ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾಧ್ಯಮ–ಇಂಗ್ಲಿಷ್ ಭಾಷೆ

Last Updated 14 ಆಗಸ್ಟ್ 2019, 18:07 IST
ಅಕ್ಷರ ಗಾತ್ರ

‘ರಾಜ್ಯದಲ್ಲಿ ಸಾವಿರಾರು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಕನ್ನಡದ ಅವನತಿಗೆ ಸರ್ಕಾರವೇ ಹೊಣೆ ಹಾಗೂ ಶಿಕ್ಷಣ ವ್ಯವಸ್ಥೆ ಒಂದು ಉದ್ಯಮವಾಗಿದೆಯಾದರೂ ಯಾರೊಬ್ಬರೂ ಧ್ವನಿ ಎತ್ತದಿರುವುದು ವಿಪರ್ಯಾಸ’ ಎಂದು ಎಸ್.ಜಿ. ಸಿದ್ಧರಾಮಯ್ಯ ಹೇಳಿದ್ದಾರೆ (ಪ್ರ.ವಾ., ಆ. 12).

ಪ್ರಾಥಮಿಕ ಶಿಕ್ಷಣದ ಸಂಪೂರ್ಣ ಖರ್ಚನ್ನು ಸರ್ಕಾರವೇ ಭರಿಸಬೇಕು ಎಂದು ನಾನು ಪ್ರತಿಪಾದಿಸುತ್ತಾ ಬಂದಿದ್ದೇನೆ. ಸುಮಾರು 25 ವರ್ಷಗಳಿಂದಲೂ ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿಗಳು, ವಿಷಯ ತಜ್ಞರು, ಕನ್ನಡದ ಅಭಿಮಾನಿಗಳು, ಕನ್ನಡ ಪತ್ರಿಕೆಗಳು ಈ ವಿಷಯಗಳ ಕುರಿತು ಧ್ವನಿ ಎತ್ತಿವೆ. ಆದರೂ ಯಾವ ಧ್ವನಿಗೂ ಮನ್ನಣೆ ಸಿಗಲಿಲ್ಲವೇಕೆ?

ಬಹುತೇಕ ಪೋಷಕರು ಇಂಗ್ಲಿಷ್ ಮಾಧ್ಯಮವನ್ನು ಬಯಸಲು ಕಾರಣಗಳೇನು? ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಕಾಂಕ್ಷೆ, ಆತಂಕ, ಅನುಮಾನಗಳನ್ನು ನಿವಾರಿಸುವ ವಾತಾವರಣ ಕಲ್ಪಿಸುವಲ್ಲಿ ನಾವೆಲ್ಲರೂ ವಿಫಲರಾಗಿ ದ್ದೇವೆ. ಎಷ್ಟೇ ಅಡಚಣೆ, ತೊಡಕುಗಳಿದ್ದರೂ ಆ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರೆ ಸರ್ಕಾರಗಳು ಮತ ಗಳಿಕೆಯ ದೃಷ್ಟಿಯಿಂದ ಅಥವಾ ಶಾಸಕರ ಒತ್ತಡದಿಂದ ಹೊರಬರುವುದು ಸಾಧ್ಯವಿತ್ತು.

ಇಂಗ್ಲಿಷ್ ಕಲಿಕೆ ಕುರಿತು ಗ್ರಾಮೀಣ ಭಾಗದ ಪೋಷಕರು– ವಿದ್ಯಾರ್ಥಿಗಳ ಆಕಾಂಕ್ಷೆ ಕುರಿತು
ಎಚ್‌.ಡಿ. ಕುಮಾರಸ್ವಾಮಿ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ, ಅಂತಹ ಆಕಾಂಕ್ಷೆಯ ಹಿಂದಿರುವ ನಿರೀಕ್ಷೆಗಳನ್ನು ತಿಳಿಯಲು ಪ್ರಯತ್ನಿಸದೆ, ಅದು ಇಂಗ್ಲಿಷ್ ಬಗ್ಗೆ ಇದ್ದ ಕೇವಲ ‘ವ್ಯಾಮೋಹ’ ಎಂದು ಬಣ್ಣಿಸಿದಸಾಹಿತಿ ಗಳ ಉದಾಸೀನದ ಪರಿಣಾಮ ಇಂದಿನ ‘ಸರ್ಕಾರಿ ಕಾನ್ವೆಂಟ್’ಗಳಿಗೆ ದಾರಿ ತೋರಿಸಿದೆ. ಹಾಗೇ, ಯಾವುದೇ ರಾಜಕೀಯ ಪಕ್ಷಕ್ಕೂ ಇಂಗ್ಲಿಷ್ ಕಲಿಕೆಯ ಜೊತೆಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದಂತಹ ಮಹತ್ವದ ವಿಷಯವು ಮಂಥನಕ್ಕೆ ಅರ್ಹವಾದುದು ಎಂದು ಅನಿಸಲೇ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಪ್ರಾಧಿಕಾರ, ಆಯೋಗ, ವಿವಿಧ ಮಂಡಳಿಗಳ ಅಧ್ಯಕ್ಷರು, ಸದಸ್ಯರು ರಾಜೀನಾಮೆ ಕೊಟ್ಟಿದ್ದರೂ ಅದೊಂದು ನೈತಿಕತೆಯ ಸಂಕೇತಮಾತ್ರವಾಗಿರುತ್ತಿತ್ತು.

ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಣಾಳಿಕೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮಾತೂ ಇರಲಿಲ್ಲ. ಜೆಡಿಎಸ್ ‘ಸ್ಪೋಕನ್ ಇಂಗ್ಲಿಷ್ ಕೇಂದ್ರ’ಗಳನ್ನು ಅಸ್ತಿತ್ವಕ್ಕೆ ತರುವ ಆಶ್ವಾಸನೆ ಕೊಟ್ಟಿತ್ತು. ಅದು ಸ್ವಾಗತಾರ್ಹ ಕೂಡ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಈ ಮಹತ್ವದ ವಿಷಯ ಚರ್ಚೆಯಾಗಿತ್ತೇ? ಸಮಿತಿಯ ನಿಲುವು ಏನಿತ್ತು? ಈಗಲಾದರೂ ಅದನ್ನು ಬಹಿರಂಗಪಡಿಸಬಹುದಲ್ಲವೇ?

ಪ್ರೊ. ಬಿ.ಕೆ.ಚಂದ್ರಶೇಖರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT