ಭಾನುವಾರ, ಜುಲೈ 3, 2022
27 °C

ವಾಚಕರ ವಾಣಿ| ಸಭಾಧ್ಯಕ್ಷರು ಯಾರಿಗೆ ಕರೆ ಕೊಟ್ಟಿದ್ದಾರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ವ್ಯವಸ್ಥೆ ಕುರಿತು ವಿಧಾನಸಭೆಯಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ಪ್ರಮುಖರು ವ್ಯಕ್ತಪಡಿಸಿದ ಆಭಿಪ್ರಾಯಗಳು ಹೊಸವೇನೂ ಅಲ್ಲ. ಲ್ಯೂಸಿಡ್ ಇಂಟರ್ವಲ್ ಎಂಬುದಿದೆ. ಇದರ ಅರ್ಥ, ಈ ಬಿಡುವು ಹುಚ್ಚಿನ ಆವೇಶಗಳ ನಡುವೆ ಬುದ್ಧಿಸ್ಥಿಮಿತ ಹೊಂದಿರುವ ಕಾಲ ಎಂದು. ರಾಜಕೀಯ ಕೂಡ ಹುಚ್ಚೇ ಎನ್ನುವುದನ್ನು ಒಪ್ಪಿಕೊಂಡರೆ ಮತ್ತು ಸಾಮಾನ್ಯವಾಗಿ ಚುನಾವಣಾ ಸಮಯದಲ್ಲಂತೂ ರಾಜಕೀಯ ವ್ಯಕ್ತಿಗಳ ಮಾತು ಮತ್ತು ನಡವಳಿಕೆಗಳು ರಾಜಕೀಯ ಉನ್ಮಾದದ ಲಕ್ಷಣಗಳನ್ನು ಸ್ಪಷ್ಟಪಡಿಸುತ್ತವೆ ಎನ್ನುವುದನ್ನೂ ಒಪ್ಪುವುದಾದರೆ, ಎರಡು ಚುನಾವಣೆಗಳ ನಡುವಿನ ಕಾಲದಲ್ಲಿ ಉನ್ಮಾದ ಕ್ಷೀಣಗೊಂಡು ವಾಸ್ತವದ ಅರಿವಿನ ಕ್ಷಣಗಳು ತಲೆ ಎತ್ತುತ್ತವೆ ಎನ್ನುವುದು ಗೊತ್ತಾಗುತ್ತದೆ.

ಚರ್ಚೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಹೇಳುವುದು, ನಮ್ಮ ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ, ದುರಸ್ತಿ ಅಗತ್ಯ ಎಂದು. ಚುನಾವಣಾ ಕಾನೂನು ಮತ್ತು ನಿಯಮಗಳು ಪರಿಪೂರ್ಣವಾಗಿವೆ ಎಂದು ಹೇಳಲು ಸಾಧ್ಯವಿಲ್ಲ ದಿದ್ದರೂ ಅವು ನಮ್ಮ ಈ ನಾಯಕರು ಹೇಳುವ ದುರಂತ ಸ್ಥಿತಿಗೆ ಕಾರಣ ಅಂತೂ ಖಂಡಿತ ಅಲ್ಲ. ಹಾಗಾದರೆ ದುರಸ್ತಿ ಆಗಬೇಕಾದುದು ಎಲ್ಲಿ? ಯಾರಿಂದ ಪ್ರಾರಂಭ? ಚುನಾವಣೆಗಳು ತೆರೆದು ತೋರುವ ಚಿತ್ರಣ ಇದು: ಅಭ್ಯರ್ಥಿಯಾಗುವವನು ಜನರನ್ನು ಪ್ರತಿನಿಧಿಸಲು ದಿಟವಾಗಿಯೂ ಅನರ್ಹ; ಆದರೆ ಅವನು ಗೆಲ್ಲುವ ಕುದುರೆ. ಗೆಲ್ಲಲು ಅವನ ಬಳಿ ಹಣ ಇದೆ, ತೋಳ್ಬಲ ಇರುವ ಬೆಂಬಲಿಗರು ಇದ್ದಾರೆ, ದುಷ್ಟನಾದರೂ ಪ್ರಭಾವಶಾಲಿ ಎಂಬ ಕಾರಣದಿಂದಾಗಿ ಆತ ಅರ್ಹನಾಗುತ್ತಾನೆ. ಜನರಿಗಾಗಿ ಅಲ್ಲದಿದ್ದರೂ ಅವನಿಲ್ಲದಿದ್ದರೆ ಪಕ್ಷ ಬಡವಾಗುತ್ತದೆ. ಇಂತಹ ಸ್ಥಿತಿಯಲ್ಲಿ ‘ಹಣಬಲದಲ್ಲಿ ಚುನಾವಣೆಗೆ ಸ್ಪರ್ಧಿಸುವವರನ್ನು ಬಹಿಷ್ಕರಿಸಿ’ ಎಂದು ಸಭಾಧ್ಯಕ್ಷರು ಯಾರಿಗೆ ಕರೆ ಕೊಟ್ಟಿದ್ದಾರೋ? ರಾಜಕೀಯ ಪಕ್ಷಗಳ ನಾಯಕರಿಗೆ ಹೀಗೆ ಇಂಥವರನ್ನು ಕಡೆಗಣಿಸುವ ನೈತಿಕ ಸ್ಥೈರ್ಯವಿದ್ದರೆ ಇದು ಸಾಧ್ಯವಾದೀತು.

ನಮ್ಮಲ್ಲಿ ಚುನಾವಣೆಗಳ ವರಸೆಯೇ ಹೀಗಿರುವಾಗ, ಅದು ತೀರಾ ದುಷ್ಟ ಹಾಗೂ ದುರವಸ್ಥೆಯದು ಎಂಬುದನ್ನು ಎಲ್ಲಾ ಪಕ್ಷಗಳ ನಾಯಕರು ಚುನಾವಣಾ ರಾಜಕೀಯೋನ್ಮಾದ ಇಲ್ಲದ ಅರಿವಿನ ವೇಳೆಯಲ್ಲಿ ಅರಿಯುವಾಗ, ದುರಸ್ತಿ ಕಾರ್ಯ ಅವರಿಂದಲೇ ಶುರುವಾಗಬೇಕು ತಾನೇ? ಈ ಮುಂಚೆ ಇಂಥ ಅರಿವಿನ ವೇಳೆ ಎಷ್ಟೋಬಾರಿ ಬಂದು ಹೋಗಿದೆ. ಆದರೇನು, ಚುನಾವಣೆಯಿಂದ ಚುನಾವಣೆಗೆ ಸಕಾರಾತ್ಮಕ ಬದಲಾವಣೆಗಳು ಆಗಿರುವುದನ್ನು ಯಾರು ಕಂಡಿರುವರು? ರಾಜಕೀಯ ನೇತಾರರಿಗೆ ಅರಿವು ಮೂಡಿದರಷ್ಟೇ ಸಾಲದು, ಅದು ಸಾಕಾರಗೊಳ್ಳುವುದು ತಮ್ಮ ಪ್ರಾಮಾಣಿಕ ಪ್ರಯತ್ನಗಳಿಂದ ಮಾತ್ರ ಎನ್ನುವ ಪ್ರಾಮಾಣಿಕ ಅರಿವೂ ಅಗತ್ಯ!

- ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು