ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ @75: ವಿದ್ಯಾರ್ಥಿ ದಿನದಿಂದಲೂ ಒಡನಾಡಿ

Last Updated 19 ನವೆಂಬರ್ 2022, 10:20 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ತನ್ನ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಹೊತ್ತಲ್ಲಿ ನಾವೆಲ್ಲರು ಸೇರಿ ಅದರ ಉತ್ಸವದಲ್ಲಿ ಪಾಲ್ಗೊಂಡು ಅದರ ವ್ಯಕ್ತಿತ್ವವನ್ನು ಹಾಡಿ ಹೊಗಳದಿದ್ದರೆ, ಇಷ್ಟು ವರ್ಷ ಆ ಪತ್ರಿಕೆ ಓದಿಯೂ ನಿಷ್ಪ್ರಯೋಜಕರು ಅನ್ನಿಸುತ್ತದೆ.

ನಾನು ‘ಪ್ರಜಾವಾಣಿ’ ಓದಲು ಪ್ರಜಾ ಮತ್ತು ವಾಣಿ ಮಧ್ಯದಲ್ಲಿ ಇರುವ ಬಸವನೇ ಮುಖ್ಯಕಾರಣ. ಅದೇ ಆಕರ್ಷಣೆ ಕೂಡ. ಪತ್ರಿಕೆಯನ್ನು ನಾನು ಗುರುತಿಸುತ್ತಿದ್ದದ್ದೇ ಬಸವನ ಮೂಲಕವಾಗಿ.

‘ಈರಣ್ಣನ ಮುಂದೆ ಬಸವ ಕೂರುತ್ತಾನೆ. ಬಸವ ಕಿವಿಯಲ್ಲಿ ಭಕ್ತಾದಿಗಳು ತಮ್ಮ ಸಂದೇಶ ಉಸುರಿದರೆ, ಅದನ್ನು ಬಸವ ಈರಣ್ಣನಿಗೆ ಅಂದರೆ ಶಿವನಿಗೆ ಮುಟ್ಟಿಸುತ್ತಾನೆ’ ಎಂದು ನನ್ನ ಅಜ್ಜಿ ಸುಂದರಮ್ಮ ಮತ್ತು ಅಮ್ಮ ಹೇಳುತ್ತಿದ್ದರು. ಹಾಗೇ ಈ ಬಸವ ಕೂಡ ಇರಬೇಕೆನ್ನುವ ಕುತೂಹಲ ನನಗೆ ಆಗ. ಜೊತೆಗೆ ಅಮ್ಮ ನನಗೆ ಈ ಪತ್ರಿಕೆಯಲ್ಲಿ ಬರುತ್ತಿದ್ದ ‘ಮೊದ್ದುಮಣಿ’ಯನ್ನು ಕತ್ತರಿಸಿ ಕ್ರಮವಾಗಿ ಜೋಡಿಸಿ ನನಗೆ ಕತೆ ಹೇಳುತ್ತಿದ್ದರು. ಈ ಎರಡು ವಿಷಯಗಳೂ ನನ್ನನ್ನು ಬಾಲ್ಯದಿಂದಲೇ ಈ ಪತ್ರಿಕೆಯನ್ನು ಓದುವಂತೆ ಮಾಡಿದೆ. ನನ್ನ ಭಾಷೆಯನ್ನೂ ತಿದ್ದಿತು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ.

ಪ್ರಜಾವಾಣಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದಕ್ಕೆ ಅಭಿನಂದನೆಗಳು.

ಬಿ. ಜಯಶ್ರೀ, ಬೆಂಗಳೂರು

–––

ಪ್ರಜಾವಾಣಿಗೆ ಋಣಿ

ಅರವತ್ತರ ದಶಕದಿಂದ ಪ್ರಜಾವಾಣಿ ನನ್ನ ಬಾಳಿನ ಏಳಿಗೆಗೆ ಇಂಬಾಗಿದೆ; ನನ್ನ ಅರಿವಿನ ಪರಧಿಯನ್ನು ವಿಸ್ತರಿಸಿದೆ. ಎನಿತೆನಿತೋ ವಿಷಯಗಳನ್ನು ನೇರ ತಿಳಿಸಿದೆ; ಎನಿತೆನಿತೊ ಜ್ಞಾನಗಳ ಮನದಟ್ಟು ಮಾಡಿಕೊಟ್ಟಿದೆ. ಒಂದು ದಿನ ಓದದಿದ್ದರೆ ಏನೋ ಕಳಕೊಂಡಂತೆ ಅನಿಸುತ್ತದೆ. ಬೆಳಗಿನ ಕಾಫಿ ಜೊತೆಗೇ ನನ್ನ ಕೈಯಲಿ ಇರಲೇಬೇಕು ಮುಂಜಾನೆಯ ಪತ್ರಿಕೆ!

‘ಪ್ರಜಾವಾಣಿ’ ಓದಿನಿಂದ ನನ್ನ ಭಾಷಾಕೋಶ ತುಂಬಿದೆ. ಪ್ರಜಾವಾಣಿ ಅಕ್ಕರೆ ಮಡಿಲಿನಲ್ಲಿ ನನ್ನ ಕಥೆ, ಕವಿತೆ, ಲೇಖನ, ವಿಮರ್ಶೆ ಬೆಳಕು ಕಂಡಿವೆ. ನಾನು ಇಷ್ಟರಮಟ್ಟಿಗೆ ಬೆಳೆಯಲಿಕ್ಕೆ ಪ್ರಜಾವಾಣಿ ಒಡನಾಟ ಸಹಕಾರಿಯಾಗಿದೆ!

ಸಾಹಿತ್ಯದ ಅಭಿರುಚಿ ಹೆಚ್ಚಿಸುವಲ್ಲಿ, ಬುದ್ಧಿ ಚುರುಕುಗೊಳಿಸುವಲ್ಲಿ, ಸಾಮಾನ್ಯಜ್ಞಾನ ಪಡೆಯುವಲ್ಲಿ... ಬೌದ್ಧಿಕತೆ ಬೆಳೆಯುವಲ್ಲಿ, ನಾನೊಂದು ಹೆಸರು ಮಾಡುವಲ್ಲಿ ಪ್ರಜಾವಾಣಿ ಪಾತ್ರ ಬಹಳವಾಗಿದೆ. ಅದಕ್ಕಾಗಿ ನಾನು ಋಣಿ.

ಡಾ.ದೊಡ್ಡರಂಗೇಗೌಡ, ಬೆಂಗಳೂರು

ಬದ್ಧತೆಗೆ ಹೆಸರು

75ನೇ ವಸಂತಕ್ಕೆ ಕಾಲಿಟ್ಟ ‘ಪ್ರಜಾವಾಣಿ’ ದಿನಪತ್ರಿಕೆಯು ಕನ್ನಡಿಗರಿಗೆ ದಾರಿದೀಪ. ದೈನಂದಿನ ವರದಿಗಳ ಜೊತೆ ಜನಜಾಗೃತಿಯ ಸಂದೇಶವನ್ನೂ ನೀಡುತ್ತದೆ. ವಿವಿಧ ಅಂಕಣಗಳು, ವಿನ್ಯಾಸ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸ್ಪರ್ಶವನ್ನು ನೀಡಿದೆ. ನನ್ನ ತಂದೆ ಸೇನ ನಮಿರಾಜ ಮಲ್ಲ ಬರೆದ ಹಲವು ಕತೆ ಲೇಖನಗಳನ್ನು, ಕಾನೂನು ಮತ್ತು
(ನೀವು ಅಂಕಣ), ಧಾರಾವಾಹಿ, ಕಾದಂಬರಿ ಬರಹಗಳನ್ನು ಪ್ರಜಾವಾಣಿ ಪ್ರಕಟಿಸಿದೆ.

ದೀಪಾವಳಿ ವಿಶೇಷಾಂಕಗಳು ಸಂಗ್ರಹಯೋಗ್ಯವಾಗಿದೆ. ಕತೆ, ನಾಟಕ, ಸಾಹಿತ್ಯ, ವಿಮರ್ಶೆ, ಪರಿಸರ-ವಿಜ್ಞಾನ-ಮಕ್ಕಳ-ಕಲೆ ಅಂಕಣ, ವಾಚಕರವಾಣಿ, ಟೀ ಎಸ್ಸಾರ್ ಛೂಬಾಣ, ವ್ಯಂಗ್ಯಚಿತ್ರಗಳು, ಸಂಪಾದಕೀಯಗಳು ಓದುಗರ ಸದಭಿರುಚಿ ಹೆಚ್ಚಿಸಿದೆ. ಆಡಳಿತ ವ್ಯವಸ್ಥೆಯನ್ನು, ರಾಜಕೀಯ ಕ್ಷೇತ್ರವನ್ನೂ ಅಲುಗಾಡಿಸಿದ್ದಿದೆ. 6೦ರ ದಶಕದಲ್ಲಿ ಸಂಭಾವನೆಯನ್ನು ಮನಿಯಾರ್ಡರ್
ಮೂಲಕ ಕಳುಹಿಸುವಾಗ ಸ್ಥಾಪಕ ಕೆ.ಎನ್.ಗುರುಸ್ವಾಮಿಯವರ ಹಸ್ತಾಕ್ಷರವೇ ಇರುತ್ತಿತ್ತು! ತಂದೆ ನಮಗೆಲ್ಲ ತೋರಿಸಿದ್ದನ್ನು
ಈಗಲೂ ಸಂಗ್ರಹಿಸಿಡಲಾಗಿದೆ. ಇಂದಿಗೂ ಬದ್ಧತೆ, ನಾವೀನ್ಯತೆ ‘ಬಹುಮುಖಿ’ಯಾಗಿದೆ. ಅಭಿನಂದನೆಗಳು

ಎಸ್.ಎನ್. ಅಮೃತ, ಪುತ್ತೂರು


ವಿದ್ಯಾರ್ಥಿ ದಿನದಿಂದಲೂ ಒಡನಾಡಿ

ಪ್ರಜಾವಾಣಿ ಪತ್ರಿಕೆ ನನಗೆ ವಿದ್ಯಾರ್ಥಿ ದಿನದಿಂದ ಸದ್ಯದವರೆಗೂ ನನ್ನ ಒಡನಾಡಿ ‌ಹಾಗೂ ಸ್ನೇಹಿತ. ಕಾಫೀ ಚಹಾ ಬಿಡಬಹುದು, ಆದರೆ ಬೆಳಿಗ್ಗೆ ಎದ್ದ ತಕ್ಷಣ ಪ್ರಜಾವಾಣಿ ಓದದಿದ್ದರೆ ಏನೋ ಒಂಥರಾ ಬೇಸರ ಯಾವುದನ್ನೋ ಕಳೆದುಕೊಂಡಂತೆ ಕಳವಳ. ರಾಜ್ಯದ ಹಲವಾರು ಕಡೆಗಳಲ್ಲಿ ನಾನು ಸರ್ಕಾರಿ ಸೇವೆ ಸಲ್ಲಿಸಿದರೂ ಪ್ರಜಾವಾಣಿ ಓದುವುದನ್ನು ಬಿಟ್ಟಿಲ್ಲ. ಕಾರಣ ಅಂದರೆ ಸುಂದರ ಮುದ್ರಣ ಮತ್ತು ಪತ್ರಿಕೆ ನೀಡುವ ಹಲವು ವೈವಿಧ್ಯದ ಸುದ್ದಿಗಳು, ಮಾಹಿತಿಗಳು.ವೈಚಾರಿಕ, ಸಾಹಿತ್ಯಕ, ಸಮಾಜಿಕ, ಸಾಂಸ್ಕೃತಿಕ ವಿಷಯಗಳನ್ನು ಮೈಗೂಡಿಸಿಕೊಂಡು ಪತ್ರಿಕೆ ಇಂದು ಹಲವಾರು ಮೈಲುಗಳನ್ನು ದಾಟಿ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದು ಕರ್ನಾಟಕದ ಹೆಮ್ಮೆ.

ಪತ್ರಿಕೆ ಶತಮಾನೋತ್ಸವ ಆಚರಿಸಲಿ ಎಂದು ಶುಭಾಶಯಗಳನ್ನು ಕೋರುತ್ತೇನೆ.

ಗುರುಸಿದ್ಧಯ್ಯ ಹಿರೇಮಠ
ಕವಿ, ಲೇಖಕರು, ‌ಬೆಳಗಾವಿ

––––

ಆರರ ಪ್ರಾಯದಲ್ಲೇ ಓದುವ ಅಭ್ಯಾಸ

ನನ್ನ ತಂದೆ ಪ್ರಾಥಮಿಕ ಶಾಲೆ ಶಿಕ್ಷಕರು. ಹೀಗಾಗಿ ಮಕ್ಕಳಾದ ನಮಗೆ ಐದು ಆರರ ಪ್ರಾಯದಲ್ಲೇ ಓದುವ ಅಭ್ಯಾಸ ಮಾಡಿಸಿದ್ದರು. ಮಾಧ್ಯಮಿಕ ಶಾಲೆಯಲ್ಲಿ ಜೆ.ಪಾಲ್‌ ಎಂಬ ಕ್ಲಾಸ್‌ ಟೀಚರ್‌ ಪ್ರಾರ್ಥನೆ ಬಳಿಕ ಪ್ರಜಾವಾಣಿಯ ಮುಖ್ಯ ಶಿರೋನಾಮೆಗಳನ್ನು ವಿದ್ಯಾರ್ಥಿಗಳಿಂದ ಓದಿಸುತ್ತಿದ್ದರು.

ತಂದೆಯ ಇನ್ನೊಬ್ಬ ವಿದ್ಯಾರ್ಥಿ ಹಾಗೂ ಪ್ರಾಥಮಿಕ ಶಾಲೆಯ ಉಪನ್ಯಾಸಕರೂ ಆಗಿದ್ದ ಮಹಮ್ಮದ್‌ ಉಸ್ಮಾನ್‌ ಮೇಸ್ಟ್ರು ಒಂದು ಭಾನುವಾರ ಪ್ರಜಾವಾಣಿಯನ್ನು ತಂದು ತಂದೆಯವರಿಗೆ ಓದಲು ಕೊಟ್ಟರು. ಅದನ್ನು ಓದಿದ ನಮ್ಮ ತಂದೆ ತಮ್ಮ ಅಭಿಪ್ರಾಯ ಬದಲಿಸಿ ಪ್ರಜಾವಾಣಿಯನ್ನು ತರಿಸಲು ನಿರ್ಧರಿಸಿದರು. ಇನ್ನೊಂದು ಪತ್ರಿಕೆಯನ್ನು ಕೈಬಿಟ್ಟರು. ಅಂದಿನಿಂದ ನಮಗೆ ಪ್ರಜಾವಾಣಿಯನ್ನು ಓದುವ ರೂಢಿ.

‘ಛೂ ಬಾಣ’ ಅಂಕಣವನ್ನು ತಪ್ಪದೇ ಓದುತ್ತಿದ್ದೆ. 1957ರಲ್ಲಿ ಶುರುವಾದ ದೀಪಾವಳಿ ವಿಶೇಷಾಂಕಗಳನ್ನು ತಪ್ಪದೇ ಓದಿ ಸಂಗ್ರಹಿಸಿ ಇಟ್ಟಿದ್ದೆ. ಕೆಲಸಕ್ಕೆ ಸೇರಿ ಮೇಲೆ ಮತ್ತು ನಿವೃತ್ತಿ ನಂತರಮುಂಜಾನೆಗಳು ಪ್ರಾರಂಭವಾಗುವುದೇ ಪ್ರಜಾವಾಣಿಯ ಓದಿನಿಂದ.

ತನ್ನ ಧೋರಣೆಯಲ್ಲಿ ರಾಜಿ ಆಗದೆ ಮುಂದುವರಿದಿರುವುದೇ ಪ್ರಜಾವಾಣಿಯ ಜನಪ್ರಿಯತೆಗೆ ಸಾಕ್ಷಿ. ನಮ್ಮ ನೆಚ್ಚಿನ ಪ್ರಜಾವಾಣಿ ‘ಶತಕ ಬಾರಿಸಿ’ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸುತ್ತೇನೆ.

ಗುಬ್ಬಿ ರೇವಣಾರಾಧ್ಯ

ಹಂಪಿ ನಗರ, ಬೆಂಗಳೂರು

––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT