ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧಹಸ್ತದ ರಾಜಕಾರಣಿ ಇನಾಮದಾರ

ಕಾಂಗ್ರೆಸ್‌ನಲ್ಲಿಯೇ ಮೂರು ದಶಕ ಸವೆಸಿದ ಇನಾಮದಾರ, ರಾಜ್ಯದ ಮೊದಲ ಐತಿ ಸಚಿವ ಎಂಬ ಖ್ಯಾತಿ
Published 25 ಏಪ್ರಿಲ್ 2023, 9:22 IST
Last Updated 25 ಏಪ್ರಿಲ್ 2023, 9:22 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಶುದ್ಧಹಸ್ತ’ದ ರಾಜಕಾರಣಿ ಎಂದೇ ಹೆಸರಾದ ಡಿ.ಬಿ. ಇನಾಮದಾರ (ದಾಮಪ್ಪಗೌಡ ಬಸನಗೌಡ ಇನಾಮದಾರ) ಅವರ ಅಗಲಿಕೆಯಿಂದ ಜಿಲ್ಲೆಯು ಮತ್ತೊಬ್ಬ ಮುತ್ಸದ್ದಿಯನ್ನು ಕಳೆದುಕೊಂಡಿದೆ. ನಾಲ್ಕು ದಶಕಗಳವರೆಗೆ ಕಿತ್ತೂರು ಭಾಗದಲ್ಲಿ ಜನಾನುರಾಗಿ, ಅಜಾತ ಶತ್ರು ಆಗಿದ್ದ ಅವರ ನಿಧನದಿಂದ ರಾಜಕರಣದ ಗಟ್ಟಿ ಕೊಂಡಿಯೊಂದು ಕಳಚಿದೆ.

1978ರಲ್ಲಿ ಬಿ.ಡಿ. ಇನಾಮದಾರ ನಿಧನರಾದ ನಂತರ ಡಿ.ಬಿ. ಇನಾಮದಾರ ರಾಣಿ ಶುಗರ್‌ ಕಾರ್ಖಾನೆ ಅಧ್ಯಕ್ಷರಾದರು. ಈ ಮೂಲಕ ಸಾರ್ವಜನಿಕ ರಂಗಕ್ಕೆ ಬಂದರು. ಅವರ ವರ್ಣರಂಜಿತ ವ್ಯಕ್ತಿತ್ವ ಸಂಪೂರ್ಣ ರಾಜಕಾರಣಕ್ಕೆ ತುಡಿಯಿತು. ಹೀಗಾಗಿ, ನೇರವಾಗಿ ಅವರು ವಿಧಾನಸೌಧ ಪ್ರವೇಶ ಮಾಡುವ ಯತ್ನಕ್ಕೇ ಕೈ ಹಾಕಿದರು.

2018ರವರೆಗೂ 9 ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು 5 ಬಾರಿ ಗೆದ್ದು, 4ರಲ್ಲಿ ಸೋಲು ಅನುಭವಿಸಿದರು. ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಮೂರು ದಶಕಗಳನ್ನು ಅವರು ಕಾಂಗ್ರೆಸ್‌ಗಾಗಿಯೇ ಸವೆಸಿದರು.

ಶಿಷ್ಯರ ಎದುರೇ ಗುರುವಿಗೆ ಸೋಲು

ಇನಾಮದಾರ ಅವರ ರಾಜಕೀಯ ಎದುರಾಳಿ ಆಗಿದ್ದ ಬಾಬಾಗೌಡ ಪಾಟೀಲ ಅವ ಎದರು ಒಮ್ಮೆ ಸೋತಿದ್ದರು. ಅಚ್ಚರಿಯೆಂದರೆ, ಇನಾಮದಾರ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಸುರೇಶ ಮಾರಿಹಾಳ ಹಾಗೂ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಎದುರೇ ಇನಾಮದಾರ ಸೋಲುಂಡಿದ್ದು.

ಜಾತಿಕಾರಣದಲ್ಲಿ ಎಂದೂ ಗುರುತಿಸಿಕೊಳ್ಳದ ಅಜಾತಶತ್ರು ಇನಾಮದಾರ, ಇತ್ತೀಚೆಗೆ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ವಸತಿ ಸೈನಿಕ ಶಾಲೆಯ ಚೇರ್ಮನ್‌ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

1983ರಲ್ಲಿ ಅಂದಿನ ಜನತಾ ಪಕ್ಷದಿಂದ ಕಿತ್ತೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇನಾಮದಾರ ಅವರು ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಂ. ಎನ್. ನಾಗನೂರ ಅವರನ್ನು ಪರಾಭವಗೊಳಿಸಿದ್ದರು. ಮೊದಲ ಆಯ್ಕೆಯಲ್ಲಿಯೇ ಗಣಿ ಮತ್ತು ಭೂಗರ್ಭ ಖಾತೆ ರಾಜ್ಯ ಸಚಿವರಾದರು. ಮುಂದೆ ಬಂದ ಲೋಕಸಭೆ ಚುನಾವಣೆಯಲ್ಲಿ ಅಂದಿನ ಜನತಾಪಕ್ಷ ಹೀನಾಯ ಸೋಲು ಕಂಡಿದ್ದರಿಂದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಸರ್ಕಾರ ವಿಸರ್ಜಿಸಿ, ಹೊಸ ಜನಾದೇಶ ಪಡೆಯಲು ಮುಂದಾದರು. ಮತ್ತೆ ಸ್ಪರ್ಧಿಸಿದ್ದ ಇನಾಮದಾರ ಈಗಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ತಂದೆ ಬಸವಂತರಾಯ ದೊಡ್ಡಗೌಡರ ಅವರನ್ನು ಪರಾಭಗೊಳಿಸಿದ್ದರು. ಮತ್ತೆ ಹೆಗಡೆ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ಸಿಕ್ಕಿತ್ತು.

ರಾಜಕೀಯ ಹೆಜ್ಜೆಗಳು

1989ರಲ್ಲಿ ರೈತಸಂಘದ ಪ್ರಭಾವ ಈ ಭಾಗದಲ್ಲಿ ದೊಡ್ಡದಾಗಿತ್ತು. ಹಳ್ಳಿ, ಹಳ್ಳಿಗಳಲ್ಲಿ ಜನಸಂಘಟನೆ ಮಾಡಿ ಬಹುದೊಡ್ಡ ಜನಶಕ್ತಿಯನ್ನು ಬಾಬಾಗೌಡ ಪಾಟೀಲ ಸಂಘಟಿಸಿದ್ದರು. ಆ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕಿತ್ತೂರು ಹಾಗೂ ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದಿಂದ ಬಾಬಾಗೌಡ ಆಯ್ಕೆಯಾಗಿದ್ದರು.

ಜನತಾಪಕ್ಷ ಜನತಾದಳವಾಗಿ ರೂಪಾಂತರಗೊಂಡಿತ್ತು. ನಾಯಕರ ಜೊತೆಗಿನ ಅಸಮಾಧಾನದಿಂದಾಗಿ ಇನಾಮದಾರ ಅವರು 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

1994ರ ವಿಧಾನಸಭೆ ಚುನಾವಣೆಯಲ್ಲಿ ಇನಾಮದಾರ ಮತ್ತು ಬಾಬಾಗೌಡ ಮತ್ತೆ ಚುನಾವಣೆಯ ಎದುರಾಳಿಗಳಾಗಿದ್ದರು. ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಇನಾಮದಾರ, ರೈತಸಂಘದ ಬಾಬಾಗೌಡರನ್ನು ಸೋಲಿಸಿ 1989ರ ಚುನಾವಣೆಯ ಸೇಡು ತೀರಿಸಿಕೊಂಡಿದ್ದರು.

ಐಟಿ ಖಾತೆ ನಿಭಾಯಿಸಿದ ಮೊದಲ ಮಂತ್ರಿ

1999ರಲ್ಲಿ ಮತ್ತೆ ಬಂದ ಚುನಾವಣೆಯಲ್ಲಿ ಪುನರಾಯ್ಕೆಗೊಂಡರು. ಎಸ್.ಎಂ. ಕೃಷ್ಣ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದರು. ಅನಂತರ ನಡೆದ ಪುನರ್ ರಚನೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಸಚಿವರಾಗಿ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ದೇಶ ಮತ್ತು ವಿದೇಶದ ಐಟಿ ದಿಗ್ಗಜರೊಂದಿಗೆ ಗುರುತಿಸಿಕೊಂಡು ಹೆಚ್ಚು ಜನಪ್ರಿಯರಾದರು.

ರಾಜ್ಯಕ್ಕೆ ಹೊಸದಾದ ಐಟಿ ಖಾತೆಯನ್ನು ಸಮರ್ಥವಾಗಿ ನಿಭಾಹಿಸಿದ ಮೊದಲ ಸಚಿವ ಎಂಬ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ನಂತರ ಬಂದ 2004ರ ವಿಧಾನಸಭೆ ಚುನಾವಣೆಯಲ್ಲಿ ಇನಾಮದಾರ ಸಂಗ ತೊರೆದು ಬಿಜೆಪಿ ಸೇರಿದ್ದ ಶಿಷ್ಯ ಸುರೇಶ ಮಾರಿಹಾಳ ಅವರಿಂದ ಪರಾಭವಗೊಂಡರು. 2008ರಲ್ಲೂ ಮಾರಿಹಾಳ ವಿರುದ್ಧ ಸ್ಪರ್ಧಿಸಿ ಸೋತರು. 2013ರಲ್ಲಿ ಸ್ಪರ್ಧಿಸಿ ಸೋಲಿನ ಸೇಡು ತೀರಿಸಿಕೊಂಡರು.

2018ರಲ್ಲಿ ಮತ್ತೊಬ್ಬ ಶಿಷ್ಯ ಮಹಾಂತೇಶ ದೊಡ್ಡಗೌಡರ ವಿರುದ್ಧ ಸ್ಪರ್ಧಿಸಿ ಸೋತರು. ಕಾಂಗ್ರೆಸ್ಸಿನಲ್ಲಿಯ ತೀವ್ರ ಭಿನ್ನಾಭಿಪ್ರಾಯ ಇನಾಮದಾರ ಸೋಲಿಗೆ ಕಾರಣವಾಗಿತ್ತು.

ಗೆಲ್ಲುವ ಉಮೇದು, ಬತ್ತದ ಉತ್ಸಾಹ

2023ರ ಚುನಾವಣೆಗೆ ವರ್ಷಕ್ಕೂ ಮುಂಚೆಯೇ ಸಿದ್ಧತೆ ಮಾಡಿಕೊಂಡಿದ್ದ ಇನಾಮದಾರ ಅವರದು ಬತ್ತದ ಉತ್ಸಾಹ. ಈ ಬಾರಿ ಗೆದ್ದು ಬರುತ್ತೇನೆ ಎಂದು ಅವರು ಕ್ಷೇತ್ರದ ಜನರಲ್ಲಿ ಮನದ ಮಾತು ಹೇಳಿದ್ದರು.

ತಾಲ್ಲೂಕಿನ ಹೊಸ ಕಾದರವಳ್ಳಿಯಲ್ಲಿ ಮಾರ್ಚ್ ತಿಂಗಳಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಪಾಲ್ಗೊಂಡಿದ್ದ ’ಪ್ರಜಾಧ್ವನಿ‘ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅನಂತರ ಅವರಿಗೆ ಜ್ವರ ಕಾಡಿತು. ಗುಣಮುಖರಾಗಿ ಬೆಂಗಳೂರಿನ ಮನೆಯಲ್ಲಿದ್ದರು. ಸ್ವಲ್ಪ ದಿನಗಳಲ್ಲಿಯೇ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮತ್ತೆ ಬೆಂಗಳೂರಲ್ಲಿಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅನಂತರ ಅವರು ಚೇತರಿಸಿಕೊಳ್ಳಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT