ಶನಿವಾರ, ಜುಲೈ 24, 2021
21 °C

ವಾಚಕರವಾಣಿ | ಶವ ಸುಡುವುದು ನಿಸರ್ಗ ವಿರೋಧಿ ಕ್ರಿಯೆ

ವಾಚಕರವಾಣಿ Updated:

ಅಕ್ಷರ ಗಾತ್ರ : | |

prajavani

ಕೋವಿಡ್‌– 19ರ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಹೂಳುವುದು ಅಪಾಯವೆಂದೂ ಅದು ಮುಂದೆ ಅಂತರ್ಜಲಕ್ಕೆ ಸೇರಿ ಕಂಟಕಕಾರಿ ಆದೀತೆಂದೂ ‘ಎಚ್ಚರಿಸುವ’ ಕೆಲವೊಂದು ಮೆಸೇಜ್‌ಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಅದಕ್ಕೆ ನನ್ನ ಸ್ಪಷ್ಟೀಕರಣ ಹೀಗಿದೆ:

ಇವೆಲ್ಲ ಅವೈಜ್ಞಾನಿಕ ವಿಚಾರಗಳು! ವ್ಯಕ್ತಿ ಸತ್ತ ಕೆಲವೇ ನಿಮಿಷಗಳಲ್ಲಿ ವೈರಸ್‌, ಬ್ಯಾಕ್ಟೀರಿಯಾ, ಇನ್ನಿತರ ರೋಗಾಣುಗಳೂ ಸಾಯುತ್ತವೆ. ಅರ್ಧ ಗಂಟೆಯ ನಂತರ ಯಾವ ಸೂಕ್ಷ್ಮಾಣುವೂ ದೇಹದಲ್ಲಿ ಬದುಕಿರುವುದಿಲ್ಲ. ಆದರೆ ಆಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದಿರುವುದರಿಂದ ಅದು ಕೊಳೆಯುವ ಹಂತದಲ್ಲಿ ಬೇರೆ ಜೀವಿಗಳು ಬರುತ್ತವೆ. ಶವವನ್ನು ಹಾಗೇ ಬಿಟ್ಟರೆ ಶಿಲೀಂಧ್ರ ಏಕಾಣು ಜೀವಿ, ನೊಣ, ಹೆಗ್ಗಣ, ನಾಯಿನರಿ ಕೊನೆಗೆ ಹದ್ದುಗಳೂ ಬಂದು ದೇಹವನ್ನು ಮಣ್ಣು ಮಾಡುತ್ತವೆ. ಅದು ಸಹಜ ನೈಸರ್ಗಿಕ ಕ್ರಿಯೆ.

ಸುಡುವುದು ನೈಸರ್ಗಿಕ ಅಲ್ಲ; ಅದು ನಿಸರ್ಗ ವಿರೋಧಿ ಕ್ರಿಯೆ. ಮಾನವ ಶರೀರದಲ್ಲಿ ಶೇಖರವಾಗಿದ್ದ ಕೊಬ್ಬಿನ ಅಂಶವೆಲ್ಲ ಹೊಗೆಯಾಗಿ ಕಾರ್ಬನ್‌ ಆಗಿ ವಾಯುಮಂಡಲ ಸೇರುತ್ತದೆ. ಜೀವನವಿಡೀ ಕಾರ್ಬನ್ನನ್ನು (ಪೆಟ್ರೋಲ್‌, ಡೀಸೆಲ್ಲನ್ನು ಸುಡುತ್ತ) ವಾಯುಮಂಡಲಕ್ಕೆ ಸೇರಿಸಿ ಭೂಮಿಯ ತಾಪಮಾನವನ್ನು ಏರಿಸಿದ ಮನುಷ್ಯ, ಸತ್ತ ಮೇಲೂ ಅದನ್ನೇ ಮಾಡುವುದು ಸರಿಯಲ್ಲ. ಹೂತರೆ ಭೂಮಿಗೆ ಒಂದಿಷ್ಟು ಖನಿಜ ಪೋಷಕಾಂಶವನ್ನು ಸೇರಿಸಿ ಮುಂದಿನ ಜೀವಿಗೂ ಉಪಯುಕ್ತವಾಗಬಹುದು. ಗಿಡ ನೆಟ್ಟರೆ ಅದು ಚೆನ್ನಾಗಿ ಬೆಳೆಯಬಹುದು.

ಪ್ಲಾಸ್ಟಿಕ್‌ನಲ್ಲಿ ಸುತ್ತುವುದರಿಂದ ಈ ಮಣ್ಣಾಗುವ ಕ್ರಿಯೆ ನಿಧಾನವಾಗಬಹುದು. ನೂರು ವರ್ಷಗಳ ನಂತರ ನೆಲದೊಳಗಿನ ಶಾಖಕ್ಕೆ ಪ್ಲಾಸ್ಟಿಕ್‌ ಚಿಂದಿಯಾಗಿ, ಅದರೊಳಕ್ಕೆ ಗಿಡಮರಗಳ ಬೇರುಗಳು ನುಗ್ಗುತ್ತವೆ. ಮನುಷ್ಯನ ಪಳೆಯುಳಿಕೆಯಲ್ಲಿರುವ ರಂಜಕ, ಪೊಟ್ಯಾಶ್‌, ಸಾರಜನಕ, ಕಬ್ಬಿಣ, ಮ್ಯಾಂಗನೀಸ್‌, ಗಂಧಕ ಮುಂತಾದವನ್ನು ಹೀರಿಕೊಂಡು ಗಿಡಗಳು ಪುಷ್ಟಿಯಾಗಿ ಬೆಳೆಯುತ್ತವೆ. ಹಾಗೆ ಬೆಳೆಯುವ ಗಿಡಗಳೇ ಮನುಷ್ಯನ ಅಸಲಿ ಸ್ಮಾರಕ ಆಗಬೇಕು!

- ನಾಗೇಶ ಹೆಗಡೆ, ಕೆಂಗೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು