‘ವ್ಯಥೆಗಳ ಕಳೆಯುವ ಕಥೆಗಾರ’– ಪು.ತಿ. ನರಸಿಂಹಾಚಾರ್ ಅವರ ಗೀತೆಯೊಂದರ ಸಾಲು; ಕಥೆಗಳ ಹಾಗೂ ಕಥೆಗಾರನ ಮಹತ್ವವನ್ನು ಸೂಚಿಸುವಂತಹದ್ದು. ಈ ಮಾತು ಮೊಗಳ್ಳಿ ಗಣೇಶ್ (ಜುಲೈ 1, 1963 – ಅ. 4, 2025) ಅವರಿಗೆ ಅನ್ವಯಿಸುವಂತಿರಲಿಲ್ಲ. ಅವರು ವ್ಯಥೆಗಳನ್ನೇ ಕಥೆಗಳನ್ನಾಗಿಸುತ್ತಿದ್ದರು; ಆ ಕಥೆಗಳು ಓದುಗರ ಮನಸ್ಸಿನಲ್ಲೂ ಸಂಕಟದ ಅಲೆಗಳನ್ನು ಮೂಡಿಸುತ್ತಿದ್ದವು.

‘ದುಃಖದಿಂದ ನಾನು ಸಾಹಿತ್ಯ ಸೃಷ್ಟಿಯನ್ನು ಕಲಿತಿದ್ದೇನೆ; ಸಮುದಾಯದ ದುಃಖವೇ ನನ್ನಿಂದ ಹಲವು ಸ್ವರಗಳ ಕೊಳಲು ನಾದವ ನುಡಿಸಿದೆ’ ಎಂದು ಅವರು ತಮ್ಮ ಕೊನೆಯ ಸಂದರ್ಶನದಲ್ಲಿ ಹೇಳಿದ್ದರು. ‘ಅಲ್ಲಿ ಆ ಅಳು ಈಗಲೂ’ ಎನ್ನುವುದು ಅವರ ಕಥೆಯೊಂದರ ಹೆಸರು. ಅಳು ಅವರ ಬಹುತೇಕ ಕಥೆಗಳ ಸ್ಥಾಯಿಭಾವ. ಅವರ ಅನುಪಸ್ಥಿತಿಯಲ್ಲೂ ಆ ಅಳು ಈಗಲೂ ಎಲ್ಲಿಯೋ ಅನುರಣಿಸುತ್ತಿರುವಂತೆ, ಅವರ ಕಥೆಗಳನ್ನು ಹಚ್ಚಿಕೊಂಡವರಿಗೆ ಭಾಸವಾಗಬಹುದು.

ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ ಮೊಗಳ್ಳಿ ಗಣೇಶರ ಹುಟ್ಟೂರು. ಮೈಸೂರು–ಮಂಡ್ಯ ಅವರ ತಿಳಿವಳಿಕೆ ಹದಗೊಂಡ ಪರಿಸರ. ಅರ್ಥಶಾಸ್ತ್ರ ಮತ್ತು ಜಾನಪದದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಕಾವೇರಿಯಿಂದ ತುಂಗಭದ್ರೆಯವರೆಗಿನ ಪಯಣ, ಕೇರಿಯ ಹುಡುಗನೊಬ್ಬ ಅಕ್ಷರಗಳ ಮೂಲಕ ತನ್ನೆಲ್ಲ ಸಂಕಟ–ಅವಮಾನಗಳನ್ನು ಮೀರಿ ಕನ್ನಡದ ಅನನ್ಯ ಕಥೆಗಾರನಾಗಿ ಬೆಳೆದುದರ ಸಂಕೇತದಂತಿದೆ.

ದೇವನೂರ ಮಹಾದೇವರ ನಂತರದ ದಲಿತ ಕಥನದ ಬಹುಮುಖ್ಯ ಪ್ರತಿನಿಧಿಯಾದ ಮೊಗಳ್ಳಿಯವರು, ವಿಮರ್ಶಕನಾಗಿ ಹಾಗೂ ಜಾನಪದ ವಿದ್ವಾಂಸರಾಗಿಯೂ ಪ್ರಸಿದ್ಧರು. ಕಥೆಗಳ ಮೂಲಕ ಮನುಷ್ಯಲೋಕದ ಅನಂತ ದುಃಖದ ಹುಡುಕಾಟದಲ್ಲಿ ತೊಡಗಿದ್ದ ಅವರು, ವಿಮರ್ಶೆಯ ಮೂಲಕ ಸ್ಥಾಪಿತ ಜನಪ್ರಿಯ ಮಾದರಿಗಳನ್ನು ಛಿದ್ರಗೊಳಿಸುವ ಪ್ರಯತ್ನ ನಡೆಸಿದರು. ಕನ್ನಡ ಸಾಹಿತ್ಯವನ್ನು ಬೂಸಾ ರೂಪದಲ್ಲಿ ಕಂಡ ಬಿ. ಬಸವಲಿಂಗಪ್ಪನವರ ಅಭಿಪ್ರಾಯವನ್ನು ವಿಸ್ತರಿಸುವ ಪ್ರಯತ್ನ ತಮ್ಮದೆಂದು ಹೇಳಿಕೊಂಡಿದ್ದರು. ‘ತಕರಾರು’ ಅವರ ವಿಮರ್ಶಾ ಬರಹಗಳ ಸಂಕಲನವಷ್ಟೇ ಅಲ್ಲ; ಅವರ ವ್ಯಕ್ತಿತ್ವದ ಗುಣವಿಶೇಷಣವೂ ಹೌದು.

‘ಪ್ರಜಾವಾಣಿ’ಯ ದೀಪಾವಳಿ ಕಥಾಸ್ಪರ್ಧೆಯ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತಗೊಂಡ ಪ್ರಮುಖ ಕಥೆಗಾರರಲ್ಲಿ ಮೊಗಳ್ಳಿಯವರೂ ಒಬ್ಬರು. ‘ಒಂದು ಹಳೆಯ ಚಡ್ಡಿ’ ಕಥೆಗೆ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ–1989’ರಲ್ಲಿ ಎರಡನೇ ಬಹುಮಾನ ಪಡೆಯುವ ಮೂಲಕ ಸಹೃದಯರ ಗಮನಸೆಳೆದ ಮೊಗಳ್ಳಿ ಗಣೇಶ್, ಮರುವರ್ಷವೇ ‘ಬುಗುರಿ’ ಕಥೆಗೆ ಮೊದಲ ಬಹುಮಾನ ಪಡೆದರು. ‘ಬತ್ತ’ (1991) ಹಾಗೂ ‘ತೋಪು’ (1998) ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಮೊಗಳ್ಳಿಯವರ ಇನ್ನೆರಡು ಕಥೆಗಳು.

ಕನ್ನಡದ ಅತ್ಯುತ್ತಮ ಕಥೆಗಳಲ್ಲೊಂದಾದ ‘ಬುಗುರಿ’ ಮೊಗಳ್ಳಿಯವರ ಟ್ರೇಡ್ಮಾರ್ಕ್ ಕಥೆ. ದಲಿತ ಸಮುದಾಯದ ನೋವು–ನಲಿವು, ಜೀವನಪ್ರೀತಿಯ ಬಹುಪದರಗಳನ್ನು ‘ಬುಗುರಿ’ಯಂತೆ ಒಳಗೊಂಡಿರುವ ಕಥೆ ಯಾವ ಭಾಷೆಯಲ್ಲಾದರೂ ವಿರಳವೇ. ‘ಬುಗುರಿ’ ಹೆಸರಿನಲ್ಲೇ ಅವರ ಮೊದಲ ಕಥಾಸಂಕಲನ ಪ್ರಕಟಗೊಂಡಿತು. ಚೊಚ್ಚಲ ಸಂಕಲನ ಅದೆಷ್ಟು ತೀವ್ರವಾಗಿ ಕಥೆಗಾರನ ರಕ್ತ-ಮಾಂಸವನ್ನು ಒಳಗೊಂಡಿತ್ತೆಂದರೆ, ಅದನ್ನು ಮೀರಿ ಬೆಳೆಯುವುದು ಮೊಗಳ್ಳಿ ಅವರಿಗೆ ಸಾಧ್ಯವಾಗಲೇ ಇಲ್ಲ.

ಸಮಾಜ ಹಾಗೂ ಕುಟುಂಬ ಎರಡರಿಂದಲೂ ಜರ್ಝರಗೊಂಡ ವ್ಯಕ್ತಿತ್ವದ ಒಡಕಲು ಬಿಂಬಗಳ ರೂಪದಲ್ಲಿ ಮೊಗಳ್ಳಿ ಹಾಗೂ ಅವರ ಕಥೆಗಳನ್ನು ನೋಡಬಹುದು. ವಿದ್ಯಾರ್ಥಿಗಳ ನಡುವೆಯಿದ್ದೂ ಅವರು ತಮ್ಮ ಒಂಟಿತನ ಹಾಗೂ ಕಾಠಿಣ್ಯ ಕಳೆದುಕೊಳ್ಳದಾದರು. ತಮ್ಮ ಸಾಹಿತ್ಯಕ್ಕೆ ದೊರೆಯಬೇಕಾದ ಗೌರವ ದೊರೆಯಲಿಲ್ಲ ಎನ್ನುವ ನೋವು ಹೊಂದಿದ್ದ ಅವರು, ಹೊಸ ತಲೆಮಾರಿನ ಸಾಹಿತ್ಯದ ಬಗ್ಗೆ ಅನಾಸಕ್ತರಾಗಿದ್ದುದು ವಿರೋಧಾಭಾಸದಂತೆ ಕಾಣಿಸುತ್ತಿತ್ತು.

ನಿವೃತ್ತಿಯ ನಂತರ ಮೊಗಳ್ಳಿ ಬರವಣಿಗೆಯಲ್ಲಿ ಮತ್ತೆ ತೀವ್ರವಾಗಿ ತೊಡಗಿಸಿಕೊಂಡಿದ್ದರು. ಆದರೆ, ಬದುಕಿನ ಕಥೆ ಕಥೆಗಾರನ ಎಣಿಕೆ ಮೀರಿದುದಾಗಿತ್ತು. ಅವರ ಬದುಕಿನ ಬುಗುರಿ ಅನಾರೋಗ್ಯದಿಂದ ಆಟ ಮುಗಿಸಿದೆ; ಅದರ ತಿರುಗುವಿಕೆಯ ಕಂಪನಗಳು ಸಹೃದಯರ ಮನಸ್ಸಿನಲ್ಲಿ ಚಿರಸ್ಥಾಯಿ.

ಮೊಗಳ್ಳಿ ಅವರ ನಿರ್ಗಮನದ ಬಗ್ಗೆ ‘ತಕರಾರು, ಇನ್ನಿಲ್ಲ’ ಎಂದು ಹೇಳುವುದು ಒರಟಾಗಿ ಧ್ವನಿಸಿದರೂ, ಈ ಮಾತು ಮೊಗಳ್ಳಿ ಅವರ ಅಗಲಿಕೆಯೊಂದಿಗೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ರಚನಾತ್ಮಕ ವಿಮರ್ಶೆಯ ದನಿಗಳು ಕ್ಷೀಣಿಸುತ್ತಿರುವುದನ್ನೂ ಸೂಚಿಸುತ್ತದೆ.

ಪ್ರಮುಖ ಕೃತಿಗಳು:

‘ಬುಗುರಿ’ ‘ಅತ್ತೆ’ ‘ಭೂಮಿ’ ‘ಮಣ್ಣು’ ‘ಕನ್ನೆಮಳೆ’ ‘ದೇವರ ದಾರಿ’ (ಕಥಾಸಂಕಲನಗಳು); ‘ತೊಟ್ಟಿಲು’ ‘ಕಿರೀಟ’ ‘ಅನಾದಿ’ ‘ಹೊಕ್ಕುಳು’ ‘ಬಿಟ್ಟುಹೋದ ಮನುಷ್ಯ’ (ಕಾದಂಬರಿಗಳು); ಸೂರ್ಯನ ಬಚ್ಚಿಡಬಹುದೆ’ ‘ದೇವ ಸ್ಮಶಾನ’ (ಕವಿತೆಗಳು); ‘ದೇಶಿ’ ‘ಸೊಲ್ಲು’ ‘ದಲಿತರು ಮತ್ತು ಜಾಗತೀಕರಣ’ ‘ಮೌಖಿಕ ಕಥನ’ ‘ಹಂಪಿ ಜೀವಜಾಲ ಜಾನಪದ’ ‘ಶತಮಾನ’ ‘ಆದಿಮ’ ‘ತಕರಾರು’ ‘ಜಾತಿ ಮೀಮಾಂಸೆ’ ‘ನಡುಗಾಲದ ಕನ್ನಡ ನಾಡು’ ‘ದಲಿತ ಪದ ಕಥನ’ ‘ಅವ್ಯಕ್ತ ಚರಿತ್ರೆ’ ‘ಮೊಗಳ್ಳಿ ವಿಮರ್ಶೆ’ ‘ಶಂಬಾ ಭಾಷಿಕ ಸಂಶೋಧನೆ’ ‘ದಲಿತ ಜಾನಪದ’ ‘ಸಂಸ್ಕೃತಿ ಮತ್ತು ಅಸ್ಪೃಶ್ಯತೆ’ ಹಾಗೂ ‘ಆದಿಮ ಜಾನಪದ’ (ಸಾಹಿತ್ಯ–ಸಂಸ್ಕೃತಿ ಚಿಂತನೆ); ‘ನಾನೆಂಬುದು ಕಿಂಚಿತ್ತು’ (ಆತ್ಮಕಥನ).

ಮೊಗಳ್ಳಿ ಅವರಿಗೆ ಸಂದ ಪ್ರಮುಖ ಪ್ರಶಸ್ತಿ–ಪುರಸ್ಕಾರ: ಕಾವ್ಯಾನಂದ ಪ್ರಶಸ್ತಿ ಬೆಸಗರಹಳ್ಳಿ ರಾಮಣ್ಣ ಕಥಾಪ್ರಶಸ್ತಿ ಪುತಿನ ಕಾವ್ಯ ಪ್ರಶಸ್ತಿ ಜಿ.ಎಸ್. ಶಿವರುದ್ರಪ್ಪ ವಿಮರ್ಶಾ ಪ್ರಶಸ್ತಿ ದಲಿತಕವಿ ಸಿದ್ಧಲಿಂಗಯ್ಯ ಪ್ರಶಸ್ತಿ ದೆಹಲಿಯ ಕಥಾಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ. ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ಅತಿಥಿ ಲೇಖಕನಾಗಿ ಜರ್ಮನಿ ದೇಶದ ಪ್ರವಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.