ಮಂಗಳವಾರ, ಜನವರಿ 31, 2023
27 °C

ವಾಚಕರ ವಾಣಿ| ಕೊಳಕು ನಿಯಮಗಳಿಗೆ ಆದರ್ಶದ ಬಿಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವೇದವ್ಯಾಸರ ಶಿವಪುರಾಣಸಾರ’ ಎಂಬ ಶಿರೋನಾಮೆಯಡಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಬರೆದಿರುವ ‘ಪತಿಯ ಆಜ್ಞೆ ಪಾಲಿಸಬೇಕು’ ಎಂಬ ಶೀರ್ಷಿಕೆಯನ್ನುಳ್ಳ ಬರಹ (ಪ್ರ.ವಾ., ನ. 28) ನಖಶಿಖಾಂತ ಖಂಡನಾರ್ಹ. ಸಂಪೂರ್ಣ ಮಹಿಳಾ ವಿರೋಧಿಯಾಗಿದ್ದು, ವ್ಯಕ್ತಿ ಘನತೆಗೆ ಕುಂದುಂಟು ಮಾಡುವಂತಿರುವ ಈ ಲೇಖನವು ‘ಶಿವಪುರಾಣದ ಸಾರವೇ ಆಗಿದೆ’ ಎಂದು ಸ್ವಾಮೀಜಿ ಬರೆದಿದ್ದಾರೆ. ಅದಕ್ಕೆಂದೇ 12ನೇ ಶತಮಾನದಲ್ಲಿ ಅಲ್ಲಮಪ್ರಭು ‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ, ಭಕ್ತಿ ಎಂಬುದು ತೋರಿ ಉಂಬುವ ಲಾಭ, ಗುಹೇಶ್ವರನೆಂಬುದು ಮೀರಿದ ಘನವು’ ಎಂದು ಸನಾತನ ಪಠ್ಯಗಳನ್ನು ಉಗ್ರವಾಗಿ ಖಂಡಿಸಿದ್ದಾನೆ. ಕಟ್ಟುಕತೆ ಮತ್ತು ತೋರಿಕೆಯ ಆದರ್ಶಗಳಿಂದ ತುಂಬಿದ ವೇದಾಗಮಗಳು ಪ್ರಾಯೋಗಿಕವಾಗಿ ಅದೆಷ್ಟು ಜೀವವಿರೋಧಿ ಮತ್ತು ಅವೈಜ್ಞಾನಿಕವಾಗಿದ್ದವು ಎಂಬುದನ್ನು ಕಂಡುಕೊಂಡಿದ್ದ ಶಿವಶರಣರು, ವೈದಿಕ ದರ್ಶನಗಳ ಪೊಳ್ಳುತನವನ್ನು ಬಯಲಿಗೆಳೆದು, ಅವು ಪೋಷಿಸುವ ಕರ್ಮಸಿದ್ಧಾಂತವು ಅಪ್ಪಟ ಸುಳ್ಳು ಎಂದು ಎತ್ತಿ ತೋರಿಸಿದ್ದಾರೆ.

ಹೆಣ್ಣುಮಕ್ಕಳು ಅಡಿಯಿಂದ ಮುಡಿಯವರೆಗೆ ಗಂಡಸಿನ ಗುಲಾಮಳಾಗಿರಬೇಕು ಎಂಬುದನ್ನು ಯಾರು ಹೇಳಿದರೂ ಎಲ್ಲಿಯೇ ಹೇಳಿದರೂ ಅದು ಅತ್ಯಂತ ಹೇಯ ಮತ್ತು ಅಧಿಕಪ್ರಸಂಗಿತನ. ವೈದಿಕ ಪಠ್ಯಗಳು ರಚನೆಯಾದ ಸಂದರ್ಭದಲ್ಲಿಯೇ ವ್ಯಾಪಕ ಖಂಡನೆ ಮತ್ತು ತಿರಸ್ಕಾರಕ್ಕೆ ಒಳಗಾಗಿದ್ದ ಇತಿಹಾಸ ನಮ್ಮದು. ಹೀಗಿರುವಾಗಲೂ ಸಚ್ಚಿದಾನಂದ ಸ್ವಾಮಿಯಂಥವರು ಇವತ್ತಿಗೂ ಇಂಥ ಕೊಳಕು ನಿಯಮಗಳನ್ನು ಆದರ್ಶವೆಂದು ಬಿಂಬಿಸಲು ಹೊರಟಿರುವುದು ಅವರ ಜಡಮತಿಯ ಕೊಳಕುತನವೇ ಆಗಿರುವಂತಿದೆ.

 - ಡಾ. ಮೀನಾಕ್ಷಿ ಬಾಳಿ, ಅಧ್ಯಕ್ಷೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು