ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಬರಹ ಬೇರೆ, ಉಚ್ಚಾರ ಬೇರೆ ಎನ್ನುವುದು ವಿತಂಡವಾದ

Published 31 ಅಕ್ಟೋಬರ್ 2023, 23:32 IST
Last Updated 31 ಅಕ್ಟೋಬರ್ 2023, 23:32 IST
ಅಕ್ಷರ ಗಾತ್ರ

ಬರಹ ಬೇರೆ, ಉಚ್ಚಾರ ಬೇರೆ ಎನ್ನುವುದು ವಿತಂಡವಾದ

ಮೈಸೂರು ದಸರಾದ ಸಂದರ್ಭದಲ್ಲಿ ನಿರೂಪಕರು ಹ-ಕಾರಕ್ಕೆ ಸ್ವರಪ್ರಯೋಗ ಮಾಡಿದುದಕ್ಕೆ ಜಗದೀಶ ನೂಲಿನವರ ಎಂಬುವರು ಬೇಸರ ವ್ಯಕ್ತಪಡಿಸಿದ್ದಕ್ಕೆ (ವಾ.ವಾ., ಅ.28), ಸಿ.ಪಿ. ನಾಗರಾಜ ಅವರು ಸಮರ್ಥನೆ ಕೊಟ್ಟು ಅದು ಆಡುರೂಪದಲ್ಲಿ ತಪ್ಪಲ್ಲ ಎಂದು ಪ್ರತಿಪಾದಿಸಿದ್ದಾರೆ (ವಾ.ವಾ., ಅ.30). ನಿರೂಪಕರು ಯಾವುದೇ ಶಿಕ್ಷಣವಿಲ್ಲದೆ ಹಳ್ಳಿಯಲ್ಲಿ ಇದ್ದವರೇ? ಅಥವಾ ಶಿಕ್ಷಣ ಪಡೆದವರಾದರೂ ಹಳ್ಳಿಯ ಉಚ್ಚಾರ ಬಿಡದವರೇ? ಇದರ ಬಗ್ಗೆ ಪ್ರತಿಕ್ರಿಯೆಕಾರರು ಏನನ್ನೂ ಹೇಳಿರುವುದಿಲ್ಲ. ಅವರನ್ನು ಸಮರ್ಥಿಸುವ ಇವರಾದರೂ ಶಿಕ್ಷಣ ಪಡೆದವರಲ್ಲವೇ? ಶಿಕ್ಷಣಾವಧಿಯಲ್ಲಿ ಇವರು ಕಲಿತದ್ದಾದರೂ ಏನು? ಸರಿ-ತಪ್ಪುಗಳನ್ನು ಇವರಿಗೆ ಆಗ ಹೇಳಿಕೊಟ್ಟಿರಲಿಲ್ಲವೇ? ಅನೇಕ ವರ್ಷ ಶಾಲಾಶಿಕ್ಷಣ ಪಡೆದವರು ತಪ್ಪನ್ನೇ ಉಚ್ಚಾರ ಮಾಡುವುದಾದರೆ, ಅವರದು ಶಿಕ್ಷಣವಾದರೂ ಹೇಗಾದೀತು? ಅದಕ್ಕೆ ಬೆಲೆಯಾದರೂ ಏನು? ಸರಿ-ತಪ್ಪುಗಳಿಗೆ ಅರ್ಥವಾದರೂ ಎಲ್ಲಿ? ಅವುಗಳ ನಡುವೆ ಗೆರೆಯೇ ಇಲ್ಲವಾಗುತ್ತದೆ.

ಬರೆಯುವುದೇ ಒಂದು ಉಚ್ಚರಿಸುವುದೇ ಒಂದು ಆದರೆ, ಅರ್ಥಪಲ್ಲಟದಂತಹ ಅನರ್ಥಗಳೂ ಘಟಿಸಬಹುದು. ಉದಾಹರಣೆಗೆ, ‘ಶಂಕರ’ ಎಂದು ಬರೆದಿರುವುದನ್ನು ‘ಸಂಕರ’ ಎಂದು ಉಚ್ಚರಿಸಿದರೆ ಎಂಥ ವೈಪರೀತ್ಯ ಆಗಬಹುದು ಎಂಬುದನ್ನು ಬಲ್ಲವರಿಗೆ ಹೇಳಬೇಕಾಗಿಲ್ಲ. ಹಾಗಾಗಿ ಏನನ್ನೋ ಬರೆದು ಏನನ್ನೋ ಉಚ್ಚರಿಸಬಹುದು ಎಂಬುದಕ್ಕೆ ಯಾವ ಸೈದ್ಧಾಂತಿಕ ನೆಲೆಗಟ್ಟೂ ಇರುವುದಿಲ್ಲ. ಅದು ಕೇವಲ ವಿತಂಡವಾದವಾಗುತ್ತದೆ, ಅಷ್ಟೆ!

–ಬಿ. ರಾಜಶೇಖರಪ್ಪ, ಪಿ. ಯಶೋದಾ, ಚಿತ್ರದುರ್ಗ

____________________________________________

ಸಮೃದ್ಧಿಯ ಜೊತೆಗೆ ಸಂತೃಪ್ತಿಯೂ ಬೇಕು

ಇನ್ಫೊಸಿಸ್‌ ಸಹಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರ ಹೇಳಿಕೆ ಕುರಿತು ‘ಆಳ-ಅಗಲ’ದಲ್ಲಿ (ಪ್ರ.ವಾ., ಅ. 31) ಚರ್ಚಿಸಿರುವುದು ಸ್ವಾಗತಾರ್ಹ. ಸಮಕಾಲೀನ ಸಂಗತಿಗಳನ್ನು ಹೀಗೆ ಚರ್ಚೆಗೆ ತಂದು ಎಳೆ ಎಳೆಯಾಗಿ ಬಿಡಿಸಿಡುವುದು ಇಂದಿನ ಅಗತ್ಯ. 

ಯುವಜನರಿಂದ ತುಂಬಿ ತುಳುಕುತ್ತಿರುವ ನಮ್ಮ ದೇಶಕ್ಕೆ ವಾರಕ್ಕೆ 70 ಗಂಟೆ ದುಡಿಯುವ ಅನಿವಾರ್ಯ ಇಲ್ಲ. ಬದಲಿಗೆ ಉದ್ಯೋಗವಿಲ್ಲದೆ ದಿನ ದೂಡುತ್ತಿರುವ ಅದೆಷ್ಟೋ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದರೆ ಉತ್ಪಾದನೆ ಹೆಚ್ಚುತ್ತದೆ, ಆರ್ಥಿಕ ಸಮಾನತೆಯೂ ಸಾಧ್ಯವಾಗುತ್ತದೆ. ದೇಶದ ಜನರು ಸಮೃದ್ಧಿ ಮತ್ತು ಸಂತೃಪ್ತಿಯಿಂದ ಬದುಕಲು ಅನುವಾಗುತ್ತದೆ. ಒಂದುಕಡೆ ವಾರಕ್ಕೆ 70 ಗಂಟೆ ದುಡಿಸಿಕೊಳ್ಳುತ್ತ, ಇನ್ನೊಂದೆಡೆ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳಿಸುವ ಕಂಪನಿಗಳು ಎಷ್ಟಿಲ್ಲ? ದೇಶವೆಂದರೆ ಅಲ್ಲಿನ ಜನರೇ ಹೊರತು ಭೂಪ್ರದೇಶ ಅಥವಾ ಗಡಿಗಳಲ್ಲ.

–ಎನ್.ಎಂ. ಕುಲಕರ್ಣಿ, ಹೆಗ್ಗೋಡು

____________________________________________

ಮಹಿಳೆಯರ ದಿಟ್ಟ ನಡೆ ಅಭಿನಂದನಾರ್ಹ

ಬೆಂಗಳೂರಿನ ‘ಚಿಕ್ಕಪೇಟೆ ಸರ್ಕಾರಿ ಶಾಲೆಗೇ ದಕ್ಕಿದ ಸ್ವತ್ತು’ (ಪ್ರ.ವಾ., ಅ.31) ಸುದ್ದಿ ಓದಿ ಸಂತಸವಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಎಂ.ಶೀಲಾರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ಗಿರಿಜಮ್ಮ ಅವರ ಪ್ರಯತ್ನ ಹಾಗೂ ಸಕಾಲದಲ್ಲಿ ಈ ಕುರಿತು ಸುದ್ದಿ ಪ್ರಕಟಿಸಿ ಸರ್ಕಾರದ ಕಣ್ಣು ತೆರೆಸಿದ ‘ಪ್ರಜಾವಾಣಿ’ ಪತ್ರಿಕೆ ಅಭಿನಂದನೆಗೆ ಅರ್ಹ.

ಚಿಕ್ಕಪೇಟೆಯಲ್ಲಿ ಜಮೀನಿಗೆ ಚಿನ್ನಕ್ಕಿಂತ ಅಧಿಕ ಬೆಲೆ ಇದೆ. ಮುಖ್ಯಶಿಕ್ಷಕಿಯ ಸಮಯಪ್ರಜ್ಞೆಯಿಂದ ಈ ಸ್ವತ್ತು ಶಾಲೆಗೇ ದಕ್ಕಿದೆ. ಇಲ್ಲದೇ ಹೋಗಿದ್ದರೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಕೈತಪ್ಪಿ ಹೋಗುತ್ತಿತ್ತು. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಇವತ್ತಿನ ತುರ್ತು. ಸರ್ಕಾರಿ ಶಾಲೆಗಳ ಸಬಲೀಕರಣದ ದಿಸೆಯಲ್ಲಿ ಪ್ರತಿ ಪ್ರಯತ್ನವೂ ಮೆಚ್ಚುವಂತಹ ಕೆಲಸ. 

–ಎಂ.ಜಿ.ರಂಗಸ್ವಾಮಿ, ಹಿರಿಯೂರು 

____________________________________________

ಪಾರಿಭಾಷಿಕ ಪದ: ಮಡಿವಂತಿಕೆ ಬೇಡ

‘ಕನ್ನಡವೂ ವಿಜ್ಞಾನ ಸಂವಹನವೂ’ ಲೇಖನದಲ್ಲಿ ಯೋಗಾನಂದ (ಸಂಗತ, ಅ.31) ಹೇಳಿರುವ ವಿಚಾರಗಳು ಮನನಯೋಗ್ಯ. ಇಂಗ್ಲಿಷ್‌ನ ಪಾರುಪತ್ಯದಿಂದ ಕನ್ನಡವನ್ನು ಬಿಡುಗಡೆ ಮಾಡುವುದಕ್ಕೆ ಬಹುಭಾಷೆಯ ಆಯ್ಕೆಯೇ ಸರಳ ಹಾಗೂ ಸುಲಭವಾದ ಪರಿಹಾರ. ಪಾರಿಭಾಷಿಕ ಪದಗಳನ್ನು ಅವು ಇದ್ದಹಾಗೇ ಸ್ವೀಕರಿಸುವುದು ಉತ್ತಮ. ಕನ್ನಡದ ಹೆಸರಿನಲ್ಲಿ ಸಂಸ್ಕೃತದ ಪದಗಳನ್ನು ತುರುಕಿ ವಿದ್ಯಾರ್ಥಿಗಳಿಗೆ ಹಿಂಸೆ ಕೊಡುವುದು ಸರಿಯಲ್ಲ. ವೈಜ್ಞಾನಿಕ ಪದಗಳು ಬಹುಮಟ್ಟಿಗೆ ನಾವು ಮನೆಯಲ್ಲಿ ಬಳಸುವ ಪದಗಳಲ್ಲ. ಅವು ಹೊರಗಿನಿಂದ ಬಂದು ಹೊರಗೇ ಓಡಾಡುತ್ತವೆ. ಹೀಗಿರುವಾಗ, ಆ ಪದಗಳನ್ನು ಕನ್ನಡದ ಹೆಸರಿನಲ್ಲಿ ಸಂಸ್ಕೃತಕ್ಕೆ ಭಾಷಾಂತರಿಸುವುದು ಏಕೆ? ಸಂಸ್ಕೃತವೂ ನಮ್ಮ ಮನೆಯ ಹೊರಗಷ್ಟೇ ಓಡಾಡುವ ಭಾಷೆ. 

–ಡಾ.ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT