ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ಮಾಫಿಯಾಗೂ ಹೋರಾಟಕ್ಕೂ ಸಂಬಂಧವಿಲ್ಲ’

Last Updated 23 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಶಿಕ್ಷಣ ಮಾಫಿಯಾಕ್ಕೆ ನೆರವಾಗಲು ಲಿಂಗಾಯತ ಹೋರಾಟ ನಡೆಯುತ್ತಿದೆ ಎಂಬರ್ಥದಲ್ಲಿ ರಾಜಶೇಖರ ಹತಗುಂದಿ ಅವರು ಬರೆದಿದ್ದಾರೆ (ವಾ.ವಾ., ಏ. 22). 2017ರ ಆಗಸ್ಟ್‌ನಲ್ಲಿ ಲಿಂಗಾಯತರ ಹೋರಾಟ ಪ್ರಾರಂಭವಾದಾಗ, ಅಲ್ಪಸಂಖ್ಯಾತ ಧರ್ಮದ ಮಾನ್ಯತೆಯ ಅಂಶವೇ ಇರಲಿಲ್ಲ. ಯಾವುದೇ ಧರ್ಮಕ್ಕೆ ಮಾನ್ಯತೆ ನೀಡುವ ಅಥವಾ ಅಮಾನ್ಯ ಮಾಡುವ ಅಧಿಕಾರ ದೇಶದ ಸಂವಿಧಾನದಲ್ಲಿ ಅಥವಾ ಈಗಿನ ಯಾವುದೇ ಕಾನೂನಿನಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಇಲ್ಲ. ಆದ್ದರಿಂದ ಈ ಹೋರಾಟವನ್ನು ಲಿಂಗಾಯತಕ್ಕೆ ಅಲ್ಪಸಂಖ್ಯಾತ ಧರ್ಮದ ಬೇಡಿಕೆಗಾಗಿ ಎಂದು ಬದಲಿಸಲಾಯಿತು. ಅಲ್ಪಸಂಖ್ಯಾತ ಧರ್ಮವೆಂದು ಪರಿಗಣಿಸಲು ಮೊದಲು ಅದು ಸ್ವತಂತ್ರ ಮತ್ತು ಪ್ರತ್ಯೇಕ ಧರ್ಮವೆಂದು ಸಾಬೀತಾಗಬೇಕಾಗುತ್ತದೆ. ತದನಂತರ ‘ಅಲ್ಪಸಂಖ್ಯಾತ’ ಅಂಶವನ್ನು ಪರಿಗಣಿಸಲಾಗುತ್ತದೆ. ಪ್ರತ್ಯೇಕ ಧರ್ಮವೆಂಬ ಮಾನ್ಯತೆ ಇಲ್ಲದಿದ್ದರೆ, ಅಂತಹ ಧರ್ಮಕ್ಕೆ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ನಂಬರ್‌ ದೊರೆಯಲಾರದು. ಹೀಗಾಗಿ, ವೀರಶೈವ ಮಹಾಸಭೆಗೆ ಅನೇಕ ಬಾರಿ ಸೋಲಾಗಿದೆ. ಆದ್ದರಿಂದ, ಅನಿವಾರ್ಯವಾಗಿ ಅಲ್ಪಸಂಖ್ಯಾತ ಧರ್ಮವೆಂಬ ಮಾನ್ಯತೆಗೆ ಪ್ರಯತ್ನ ಪ್ರಾರಂಭವಾಗಿದೆ.

ಇನ್ನು ಕ್ಯಾಪಿಟೇಷನ್‌ ವಿಷಯಕ್ಕೆ ಸಂಬಂಧಿಸಿದಂತೆ, ಕಳೆದ ಮೂರು ವರ್ಷಗಳಿಂದ ‘ನೀಟ್‌’ ಕಡ್ಡಾಯವಾಗಿದೆ. ಹಿಂದಿನಂತೆ ತಮಗೆ ಹೇರಳ ಹಣ ನೀಡುವವರಿಗೆ ಸೀಟು ನೀಡುವ ಸ್ವಾತಂತ್ರ್ಯ ಈಗ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಇಲ್ಲ. ನೀಟ್‌ ಮೆರಿಟ್‌ ಲಿಸ್ಟ್‌ನಲ್ಲಿ ಇದ್ದವರಿಗೆ ಮಾತ್ರ ಸೀಟು ಸಿಗುತ್ತದೆ. ಹಾಗೆ ಬಂದವರು ಆಡಳಿತ ಮಂಡಳಿಗಳು ಕೇಳುವಷ್ಟು ಹಣ ನೀಡಲಾರರು. ಹೆಚ್ಚು ಹಣ ನೀಡಬಲ್ಲ, ಆದರೆ ನೀಟ್‌ನಲ್ಲಿ ಪಾಸಾಗದ ದಡ್ಡರಿಗೆ ಈಗ ಸೀಟು ಎಲ್ಲಿಯೂ ಸಿಗುವುದಿಲ್ಲ. ಅಲ್ಪಸಂಖ್ಯಾತ ಧರ್ಮದ ಮಾನ್ಯತೆಯಿಂದ ಲಿಂಗಾಯತ ವಿದ್ಯಾರ್ಥಿಗಳಿಗೆ ಹೆಚ್ಚು ಸೀಟುಗಳು ಸಿಕ್ಕರೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಹೆಚ್ಚು ಲಾಭವಿಲ್ಲ. ಕಾರಣವೆಂದರೆ, ಮೆರಿಟ್‌ನಲ್ಲಿ ಸೀಟು ಪಡೆದ ಲಿಂಗಾಯತರು ತಮ್ಮ ಧರ್ಮದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ತಂಟೆಗೆ ಇಳಿದು, ಉದ್ರಿ ಸೀಟು ಪಡೆಯಲು, ಫೀ ಕಡಿಮೆ ಮಾಡಲು ಒತ್ತಾಯಿಸುವ ಸಾಧ್ಯತೆಯೇ ಹೆಚ್ಚು. ಇದರಿಂದ, ಬಹುತೇಕ ವೃತ್ತಿಪರ ಲಿಂಗಾಯತ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಹಾನಿಯಾಗುತ್ತದೆ. ಆದ್ದರಿಂದಲೇ ಅನೇಕ ಲಿಂಗಾಯತ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಅಲ್ಪಸಂಖ್ಯಾತ ಧರ್ಮದ ಬೇಡಿಕೆಗೆ ಬೆಂಬಲ ನೀಡುತ್ತಿಲ್ಲ. ಈವರೆಗೆ ಎಷ್ಟು ಲಿಂಗಾಯತರಿಗೆ ಆ ಸಮಾಜದ ಖಾಸಗಿ ವೃತ್ತಿಪರ ಕಾಲೇಜುಗಳು ಸೀಟು ನೀಡಿವೆ ಎಂಬ ಅಂಕಿಸಂಖ್ಯೆಗಳೇ ಈ ಕುರಿತ ಆರೋಪಕ್ಕೆ ಪ್ರತಿಉತ್ತರ ನೀಡಬಲ್ಲವು.

ಕೊನೆಯದಾಗಿ, ಶಿಕ್ಷಣ ಮಾಫಿಯಾಕ್ಕೂ ಲಿಂಗಾಯತ ಹೋರಾಟಕ್ಕೂ ಯಾವುದೇ ಸಂಬಂಧ ಇಲ್ಲದಿದ್ದರೂ, ಅಲ್ಪಸಂಖ್ಯಾತ ಧರ್ಮದ ಮಾನ್ಯತೆಯಿಂದ ಪ್ರತಿವರ್ಷ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ಮತ್ತು ಏಳೆಂಟು ಸಾವಿರ ಎಂಜಿನಿಯರಿಂಗ್‌ ಹಾಗೂ ಹೆಚ್ಚಿನ ಪ್ರಮಾಣದ ಡೆಂಟಲ್‌, ಫಾರ್ಮಸಿ, ಎಂಬಿಎ ಸೀಟಗಳು ಲಿಂಗಾಯತರಿಗೆ ಸಿಗುತ್ತವೆ ಎನ್ನುವುದು ಸತ್ಯ. ಅದರಲ್ಲಿ ಏನು ತಪ್ಪಿದೆ? ಅಲ್ಲದೆ ಹೆಚ್ಚುವರಿ ಸೀಟುಗಳಿಂದ ಅಷ್ಟೊಂದು ಶ್ರೀಮಂತರಲ್ಲದ ವಿದ್ಯಾರ್ಥಿಗಳಿಗೇ ಹೆಚ್ಚುಪ್ರಯೋಜನವಾಗುತ್ತದೆ ಎನ್ನುವುದನ್ನೂ ಮನಗಾಣಬೇಕು. ಆ ಮೂಲಕ, ಲಿಂಗಾಯತ ಸಮುದಾಯದ ಮೆರಿಟೋರಿಯಸ್ ವಿದ್ಯಾರ್ಥಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ವೃತ್ತಿಪರ ಶಿಕ್ಷಣ ಪಡೆಯಲು ಅವಕಾಶ ಸಿಕ್ಕರೆ ಅದು ಸಮಾಜದ ಬೆಳವಣಿಗೆಗೆ ಮಾರಕವಾಗುತ್ತದೆಯೇ ಅಥವಾ ಇತರರಿಗೆ ಏನಾದರೂ ತೊಂದರೆಯಾಗುತ್ತದೆಯೇ? ಲಿಂಗಾಯತರಿಗಿಂತ ಶ್ರೀಮಂತರಾಗಿರುವ ಜೈನರಿಗೆ ಆ ಸೌಲಭ್ಯವಿದೆ. ಬೌದ್ಧ, ಸಿಖ್, ಮುಸ್ಲಿಂ, ಕ್ರೈಸ್ತ ಸಮುದಾಯಗಳಿಗೆ ಹೆಚ್ಚು ಲಾಭವಾಗಿಲ್ಲವೇ? ಆದ್ದರಿಂದ ಲಿಂಗಾಯತರು ತಮ್ಮ ಸಮುದಾಯದ ಏಳಿಗೆಗಾಗಿ ಹೋರಾಡುವುದು ತಪ್ಪೇ?

– ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT