ಭಾನುವಾರ, ಫೆಬ್ರವರಿ 23, 2020
19 °C

ಸಂವಿಧಾನ: ಕಾನೂನಿನ ಗ್ರಂಥ ಮಾತ್ರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂವಿಧಾನವು ಮತ ಹಾಕುವುದು ಮತ್ತು ಅಧಿಕಾರ ನಡೆಸುವುದನ್ನು ಮಾತ್ರ ಹೇಳುವ ಬರೀ ರಾಜಕೀಯ ಗ್ರಂಥ ಅಲ್ಲ. ಸಹೋದರತ್ವ, ಸ್ವಾತಂತ್ರ್ಯ ಮತ್ತು ಸಮಾನತೆಗಳು ಭಾರತೀಯರ ನಿತ್ಯ ಬದುಕಿನ ಭಾಗವಾಗಬೇಕೆಂದು ಸಾರಿರುವ ಸಾಮಾಜಿಕ ಗ್ರಂಥ. ಇನ್ನೊಬ್ಬರನ್ನು ಹಿಂಸಿಸಬಾರದು ಮತ್ತು ಶೋಷಿಸಬಾರದು, ತಾವೂ ಬದುಕಿ ಇತರರನ್ನೂ ಬದುಕಲು ಬಿಡಬೇಕು ಎಂದು ಹೇಳಿರುವ ಮಹಾನ್‌ ನೈತಿಕ ಗ್ರಂಥ.

ಇವತ್ತು ಪ್ರಜಾಪ್ರಭುತ್ವದ ಉಳಿವು ಸಂವಿಧಾನದ ಆಚರಣೆಯನ್ನು ಅವಲಂಬಿಸಿದೆ ನಿಜ.
ಆದರೆ ಪ್ರಜಾಪ್ರಭುತ್ವದ ಮೌಲ್ಯಗಳು ಸಾಮಾಜೀಕರಣ ಆಗಬೇಕು. ಇದು ಆಗಬೇಕಾದರೆ ಗಣರಾಜ್ಯೋತ್ಸ
ವವು ಸರ್ಕಾರಿ ಕಾರ್ಯಕ್ರಮವಾಗದೆ ಭಾರತದ ಹಳ್ಳಿಹಳ್ಳಿಗಳ ಜನರ ಹಬ್ಬವಾಗಬೇಕು. ಪ್ರತಿ ವರ್ಷದ ಡಿಸೆಂಬರ್‌ 31ರಂದು ಕ್ಯಾಲೆಂಡರ್‌ ಬದಲಾಗುವ ಕಾರಣಕ್ಕಾಗಿ ಅನೇಕರು ಹಬ್ಬ ಮಾಡುತ್ತಾರೆ. ಸಂಕ್ರಾಂತಿಯ ದಿನ
ಸೂರ್ಯ ತನ್ನ ಚಲನೆಯ ಪಥವನ್ನು ಬದಲಾಯಿಸುತ್ತಾನೆ ಎಂಬ ಕಾರಣಕ್ಕೆ ಸಂಕ್ರಾಂತಿ ಹಬ್ಬ ಮಾಡುತ್ತಾರೆ. ಅದೇ ರೀತಿ ಜನವರಿ 26ರ ಗಣರಾಜ್ಯವು ಎಲ್ಲ ಭಾರತೀಯರ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ
ಜೀವನದಲ್ಲಿ ಸಂಕ್ರಮಣವನ್ನು ಉಂಟು ಮಾಡಿದ ಮಹತ್ವದ ದಿನ.

ಗಣರಾಜ್ಯ ಎಂಬ ಪದವು ಅಸಮಾನತೆ, ಶೋಷಣೆಗಳು ಇಲ್ಲದಿದ್ದ ಪ್ರಪಂಚದ ಆದಿಮ ಗಣಸಮಾಜಗಳ ಜೀವನಕ್ರಮವನ್ನು ನೆನಪಿಗೆ ತರುತ್ತದೆ ಮತ್ತು ಅದರ ಆಶಯಗಳನ್ನು ಒಳಗೊಂಡಿದೆ. ಹಾಗಾಗಿ ಇದು ಈ ಆಶಯಗಳನ್ನು ಆಚರಣೆಗೆ ತರುವ ದಿನ. ಭಾರತದ ಎಲ್ಲ ನಾಗರಿಕರ ಅಂತರಂಗದ ಬದಲಾವಣೆಗೆ ಪಣ ತೊಟ್ಟ ದಿನ. ಭಾರತ ರಾಷ್ಟ್ರ ಎಂದರೆ ಇಲ್ಲಿನ ಎಲ್ಲ ನಾಗರಿಕರ ಒಟ್ಟು ಬದುಕು ಎಂದು ಸಂವಿಧಾನ ಹೇಳಿದ ದಿನ. ಸಂವಿಧಾನವನ್ನು ಬರೀ ಕಾನೂನುಗಳ ಗ್ರಂಥವೆಂದು ಸೀಮಿತ ಮಾಡಿ, ಜನಸಾಮಾನ್ಯರು ಅದರಿಂದ ದೂರವಾಗಬಾರದು.

- ಡಾ. ಬಿ.ಎಂ.ಪುಟ್ಟಯ್ಯ, ಹಂಪಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)