ಮಂಗಳವಾರ, ಸೆಪ್ಟೆಂಬರ್ 21, 2021
29 °C

ಓದುವುದಕ್ಕೇಕೆ ಹಿಂಜರಿಕೆ, ಮಡಿವಂತಿಕೆ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಜೋಕೆ... ಬೌದ್ಧಿಕ ಜಾಲಕ್ಕೆ ಬಿದ್ದೀರಿ’ ಎಂಬ ಡಾ. ಜ್ಯೋತಿ ಅವರ ಲೇಖನ (ಸಂಗತ, ಜುಲೈ 27) ತೂಕಡಿಸುವವರಿಗೆ ಹಾಸಿಗೆ ಹಾಸಿಕೊಟ್ಟಂತೆ, ಓದದಿರುವವರಿಗೆ ಒಳ್ಳೆಯ ಆಹಾರವನ್ನೇ ಒದಗಿಸಿದೆ. ಎಂತಹ ಪುಸ್ತಕಗಳನ್ನೂ ಓದದ ವರ್ಗವೇ ಹೆಚ್ಚುತ್ತಿರುವಾಗ, ಅದರಲ್ಲೂ ನಿತ್ಯ ಓದಲೇಬೇಕಾದ ಶಿಕ್ಷಕ ವೃಂದ, ವಿದ್ಯಾರ್ಥಿ ಸಮೂಹ, ಗೃಹಿಣಿಯರು ಓದಿನಿಂದ ದೂರ ಸರಿದಿರುವಾಗ, ಇನ್ನು ಬೌದ್ಧಿಕ ಜಾಲಕ್ಕೆ ಬೀಳುವವರಾದರೂ ಯಾರು? ಸಾಹಿತಿಗಳು, ಲೇಖಕರು ಓದುವಿಕೆಯ ಕುರಿತು ತಮ್ಮದೇ ಆದ ವಿವೇಚನೆ, ಸ್ವಚಿಂತನೆ, ಗ್ರಹಿಕೆಯನ್ನು ಹೊಂದಿರುತ್ತಾರೆ.

ಟಿ.ವಿ., ಮೊಬೈಲ್ ಮತ್ತಿತರ ಆಧುನಿಕ ಪರಿಕರಗಳು ಜನಸಾಮಾನ್ಯರಾದಿಯಾಗಿ ಎಲ್ಲರನ್ನೂ ಓದಿನಿಂದ ವಿಮುಖಗೊಳಿಸಿವೆ. ಪಠ್ಯ ಹೊರತುಪಡಿಸಿ ಒಂದೇ ಒಂದು ಬೇರೆ ಪುಸ್ತಕ ಓದದವರು ಎಲ್ಲಾ ಹಂತಗಳಲ್ಲಿ ಅಧ್ಯಾಪಕರಾಗಿ ಬರುವುದನ್ನು ನೋಡುತ್ತಿದ್ದೇವೆ. ಓದಿ ಎಂದು ಹೇಳಬೇಕಾದವರೇ ಓದದಿದ್ದರೆ ಇದಕ್ಕೆ ಪರಿಹಾರ ಎಲ್ಲಿ? ಓದಲು ತೊಡಗಿದ ಮೇಲೆ ಏನು ಓದಬೇಕು, ಯಾವುದು ಓದಬಹುದು ಎಂಬ ವಿವೇಚನೆ ಮೂಡಿಯೇ ಮೂಡುತ್ತದೆ. ವಿಭಿನ್ನ ವಿಚಾರಧಾರೆಯ ಓದುಗರು ತಮ್ಮ ಅಭಿಲಾಷೆಯ ಕೃತಿಗಳನ್ನೇ ಓದುವುದು ಹೆಚ್ಚು. ಸಾರ್ವಜನಿಕ ಗ್ರಂಥಾಲಯಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಎಂಥ ಮೌಲಿಕ ಗ್ರಂಥಗಳು ಇದ್ದರೂ ಓದುವವರು ಬಹಳ ಕಡಿಮೆ. ತೆರೆದ ಮನಸ್ಸಿನ ಓದುಗರು ಏನನ್ನೇ ಓದಲಿ, ಎಷ್ಟೇ ಓದಲಿ ಮುಕ್ತ ಚಿಂತನೆ, ಪ್ರಜ್ಞೆಯನ್ನು ಹೊಂದಿರುತ್ತಾರೆ. ಎಷ್ಟು ಜನ ಹಿರಿಯ ಲೇಖಕರು ಹಾಗೂ ಸಾಹಿತಿಗಳು ಕಿರಿಯ, ಉದಯೋನ್ಮುಖ ಲೇಖಕರನ್ನು ಓದುತ್ತಾರೆ? ಹೊಸದನ್ನು ಅರಿಯಲು ಯತ್ನಿಸುತ್ತಾರೆ? ಹೌದು, ಕೆಲ ಕೃತಿಗಳ ಮರುಓದು ಹೊಸ ಹೊಳಹುಗಳನ್ನು ನೀಡುತ್ತದೆ. ಮನಸ್ಸಿಗೆ ಮುದ ನೀಡುತ್ತದೆ. ಪ್ರಕಟವಾದ ಕನ್ನಡ ಪುಸ್ತಕಗಳ ಮಾರಾಟಕ್ಕೆ ಪ್ರಕಾಶಕರು ಒದ್ದಾಡುವುದನ್ನು ನೋಡುತ್ತೇವೆ. ಆದ್ದರಿಂದ ಕನ್ನಡದ ಪುಸ್ತಕಗಳನ್ನಾದರೂ ಕೊಳ್ಳುವ, ಓದುವ ವಿಷಯದಲ್ಲಿ ಯಾವುದೇ ಹಿಂಜರಿಕೆ, ಮಡಿವಂತಿಕೆ ಬೇಡ.

- ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು