ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರವೊಂದು ಶಾಪವಾಯಿತು ಹೀಗೆ...

Last Updated 7 ಅಕ್ಟೋಬರ್ 2022, 19:02 IST
ಅಕ್ಷರ ಗಾತ್ರ

ಗ್ರಾಮೀಣ ಭಾಗದ ಅವಶ್ಯಕತೆಗಳನ್ನು ಮನಗಂಡ ಉನ್ನತ ಚಿಂತನೆಯಿಂದ ಗ್ರಾಮ ಪಂಚಾಯಿತಿಗೆ ವಿಕೇಂದ್ರೀಕರಣಗೊಂಡ ಅಧಿಕಾರವು ನಂತರದ ದಿನಗಳಲ್ಲಿ ಹಾದಿ ತಪ್ಪಿದ್ದು ನಿಚ್ಚಳ. ಜಾತಿ, ಲಿಂಗ, ಪಕ್ಷ, ವಿದ್ಯೆ ಎಂಬ ಯಾವ ಭೇದವೂ ಇಲ್ಲದಂತೆ ಇಲ್ಲಿ ಲಂಚ ಆವರಿಸಿದೆ. ಸಿಕ್ಕಿಬಿದ್ದರೂ ಅವರ ಜಾತಿ, ಅವರ ಪಕ್ಷ ರಾಜಕಾರಣ ಅವರಿಗೆ ಸುರಕ್ಷಾ ಕವಚ ಎಂಬಂತೆ ನಿರ್ಲಜ್ಜವಾಗಿ ಕೆಲಸ ಮಾಡುತ್ತಿದೆ. ಮೀಸಲಾತಿಯಲ್ಲಿ ಅಧಿಕಾರ ಹಿಡಿದರೂ ಕಡೇಪಕ್ಷ ತಮ್ಮವೇ ಸಮುದಾಯಗಳ ಕೆಲಸಗಳಿಗೂ ಲಂಚದಿಂದ ರಿಯಾಯಿತಿ ಇರದಷ್ಟು ಹೊಲಸೆದ್ದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇದ್ದ ಹಣಕಾಸು ನಿರ್ವಹಣೆಯ ಅಧಿಕಾರವನ್ನು ಸರ್ಕಾರ ಈಗ ಮೊಟಕುಗೊಳಿಸಲು ಮುಂದಾಗಿರುವುದರಿಂದ ಅಧಿಕಾರವು ಪುನಃ ಕೇಂದ್ರೀಕೃತವಾಗಲಿದೆ ಮತ್ತು ಲಂಚ ಇನ್ನೊಂದು ರೂಪ ಪಡೆಯಲಿದೆ ಎಂದು ಶಿವಕುಮಾರ್ ಯರಗಟ್ಟಿ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಅ. 7). ಇದು ಸಮಂಜಸ, ಆದರೆ ಸಂಪೂರ್ಣ ಸರಿ ಎನಿಸುವುದಿಲ್ಲ.

ಯಾವುದು, ಏನು, ಏಕೆ ಎಂಬ ವಿವೇಕ, ವಿವೇಚನೆ ಲವಲೇಶವೂ ಇಲ್ಲದೆ ತಮ್ಮ ಪದವಿಯ ಸಹಿಯ ಘನತೆ ಕಳೆದು, ಒಂದು ಉನ್ನತ ಆಶಯವನ್ನೇ ಅಪಹಾಸ್ಯ ಮಾಡಿದ ಘನತೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಸಮಿತಿಗಳಿಗೆ ಸಲ್ಲಬೇಕು. ಅಪವಾದಕ್ಕೆಂಬಂತೆ ಕೆಲವೇ ಸ್ವಚ್ಛ ಪಂಚಾಯಿತಿಗಳು ವಿಕಸನಗೊಂಡಿರುವುದು ನಿಜ. ಅದು ಆ ಜನರ ಔನ್ನತ್ಯ ಅಷ್ಟೆ. ಹಳ್ಳಿಗಳನ್ನು ಜಾತಿ ಅಸಮಾನತೆಯ ಕೂಪಗಳೆಂದು ಕರೆದ ಅಂಬೇಡ್ಕರ್‌ ಅವರ ಮಾತು ಮತ್ತೊಂದು ರೂಪದಲ್ಲಿ ಈಗ ಸಾಬೀತಾಗಿದೆ. ತಾರತಮ್ಯ ನಿರ್ಮೂಲನೆಗೆ ಸಂವಿಧಾನ ಬಳಸಿದ ವರವೊಂದು, ಜಾತಿ ಮತ್ತು ಲಂಚ ಹುಲುಸಾಗಿ ಬೆಳೆಯಲು ಸಹಕರಿಸಿ ಶಾಪವಾದ ಬಗೆ ಅಸದೃಶ, ಅಸಹ್ಯ.

ಈಗ ಪಿಡಿಒಗಳು ಅಧಿಕಾರ ಪಡೆದು ಲಂಚದ ಸ್ವರೂಪ ಬದಲಾದರೂ ಅವರು ಅವಾಂತರ ಮಾಡಿಕೊಂಡರೆ ಜಾತಿ, ರಾಜಕಾರಣ ಯಾವುದೂ ನೆರವಿಗೆ ಬರದಿರಬಹುದು. ಅಮಾನತು ಆಗಬಹುದು, ನೌಕರಿ ಹೋಗಬಹುದು ಎಂಬ ಆಡಳಿತಾತ್ಮಕ ಭಯವಾದರೂ ಅವರಿಗೆ ಕಿಂಚಿತ್ ಇದ್ದೀತು. ಕುರುಡು ಕಣ್ಣಿಗಿಂತ ಮೆಳ್ಳಗಣ್ಣು ಒಳಿತು.

ಕೆ.ಪುರುಷೋತ್ತಮ ರೆಡ್ಡಿ,ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT