೇರೆ ಭಾಗಗಳಲ್ಲಿರುವ ‘ಸಿರಿಧಾನ್ಯ ಆಧಾರಿತ ಮಿಶ್ರ ಕೃಷಿ‘ ಬಗ್ಗೆಯೂ ಗಮನ ಸೆಳೆದರು. ಆಂಧ್ರದ (ಇಂದಿನ ತೆಲಂಗಾಣ) ಪಸ್ತಾಪುರ ಹಳ್ಳಿಯ ಸುತ್ತಲಿನ 75ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅತಿ ಸಣ್ಣ ಹಿಡುವಳಿದಾರ ರೈತ ಮಹಿಳೆಯರೊಂದಿಗೆ ನೂರಾರು ಎಕರೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಸಿದ ಕೀರ್ತಿ ಸತೀಶ್ ಅವರಿಗೆ ಸೇರುತ್ತದೆ.

ಈ ಧಾನ್ಯಗಳನ್ನು ಬೆಳೆಸಿದ್ದು ಮಾತ್ರವಲ್ಲ, ಅವುಗಳನ್ನು ಮೌಲ್ಯವರ್ಧಿಸಿ, ವಿವಿಧ ಖಾದ್ಯಗಳನ್ನು ತಯಾರಿಸಿ, ಅವುಗಳ ರುಚಿಯನ್ನೂ ಜನರಿಗೆ ಉಣಬಡಿಸುತ್ತಾ, ಸಿರಿಧಾನ್ಯಗಳ ಬೆಳವಣಿಗೆಗೆ ಉತ್ತೇಜಿಸಿದರು. ಈ ಪ್ರಯತ್ನದ ಭಾಗವಾಗಿ ಇದೇ ರೈತ ಮಹಿಳೆಯರ ನೇತೃತ್ವದಲ್ಲಿ ಝಹಿರಾಬಾದ್‌ನ ಹೈವೇಯಲ್ಲಿ ‘ಮಿಲೆಟ್ ರೆಸ್ಟೊರೆಂಟ್‌‘ ಆರಂಭಿಸಿದರು. ನನಗೆ ನೆನಪಿದ್ದಂತೆ, ಇದು ಭಾರತದ ಮೊದಲ ಮಿಲೆಟ್‌ ಹೋಟೆಲ್. ಅದೂ ರೈತ ಮಹಿಳೆಯರು ನಡೆಸುತ್ತಿದ್ದ ಏಕೈಕ ಹೋಟೆಲ್‌.

ಕಡಿಮೆ ನೀರು, ಕಡಿಮೆ ಆರೈಕೆ ಬೇಡುವ ಸಿರಿಧಾನ್ಯಗಳು ಜಾಗತಿಕ ತಾಪಮಾನ ನಿಯಂತ್ರಕ ಬೆಳೆಗಳು ಹಾಗೂ ಅವುಗಳನ್ನು ಬೆಳೆಯುವ ರೈತರು, ಪರೋಕ್ಷವಾಗಿ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಕೊಡುಗೆ ನೀಡುತ್ತಾರೆ. ಹಾಗಾಗಿ, ಅವರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕೆಂದು ಸತೀಶ್ ಪ್ರತಿಪಾದಿಸಿದ್ದರು.

ರೋಜ್‌ಗಾರ್ ಯೋಜನೆಯಡಿ ಕಾರ್ಮಿಕರಿಗೆ ನೀಡುತ್ತಿದ್ದ ಅಕ್ಕಿ ಬದಲಿಗೆ ಸಿರಿಧಾನ್ಯ ವಿತರಣೆ ಯೋಜನೆ ರೂಪಿಸಲು ಸತೀಶ್ ಸರ್ಕಾರಕ್ಕೆ ನೆರವಾದರು. ಡಿಡಿಎಸ್‌ ಸಂಸ್ಥೆ ಮೂಲಕ ದೇಸಿ ಬೀಜಗಳ ಸಂರಕ್ಷಣೆ ಮತ್ತು ಜಾಗೃತಿಗಾಗಿ ಪ್ರತಿ ವರ್ಷ ಫೆಬ್ರುವರಿಯಲ್ಲಿ ಪಸ್ತಾಪುರದಲ್ಲಿ ನಡೆಸುತ್ತಿದ್ದ ‘ಜೀವವೈವಿಧ್ಯ ಜಾತ್ರೆ‘ಗೆ ದೇಶದ ನಾನಾ ಭಾಗಗಳಿಂದ ತಜ್ಞರು, ರೈತರು, ಸರ್ಕಾರದ ಪ್ರತಿನಿಧಿಗಳು ಮಾಧ್ಯಮದವರನ್ನು ಆಹ್ವಾನಿಸುತ್ತಿದ್ದರು. ಈ ಜಾತ್ರೆಯಲ್ಲಿ ‘ದೇಸಿ ಬೀಜ ಭಂಡಾರ‘ವನ್ನು ಹೊತ್ತು ಸಾಗುವ ಬಂಡಿಗಳನ್ನು ನೋಡುವುದೇ ಒಂದು ಸಂಭ್ರಮ. ಅದೂ ಅಕ್ಷರಶಃ ‘ಬೀಜ ಜಾತ್ರೆ‘ಯಾಗಿರುತ್ತಿತ್ತು.

ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಸಿರಿಧಾನ್ಯಗಳನ್ನು ತೃಣಧಾನ್ಯ, ಕಿರುಧಾನ್ಯ ಎಂದು ಹೇಳುತ್ತಾ, ಹೈಬ್ರಿಡ್ ಬೀಜಗಳ ಧ್ಯಾನ ಮಾಡುತ್ತಿದ್ದಾಗ, ಸತೀಶ್ ಅವರು, ಸಿರಿಧಾನ್ಯಗಳ ಮಹತ್ವವನ್ನು ಸಾರುವುದಕ್ಕಾಗಿ ದೇಶದ ಉದ್ದಗಲಕ್ಕೂ ವಿಚಾರ ಸಂಕಿರಣ, ಸಂವಾದ, ಸಮಾಲೋಚನಾ ಸಭೆಗಳನ್ನು ನಡೆಸುತ್ತಿದ್ದರು. ಸಿರಿಧಾನ್ಯಗಳಿಗಾಗಿ ಕೆಲಸ ಮಾಡುತ್ತಿದ್ದ ಎಲ್ಲ ವರ್ಗದವರನ್ನೂ ಆ ಸಭೆ–ಸಮಾರಂಭಗಳಿಗೆ ಆಹ್ವಾನಿಸುತ್ತಿದ್ದರು. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಸಿರಿಧಾನ್ಯಗಳ ದಾಖಲಾತಿ, ಪುಸ್ತಕ, ಕೈಪಿಡಿಗಳು, ಸಾಕ್ಷ್ಯಚಿತ್ರಗಳನ್ನು ಪ್ರಕಟಿಸುತ್ತಿದ್ದರು.

ಈಗ ವಿಶ್ವಸಂಸ್ಥೆಯೇ 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಿದೆ. ಸಿರಿಧಾನ್ಯವನ್ನು ಜನಪ್ರಿಯಗೊಳಿಸಲು ಕಾರ್ಯಾಗಾರ, ಮೇಳ, ದೊಡ್ಡ ದೊಡ್ಡ ಯೋಜನೆಗಳನ್ನೂ ರೂಪಿಸಲಾಗುತ್ತಿದೆ.

ಸಿರಿಧಾನ್ಯಗಳು ಜಾಗತಿಕ ಮಟ್ಟದಲ್ಲಿ ಸ್ಥಾನಪಡೆಯುತ್ತಿರುವ ಈ ಹೊತ್ತಿನಲ್ಲಿ, ಇಂಥದ್ದೊಂದು ಕನಸು ಕಂಡು ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಾ, ಕತ್ತಲೆಯಲ್ಲಿದ್ದ ಧಾನ್ಯಗಳಿಗೆ ಕಂದೀಲು ಹಿಡಿದಿದ್ದ ‘ಮಿಲೆಟ್‌ ಮ್ಯಾನ್ ಆಫ್ ಇಂಡಿಯಾ‘ ಖ್ಯಾತಿಯ ಪಿ.ವಿ. ಸತೀಶ್ ಅವರು ಇರಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT