ಬುಧವಾರ, ಸೆಪ್ಟೆಂಬರ್ 22, 2021
21 °C

ಅಂಕಗಳಿಗೆ ವಿಪರೀತ ಪ್ರಾಶಸ್ತ್ಯ ತಗ್ಗಿಸಲು ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರೀಕ್ಷಾ ಸುಧಾರಣೆಯ ಸಲುವಾಗಿ ಪಬ್ಲಿಕ್ ಪರೀಕ್ಷೆಯನ್ನು ಸ್ಥಗಿತಗೊಳಿಸಬೇಕು ಎಂಬ ಸಲಹೆಯನ್ನು ಚಂದ್ರಶೇಖರ ದಾಮ್ಲೆ ಅವರು ನೀಡಿದ್ದಾರೆ (ಪ್ರ.ವಾ., ಮೇ 14). ಇದೊಂದು ರೀತಿ ನೆಗಡಿಗೆ ಔಷಧಿ ಪಡೆಯದೆ ಮೂಗನ್ನೇ ಕೊಯ್ದುಕೊಂಡಂತೆ. ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತವೆ ಎಂದು ಚುನಾವಣೆ ನಡೆಸುವುದನ್ನೇ ಕೈ ಬಿಟ್ಟಿಲ್ಲವಲ್ಲ. ಒಂದು ಹಂತದ ಶಿಕ್ಷಣ ಪೂರ್ಣಗೊಂಡ ಬಳಿಕ ಪ್ರಮಾಣೀಕೃತ ಪರೀಕ್ಷೆ ನಡೆಸಿ, ಅವರನ್ನು ಮುಂದಿನ ಹಂತದ ಶಿಕ್ಷಣ ಅಥವಾ ಉದ್ಯೋಗಕ್ಕೆ ಕಳುಹಿಸಲು ಪಬ್ಲಿಕ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆ ಮೂಲಕ ವಿದ್ಯಾರ್ಥಿಯನ್ನು ಇತರ ವಿದ್ಯಾರ್ಥಿಗಳೊಂದಿಗೆ ಅಂಕ/ಗ್ರೇಡ್‍ಗಳ ಆಧಾರದ ಮೇಲೆ ಹೋಲಿಕೆ ಮಾಡಲು ಸಾಧ್ಯವಾಗುತ್ತದೆ.

ಅನೇಕ ವರ್ಷಗಳ ಫಲವಾಗಿ ದೇಶದಲ್ಲಿ ಒಂದು ಸುವ್ಯವಸ್ಥಿತ ಪರೀಕ್ಷಾ ಕ್ರಮವನ್ನು ಕಟ್ಟಿಕೊಳ್ಳಲಾಗಿದೆ. ಇದರಲ್ಲಿ ಸುಧಾರಣೆಗಳಿಗೆ ಅವಕಾಶವಿದೆ. ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ (ಪರೀಕ್ಷೆ, ಕ್ರೀಡೆ, ಸಂಗೀತ, ಕಲೆ...) ಅಳೆಯಲು ಸಾಧ್ಯವಾಗುವಂತೆ ಸಂಯೋಜಿತ ವಿಧಾನ ಅಳವಡಿಸಿಕೊಂಡಲ್ಲಿ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಗೂ ಅಂಕಗಳಿಗೆ ಇರುವ ವಿಪರೀತ ಪ್ರಾಶಸ್ತ್ಯ ತಗ್ಗಿಸಬಹುದು. ಶಾಲೆಗಳೇ ಎಲ್ಲಾ ಪರೀಕ್ಷೆಗಳನ್ನು ನಡೆಸಿ, ಒಂದು ಡೀಮ್ಡ್ ವಿಶ್ವವಿದ್ಯಾಲಯದ ರೀತಿ ಕೆಲಸ ಮಾಡುವಂತೆ ಸ್ವಾಯತ್ತತೆ ನೀಡಲು ಸಾಧ್ಯವಾಗುವಂತೆ ಅವುಗಳನ್ನು ಸಶಕ್ತಗೊಳಿಸಿದಲ್ಲಿ ದಾಮ್ಲೆ ಅವರ ಚಿಂತನೆ ಸರಿ ಹೋಗಬಹುದು. ಅಷ್ಟು ಮಟ್ಟಿನ ಪಕ್ವತೆಯನ್ನು ಹಂತ ಹಂತವಾಗಿ ಮುಟ್ಟಲು ಸಾಧ್ಯವಾಗುವಂತೆ ದೂರಗಾಮಿ ಯೋಜನೆ ತಯಾರಿಸಿ, ಜಾರಿಗೊಳಿಸಬಹುದು.

- ಡಾ. ಎಚ್.ಬಿ.ಚಂದ್ರಶೇಖರ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು