ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ | ವಲಸೆ ಕಾರ್ಮಿರನ್ನು ಪೊಲೀಸರು ಮನುಷ್ಯರಂತೆ ಕಾಣಲಿ

ಕಲ್ಲಾಗದಿರಲಿ ಮನಸ್ಸು
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯಿಂದ ಮೊನ್ನೆ ನಾಲ್ಕು ಜಿಲ್ಲೆಗಳನ್ನು ದಾಟಿ ಬೆಂಗಳೂರಿಗೆ ಬಂದ ನಮ್ಮನ್ನು ಯಾವ ಪೊಲೀಸರೂ ಯಾವ ಚೆಕ್‍ಪೋಸ್ಟ್‌ನಲ್ಲೂ ತಡೆಹಿಡಿಯಲಿಲ್ಲ. ನಾವು ಪಡೆದುಕೊಂಡಿದ್ದ ಟ್ರಾವಲ್ ಪಾಸ್ ಅನ್ನು ನೆಪಕ್ಕಾದರೂ ಕೇಳಲಿಲ್ಲ. ಚಿತ್ರದುರ್ಗದ ಬಳಿ ಮಾತ್ರ ಕಾರಿನೊಳಗೆ ಒಮ್ಮೆ ಇಣುಕಿದರಷ್ಟೇ. ಇದು, ನಡೆದುಕೊಂಡು ಹೋಗುತ್ತಿದ್ದವರು ಅಥವಾ ಕನ್ನಡ ಬಾರದವರಿಗೆ ಅನ್ವಯಿಸುತ್ತಿರಲಿಲ್ಲ. ನಡೆದುಕೊಂಡು ಹೋಗುವವರನ್ನು ಅಲ್ಲಲ್ಲಿ ಗುಂಪಿನಲ್ಲಿ ಕೂರಿಸಿದ್ದು ಕಾಣುತ್ತಿತ್ತು. ತುಮಕೂರು ದಾಟುವಾಗ, ಒಂದಿಡೀ ಬಸ್ಸಿನಲ್ಲಿದ್ದ ಉತ್ತರ ಭಾರತದ ಕಾರ್ಮಿಕರನ್ನು ತಡೆಹಿಡಿಯಲಾಗಿತ್ತು. ತಮ್ಮಲ್ಲಿದ್ದ ಗುರುತಿನ ಚೀಟಿಯನ್ನು ಪೊಲೀಸರ ಹತ್ತಿರ ತೆಗೆದುಕೊಂಡು ಹೋಗುತ್ತಿದ್ದ 20ರ ಆಸುಪಾಸಿನ ಕಾರ್ಮಿಕರನ್ನು ಕಾನ್‌ಸ್ಟೆಬಲ್‌ ಒಬ್ಬರು ಲಾಠಿಯಿಂದ ಬಡಿದು ಹಿಮ್ಮೆಟ್ಟಿಸಿದರು. ನೆಲಮಂಗಲದ ಸಮೀಪವೂ ಹಿಂದಿಯಲ್ಲಿ ಮಾತಾಡುತ್ತಿದ್ದ ಕಾರ್ಮಿಕರಿಗೆ ಲಾಠಿ ತೋರಿಸಿ, ಒಂದೆಡೆ ಕೂರಿಸುತ್ತಿದ್ದರು.

ನಮ್ಮಲ್ಲಿಂದ ದುಡಿದುಕೊಂಡು ಹೋಗಿ ತಮ್ಮ ತಮ್ಮ ಊರುಗಳಲ್ಲಿ ಅರಮನೆ ಕಟ್ಟಿಸುವಷ್ಟು ಶಕ್ತರಲ್ಲ ಈ ಕಾರ್ಮಿಕರು. ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದವರು. ಅವರು ಊರು ದಾಟಲು ಅನುವಾಗುವುದು ನಂತರದ ವಿಷಯ. ಮೊದಲು ಅವರನ್ನು ಸೌಜನ್ಯದಿಂದ ಮನುಷ್ಯರಂತೆ ನಡೆಸಿಕೊಳ್ಳುವುದನ್ನು ಪೊಲೀಸರು ಕಲಿಯಬೇಕಿದೆ. ಲಾಠಿ ಬದಲು, ಎರಡು ಒಳ್ಳೆಯ ಮಾತು ಆಡಿದರೆ, ತಮ್ಮ ಊರು ಸೇರಿದವರು ಕರ್ನಾಟಕದ ನೆಲ, ನುಡಿಯನ್ನು ನೆನೆದಾರು, ಮುಂದೆ ತಿರುಗಿ ಬಂದಾರು. ಇಲ್ಲದಿದ್ದರೆ, ನಾವು ಮೃದುಭಾಷಿಕರಲ್ಲ, ಕಲ್ಲು ಮನಸ್ಸಿನವರು ಎಂಬ ಸಂದೇಶವನ್ನು ರವಾನಿಸಿದಂತೆ ಆಗುತ್ತದೆ.

– ಡಾ. ಶಾಂತರಾಜು ಎಸ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT