ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಧಿಕಾರದಿಂದ ಇಳಿದ ಮೇಲೆ ಜ್ಞಾನೋದಯ!

Last Updated 14 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬಿಬಿಎಂಪಿಗೆ ಸೇರಿದ ₹ 50 ಸಾವಿರ ಕೋಟಿ ಮೌಲ್ಯದ ಆಸ್ತಿ ನಾಪತ್ತೆಯಾಗಿರುವ ಕುರಿತು, ಇತ್ತೀಚೆಗೆ ಅಧಿಕಾರದಿಂದ ನಿರ್ಗಮಿಸಿರುವ ಪುರಪಿತೃಗಳು ಜನಾಗ್ರಹ ಸಂಘಟನೆಯಿಂದ ಆಯೋಜಿಸಿದ್ದ ‘ನಮ್ಮ ನಾಯಕರು’ ಎಂಬ ವೆಬಿನಾರ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ (ಪ್ರ.ವಾ., ಸೆ. 13). ಕಾನೂನು ಕೋಶವನ್ನು ಬಲಪಡಿಸಬೇಕೆನ್ನುವ ಮತ್ತು ಅಭಿವೃದ್ಧಿಯ ಕಾಳಜಿ ಇರುವವರನ್ನೇ ವಾರ್ಡ್ ಸಮಿತಿಗೆ ಆಯ್ಕೆ ಮಾಡಬೇಕೆನ್ನುವ ಅಭಿಪ್ರಾಯಗಳನ್ನು ಸಹ ವ್ಯಕ್ತಪಡಿಸಿದ್ದಾರೆ.

ಅಧಿಕಾರ ಅವಧಿ ಪೂರ್ಣಗೊಂಡ ಮೇಲೆ ಇವರಿಗೆ ಜ್ಞಾನೋದಯವಾಗಿ, ಈಗ ಇಂತಹ ಸಲಹೆಗಳನ್ನು ನೀಡುತ್ತಿರುವುದು ಆಶ್ಚರ್ಯಕರ. ಹಾಗಾದರೆ, ಇವರು ಮತ್ತು ಇವರ ಹಿಂದಿನವರು ತಮ್ಮ ಅಧಿಕಾರ ಅವಧಿಯಲ್ಲಿ ಇವಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಕೈ ಕಟ್ಟಿ ಕುಳಿತಿದ್ದರೆಂದಾಯಿತು! ಬೇರೆಯವರ ಸ್ವಾಧೀನದಲ್ಲಿರುವ ಬಿಬಿಎಂಪಿಯ ಸ್ವತ್ತುಗಳನ್ನು ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇರಬೇಕೆಂದು ಬಯಸುವ ಇವರಿಗೆ ಅದರ ಅವಶ್ಯಕತೆ ಇರಲಿಲ್ಲವೇ? ಬಿಬಿಎಂಪಿಯ ಆಗು ಹೋಗುಗಳಿಗೆ ಇವರು ಹೊಣೆಗಾರರಾಗಬೇಕಿಲ್ಲವೇ?

ಮಳೆಗಾಲಕ್ಕೂ ಮುಂಚೆ ರಾಜಕಾಲುವೆಗಳ ಹೂಳೆತ್ತಲು, ರಸ್ತೆಗಳ ಸುಸ್ಥಿತಿಯತ್ತ ಕಾರ್ಯಪ್ರವೃತ್ತರಾಗುವಂತೆ ಮಾಡಲು ಪ್ರತೀ ವರ್ಷ ಮಳೆರಾಯನೇ ಬಂದು ಅಧಿಕಾರಿಗಳನ್ನು ಎಚ್ಚರಿಸಬೇಕು, ಇಲ್ಲವೇ ನ್ಯಾಯಾಲಯ ಚಾಟಿ ಬೀಸಬೇಕು ಅಥವಾ ಆಸ್ತಿ-ಪ್ರಾಣಿ ಹಾನಿ ಸಂಭವಿಸಬೇಕು!

ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದರೆಂಬ ಕಾರಣಕ್ಕೆ, ಬಹುಪಾಲು ಅಶಕ್ತರ ಮನೆಗಳನ್ನೇ ನೆಲಸಮ ಮಾಡಿದ ಅಧಿಕಾರಿಗಳಿಗೆ, ಬಲಾಢ್ಯರ ಸ್ವತ್ತನ್ನು ಮುಟ್ಟುವ ಧೈರ್ಯವಾಗಲಿಲ್ಲ. ಅಷ್ಟರಲ್ಲಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಅವರನ್ನು ರಕ್ಷಿಸಲು ಇದು ಒಂದು ರೀತಿಯಲ್ಲಿ ಅವರಿಗೆ ವರದಾನವಾಯಿತು! ವರ್ಷಗಳ ನಂತರವೂ ತಡೆಯಾಜ್ಞೆ ತೆರವಾಗದಿರುವುದನ್ನು ಗಮನಿಸಿದರೆ, ಒಂದೋ ಕಾನೂನು ಕೋಶದ ಅಧಿಕಾರಿಗಳು ಅಸಮರ್ಥರಿರಬೇಕು ಅಥವಾ ತಡೆಯಾಜ್ಞೆ ತಂದಿರುವವರ ಜೊತೆ ಅವರು ಕೈಜೋಡಿಸಿರಬೇಕು ಎಂಬ ಸಂದೇಹ ಸಹಜವಾಗಿ ಮೂಡುತ್ತದೆ.

-ಪುಟ್ಟೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT