ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಕಾಣುವುದಕ್ಕೆ ಬೇಕು ತೆರೆದ ಮನಸ್ಸು

Last Updated 6 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಕನಕದಾಸರು ಬೀರಪ್ಪ–ಬಚ್ಚಮ್ಮ ಎಂಬುವರ ಮಗ ಎಂದು ಬರೆಯಲಾಗಿದೆ (ಲಿಂಗದಹಳ್ಳಿ ಹಾಲಪ್ಪ, ಪ್ರ.ವಾ., ಚರ್ಚೆ, ನ.30). ಇದಕ್ಕೆ ಯಾವ ಶಾಸನ ಅಥವಾ ಸಾಹಿತ್ಯಕೃತಿಯಲ್ಲಿ ಆಧಾರವಿದೆ? ಅದು ಇರುವುದು 1912ರಲ್ಲಿ ಬರೆಯಲಾದ ‘ಕನಕದಾಸರ ಚರಿತ್ರೆ’ ಎಂಬ ಪದ್ಯಕೃತಿಯಲ್ಲಿ. ಕನಕದಾಸರು ಕುರುಬರೆನ್ನುವುದಕ್ಕೆ ಹುಟ್ಟಿದ ಕೃತಿ ಅದು. ಬರಹದಲ್ಲಿ ಹೆಸರಿಸಿರುವ ಕೈಫಿಯತ್ತುಗಳಲ್ಲಿ ಕನಕದಾಸರಿಗೆ ಸಂಬಂಧಿಸಿದ ಯಾವ ವಿಚಾರವೂ ಬರುವುದಿಲ್ಲ. ಹಾಗೆಯೇ ಉಲ್ಲೇಖಿಸಿರುವ ಇಂಗ್ಲಿಷಿನ ಒಂದು ಹೇಳಿಕೆ ಕೂಡಾ ಕನಕದಾಸರಿಗೆ ಸಂಬಂಧಿಸಿದ್ದಲ್ಲ.

ಸ್ವತಃ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ತಮ್ಮನ್ನು ‘ಕೀಳುದಾಸ ಕುರುಬದಾಸ’ ಎಂದು ಕರೆದುಕೊಂಡಿರುವುದಾಗಿ ಪ್ರಸ್ತಾಪಿಸಲಾಗಿದೆ. ಆದರೆ ಅದೇ ಕೀರ್ತನೆಯಲ್ಲೇ ಕನಕದಾಸರು ತಮ್ಮನ್ನು ‘ಕುಲವಿಲ್ಲದ ದಾಸ ಕುರುಬದಾಸ’... ‘ಹೊಲೆದಾಸ ಮಾದಿಗದಾಸ’ ಎಂತಲೂ ಕರೆದುಕೊಂಡಿರುವುದನ್ನು ಮುಚ್ಚಿಡುತ್ತಾರೆ. ಆ ಮಾತುಗಳೆಲ್ಲ ಸಾಂಕೇತಿಕ. ಅವೆಲ್ಲ ಅವರು ಅಹಂನಿರಸನಕ್ಕಾಗಿ ತಾನು ಅತಿಸಾಮಾನ್ಯ, ಭಗವಂತನ ದಾಸ ಎಂದು ಹೇಳಿಕೊಂಡಿರುವ ಮಾತುಗಳು, ಅಷ್ಟೆ.

‘ನಾವು ಕುರುಬರು| ನಮ್ಮ ದೇವರೊ ಬೀರಯ್ಯ’ ಎಂಬ ಕನಕದಾಸರ ಕೀರ್ತನೆಯನ್ನು ಉಲ್ಲೇಖಿಸಲಾಗಿದೆ. ಆದರೆ ಅಲ್ಲಿ ಕೊಟ್ಟಿಲ್ಲದಿರುವ ಸಾಲುಗಳನ್ನೂ ನೋಡಿ: ‘ಕಾವ ನಮ್ಮಜ್ಜ ನರಕುರಿ ಹಿಂಡುಗಳ’ ‘ಅಷ್ಟಮದ ಮತ್ಸರಗಳೆಂತೆಂಬ ಟಗರುಗಳು| ದೃಷ್ಟಿ ಜೀವಾತ್ಮನೆಂಬೊ ಆಡು|| ಸೃಷ್ಟಿ ಪ್ರಸಿದ್ಧವೆಂತೆಂಬುವಾ ಹೋತಗಳು| ಕಟ್ಟಿ ಕೋಲಿನಲಿ ಇರುತಿರುವ ನಮ್ಮಜ್ಜ|| ಜಲಜಾಕ್ಷ ಕಾಗಿನೆಲೆಯಾದಿಕೇಶವನ ಮನ| ವೊಲಿಸಿ ಭಜಿಸದವನು ಹುಚ್ಚುಕುರುಬ’|| (ಕನಕದಾಸರ ಕೀರ್ತನೆಗಳು; ಸಂ: ಬಿ. ಶಿವಮೂರ್ತಿ ಶಾಸ್ತ್ರೀ ಮತ್ತು ಡಾ. ಕೆ. ಎಂ. ಕೃಷ್ಣರಾವ್, ಕೀ.ಸಂ. 138 ). ಇದು ಕೂಡಾ ಸಾಂಕೇತಿಕ.

ಕನಕದಾಸರು ಕುರುಬರೆನ್ನಲು ವ್ಯಾಸರಾಯರ ಕೋಣನ ಮಂತ್ರದ ಕಥೆ ಒಂದು ಆಧಾರವೇ ಅಲ್ಲ. ಅವರು ಕುರುಬರೆಂದು ಕರೆದುಕೊಂಡಿರುವ ಉಗಾಭೋಗ ಪ್ರಕ್ಷಿಪ್ತ ಎಂಬುದನ್ನು ಈ ಹಿಂದೆಯೇ ಪ್ರತಿಪಾದಿಸಲಾಗಿದೆ.

ಸಾವಿರಾರು ವರ್ಷದ ಪ್ರಾಚೀನ ಸಾಂಸ್ಕೃತಿಕ ಇತಿಹಾಸ ಇರುವುದೆನ್ನುವ ಕುರುಬ ಜನಾಂಗ ತನ್ನ ನಿಜವಾದ ಮೂಲಗುರುವಾದ ರೇವಣಸಿದ್ಧರನ್ನು ಬಿಟ್ಟು ಕನಕದಾಸರನ್ನು ತಮ್ಮ ಕುಲಗುರುಗಳೆಂದು ಭಾವಿಸಿಕೊಂಡಿರುವುದು ವಿಪರ್ಯಾಸ. ಕನಕದಾಸರು ರೇವಣಸಿದ್ಧರಂತೆ ಕುರುಬ ಜನಾಂಗದ ಮೂಲಗುರುಗಳಲ್ಲ ಎಂದುನಾನು ಮತ್ತು ಕಲಬುರ್ಗಿ ಹೇಳಿರುವುದನ್ನು ‘ಅಪಹರಣ ಹುನ್ನಾರ’ ಎಂದು ಬರೆಯಲಾಗಿದ್ದು, ಅನಗತ್ಯವಾಗಿ ‘ಲಿಂಗಾಯತಸ್ವತಂತ್ರ ಧರ್ಮ’ ಎನ್ನುವ ವಾದದ ಕಡೆಗೆ ತಿರುಗಿಸಲು ಯತ್ನಿಸಲಾಗಿದೆ. ಸತ್ಯ ಕಾಣುವುದಕ್ಕೆ ಬೇಕಾಗಿರುವುದು ಜನಾಂಗೀಯ ತಜ್ಞತೆ, ಭಾಷಾತಜ್ಞತೆ ಅಲ್ಲ, ಪೂರ್ವಗ್ರಹಗಳಿಲ್ಲದ ತೆರೆದ ಮನಸ್ಸು.

–ಡಾ. ಬಿ. ರಾಜಶೇಖರಪ್ಪ,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT