ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಮಾಡಿ ಓದಿದ ಸದಾಶಿವಗೆ 2 ಚಿನ್ನ

ರಾಣಿ ಚನ್ನಮ್ಮ ವಿ.ವಿ 6ನೇ ಘಟಿಕೋತ್ಸವ, ರಾಯಬಾಗ ತಾಲ್ಲೂಕು ಸಿದ್ದಾಪುರದ ಹುಡುಗನ ಸಾಧನೆ
Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಹಂಗಾಮಿನಲ್ಲಿ ಕಬ್ಬು ಕಡಿಯುತ್ತೇನೆ. ರಜಾ ದಿನಗಳಲ್ಲಿ ಬೇರೆ ಕೂಲಿ ಮಾಡಿಕೊಂಡು ಓದುತ್ತಿದ್ದೇನೆ. ಅಪ್ಪ– ಅಮ್ಮನನ್ನೂ ನೋಡಿಕೊಳ್ಳುತ್ತಿದ್ದೇನೆ. ಪಿಎಚ್‌.ಡಿ ಮುಗಿಸಿದ ನಂತರ ಯಾವುದಾದರೂ ಉದ್ಯೋಗಕ್ಕೆ ಪ್ರಯತ್ನಿಸುತ್ತೇನೆ....’

ಎಂ.ಎ. ಕನ್ನಡ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಎರಡು ಚಿನ್ನದ ಪದಕಗಳನ್ನು ಪಡೆದ ಸದಾಶಿವ ಗಾಣಿಗೇರ ಅವರ ಅನಿಸಿಕೆ ಇದು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡಿದ ಅವರು, ಜಿಲ್ಲೆಯ ರಾಯಬಾಗ ತಾಲ್ಲೂಕು ಸಿದ್ದಾಪುರದ ಅಪ್ಪಟ ಗ್ರಾಮೀಣ ಹಾಗೂ ಬಡತನದಲ್ಲಿ ಅರಳಿದ ಪ್ರತಿಭೆ. ಅವರಿಗೆ ವಿಟಿಯು ಸಭಾಂಗಣದಲ್ಲಿ ಬುಧವಾರ ನಡೆದ 6ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪ್ರದಾನ ಮಾಡಲಾಯಿತು.

‘ಕೂಲಿ ಮಾಡಿದರಷ್ಟೇ ನಮ್ಮ ಜೀವನ ನಡೆಯುತ್ತದೆ. ಅಪ್ಪ– ಅಮ್ಮ ಕೂಲಿಗೆ ಹೋಗುತ್ತಿದ್ದರು. ನಾನು 6ನೇ ತರಗತಿಯಲ್ಲಿದ್ದಾಗ ಅಪ್ಪನಿಗೆ ಶಸ್ತ್ರಚಿಕಿತ್ಸೆ (ಕಿಡ್ನಿ ಸ್ಟೋನ್‌) ಆಯಿತು. ನಂತರ ಅವರಿಂದ ಕೆಲಸ ಮಾಡಲಾಗುತ್ತಿಲ್ಲ. ಹೀಗಾಗಿ, ನಾನು ಆಗಿನಿಂದಲೂ ದುಡಿಯುತ್ತಿದ್ದೇನೆ. ಕಬ್ಬು ಕಡಿಯುವ ಕೆಲಸ 4ರಿಂದ 5 ತಿಂಗಳವರೆಗೆ ಸಿಗುತ್ತದೆ. ಆಗ ನಿತ್ಯ ₹300ರಿಂದ ₹400 ಗಳಿಸುತ್ತೇನೆ. ಈ ಹಣದಲ್ಲಿ ಕಾಲೇಜಿನ ಹಾಗೂ ಮನೆ ಖರ್ಚು ನೋಡಿಕೊಳ್ಳುತ್ತೇನೆ. ಕಬ್ಬಿನ ಹಂಗಾಮು ಮುಗಿದ ನಂತರದ ದಿನಗಳಲ್ಲಿ ಕಾಲೇಜಿಗೆ ಹೋಗುತ್ತಿದ್ದೆ. ರಜೆಯಲ್ಲಿ ಕೂಲಿ ಮಾಡುತ್ತಿದ್ದೆ. ರಾತ್ರಿ ವೇಳೆ ಓದಿಕೊಳ್ಳುತ್ತಿದ್ದೆ’ ಎಂದು ಕಬ್ಬಿನ ಗರಿಗಳು ಕೊಯ್ದಿರುವ ಕೈಯನ್ನು ತೋರಿಸಿ ಭಾವುಕರಾದರು.

ಎಸ್ಸೆಸ್ಸೆಲ್ಸಿಯಿಂದಲೂ ಪ್ರಥಮ ಶ್ರೇಣಿ: ‘ಅಪ್ಪ ಮಾಡಿದ ಒಂದಿಷ್ಟು ಸಾಲ ತೀರಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಇದಕ್ಕಾಗಿ ದುಡಿಯ
ಲೇಬೇಕಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಪ‍್ರಥಮ ಶ್ರೇಣಿಯಲ್ಲಿ ಪಾಸಾಗಿದ್ದೆ. ಹಾರೂಗೇರಿಯ ಎಸ್‌ವಿಎಸ್‌ ಕಾಲೇಜಿನಲ್ಲಿ ಪದವಿಯಲ್ಲಿ ಉನ್ನತ ಶ್ರೇಣಿ ಗಳಿಸಿದ್ದೆ. ಬಿ.ಇಡಿ  ಕೂಡ ಮಾಡಿದ್ದೇನೆ. ನಾನು ಕುಟುಂಬದ ಮೊದಲ ಪದವೀಧರ ಹಾಗೂ ಅಕ್ಷರಸ್ಥನೂ ಹೌದು. ನಾನು ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎನ್ನುವುದೂ ಗೊತ್ತಿಲ್ಲದಷ್ಟು ಮುಗ್ಧರು ನನ್ನ ಪೋಷಕರು’ ಎಂದು ಹೇಳಿದರು.

ಬಡ ಪ್ರತಿಭೆಗೆ ಚಿನ್ನ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಲಿಂಗನೂರಿನ ಹನುಮಂತ ಅಮಾತಿ ಎಂ.ಎ. ಇತಿಹಾಸ ವಿಷಯದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

‘ತಾಯಿ ಹಾಗೂ ಇಬ್ಬರು ಅಣ್ಣಂದಿರು ಕೂಲಿ ಮಾಡುತ್ತಾರೆ. ತಂದೆ ಅನಾರೋಗ್ಯಪೀಡಿತರಾಗಿದ್ದಾರೆ. ನನ್ನ ಓದಿಗಾಗಿ ಇಡೀ ಕುಟುಂಬ ತ್ಯಾಗ ಮಾಡಿದೆ. ಪ್ರಥಮ ರ‍್ಯಾಂಕ್‌ ಗಳಿಸಿದ್ದಕ್ಕಾಗಿ, ನಾನು ಓದಿದ ಬಿಎಲ್‌ಡಿ ಕಾಲೇಜಿನವರು ಈಚೆಗಷ್ಟೇ ಅತಿಥಿ ಉಪನ್ಯಾಸಕ ಹುದ್ದೆ ಕೊಟ್ಟಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವುದಕ್ಕೂ ಸಿದ್ಧತೆ ನಡೆಸುತ್ತಿದ್ದೇನೆ’ ಎಂದು ಹೇಳಿದರು.

ಕುಲಪತಿ ಪ್ರೊ.ಶಿವಾನಂದ ಹೊಸಮನಿ ಪದವಿ ಮತ್ತು ಪದಕ ಪ್ರದಾನ ಮಾಡಿದರು.

ಶೇಜಲ್‌ಗೆ 4 ಚಿನ್ನದ ಪದಕ

ಬಿ.ಕಾಂ.ನಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿ 4 ಚಿನ್ನದ ಪದಕಗಳನ್ನು ಪಡೆದ ಇಲ್ಲಿನ ಕೆಎಲ್‌ಎಸ್‌ ಗೋಗಟೆ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ  ಶೇಜಲ್‌ ಆರ್. ಪಸಾರಿ ಬುಧವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ‘ಬಂಗಾರದ ಹುಡುಗಿ’ಯಾಗಿ ಸಂಭ್ರಮಿಸಿದರು.

ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡುತ್ತಿರುವ ಅವರಿಗೆ, ಇನ್‌ವೆಸ್ಟ್‌ಮೆಂಟ್‌ ಬ್ಯಾಂಕರ್‌ ಆಗಬೇಕೆಂಬ ಗುರಿ ಇದೆ.

‘ಅಂದಿನ ಪಾಠ ಅಂದೇ ಓದಿಕೊಳ್ಳುತ್ತಿದ್ದೆ. ಪರೀಕ್ಷೆ ಸಮೀಪಿಸಿದಾಗ ಒತ್ತಡ ಮಾಡಿಕೊಳ್ಳುತ್ತಿರಲಿಲ್ಲ. ಪೋಷಕರು ತುಂಬಾ ಸಹಕಾರ ನೀಡುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT