ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ | ಅಂಬೇಡ್ಕರ್ ಕಾಳಜಿ ಮತ್ತು ಶ್ರೀರಾಮನ ಚಿತ್ರ!

ಅಕ್ಷರ ಗಾತ್ರ

ಕಾಳಾರಾಮನಿಂದ ಅಯೋಧ್ಯಾರಾಮನವರೆಗೆ’ ಎಂಬ ನನ್ನ ಲೇಖನದಲ್ಲಿ (ಪ್ರ.ವಾ., ಸಂಗತ, ಆ. 6) ಡಾ. ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಮಾತುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ರಘೋತ್ತಮ ಹೊ.ಬ. ಹಾಗೂ ಟಿ.ಶಶಿಧರ್ 'ಅಂಬೇಡ್ಕರ್ ಚಿಂತನೆಗಳ ತಿರುಚುವಿಕೆ ಸಲ್ಲ' ಪತ್ರದ ಮೂಲಕ (ವಾ.ವಾ. ಆ.10) ಪ್ರಶ್ನೆಗಳನ್ನು ಎತ್ತಿದ್ದಾರೆ. 1935ರ ಅಕ್ಟೋಬರ್ 13ರಂದು ಮಹಾರಾಷ್ಟ್ರದ ಯವಲಾದಲ್ಲಿ ಬಾಬಾಸಾಹೇಬರು ಮಾಡಿದ ಭಾಷಣ ಐತಿಹಾಸಿಕವಾದದ್ದು. ಅಲ್ಲಿಯೇ ಅವರು ‘ಹಿಂದೂವಾಗಿ ಹುಟ್ಟಿದ್ದೇನೆ ನಿಜ, ಆದರೆ ಹಿಂದೂವಾಗಿ ಸಾಯಲಾರೆ’ ಎಂಬ ಮಾತನ್ನು ಹೇಳಿದ್ದು.

ಬಾಬಾಸಾಹೇಬರು ನಾಸಿಕ್‌ನ ಕಾಳಾರಾಮ ಮಂದಿರ ಪ್ರವೇಶದ ಹೋರಾಟವನ್ನು ಸತತ ಐದು ವರ್ಷಗಳ ಕಾಲ ಮಾಡಿದ್ದರು. ಶಾಂತ ರೀತಿಯಲ್ಲೇ ಇದ್ದ ಹೋರಾಟಗಾರರ ಮೇಲೆ ಸವರ್ಣೀಯರು ಕಲ್ಲುಗಳನ್ನು ತೂರಿದ್ದರು. ಇದಕ್ಕೆ ಮೊದಲು ಚೌದರ್ ಕೆರೆಯ ನೀರಿಗಾಗಿ ನಡೆಸಿದ ಹೋರಾಟವು ಯಶಸ್ಸು ಕೊಟ್ಟಿರಲಿಲ್ಲ. ಈ ಎರಡು ಹೋರಾಟಗಳ ಉದ್ದೇಶ, ಸವರ್ಣೀಯ ಸಮಾಜದ ಮಾನಸಿಕತೆಯನ್ನು ಬದಲಿಸುವುದೇ ಆಗಿತ್ತು. ಸತತವಾದ ಗಂಭೀರ ಪ್ರಯತ್ನಗಳ ನಂತರವೂ ಸವರ್ಣೀಯ ಹಿಂದೂಗಳ ಕಲ್ಲುಹೃದಯ ದ್ರವಿಸಲಿಲ್ಲ ಎಂದು ಬಾಬಾಸಾಹೇಬರೇ ಹೇಳಿದ್ದಾರೆ. 1935ರ ನಂತರ ಬಾಬಾಸಾಹೇಬರು ಹಿಂದೂ ಧರ್ಮವನ್ನು ಕಟು ವಿಮರ್ಶೆಗೆ ಒಳಪಡಿಸಿದ್ದು ನಿಜ. ಆನಂತರವೇ ಅವರ ಬಹು ಚರ್ಚಿತ ‘ಹಿಂದೂ ಧರ್ಮದ ಒಗಟುಗಳು’ ಪುಸ್ತಕ ಬಂದದ್ದು.

1935ರ ಮೊದಲು ಬಾಬಾಸಾಹೇಬರು ಸುಧಾರಣಾವಾದಿಯಾಗಿದ್ದರು, ಸವರ್ಣೀಯ ಸಮಾಜದಲ್ಲಿನ ದೋಷ, ದೌರ್ಬಲ್ಯಗಳನ್ನು ಸರಿಪಡಿಸಬಹುದೆಂಬ ಆಶಾವಾದ ಅವರಲ್ಲಿತ್ತೆಂದು ಡಾ. ಕಾರತ್, ಧನಂಜಯ ಕೀರ್ ಸೇರಿದಂತೆ ಅನೇಕ ಇತಿಹಾಸಕಾರರು ಗುರುತಿಸಿದ್ದಾರೆ. ಕಾಳಾರಾಮ ಮಂದಿರ ಪ್ರವೇಶದ ಹೋರಾಟದ ಸಂದರ್ಭದಲ್ಲಿ, ಸವರ್ಣೀಯ ಸಮಾಜದ ಮಾನಸಿಕತೆಯನ್ನು ಬದಲಿಸಬೇಕು ಎಂಬ ಬಾಬಾಸಾಹೇಬರ ಆಶಯವು ರಾಮಜನ್ಮಭೂಮಿ ಹೋರಾಟದಲ್ಲಿ ಒಂದಿಷ್ಟಾದರೂ ಕೈಗೂಡಿದೆ ಎಂದು ನನ್ನ ಲೇಖನ ಹೇಳಿದೆ.

1935ರ ನಂತರ ಬಾಬಾಸಾಹೇಬರು ರಾಮ, ಕೃಷ್ಣನ ಬಗ್ಗೆ ಕಟು ಅಭಿಪ್ರಾಯಗಳನ್ನು ದಾಖಲಿಸಿರುವುದು ನಿಜ. ಆದರೆ ಅದೇ ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಪ್ರತಿಯಲ್ಲಿ ವೇದಕಾಲದ ಜೀವನ, ಶ್ರೀರಾಮನ ಅಯೋಧ್ಯೆಯ ಪುರಪ್ರವೇಶ, ಶ್ರೀಕೃಷ್ಣನ ಗೀತೋಪದೇಶದ ಚಿತ್ರಗಳನ್ನು ಅಳವಡಿಸಿದ್ದಾರೆ ಎಂಬುದೂ ನಿಜವೆ. ಶ್ರೀರಾಮನ ಚಿತ್ರವನ್ನು ಬಾಬಾಸಾಹೇಬರು ಬಳಸಿರುವುದು ಮೂಲಭೂತ ಹಕ್ಕುಗಳನ್ನು ಚರ್ಚಿಸುವ ಅಧ್ಯಾಯದಲ್ಲಿ. ಬಾಬಾಸಾಹೇಬರ ಈ ನಡೆ ಅವರಿಗಿದ್ದ ಸ್ಪಷ್ಟತೆ, ಒಟ್ಟು ಸಮಾಜದ ಕುರಿತಾದ ಕಾಳಜಿಯನ್ನು ಸೂಚಿಸುತ್ತದೆ.

ವಾದಿರಾಜ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT