ಬುಧವಾರ, ಫೆಬ್ರವರಿ 1, 2023
26 °C

ಕೆಡವದಿರಿ ಗಡಿಯಲ್ಲಿನ ಪರಂಪರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗಡಿನಾಡು ಕಾಸರಗೋಡಿನಲ್ಲಿ ಕನ್ನಡಕ್ಕೆ ಕುತ್ತು’ ವಿಶೇಷ ವರದಿ (ಪ್ರ.ವಾ., ಜುಲೈ 2) ಓದಿ, ನನ್ನಂತೆ ಸಮಸ್ತ ಕನ್ನಡಿಗರು ವಿಷಾದಗೊಂಡಿದ್ದಾರೆ. ನಮ್ಮ ಮಕ್ಕಳನ್ನು ಪ್ರೀತಿಸುವುದೆಂದರೆ ನೆರೆಹೊರೆಯ ಮಕ್ಕಳನ್ನು ದ್ವೇಷಿಸುವುದಲ್ಲ, ಬದಲಾಗಿ ನಮ್ಮ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ನೆರೆಹೊರೆಯ ಮಕ್ಕಳ ಸ್ನೇಹ, ಪ್ರೀತಿ, ಸಹಕಾರ ಅತ್ಯಗತ್ಯವಾಗಿರುತ್ತವೆ.

ಬರ್ಫಿಯನ್ನು ತಯಾರಿಸುವಾಗ ಬೇಯಿಸಿದ ಪದಾರ್ಥವನ್ನು ಆರಿಸಲು ತಟ್ಟೆಯಲ್ಲಿ ಪಸರಿಸಿದ ನಂತರ, ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿದಾಗ ತಿನ್ನಲು ಸರಳವಾಗುತ್ತದೆ. ಯಾವುದೇ ದೇಶದ ಆಡಳಿತಕ್ಕಾಗಿ ಅನುಕೂಲವಾಗುವಂತೆ ಪ್ರಾಂತಗಳನ್ನು ವಿಭಜಿಸಬೇಕಾಗುತ್ತದೆ. ಆದರೆ ಈ ಪ್ರಕ್ರಿಯೆಗಾಗಿ ಗಡಿರೇಖೆಯನ್ನು ಚಾಕುವಿನಿಂದ ಗೆರೆ ಕೊರೆಯಲು ಸಾಧ್ಯವಿಲ್ಲ. ಗಡಿರೇಖೆಯ ಆಚೆ ಈಚೆ ಎರಡು ಭಾಷೆ, ಸಂಸ್ಕೃತಿಗಳಿಗೆ ಜನರು ಒಗ್ಗಿಕೊಂಡಿರುತ್ತಾರೆ. ಗಡಿಯಲ್ಲಿ ಇರುವ ಜನರನ್ನು ಮಲತಾಯಿಯಂತೆ ಕಾಣದೆ, ಅಮ್ಮ, ಚಿಕ್ಕಮ್ಮನಂತೆ ಪಾಲಿಸಬೇಕಾಗುತ್ತದೆ, ಪೋಷಿಸಬೇಕಾಗುತ್ತದೆ. ಈ ಬಗೆಯಲ್ಲಿ ಎರಡು ರಾಜ್ಯಗಳ ಆಡಳಿತಗಳು ಕೂಡಿ ಮುನ್ನಡೆಯಬೇಕಾಗುತ್ತದೆ.

ಕೇರಳವು ಸುಂದರ ನಾಡು, ಕಲೆ, ಸಂಸ್ಕೃತಿ ಪರಂಪರೆಗಳ ಬೀಡು. ಕರ್ನಾಟಕ, ಕೇರಳ ಎಂಬ ಭಾಷಾವಾರು ಪ್ರಾಂತ ರಚನೆ ಆಗುವುದಕ್ಕೂ ಬಹಳ ಹಿಂದೆಯೇ ಈ ಎರಡು ಪ್ರದೇಶಗಳ ಜನರು ತಮ್ಮ ತಮ್ಮ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಈ ದಿನಗಳಲ್ಲಿ ಕನ್ನಡದ ಮಕ್ಕಳು ವಿದ್ಯೆಗಾಗಿ, ಉದ್ಯೋಗಕ್ಕಾಗಿ ಕೇರಳದಲ್ಲಿರುತ್ತಾರೆ. ಮಲಯಾಳಿ ಮಕ್ಕಳು ಈ ಕಾರಣಕ್ಕಾಗಿ ಕರ್ನಾಟಕದಲ್ಲಿದ್ದಾರೆ. ಹೀಗೆ ಅನೇಕ ಜೀವತಂತುಗಳು ಎರಡು ರಾಜ್ಯಗಳನ್ನು ಬೆಸೆದುಕೊಂಡು ಸಮೃದ್ಧಿಯನ್ನು ಸಾಧಿಸುತ್ತಿರುವಾಗ ನಮ್ಮ ಕಾಸರಗೋಡಿನ ಊರುಗಳ ಕನ್ನಡ ಹೆಸರನ್ನು ತಿರುಚಿ ಮಲಯಾಳಿ ಭಾಷೆಗೆ ಪರಿವರ್ತನೆ ಮಾಡಲು ಹೊರಟಿರುವುದು ಅನಪೇಕ್ಷಿತ ಮತ್ತು ಅಸಂಬದ್ಧ. ಹೀಗೆ ಹೆಸರು ಬದಲಾಯಿಸಿ ಕನ್ನಡಿಗರಿಗೆ ಮಲಯಾಳಿ ದೀಕ್ಷೆ ಕೊಡುವ ನಿಷ್ಫಲ ಪ್ರಯತ್ನಗಳು ಆಗಬಾರದು. ಹಾಗೆ ಮಾಡಿದಲ್ಲಿ ಸಮಸ್ತ ಕನ್ನಡಿಗರ ಆತ್ಮಾಭಿಮಾನವನ್ನು ಕೆಣಕಿದಂತೆ ಆಗುತ್ತದೆ, ಸ್ನೇಹ ಸಂಬಂಧಗಳು ಕೆಡುತ್ತವೆ.

ನಮ್ಮ ನಮ್ಮ ಭಾಷಾಭಿಮಾನಗಳನ್ನು ತೋರಿಸಲು ಬೇಕಾದಷ್ಟು ರಚನಾತ್ಮಕ ಯೋಜನೆಗಳನ್ನು ರೂಪಿಸಬಹುದು. ಎರಡು ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಉಭಯ ಭಾಷೆ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಅಧ್ಯಯನ ಪೀಠಗಳನ್ನು ಸ್ಥಾಪಿಸಬಹುದು. ಉಭಯ ಭಾಷೆಗಳಲ್ಲಿಯ ಸಾಹಿತ್ಯ ಕೃತಿಗಳ ಅನುವಾದಕ್ಕಾಗಿ ಪ್ರತ್ಯೇಕ ಪೀಠಗಳನ್ನು ಸ್ಥಾಪಿಸುವುದರ ಮೂಲಕ ಎರಡು ರಾಜ್ಯಗಳ ಸಂಸ್ಕೃತಿಯನ್ನು, ಸಾಹಿತ್ಯವನ್ನು ಪರಿಚಯಿಸಿಕೊಳ್ಳಬಹುದು. ಎರಡು ಸಂಸ್ಕೃತಿಗಳಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಮತ್ತು ತುಲನೆಗಾಗಿ ಸಂಶೋಧನೆಗಳನ್ನು ನಡೆಸಬಹುದು. ಹೀಗೆ ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಬೆಳೆಸಬೇಕೇ ಹೊರತು ಕೆಡಿಸಬಾರದು. ಕೆಡಿಸುವುದಕ್ಕಿಂತ ಕಟ್ಟುವ ಕೆಲಸಗಳು ನಮ್ಮ ರಾಜ್ಯಗಳ ಸಂಬಂಧಗಳನ್ನು ಬೆಳೆಸಬಲ್ಲವು.

– ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು