ಗುರುವಾರ , ಮೇ 26, 2022
23 °C

DNP ವಾಚಕರ ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಚಾರಕ್ಕೆ ತೋರುವ ಕಾಳಜಿ ವಿಚಾರಕ್ಕೆ ಯಾಕಿಲ್ಲ?

ಮತ್ತೊಂದು ಅಂಬೇಡ್ಕರ್ ಜಯಂತಿ ಬಂದಿದೆ. ಆಳುವ ಪಕ್ಷ, ವಿರೋಧ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಅಂಬೇಡ್ಕರ್ ಜಯಂತಿ ಆಚರಿಸಲು ಭರದಿಂದ ತಯಾರಿ ನಡೆಸುತ್ತಿವೆ. ಸರ್ಕಾರವು ಅಂಬೇಡ್ಕರ್ ಜಯಂತಿ ಕುರಿತು‌ ಸಾಲು ಸಾಲು ಜಾಹೀರಾತು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರಬಹುದು. ಆದರೆ ಅದು ಜಯಂತಿ ಪ್ರಚಾರಕ್ಕಾಗಿ ವಹಿಸುವ ಮುತುವರ್ಜಿಯನ್ನು ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವಲ್ಲಿ ತೋರಿಸುತ್ತಿಲ್ಲ.

ಈ ಹಿಂದೆ ಅಂಬೇಡ್ಕರ್ ಅವರ ವಿಚಾರಗಳು ಜನಸಾಮಾನ್ಯರಿಗೆ ಸುಲಭವಾಗಿ ಮತ್ತು ಒಂದೇ ಕಡೆ ಸಿಗುವಂತೆ ಮಾಡಲು ‘ಅಂಬೇಡ್ಕರ್ ಸಮಗ್ರ ಬರಹ ಭಾಷಣಗಳು’ ಎಂಬ ಶೀರ್ಷಿಕೆಯಡಿ ಸುಮಾರು 22 ಕೃತಿಗಳನ್ನು ಸರ್ಕಾರದ ವತಿಯಿಂದಲೇ ಮುದ್ರಣ ಮಾಡಿ ಎಲ್ಲೆಡೆಯೂ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಲಾಗಿತ್ತು. ಇದೊಂದು ಮಾದರಿ ಕಾರ್ಯವಾಗಿತ್ತು. ಇದರಿಂದ ಅಂಬೇಡ್ಕರ್ ಅವರನ್ನು ಅರಿತುಕೊಳ್ಳುವ ಇಚ್ಛೆಯುಳ್ಳ
ಪ್ರತಿಯೊಬ್ಬರಿಗೂ ಅನುಕೂಲವಾಗಿತ್ತು. ಆದರೆ ಈ ಪುಸ್ತಕಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ಈ ಸಂಬಂಧ, ಮುದ್ರಣದ ಹೊಣೆ ಹೊತ್ತಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಒಂದು ವರ್ಷದಿಂದ ಅನೇಕ ಬಾರಿ ಕರೆ ಮಾಡಿದಾಗಲೂ ಅದೇ ಸಿದ್ಧ ಮಾದರಿಯ ‘ಪ್ರತಿಗಳು ಲಭ್ಯವಿಲ್ಲ, ಸರ್ಕಾರ ಹಣಕಾಸಿನ
ಒಪ್ಪಿಗೆ ನೀಡಿದ ತಕ್ಷಣ ಪ್ರತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ’ ಎಂಬ ಉತ್ತರ ದೊರೆಯುತ್ತಿದೆ. ವಾಸ್ತವದಲ್ಲಿ ಎರಡು ವರ್ಷಗಳಿಂದ ಈ ಸರಣಿ ಪುಸ್ತಕಗಳ ಮುದ್ರಣವೇ ಸ್ಥಗಿತವಾಗಿದೆ. ಪುಸ್ತಕಗಳನ್ನು
ಮುದ್ರಿಸಲೂ ಹಣವಿಲ್ಲದಷ್ಟು ಬಡವಾಗಿದೆಯೇ ಸರ್ಕಾರ? ಇದು, ಅಂಬೇಡ್ಕರ್ ಅವರ ವಿಚಾರಗಳ ಕುರಿತು ಸರ್ಕಾರ
ಹೊಂದಿರುವ ಧೋರಣೆಯನ್ನು ತೋರಿಸುತ್ತದೆ. ಇದೊಂದು ಗಂಭೀರ ನಿರ್ಲಕ್ಷ್ಯವಾಗಿದ್ದು, ಸಂಬಂಧಪಟ್ಟವರು ತಕ್ಷಣವೇ ಕ್ರಮ ಕೈಗೊಂಡು, ಅಂಬೇಡ್ಕರ್ ವಿಚಾರಧಾರೆ ಎಲ್ಲರಿಗೂ ಎಲ್ಲೆಡೆಯೂ ದೊರೆಯುವಂತೆ ಮಾಡಲಿ.

ಸುರೇಶ ಮಾ. ತಾಕತರಾವ, ಹಲ್ಯಾಳ, ಅಥಣಿ

ತಾತ ಹಾಕಿದ ಮೊಕದ್ದಮೆಗೆ ಮೊಮ್ಮಕ್ಕಳ ಪರಿತಾಪ!

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಶಾಸಕ ಮುನಿರತ್ನ ಅವರ ಗೆಲುವನ್ನು ಅನೂರ್ಜಿತ ಎಂದು ಘೋಷಿಸಬೇಕು ಎಂಬ ತಕರಾರು ಅರ್ಜಿಯನ್ನು ಹೈಕೋರ್ಟ್ ಇದೀಗ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ. ಆ ಚುನಾವಣೆ ನಂತರ ಮುನಿರತ್ನ ಅವರು ಅಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷ ಸೇರಿ, ಉಪಚುನಾವಣೆ ಸಹ ನಡೆದು, ಅದರಲ್ಲೂ ಗೆದ್ದು ಈಗ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ತ್ವರಿತಗತಿಯಲ್ಲಿ ತೀರ್ಪು ಬಂದರೆ ಒಳ್ಳೆಯದು ಮತ್ತು ಅದು ಅಪೇಕ್ಷಿತ ಕೂಡಾ.

ತಡವಾಗಿ ಬರುವ ತೀರ್ಪುಗಳು ಅನೇಕ ಸಂದರ್ಭಗಳಲ್ಲಿ
ಪರಿಣಾಮವನ್ನು ಗೌಣವಾಗಿಸುತ್ತವೆ. ನಾನಾ ಕಾರಣಗಳಿಂದ ವಿಚಾರಣೆಗಳು ಹತ್ತಾರು ವರ್ಷಗಳಷ್ಟು ಸುದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಇನ್ನು ಸಿವಿಲ್ ಕೋರ್ಟುಗಳದ್ದಂತೂ ಕೇಳುವಂತೆಯೇ ಇಲ್ಲ. ತಾತ ಹಾಕಿದ ಮೊಕದ್ದಮೆಗೆ ಮಕ್ಕಳೂ ಮೊಮ್ಮಕ್ಕಳೂ ಪರಿತಪಿಸುವ ಸ್ಥಿತಿ ಬಂದೊದಗಿರುತ್ತದೆ. ನ್ಯಾಯದಾನ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಆಗುವ ದಿಸೆಯಲ್ಲಿ ಉಪಕ್ರಮಗಳು ಜರುಗಲಿ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಬರದ ನಾಡಲ್ಲಿ ಬದಲಾಗಲಿ ಕಚೇರಿ ವೇಳೆ

ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳ ಸರ್ಕಾರಿ ಕಚೇರಿಯ ಸಮಯ ಬದಲಾವಣೆಯ ಬಗ್ಗೆ ಸರ್ಕಾರ ಗಮನಹರಿಸಬೇಕು. ಬರದ ನಾಡು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ದೈನಂದಿನ ಕಾರ್ಯ ನಿರ್ವಹಿಸಲು ಕಷ್ಟಕರವಾಗುತ್ತದೆ
ಮತ್ತು ಆರೋಗ್ಯದಲ್ಲಿ ಏರುಪೇರಾಗುತ್ತದೆ. ‘ದೆಹಲಿಯಲ್ಲಿ ಕಲಬುರಗಿ ಜಿಲ್ಲೆಗಿಂತ ಹೆಚ್ಚಿನ ತಾಪಮಾನ ಇದ್ದರೂ ಅಲ್ಲಿ ಕಚೇರಿ ಸಮಯ ಬದಲಾವಣೆ ಮಾಡಿಲ್ಲ’ ಎಂಬ ಹೇಳಿಕೆಯು ಅಸಂಬದ್ಧವಾದುದು.

ಶಿವಾನಂದ ಹಂಡಿ, ವಿಜಯಪುರ

ಬೆಳೆಸದಿದ್ದರೆ ಓದಿನ ಅಭಿರುಚಿ...

‘ಓದು ತೊರೆವ ನಾಡು ಬೆಳೆದೀತು ಹೇಗೆ?’ ಎಂಬ ಸದಾಶಿವ್ ಸೊರಟೂರು ಅವರ ಲೇಖನಕ್ಕೆ (ಸಂಗತ, ಏ. 5) ಪೂರಕವಾಗಿ ಈ ಪ್ರತಿಕ್ರಿಯೆ. ಕಳೆದ ವಾರ ಪತ್ರಿಕೆಯ ಬಗ್ಗೆ ವಿಚಾರಿಸಲು ಪುಸ್ತಕದ ಅಂಗಡಿಗೆ ಹೋಗಿದ್ದೆ. ‘ಬಹಳಷ್ಟು ದಿನವಾಯಿತು ಸರ್, ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಮಾರುವುದನ್ನು ಬಿಟ್ಟು’ ಎಂದು ಬಹಳ ಬೇಸರದಿಂದ ಹೇಳಿದರು. ಇದಕ್ಕೆ ಕಾರಣ ಏನಾದರೂ ಇದ್ದಿರಬಹುದು. ಅನುಭವಕ್ಕೆ ಬಂದದ್ದನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಒಟ್ಟಾರೆ ಓದುವ ಅಭಿರುಚಿ ಕ್ಷೀಣಿಸಿರುವುದಂತೂ ದಿಟ.

ಗ್ರಂಥಾಲಯಗಳಲ್ಲಿ ಓದುಗರೇನೋ ಕಾಣುತ್ತಾರೆ. ಆದರೆ ಅವರಲ್ಲಿ ಬಹುತೇಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಆಗಿರುತ್ತಾರೆ. ಮನೆಗಳಲ್ಲಿ ಪುಸ್ತಕದ ರಾಶಿಗಳು ಇರುತ್ತವೆ. ಅವು ಈ ಹಿಂದೆ ಮನೆಯ ಮಕ್ಕಳು ವೃತ್ತಿಪರ ಪ್ರವೇಶ ಪರೀಕ್ಷೆಗೆ ಓದಿದವು ಆಗಿರುತ್ತವೆ. ಮನೆಯಲ್ಲಿನ ವಿದ್ಯಾವಂತರು, ಶಿಕ್ಷಕರು, ವಿವಿಧ ನೌಕರರು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಬೇಕಾಗಿದೆ. ಇಲ್ಲದೇಹೋದಲ್ಲಿ ನಾಡಿನ ಭವಿಷ್ಯದ ಪ್ರಜೆಗಳು ಬೌದ್ಧಿಕ ದಾರಿದ್ರ್ಯ ಹೊಂದುವ ಅಪಾಯ ಕಟ್ಟಿಟ್ಟ ಬುತ್ತಿ.

ಮಂಜುನಾಥ ಸ್ವಾಮಿ ಕೆ.ಎಂ., ಶ್ರೀರಾಮನಗರ, ಗಂಗಾವತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.