ಬಜೆಟ್ ಜಿಂಗಾಲಾಲ...

‘ಇವತ್ತು ನಮ್ಮ ಲೇಡೀಸ್ ಕ್ಲಬ್ನಲ್ಲಿ ಒಂದಷ್ಟು ಹೊಸ ಠರಾವುಗಳನ್ನು ಹೊರಡಿಸಿಯೇಬಿಟ್ವಿ’.
ಮನೆಯೊಳಗೇ ಕಾಲಿಡುತ್ತಲೇ ನನ್ನವಳು ಸುದ್ದಿ ಕೊಟ್ಟಳು.
‘ವೆರಿ ಗುಡ್, ಅದರಲ್ಲಿ ನಿನ್ನ ಪಾತ್ರವೇ ಹೆಚ್ಚಿರುತ್ತೆ’.
‘ಹೌದೂರೀ’ ಮುಖವರಳಿಸಿದಳು.
‘ನಿಮ್ಮ ಅಧ್ಯಕ್ಷರು ರಬ್ಬರ್ ಸ್ಟ್ಯಾಂಪ್ ಅಲ್ವೆ’ ಮಾತು ಜಾರಿತ್ತು. ಕೆಕ್ಕರಿಸಿದಳು.
ನಾನು ಹೆದರಿ, ‘ಅಲ್ಲ, ಮಾತಿಗೆ ಹೇಳಿದೆ. ವಯಸ್ಸಾದವರು ಅಧ್ಯಕ್ಷರಾಗುವ ಬದಲು ಯಂಗ್ ಆಗಿರೋ ನಿನ್ನಂಥವರು ಆ ಹುದ್ದೇನ ಅಲಂಕರಿಸಬೇಕಿತ್ತು’ ಎಂದು ಅವಳ ಮೂಡ್ ಕೆಡದಂತೆ ಜಾಗ್ರತೆ ವಹಿಸಿದೆ.
‘ಬೇರೆ ಏನಿರುತ್ತೆ? ಮಹಿಳೆಯರು ಇನ್ನಷ್ಟು ಹುರುಪು, ಉತ್ಸಾಹದಿಂದ ಇರೋಕ್ಕೆ ಮಾರ್ಗೋಪಾಯಗಳನ್ನು ಹುಡುಕಿರ್ತೀರಿ’.
‘ನಿಜ, ನಮ್ಮ ಅರ್ನಿಂಗ್ ಕೆಪಾಸಿಟಿ, ಉಳಿತಾಯದ ಯೋಜನೆಗಳ ಕುರಿತು ಚರ್ಚೆ ಮಾಡಿದ್ವಿ’.
‘ಓ ನಿಮ್ಮ ಕ್ಲಬ್ನ ಆಯ-ವ್ಯಯ ಪಟ್ಟಿ ಮಂಡನೆ ಆಯ್ತಾ?’
‘ಆಗಿದ್ದಷ್ಟೇ ಅಲ್ಲ, ವೋಟಿಗೆ ಹಾಕಿದಾಗ ಎಲ್ಲದಕ್ಕೂ ಅನುಮೋದನೆ ಸಿಕ್ಕಿಬಿಡ್ತು’.
‘ಭಲಾ, ಒಮ್ಮತದ ಒಪ್ಪಿಗೆ ಅನ್ನು...’
‘ಹೇಗೂ ಈ ಬಜೆಟ್ನಲ್ಲಿ ತೆರಿಗೆ ವಿನಾಯಿತಿ ಅನೌನ್ಸ್ ಆಗಿದೆಯಲ್ಲ, ಐದು ಲಕ್ಷದವರೆಗೆ?’
‘ಹೌದು, ನಮ್ಮಂಥ ಮಧ್ಯಮ ವರ್ಗದವರಿಗೆ ಈ ಬಜೆಟ್ ಖುಷಿಯಿಂದ ಕುಪ್ಪಳಿಸುವಂತೆ ಮಾಡಿದೆ’ ಮಗಳು ಜಿಂಗಾಲಾಲ ಹಾಡಿದಳು.
‘ಅದಕ್ಕೇನಂತೆ’ ಅಂದೆ. ಎಲ್ಲೋ ಹೊಡೀತಿದೆ ಅನ್ನಿಸಿತು.
‘ಮನೆ ಗಂಡಸರು ಇನ್ನೂ ಎರಡೂವರೆ ಲಕ್ಷದವರೆಗಿನ ಮೊತ್ತಕ್ಕೆ ತೆರಿಗೆ ಉಳಿಸಲು ಅವಕಾಶವಲ್ವೆ? ಅದನ್ನು ನಾವು ಸೀರೆ, ಚಿನ್ನ- ಬೆಳ್ಳಿ ಆಭರಣಗಳಲ್ಲಿ ಹೇಗೆಲ್ಲಾ ಇನ್ವೆಸ್ಟ್ ಮಾಡಬಹುದಲ್ವೆ! ಇದರಿಂದ ಸಹಜವಾಗಿ ಕುಟುಂಬದ ಸುಖ, ಶಾಂತಿ, ನೆಮ್ಮದಿ ಹೆಚ್ಚಾಗುತ್ತದೆ. ನಮ್ಮ ಮನೆಯಲ್ಲಿ ಸಹಕಾರವಿದೆ ಎಂದು ಹೇಳ್ಬಿಟ್ಟೆ. ನಾ ಹೇಳಿದ್ದು ಸರಿ ತಾನೆ?’
ಬಲವಂತದ ನಗೆ ನಕ್ಕೆ, ‘ಸರಿಯೇ?’ ಎಂದು ಮರುಪ್ರಶ್ನಿಸಲೂ ಧೈರ್ಯ ಸಾಲದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.