ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75: ಭಾಷಾಶೈಲಿ, ಸೊಗಡು ಅದ್ಭುತ– ವೀರೇಂದ್ರ ಹೆಗ್ಗಡೆ

Last Updated 19 ನವೆಂಬರ್ 2022, 10:19 IST
ಅಕ್ಷರ ಗಾತ್ರ

‘ಭಾಷಾಶೈಲಿ, ಸೊಗಡು ಅದ್ಭುತ’

1965ರಿಂದ ನಾನು ‘ಪ್ರಜಾವಾಣಿ’ಯನ್ನು ನಿತ್ಯವೂ ಓದುತ್ತಿದ್ದೇನೆ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಮನೆಗೆ ಬರುತ್ತಿದ್ದ ಒಂದೇ ಪತ್ರಿಕೆ ‘ಪ್ರಜಾವಾಣಿ’. ಪತ್ರಿಕೆಯು ಸದಾ ವಾರ್ತೆಗಳ ತಲೆಬರಹ (ಶೀರ್ಷಿಕೆ) ಮತ್ತು ವರದಿಯಲ್ಲಿ ವಿಶೇಷತೆ ಕಾಪಾಡಿಕೊಂಡು ಬಂದಿದೆ. ಸಾಮಾನ್ಯವಾಗಿ ನಾನು ದೂರದರ್ಶನದ ಮೂಲಕ ವಾರ್ತೆಗಳನ್ನು ತಿಳಿಯುತ್ತೇನೆ. ಬೆಳಿಗ್ಗೆ ಹಲವು ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತೇನೆ. ಆದರೆ, ಮಧ್ಯಾಹ್ನದ ಹೊತ್ತು ಪ್ರಜಾವಾಣಿ ಓದುತ್ತೇನೆ.

ವಿಶೇಷವಾಗಿ ನಾನು ತಿಳಿದುಕೊಂಡಿರುವ ವಿಷಯಗಳಿರಬಹುದು. ಅದನ್ನು ವರದಿ ಮಾಡುವ ರೀತಿ ಮತ್ತು ವಿಸ್ತಾರವಾಗಿ ಅಥವಾ ಸಂಕ್ಷಿಪ್ತವಾಗಿ ಮಾಹಿತಿ ಕೊಡುವ ವಿಶೇಷ ಕಲೆ ಪ್ರಜಾವಾಣಿಗೆ ಇದೆ. ಸಂಪಾದಕೀಯ, ವಿಶೇಷ ಲೇಖನಗಳು, ಸಮೀಕ್ಷೆಗಳು, ತನಿಖಾ ವರದಿ, ವಿಶ್ಲೇಷಣಾತ್ಮಕ ಲೇಖನಗಳು, ಪುರವಣಿಗಳಲ್ಲಿ ಪ್ರಕಟವಾಗುವ ವಿಶೇಷ ಲೇಖನಗಳು ಅಧಿಕೃತ ಮಾಹಿತಿ, ಮಾರ್ಗದರ್ಶನದ ಕಣಜವಾಗಿದ್ದು, ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. ಬಳಸುವ ಭಾಷಾ ಶೈಲಿ ಮತ್ತು ಸೊಗಡು ಕೂಡಾ ಅದ್ಭುತವಾಗಿದೆ.

ಪ್ರಜಾವಾಣಿಯಲ್ಲಿ ನಾನು ಪ್ರತಿ ದಿನ ಕಣ್ಣಾಡಿಸುವ ಮತ್ತೊಂದು ಅಂಕಣ ಬರಹ ಅಂದರೆ ‘‌‌25 ವರ್ಷಗಳ ಹಿಂದೆ’ ಮತ್ತು ‘50 ವರ್ಷಗಳ ಹಿಂದೆ’. ಇವುಗಳನ್ನು ಓದಿ ನಾನು ಹಿಂದಿನ ವಾರ್ತೆಗಳನ್ನು ಅವಲೋಕನ ಮಾಡಿ ಸ್ಮರಣೆ ಮಾಡಿಕೊಳ್ಳುತ್ತೇನೆ.

ಡಿ-.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಧರ್ಮಸ್ಥಳ

‘ಸಾಹಿತ್ಯದ ಲಾಲಿತ್ಯ...’

ವಿದ್ಯಾರ್ಥಿ ದೆಸೆಯಿಂದಲೂ ಓದಲು ಆತುರ ಹುಟ್ಟಿಸಿ ಬೆಳಿಗ್ಗೆ ಕಾತುರದಿಂದ ಕಾಯುವಂತೆ ಮಾಡಿದ್ದು ‘ಪ್ರಜಾವಾಣಿ’. ಓದಿನ ದಾಹಕ್ಕೆ ಬರವಣಿಗೆಯ ತಾಲೀಮು ಹಚ್ವಿಸಿದ ಪ್ರಜಾವಾಣಿಗೆ ನಾನು ಅಭಾರಿ. ವೈವಿಧ್ಯಮಯ ಉತ್ಕೃಷ್ಟ ಪುರವಣಿಗಳು ಹೊಸ ಓದಿಗೆ ಪೂರಕವಾದವು. ರೂಪಾತ್ಮಕ ಸಾಹಿತ್ಯದ ಲಾಲಿತ್ಯವನ್ನು ಉಣಬಡಿಸುವ ಮೂಲಕ ಮನ ಮನೆಯ ಜೀವನಾಡಿಯಾಯಿತು. ಎಲ್ಲ ಹಂತದ ವಯೋಮಾನಕ್ಕೂ ತಕ್ಕುದಾದ ಪತ್ರಿಕೆ ಎಂದರೆ ಪ್ರಜಾವಾಣಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ಪ್ರಜಾವಾಣಿಯೂ ಅಮೃತದಂತಹ ಜ್ಞಾನ ನೀಡುತ್ತಿರುವುದು ಸ್ತುತ್ಯಾರ್ಹ. ಇನ್ನಷ್ಟು ಜನಮನದ ವಿಶ್ವಾಸ ಗಳಿಸಲಿ ಎಂಬ ಆಶಯ ನನ್ನದು.

-ಆರ್.ಬಿ.ಗುರುಬಸವರಾಜ, ಶಿಕ್ಷಕರು, ಹೂವಿನಹಡಗಲಿ

ವಿದ್ಯಾರ್ಥಿಗಳು ಓದಲಿ...

‘ಪಿಯುಸಿ ನಾನು 1969ರಲ್ಲಿ ಬೆಂಗಳೂರಿಗೆ ಬಂದ ದಿನಗಳಿಂದಲೂ. ಸುಮಾರು 53 ವರ್ಷಗಳಿಂದ ‘ಪ್ರಜಾವಾಣಿ’ ಓದುತ್ತಿದ್ದೇನೆ. ಪತ್ರಿಕೆಯ ವಸ್ತುನಿಷ್ಟ ವರದಿ, ಅದರ ಭಾಷೆ, ಪುಟ ವಿನ್ಯಾಸ, ಮುದ್ರಣ, ಕಾಗದದ ಗುಣಮಟ್ಟ ಎಲ್ಲವೂ ಇಷ್ಟವಾಗಿದೆ. ಬೇರೆ ಯಾವುದೇ ಪತ್ರಿಕೆ ಓದಿದರೂ ಆ ದಿನ ‘ಪ್ರಜಾವಾಣಿ’ ಓದದಿದ್ದರೆ ಮನಸ್ಸು ಚಡಪಡಿಸುತ್ತದೆ. ಮುದ್ರಿತ ಪತ್ರಿಕೆಯ ಓದಿನ ಸುಖವ ತಂತಜ್ಞಾನದ ಮಾಧ್ಯಮ ಕೊಡಲಾರದು.

ಕನ್ನಡ ಕಾವ್ಯ, ಕಥೆ, ಪ್ರಬಂಧ, ವಿಚಾರದ ಬೆಳವಣಿಗೆಗೆ ಅದರ ಕೊಡುಗೆ ತುಂಬಾ ಇದೆ. ನನ್ನ ಕತೆಗಳು ಪ್ರಜಾವಾಣಿ, ಮಯೂರ, ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಲು ಶುರುವಾದಾಗಲೇ ನನಗೆ ಬರೆಯುವ ಆತ್ಮವಿಶ್ವಾಸ ಬಂದಿದ್ದು. ನಾನು ಪತ್ರಿಕೆಯ ಸಂಪಾದಕೀಯ ಪುಟವನ್ನು ತಪ್ಪದೆ ಓದುತ್ತೇನೆ. ವಿದ್ಯಾರ್ಥಿಗಳು ಹಾಗೂ ಕನ್ನಡ ಕಲಿಯುವವರು ಈ ಪತ್ರಿಕೆಯನ್ನು ತಪ್ಪದೆ ಓದಿದರೆ ಅವರ ಕನ್ನಡ ಭಾಷೆ ಸುಧಾರಿಸುತ್ತದೆ. ಪತ್ರಿಕೆ ಅಮೃತ ವರ್ಷ ಆಚರಿಸುತ್ತಿರುವುದು ಸಂತೋಷ ತಂದಿದೆ. ಪತ್ರಿಕಾ ಬಳಗಕ್ಕೆ, ಕೊಂಡು ಓದುತ್ತಿರುವ ಓದುಗರಿಗೆ ಅಭಿನಂದನೆಗಳು.

-ಕರೀಗೌಡ ಬೀಚನಹಳ್ಳಿ,ಬೆಂಗಳೂರು

‘ದಲಿತ, ಪ್ರಗತಿಪರ ಹೋರಾಟಗಳಿಗೆ ದನಿ’

ನನ್ನ ಮತ್ತು ಆತ್ಮೀಯ ಪ್ರಜಾವಾಣಿಯ ಸಂಬಂಧ 40 ವರ್ಷಗಳದು. ಪ್ರಾಥಮಿಕ ಶಾಲೆಯಲ್ಲಿದ್ದಾಗ ಫ್ಯಾಂಟಮ್ ನಂತಹ ಕಾರ್ಟೂನ್ ಓದುತ್ತ, ಶಾಲೆಯಲ್ಲಿ ಶೀರ್ಷಿಕೆಯನ್ನು ಓದುವವನಾಗಿ ತದನಂತರ ವೈಚಾರಿಕ, ವೈಜ್ಞಾನಿಕ ಮತ್ತು ಛೂಬಾಣದಂತಹ ಹರಿತ ವಿಡಂಬಣಾತ್ಮಕ ವಿಚಾರಗಳಿಂದ ಪ್ರಭಾವಿತನಾಗಿ ಪ್ರೌಢಾವಸ್ಥೆಯಲ್ಲಿ ಪ್ರಜಾವಾಣಿಯ ಅಭಿಮತ ಪ್ರಗತಿಪರ ಲೇಖನಗಳಿಂದ ನನ್ನ ಮನೋಭಾವವನ್ನು ರೂಪಿಸಿಕೊಂಡವನಾಗಿ ‘ಪ್ರಜಾವಾಣಿ’ಗೆ ಚಿರ‌ಋಣಿ. 70ರ ದಶಕದಲ್ಲಿ ರೈತ, ದಲಿತ ಮತ್ತು ಪ್ರಗತಿಪರ ಹೋರಾಟಗಳಿಗೆ ಧ್ವನಿಯಾದ ಪ್ರಜಾವಾಣಿ ಸಾವಿರಾರು ಶಿಕ್ಷಕರಲ್ಲಿ ಪ್ರಗತಿಪರ ಚಿಂತನೆ ರೂಪಿಸಿದೆ. ನಮ್ಮ ವಿದ್ಯಾರ್ಥಿಗಳಿಗೂ ರವಾನೆಯಾಗಿವೆ. ಇದು, ಒಂದು ತಲೆಮಾರನ್ನೇ ವಸ್ತುನಿಷ್ಠ, ವೈಚಾರಿಕ ಮತ್ತು ವೈಜ್ಞಾನಿಕ ವಿಚಾರಗಳಿಂದ ಪಕ್ವಗೊಳಿಸಿದ ಪತ್ರಿಕೆ. ‘ಪ್ರಜಾವಾಣಿ’ಯು ಶತಮಾನೋತ್ಸವ ಆಚರಣೆಯನ್ನು ದಾಟಿ ಯುಗಯುಗಗಾಂತರದ ಪತ್ರಿಕೆಯಾಗಲಿ ಎಂದು ಹಾರೈಕೆ.

-ಪ್ರೊ.ಎಸ್.ಭೈರೇಗೌಡ,ನಿವೃತ್ತ ಪ್ರಾಂಶುಪಾಲ ಬೆಂಗಳೂರು

‘ಅಚ್ಚುಮೆಚ್ಚಿನ ಪತ್ರಿಕೆ’

‘ಪ್ರಜಾವಾಣಿ’ ನಮ್ಮ ಕುಟುಂಬದವರೆಲ್ಲರ ಅಚ್ಚುಮೆಚ್ಚಿನ ದಿನಪತ್ರಿಕೆ. ಶಿವಮೊಗ್ಗದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದ ತಂದೆ ಹೊನ್ನಾಳಿ ರಾಘವೇಂದ್ರಾಚಾರ್‌ ಅವರು ತಮ್ಮ ಜೀವಿತಾವಧಿ ಪೂರ್ತಿ ಪ್ರಜಾವಾಣಿ ಬಿಟ್ಟು ಬೇರೆ ಪತ್ರಿಕೆ ಓದದ ‘ವ್ರತಾಚರಣೆ’ ನಡೆಸಿದವರು. ಇದು ಅವರ ವೈಯಕ್ತಿಕ ಆಯ್ಕೆ ಹಾಗೂ ಅಭಿಪ್ರಾಯಕ್ಕೆ ಸಂಭಂದಿಸಿದ ವಿಚಾರವಾಗಿತ್ತೇ ವಿನಹ ನಮಗೆ ಮೆಚ್ಚಿನ ಪ್ರಜಾವಾಣಿ ಜೊತೆಗೆ ಇತರ ಪತ್ರಿಕೆಗಳನ್ನು ಓದುವ ಹಾಗೂ ನಮ್ಮದೇ ಆದ ಅಭಿಪ್ರಾಯಗಳನ್ನು ಹೊಂದುವ ಸ್ವಾತಂತ್ರಕ್ಕೆ ಎಂದೂ ಅಡ್ಡಬರಲಿಲ್ಲ.

86 ವಯಸ್ಸಿನ ತಾಯಿ ಶಾಂತಾಬಾಯಿ ಅವರಿಗೆ ಇಂದಿಗೂ ಬೆಳಗಿನ ದೇವತಾ ಸ್ತೋತ್ರಗಳ ಜೊತೆಗೆ ಪ್ರಜಾವಾಣಿ ‘ಪಾರಾಯಣ’ ಅಗದೆ ಮನಶ್ಯಾಂತಿ ಇಲ್ಲ. ಕೆಲ ವರ್ಷಗಳ ಹಿಂದೆ ಪ್ರ.ವಾ. ಯಲ್ಲಿ ‘ಕನ್ನಡ ನಾಡಿನ ಅಪೂರ್ವ ಸಹೋದರರು’ ಎಂದು ಗುರುತಿಸಲ್ಪಟ್ಟಿದ್ದು ಇಂದಿಗೂ ನಮ್ಮ ಕುಟುಂಬದ ಹೆಮ್ಮೆ. ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭ ನಮ್ಮೆಲ್ಲರಿಗೂ ತುಂಬಾ ಖುಷಿ ತಂದಿದೆ.

-ಎಂ.ಶ್ರೀಪಾದ,ನಿವೃತ್ತ ಪ್ರಾಂಶುಪಾಲರು, ಎಸ್ಎಂಎಸ್ ಕಾಲೇಜು, ಬ್ರಹ್ಮಾವರ.

ನಿಮ್ಮ ಅನಿಸಿಕೆಗಳನ್ನು pvat75@prajavani.co.in ಗೆ ಕಳುಹಿಸಿ.

ಪೂರ್ಣ ಪ್ರತಿಕ್ರಿಯೆಗಳನ್ನು prajavani.net ನಲ್ಲಿ ನೋಡಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT