ಶುಕ್ರವಾರ, ಆಗಸ್ಟ್ 19, 2022
25 °C

ವಾಚಕರ ವಾಣಿ: ಮುಂಬೈ ನಿಯಂತ್ರಣಕ್ಕಾಗಿ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರನಟಿ ಕಂಗನಾ ರನೌತ್‌ ವಿಷಯದಲ್ಲಿ ಎ.ಸೂರ್ಯಪ್ರಕಾಶ್‌ ಅವರು ಶಿವಸೇನಾದ ಗೂಂಡಾಗಿರಿಯನ್ನು ಖಂಡಿಸಿ ಬರೆದಿರುವುದು ಸರಿಯಾಗಿದೆ (ಪ್ರ.ವಾ., ಸೆ. 16). ಆದರೆ, ಶಿವಸೇನಾವನ್ನು ಸ್ಥಾಪಿಸಿ ಅದನ್ನು ಫ್ಯಾಸಿಸ್ಟ್ ಶಕ್ತಿಯಾಗಿ ಬೆಳೆಸಿ, ಮುಂಬೈ ತನ್ನ ಜಹಗೀರೆಂಬಂತೆ ವರ್ತಿಸಿದ ಬಾಳಾ ಠಾಕ್ರೆ ಅವರ ಬಗ್ಗೆ ಲೇಖಕರು ಪ್ರಸ್ತಾಪಿಸದಿರುವುದು ಕುತೂಹಲಕಾರಿ.

ಪ್ರಾಯಶಃ ಇದಕ್ಕೆ ಪ್ರಮುಖ ಕಾರಣ, ಕಂಗನಾಗೆ ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಹಲವರಿಗೆ, ಅವರೇ ಹೇಳಿಕೊಂಡಂತೆ ಬಾಳಾ ಠಾಕ್ರೆ ಆದರ್ಶಪ್ರಾಯ. ಬಾಳಾ ಠಾಕ್ರೆ ಪ್ರೇರಿತ ಶಿವಸೈನಿಕರು ದಕ್ಷಿಣ ಭಾರತೀಯರನ್ನು, ಉತ್ತರ ಭಾರತೀಯರನ್ನು, ಗಿರಣಿ ಕಾರ್ಮಿಕ ಸಂಘದ ಸದಸ್ಯರನ್ನು, ಅಲ್ಪಸಂಖ್ಯಾತರನ್ನು ಬೆದರಿಸುತ್ತಿದ್ದಾಗ, ಇಂದು ಕಂಗನಾರನ್ನು ಬೆಂಬಲಿಸುತ್ತಿರುವ ಪಕ್ಷ ಹಾಗೂ ಅದರ ಬೆಂಬಲಿಗರು ಠಾಕ್ರೆಯವರ ಜೊತೆಯಲ್ಲಿದ್ದರು. ಬಹುಕಾಲ ಅಧಿಕಾರವನ್ನು ಸಹ ಹಂಚಿಕೊಂಡಿದ್ದರು. ಅಂದು ಸಹ್ಯವಾಗಿದ್ದ ಶಿವಸೇನಾದ ಗೂಂಡಾಗಿರಿ ಇಂದು ಅಸಹನೀಯವೆನಿಸುವುದಕ್ಕೆ ಪ್ರಮುಖ ಕಾರಣ, ಶಿವಸೇನಾವು ಬಿಜೆಪಿಯೇತರ ಪಕ್ಷಗಳೊಡನೆ ಕೈಜೋಡಿಸಿ ಮುಂಬೈಯಲ್ಲೇ ಇವರನ್ನು ತಬ್ಬಲಿಯಾಗಿಸಿದ್ದು.

ಇವರ ಬೂಟಾಟಿಕೆಗೆ ಪ್ರಮುಖ ನಿದರ್ಶನ, ಕೆಲವೇ ತಿಂಗಳುಗಳ ಹಿಂದೆ ಕಮಿಡಿಯನ್‌ ಅಗ್ರಿಮಾ ಜೊಷೂವಾ ಅವರ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳವನ್ನು ಕ್ಷುಲ್ಲಕ ಕಾರಣಕ್ಕಾಗಿ ಶಿವಸೈನಿಕರು ಧ್ವಂಸಗೊಳಿಸಿದಾಗ, ಅದನ್ನು ಇದೇ ಗುಂಪು ಯಾವುದೇ ಅಳುಕಿಲ್ಲದೆ ಸಮರ್ಥಿಸಿಕೊಂಡಿದ್ದು. ಮುಂಬೈಯನ್ನು ಯಾರು ನಿಯಂತ್ರಿಸಬೇಕೆಂಬ ಕಾರಣಕ್ಕೆ ಕಂಗನಾ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆಯೇ ವಿನಾ ಮುಂಬೈ ಎಲ್ಲ ಭಾರತೀಯರಿಗೂ ಮುಕ್ತವಾಗಿರಬೇಕೆಂಬ ಕಾರಣಕ್ಕಾಗಿ ಅಲ್ಲ.

ಸುನೀಲ ನಾಯಕ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು