ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಪ್ರಾಣವಾಯು ನಾಶ ಮಾಡುವ ಯೋಜನೆ ಬೇಡ

Last Updated 5 ಜೂನ್ 2020, 2:50 IST
ಅಕ್ಷರ ಗಾತ್ರ

‘ಕಲ್ಲಿದ್ದಲು ಉರಿಸಲು ಆತುರವೇಕೆ?’ ಎಂಬ ಲೇಖನದಲ್ಲಿ (ಪ್ರ.ವಾ., ಜೂನ್‌ 3) ಟಿ.ಆರ್. ಅನಂತರಾಮು ಅವರು ಒಬ್ಬ ವಿಜ್ಞಾನಿಯಾಗಿ ಅನೇಕ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿರುವುದು ಮೆಚ್ಚತಕ್ಕ ವಿಚಾರ. ಅವರು ಪ್ರಸ್ತಾಪಿಸಿರುವ ವಿಚಾರಗಳ ಜೊತೆಗೆ, ನಮಗೆ ಕೇವಲ ವಿದ್ಯುತ್‌ ಶಕ್ತಿಯೇ ಮುಖ್ಯವೋ ಅಥವಾ ಪ್ರಾಣವಾಯು, ಜೀವಜಲ, ಜೀವವೈವಿಧ್ಯ ಮತ್ತು ಕಾಡನ್ನು ನಂಬಿ ಬದುಕುವ ಗಿರಿಜನರ ಬದುಕೂ ಮುಖ್ಯವಾಗುತ್ತದೋ ಎಂದು ನಾವಿಲ್ಲಿ ಪ್ರಶ್ನಿಸಿಕೊಳ್ಳಬೇಕಾಗಿದೆ.

ಕಲ್ಲಿದ್ದಲು ಸ್ಥಾವರ ಅತ್ಯಂತ ಹೆಚ್ಚು ಮಾಲಿನ್ಯ ಉಗುಳುವಂಥ ಕೈಗಾರಿಕೆ. ಹವಾಮಾನ ಬದಲಾವಣೆಗೆ, ಆಮ್ಲಮಳೆಗೆ ಅತೀ ಹೆಚ್ಚು ಕೊಡುಗೆ ಇದರದ್ದೇ. ಆಮ್ಲಮಳೆಯು ಪ್ರಾಣಿಪಕ್ಷಿಗಳ ಮೊಟ್ಟೆಯ ಮೇಲೆ, ಗಿಡಗಳ ಎಲೆ, ಹೂವುಗಳ ಮೇಲೆ ಬಿದ್ದಾಗ ಅವೆಲ್ಲಾ ಸುಟ್ಟುಹೋಗಿ ಅಪಾರ ಪ್ರಮಾಣದ ಜೀವನಾಶವಾಗುತ್ತದೆ.

ಕಲ್ಲಿದ್ದಲು ನಿಕ್ಷೇಪ ಸಾಮಾನ್ಯವಾಗಿ ಕಂಡುಬರುವುದು ನದಿಗಳು, ತೊರೆಗಳ ಜಲಾನಯನ ಪ್ರದೇಶಗಳಲ್ಲಿ. ಅಂತಹ ಸೂಕ್ಷ್ಮ ಮತ್ತು ಶ್ರೀಮಂತ ಪರಿಸರದಲ್ಲಿ ಗಣಿಗಾರಿಕೆ ಮಾಡಿದಾಗ ಆಗುವ ಅನಾಹುತ ಊಹಿಸಲು ಅಸಾಧ್ಯ. ಇದುವರೆಗೂ ‘ಕೋಲ್ ಇಂಡಿಯಾ’ ಎನ್ನುವ ಸಾರ್ವಜನಿಕ ವಲಯದ ಕಂಪನಿಯು ಕಲ್ಲಿದ್ದಲು ಗಣಿಗಾರಿಕೆ ಮಾಡುತ್ತಾ ಬಂದಿರುವುದು ಈಶಾನ್ಯ ಭಾರತದ ಪ್ರಮುಖ ಆನೆ ಕಾರಿಡಾರ್‌ನಲ್ಲಿ. ಇವರು ಅಲ್ಲಿ ಒಂದು ಪ್ರಮುಖ ಬೆಟ್ಟವನ್ನೇ ಅಕ್ರಮವಾಗಿ ಒಡೆದು ಬಿಟ್ಟಿದ್ದಾರೆ. ಇದರ ಪರಿಶೀಲನೆಗೆ ಸರ್ಕಾರ ನೇಮಿಸಿದ ತಜ್ಞರ ಸಮಿತಿ, ‘ಈಗಾಗಲೇ ಅವರು ಬೆಟ್ಟವನ್ನು ಅಕ್ರಮವಾಗಿ ಒಡೆದುಬಿಟ್ಟಿರುವುದರಿಂದ, ಅವರ ಗಣಿಗಾರಿಕೆ ಪ್ರದೇಶವನ್ನು ಇನ್ನೂ 200-300 ಎಕರೆಗೆ ವಿಸ್ತರಿಸಿ ಕೊಡಬಹುದು’ ಎಂದು ಇತ್ತೀಚೆಗೆ ವರದಿ ನೀಡಿತು. ಈ ಸಮಿತಿಯಲ್ಲಿ ಹೆಸರಾಂತ ಆನೆ ತಜ್ಞರೂ ಇದ್ದರೆಂದರೆ, ನಮ್ಮಲ್ಲಿನ ತಜ್ಞ ಸಮಿತಿಗಳ ಕಾರ್ಯವೈಖರಿಯನ್ನು ಊಹಿಸಬಹುದು.

ಇನ್ನು, ಸರ್ಕಾರದ ಯಾವುದೇ ಸಹಾಯ ಬಯಸದೆ ತಲೆತಲಾಂತರದಿಂದ ಕಾಡಿನಲ್ಲಿ ತಮ್ಮಷ್ಟಕ್ಕೆ ಬದುಕುತ್ತಾ ಬಂದಿರುವ ಗಿರಿಜನರನ್ನು ಅಲ್ಲಿಂದ ಹೊರದಬ್ಬಿದಾಗ ಅವರ ಬದುಕು ಯಾವ ಮಟ್ಟಕ್ಕೆ ತತ್ತರಿಸಿ ಹೋಗಿದೆ ಎನ್ನುವುದನ್ನು ನೋಡುತ್ತಾ ಬಂದಿದ್ದೇವೆ. ಕಾಡನ್ನು ಕಾಪಾಡುತ್ತಾ, ಅಲ್ಲಿ ಸಿಗುವ ವೈವಿಧ್ಯಮಯ ಸೊಪ್ಪುಗಳು, ಗೆಡ್ಡೆಗೆಣಸುಗಳನ್ನು ತಿಂದುಕೊಂಡು ತಮ್ಮ ಆಹಾರ ಮತ್ತು ಆರೋಗ್ಯದ ಭದ್ರತೆ ಕಾಪಾಡಿಕೊಂಡು ಬಂದವರು ಇವರು. ಕಲ್ಲಿದ್ದಲು ಗಣಿಗಾರಿಕೆಯೆಂದರೆ ಆದಿವಾಸಿಗಳನ್ನು ಕಾಡಿನಿಂದ ಹೊರದಬ್ಬುವುದಲ್ಲದೆ ಬೇರೇನೂ ಅಲ್ಲ.

ನಾವು ಇಷ್ಟು ಕ್ರೂರಿಗಳಾಗಬೇಕೇ? ಪ್ರಪಂಚದ ಎಲ್ಲಾ ಕಲ್ಲಿದ್ದಲು ಸ್ಥಾವರಗಳನ್ನು ಹಂತಹಂತವಾಗಿ ಮುಚ್ಚಿ ಪರ್ಯಾಯಗಳಿಗೆ ಹೋಗುತ್ತಿರುವ ಸಂದರ್ಭದಲ್ಲಿ, ನಮ್ಮ ದೇಶವು ಖಾಸಗಿ ಹೂಡಿಕೆದಾರರನ್ನು ಕೈಬೀಸಿ ಕರೆಯುತ್ತಾ ಈ ಕೈಗಾರಿಕೆಯನ್ನು ವಿಸ್ತರಿಸಲು ಹೊರಟಿರುವುದು ದುರಂತ. ನಮ್ಮಲ್ಲಿ ಯಥೇಚ್ಛವಾಗಿ ಲಭ್ಯವಿರುವ ಪ್ರಾಣಿತ್ಯಾಜ್ಯ, ಸಸ್ಯತ್ಯಾಜ್ಯ, ಸೂರ್ಯನ ಶಕ್ತಿಯನ್ನು ಬಳಸಿ ಪರ್ಯಾಯ ಶಕ್ತಿ ಉತ್ಪಾದನೆಗೆ ವಿಪುಲ ಅವಕಾಶಗಳಿವೆ. ಹೀಗಿದ್ದೂ, 2015ರಲ್ಲಿ ಸಹಿ ಹಾಕಿದ ಪ್ಯಾರಿಸ್ ಒಪ್ಪಂದವನ್ನೂ ಮೀರಿ ಸರ್ಕಾರ ಕಲ್ಲಿದ್ದಲು ಕೈಗಾರಿಕೆಯ ಉದಾರೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ. ಜೀವಸಂಕುಲದ ಪ್ರಾಣವಾಯುವನ್ನೇ ನಾಶ ಮಾಡುವ ಇಂತಹ ವಿನಾಶಕಾರಿ ಯೋಜನೆ ಖಂಡಿತಾ ಸಲ್ಲದು.

–ಅ.ನ.ಯಲ್ಲಪ್ಪರೆಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT