ಸೋಮವಾರ, ಡಿಸೆಂಬರ್ 9, 2019
20 °C

ಬಿಜೆಪಿ ಸನಿಹಕ್ಕೆ ಸರಿಯುತ್ತಿರುವುದರ ಮರ್ಮ...

Published:
Updated:

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ‘ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ’ ಎಂದು ಘೋಷಿಸಿಬಿಟ್ಟ ಮೇಲೆ (ಪ್ರ.ವಾ., ನ.7) ಆ ಪಕ್ಷದ ಮಟ್ಟಿಗೆ ಎರಡನೇ ಮಾತೇ ಇರುವ ಹಾಗಿಲ್ಲ. ನಿನ್ನೆ ಮೊನ್ನೆಯವರೆಗೆ ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರೇ ಗೆಳೆಯರು. 2006ರಲ್ಲಿ ಬಿಜೆಪಿ ಜೊತೆಗಿನ ಜೆಡಿಎಸ್ ಸಖ್ಯದ ಕುರಿತಾಗಿ ಅಸಮಾಧಾನ ಇತ್ತೆಂದು ಸ್ಪಷ್ಟವಾಗಿದ್ದರೂ ಮಗ ಮುಖ್ಯಮಂತ್ರಿ ಆಗುವವರೆಗೆ ಆ ಅಸಮಾಧಾನ ಮಗುಮ್ಮಾಗಿ ಉಳಿಯುವಂತೆ ಕಾಪಾಡಿಕೊಂಡಿದ್ದರು. ಮಗನ 20 ತಿಂಗಳ ರಾಜ್ಯಭಾರ ಮುಗಿದ ಕೂಡಲೇ ಅವರಲ್ಲಿ ಜಾತ್ಯತೀತತೆಯ ಅಗ್ನಿಜ್ವಾಲೆ ಸ್ಫೋಟಗೊಂಡಿತು.

ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪನೆಗೆ ಅಡ್ಡಗಾಲು ಹಾಕುವ ಮೂಲಕ ದೇವೇಗೌಡರ ಜಾತ್ಯತೀತತೆಯ ಬದ್ಧತೆ ಸ್ವಚ್ಛವಾಗಿ ಉಳಿಯಿತು. ಪ್ರಧಾನಿ ಪಟ್ಟದಿಂದ ಕೆಳಗಿಳಿಯಬೇಕಾದ ಸಂದರ್ಭ ಸೃಷ್ಟಿಯಾದಾಗಿನಿಂದ ಇಂದಿನವರೆಗೂ ದೇವೇಗೌಡರು ಕಾಂಗ್ರೆಸ್ಸನ್ನು ಕ್ಷಮಿಸಿಲ್ಲ. ಕಾಂಗ್ರೆಸ್ ಕುರಿತಾದ ಅವರ ಹಗೆತನ, ಗೆಳೆತನಗಳು ಮಗನ ಭವಿಷ್ಯವನ್ನು ಅವಲಂಬಿಸಿವೆ.

ಜಾತ್ಯತೀತ ಪಕ್ಷದ ಅನಭಿಷಿಕ್ತ ನಾಯಕರಾದ ಗೌಡರು ಈಗ ಬಿಜೆಪಿಗೆ ಹತ್ತಿರ ಹತ್ತಿರ ಚಲಿಸುತ್ತಿದ್ದಾರೆ. ಮಗನ ಅಧಿಕಾರವನ್ನು ಕಸಿದುಕೊಂಡ ಕಾಂಗ್ರೆಸ್ಸನ್ನು ದಂಡಿಸುವುದಕ್ಕೆ ಹೊಸ ಅಸ್ತ್ರ ಕೈಗೆ ಸಿಕ್ಕಂತೆ ಸಂಭ್ರಮಿಸುತ್ತಿದ್ದಾರೆ. ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ವ್ಯತಿರಿಕ್ತವಾದರೆ ರಾಜ್ಯ ಸರ್ಕಾರಕ್ಕೆ ಅಪಾಯವಿದೆ ಎಂದು ತಿಳಿದೇ, ಗೌಡರು ಮತ್ತು ಅವರ ಮಗ ಬಿಜೆಪಿ ಹತ್ತಿರ ಸರಿಯುತ್ತ ‘ಕಾಲಕಾಲಕ್ಕೆ ಏನು ಆಗಬೇಕೋ ಅದು ಆಗುತ್ತದೆ’ ಎಂಬ ನುಡಿಮುತ್ತನ್ನು ಸುರಿಸಿ ತೃಪ್ತರಾಗುತ್ತಿರುವುದು.

ವಯಸ್ಸಾದಂತೆ ಕೆಲವರು ಗಳಿಸುವುದು ವಯಸ್ಸನ್ನು ಮಾತ್ರ. ವಿವೇಕವನ್ನೂ ಅಲ್ಲ, ವಿನಯವನ್ನೂ ಅಲ್ಲ. ಹೃದಯಹೀನವಾಗುತ್ತಿರುವ ನಮ್ಮ ವ್ಯವಸ್ಥೆಯನ್ನು ಇನ್ನಾದರೂ ನಾವು ಜೀವಂತಗೊಳಿಸಬೇಕಾಗಿದೆ.

–ಪ್ರೊ. ಜಿ.ಕೆ.ಗೋವಿಂದರಾವ್, ಬೆಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು