ರಾಜ್ಯದ ಅಂತರ್ಜಲ ಪಾತಾಳದತ್ತ ಸರಿದಿರುವುದು ಆಘಾತಕಾರಿ (ಪ್ರ.ವಾ., ಮೇ 21). ಕೆರೆ ಹೂಳು ಎತ್ತುವುದರಿಂದ ಅಂತರ್ಜಲ ಅಭಿವೃದ್ದಿಯಾಗುತ್ತದೆ ಎಂಬ ಸುದ್ದಿ ಕೇಳಿದ್ದೇವೆ. ಆದರೆ, ಅತಿಯಾಗಿ ಕೆರೆ ಹೂಳು ಎತ್ತುವುದರಿಂದ ಅಂತರ್ಜಲ ಬರಿದಾಗುತ್ತಿದೆ ಎಂಬ ವಿಚಾರ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಜ್ಜಿಗುಡ್ಡೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸಿರಿ ಸಮೃದ್ಧಿ ಬಳಗದ ರೈತರ ಸಭೆಯಲ್ಲಿ ಪ್ರಸ್ತಾಪವಾಗಿದೆ.
ರೈತರ ಸಾಂಪ್ರದಾಯಿಕ ಜ್ಞಾನದ ಒಂದು ಪೂರ್ವ ಸಿದ್ದಾಂತದ ತಾತ್ಪರ್ಯ ಹೀಗಿದೆ: ಸಾಂಪ್ರದಾಯಿಕವಾಗಿ ಕೆರೆಗಳನ್ನು ಕಟ್ಟಲಾಗಿರುವುದು ಒಂದು ಕಣಿವೆ ಅಥವಾ ಜಲಾನಯನ ಪ್ರದೇಶದ ಕೆಳಭಾಗದಲ್ಲಿ. ಕೆರೆಯಲ್ಲಿ ಹಿಂಗಿದ ನೀರು ಅಂತರ್ಜಲವಾಗಿ ಕೆರೆಯ ಹಿಂದಿನ ಕೃಷಿ ಭೂಮಿಗೆ ಸಿಗುತ್ತದೆ. ಅಲ್ಲಿ ಬೋರ್‌ವೆಲ್‍ಗಳ ಮೂಲಕ ಕೃಷಿಗೆ ಬಳಕೆಯಾಗುತ್ತದೆ. ನಂತರ ಮಳೆಗಾಲದಲ್ಲಿ ಕೆರೆ ತುಂಬುವುದರಿಂದ ಈ ಅಂತರ್ಜಲ ಮರುಪೂರಣವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೆರೆಯು ಅಂತರ್ಜಲದ ಹೊಟ್ಟೆಗೆ ಬಾಯಿಯಂತೆ ಇರುತ್ತದೆ. ಈ ಬಾಯಿಯು ನಮ್ಮ ಬಾಯಿಯಂತೆಯೇ ಮಳೆ ನೀರನ್ನು ಅಂತರ್ಜಲದ ಹೊಟ್ಟೆಗೆ ಕುಡಿಸುತ್ತದೆ. ಕೆರೆಯ ಹೂಳು ಅಂತರ್ಜಲವು ಆವಿಯಾಗದಂತೆ ತಡೆಯುವ ಗೋಡೆಯಾಗಿ ಕೆಲಸ ನಿರ್ವಹಿಸುತ್ತದೆ. ಆಳವಾಗಿ ಹೂಳು ತೆಗೆಯುವುದರಿಂದ ಈ ತಡೆಗೋಡೆಯನ್ನು ಒಡೆದು ಬಾಯಿಯನ್ನೇ ಬಗೆದಂತಾಗುತ್ತದೆ. ಬೋರ್‌ವೆಲ್‌ಗಳು ಅಂತರ್ಜಲವನ್ನು ಸಿರಿಂಜ್ ರೀತಿ ಹೀರಿದರೆ, ಆಳವಾಗಿ ಹೂಳು ತೆಗೆದ ಕೆರೆಯು ಅಂತರ್ಜಲದಿಂದ ನೇರವಾಗಿ ಆಕಾಶಕ್ಕೆ ಹಿಮ್ಮುಖ ನದಿಯನ್ನು ಸೃಷ್ಟಿಸುತ್ತದೆ.
ಆಳವಾಗಿ ಹೂಳು ತೆಗೆದಾಗ ತೇವಾಂಶ ಕಡಿಮೆಯಾಗಿ, ಕೆರೆಗಳ ಜಲಾನಯನ ಪ್ರದೇಶದಲ್ಲಿ ಮುಂಬರುವ ವರ್ಷಗಳಲ್ಲಿ ಮಳೆ ಕಡಿಮೆಯಾಗುತ್ತದೆ. ರೈತರು ಸಾಂಪ್ರದಾಯಿಕವಾಗಿ ಹೂಳು ತೆಗೆಯುತ್ತಿದ್ದ ಜ್ಞಾನವು ಇದಕ್ಕೆ ಪೂರಕವಾಗಿದೆ. ನಮ್ಮಲ್ಲಿ ಈ ಹಿಂದೆ ಕೆರೆ ಹೂಳು ತೆಗೆಯುವುದೆಂದರೆ, 1ರಿಂದ 2 ಇಂಚು ಮಣ್ಣನ್ನು ತೆಗೆದು ಹೊಲ, ತೋಟಕ್ಕೆ ಸಾಗಿಸುತ್ತಿದ್ದರೆ ವಿನಾ 10ರಿಂದ 15 ಅಡಿ ಆಳವಾಗಿ ತೆಗೆಯುತ್ತಿರಲಿಲ್ಲ. ಇದರಿಂದ ಪ್ರತಿ ವರ್ಷ ಮಳೆಯಿಂದ ಕೊಚ್ಚಿಕೊಂಡು ಬಂದ ಮೆಕ್ಕಲು ಮಣ್ಣು ಮಾತ್ರ ಹೊಲ, ತೋಟ ಸೇರುತ್ತಿತ್ತು. ಕೆರೆಯ ತಡೆಗೋಡೆಗೆ ಹಾನಿಯಾಗುತ್ತಿರಲಿಲ್ಲ. ಆಳವಾಗಿ ಹೂಳು ತೆಗೆಯುವುದು ಒಂದು ಉತ್ತಮ ಪದ್ದತಿ ಎಂಬಂತೆ ಇತ್ತೀಚೆಗೆ ಪ್ರಚಾರ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪ್ರತಿ ಹಳ್ಳಿಗೆ 2ರಿಂದ 3 ಇಟ್ಟಿಗೆ ಕಾರ್ಖಾನೆಗಳಿವೆ. ಇವು ಇಟ್ಟಿಗೆ ತಯಾರಿಕೆಗೆ ಕೆರೆ ಮಣ್ಣನ್ನು ಅವಲಂಬಿಸಿವೆ. ಕೆರೆಗಳಲ್ಲಿ 30ರಿಂದ 40 ಅಡಿ ಆಳದವರೆಗೂ ಮಣ್ಣನ್ನು ತೆಗೆಯಲಾಗಿದೆ. ಇದರ ಜೊತೆ ಹಳ್ಳದ ಸಾಲಿನಲ್ಲಿ ಕೆರೆಗಳಲ್ಲಿ ಮರಳು ಗಣಿಗಾರಿಕೆ ಎಗ್ಗಿಲ್ಲದೆ ಸಾಗಿದೆ. ಇದರಿಂದ ಪಾತಾಳದಿಂದ ಆಕಾಶಕ್ಕೆ ಹಿಮ್ಮುಖ ನದಿ ಸೃಷ್ಟಿಯಾಗಿದೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಮರಳುಗಾಡು ಸೃಷ್ಟಿಯಾಗಲಿದೆ. ಹೂಳು ತೆಗೆಯುವುದೇ ಪರಿಹಾರವೆಂದು ನಂಬಿರುವ ಜಲಾನಯನ ಮತ್ತು ನೀರಾವರಿ ಇಲಾಖೆಗಳು, ಜಲ ತಜ್ಞರು ಈ ಪೂರ್ವ ಸಿದ್ದಾಂತದ ಮೇಲೆ ಆಳವಾದ ಸಂಶೋಧನೆ ಕೈಗೊಳ್ಳಬೇಕು. ಅದಕ್ಕಿಂತ ಮೊದಲು, ಆಳವಾಗಿ ಹೂಳು ತೆಗೆದ ಕೆರೆಗಳ ಸುತ್ತಮುತ್ತ ಸಮೀಕ್ಷೆ ನಡೆಸಬೇಕು. ಕೆರೆ ನಿರ್ವಹಣೆಗೆ ಬಲವಾದ ಕಾನೂನುಗಳನ್ನು ರೂಪಿಸದೇ ಇದ್ದಲ್ಲಿ ದಿನೇ ದಿನೇ ಅಪಾಯಗಳು ಹೆಚ್ಚಾಗಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.