ಬುಧವಾರ, ಮಾರ್ಚ್ 29, 2023
23 °C

ಪ್ರಜಾವಾಣಿ@75: ಅತ್ಯಂತ ಆತ್ಮೀಯ ಪತ್ರಿಕೆ -ಚಂದ್ರಶೇಖರ ಕಂಬಾರ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

‘ಅತ್ಯಂತ ಆತ್ಮೀಯ ಪತ್ರಿಕೆ’

ವಿದೇಶದಲ್ಲಿ ಇದ್ದ ದಿನಗಳನ್ನು ಹೊರತುಪಡಿಸಿ, ದೇಶದಲ್ಲಿ ಇದ್ದಾಗ ಒಂದು ದಿನವೂ ಬಿಡದೆ ‘ಪ್ರಜಾವಾಣಿ’ಯನ್ನು ಓದುತ್ತಿದ್ದೇನೆ. ನನ್ನ ಅತ್ಯುತ್ತಮ ಬರಹಗಳೆಲ್ಲ ಇಲ್ಲಿ ಪ್ರಕಟಗೊಂಡಿವೆ. 40 ವರ್ಷಕ್ಕಿಂತ ಹಳೆಯದಾದ ಒಡನಾಟ ಈ ಪತ್ರಿಕೆಯ ಜತೆಗೆ ಇದೆ. ಹಲವು ಲೇಖನ, ಕಥೆಗಳನ್ನು ಇಲ್ಲಿ ಬರೆದಿದ್ದೇನೆ. ವಿಶೇಷ ಸಂದರ್ಭಗಳಲ್ಲಿ ನನ್ನಿಂದ ಲೇಖನಗಳನ್ನು ಬರೆಸಿದ್ದೂ ಇದೆ. ಅತ್ಯಂತ ಆತ್ಮೀಯವಾದ ಪತ್ರಿಕೆ ಇದಾಗಿದೆ.

-ಚಂದ್ರಶೇಖರ ಕಂಬಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

****

‘ನೈಜ ಸುದ್ದಿಗೆ ನಂಬರ್‌ ಒನ್‌’

1976ರಿಂದಲೂ ಪ್ರಜಾವಾಣಿ ಓದುತ್ತಿರುವೆ. ಪತ್ರಿಕೆಯ ವೈಚಾರಿಕ ಲೇಖನಗಳು ಎಲ್ಲರ ಗಮನಸೆಳೆಯುತ್ತಿವೆ. ಸಾಹಿತ್ಯ ವಲಯದವರು ಹಾಗೂ ನೈಜ ಸುದ್ದಿ ಬಯಸುವವರು ಮಾತ್ರ ಪ್ರಜಾವಾಣಿ ಓದುತ್ತಾರೆ. ಕಲೆ, ಸಾಹಿತ್ಯ, ಸಂಗೀತಕ್ಕೆ ಮೊದಲಿನಿಂದಲೂ ಒತ್ತು ಕೊಡುತ್ತಿರುವ ಪತ್ರಿಕೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಪಕ್ಷಪಾತವಿಲ್ಲದೇ ಎಲ್ಲ ವರ್ಗದ ಜನರನ್ನು ಒಳಗೊಳ್ಳುವ ಸಾಮಾಜಿಕ ಜವಾಬ್ದಾರಿ ಹೊಂದಿದೆ. ಆದ್ದರಿಂದ ನನ್ನ ದೃಷ್ಟಿಯಲ್ಲಿ ಪ್ರಜಾವಾಣಿಯೇ ನಾಡಿನ ನಂಬರ್ ಒನ್‌ ಪತ್ರಿಕೆ. ಮೊದಲು ಪ್ರಕಟವಾಗುತ್ತಿದ್ದ ಛೂ ಬಾಣ ಅಂಕಣ ಮತ್ತೆ ಆರಂಭಿಸಬೇಕು. ಹೊರರಾಜ್ಯ, ವಿದೇಶಗಳಲ್ಲಿಯೂ ಮುದ್ರಿತ ಪ್ರತಿ ಸಿಗುವಂತಾಗಲಿ. ಅಮೃತ ಸಂಭ್ರಮ ಇಮ್ಮಡಿಗೊಳ್ಳಲಿ.

-ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ, ಕೊಪ್ಪಳ

****

‘ಓದಿದರೆ ಪ್ರಜಾವಾಣಿ ಓದಬೇಕು’

ಪ್ರಜಾವಾಣಿ ನನ್ನ ಬಂಧು, ಬಳಗದ ಹಾಗೆ. ನನ್ನನ್ನೊಬ್ಬ ಬರಹಗಾರನಾಗಿ ಗುರುತಿಸಿದ, ಮೊದಲ ಸಂಭಾವನೆ ನೀಡಿದ ಪತ್ರಿಕೆ. ಒಂದು ಕಾಲದಲ್ಲಿ ‘ಪ್ರಜಾವಾಣಿ’ಗೆ ಏನಾದರೂ ಬರೆಯಬೇಕೆಂದಿದ್ದರೆ ನಮ್ಮೂರಿನ ಏಜೆಂಟರ ಲೆಟರ್‌ಹೆಡ್‌ ಮೂಲಕವೇ ಹೋಗಬೇಕು ಎಂಬ ಅಲಿಖಿತ ನಿಯಮವಿತ್ತು. ನನ್ನ ಒಂದು ಬರಹವನ್ನು ಕಳುಹಿಸಲು ಏಜೆಂಟರು ನಿರಾಕರಿಸಿದರು. ಆಗ ನಾನು ಒಂದು ಪೋಸ್ಟ್‌ ಕಾರ್ಡ್‌ನಲ್ಲಿ ನಮ್ಮೂರಿನಲ್ಲಿ ನಡೆಯುತ್ತಿದ್ದ ಕೋಣ ಬಲಿ ಪ್ರಕರಣದ ಬಗ್ಗೆ ಬರೆದು ಪತ್ರಿಕೆಗೆ ನೇರವಾಗಿ ಕಳುಹಿಸಿದೆ. ಕೆಲವೇ ದಿನಗಳಲ್ಲಿ ಪ್ರತಿಕ್ರಿಯೆ ಬಂದಿತು. ‘ಆ ಬರಹವನ್ನು ಕೋಣನ ಸ್ವಗತದಂತೆ ಬರೆಯಿರಿ’ ಎಂದು. ಈ ಮೂಲಕ ನಮ್ಮೂರಿನ ಅಲಿಖಿತ ನಿಯಮ ಮುರಿದಿದ್ದೆ. 

‘ನಾಡು ನಾಡಿ’ ಕಾಲಂನಲ್ಲಿ ಹೊಯ್ಸಳರ ಕಾಲದ ಶಿಲ್ಪಗಳು ಅನಾಥವಾಗಿ ಬಿದ್ದದ್ದರ ಬಗ್ಗೆ ಬರೆದಿದ್ದೆ. ಅದೂ ಪ್ರಕಟವಾಗಿತ್ತು. ಆ ಬಳಿಕ ಬರಹ ಸಾಂಗತ್ಯ ನಿರಂತರ ಮುಂದುವರಿಯಿತು. ಭಾನುವಾರದ ಪುರವಣಿಯಂತೂ ನಮ್ಮ ಅರಿವನ್ನು ವಿಸ್ತರಿಸಿದೆ. ಸಾಕಷ್ಟು ಸಂಚಿಕೆಗಳನ್ನು ತೆಗೆದಿರಿಸಿದ್ದೆ. ವೈಭವೀಕರಣರಹಿತ ಸುದ್ದಿ, ಸರಳ ಭಾಷೆ ಇದೆಲ್ಲಾ ಇಷ್ಟವಾಗುವ ಸಂಗತಿಗಳು. ಇಂದಿಗೂ ಸಂಬಂಧ ವಿಸ್ತರಿಸಿದೆ. ನಮ್ಮಪ್ಪ ಹೇಳುತ್ತಿದ್ದ ಹಾಗೆ ‘ಓದಿದರೆ ಪ್ರಜಾವಾಣಿ ಓದಬೇಕು’. ನಾನೂ ಅದನ್ನೇ ಹೇಳುತ್ತೇನೆ.

-ಪಿ.ಶೇಷಾದ್ರಿ, ಚಲನಚಿತ್ರ, ಕಿರುತೆರೆ ನಿರ್ದೇಶಕ

****

‘50 ವರ್ಷಗಳ ಬಾಂಧವ್ಯ’

ಆಗ ನಾನಿನ್ನೂ 9-10 ವರ್ಷದವನು. ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿದ್ದ ತಂದೆಯವರು ‘ಪ್ರಜಾವಾಣಿ’ಯ ನಿತ್ಯದ ಓದುಗರಾಗಿದ್ದರು. ರಾತ್ರಿಯಾದರೂ ಪೇಪರ್ ಓದಿಯೇ ಮಲಗುವುದು ಅವರ ಅಭ್ಯಾಸ. ಆಗೆಲ್ಲಾ ಸಂಪಾದಕ ಟಿ.ಎಸ್.ರಾಮಚಂದ್ರರಾಯರು ‘ಛೂಬಾಣ’ ಅಂಕಣದಲ್ಲಿ ರಾಜಕಾರಣಿಗಳನ್ನು ಚುಚ್ಚಿ, ವ್ಯಂಗ್ಯ ಬೆರೆಸಿ ಬರೆಯುತ್ತಿದ್ದರು. ಅದನ್ನು ಓದಿ ಹೇಳಿ ನನಗೂ ಸಂಪಾದಕೀಯ ಪುಟ, ವಾಚಕರವಾಣಿ ತಪ್ಪದೇ ಓದಲು ಹೇಳುತ್ತಿದ್ದರು.

ಆದರೆ ನನಗೆ ಪತ್ರಿಕೆಯಲ್ಲಿ ನಿತ್ಯ ಬರುತ್ತಿದ್ದ ಫ್ಯಾಂಟಮ್‌, ಮಾಡೆಸ್ಟಿಬ್ಲೇಸ್ ಕಾರ್ಟೂನ್ ಕತೆಗಳು, ಮೊದ್ದುಮಣಿ ವ್ಯಂಗ್ಯಚಿತ್ರ ಇಷ್ಟದ ವಿಷಯಗಳು. ಶುಕ್ರವಾರದ ಸಿನಿಮಾಪುಟ, ಭಾನುವಾರದ ಪುರವಣಿಯ ರಾಮನ್ ವ್ಯಂಗ್ಯ ಚಿತ್ರಕತೆ, ಚಿಣ್ಣರ ಕತೆಗಳನ್ನು ತಪ್ಪದೇ ಓದುತ್ತಿದ್ದೆ. ಕಾಲೇಜು ದಿನಗಳಲ್ಲಿ ರಾಜಕೀಯ ಅಂಕಣ, ಹಾ.ಮಾ.ನಾಯಕರ ಸಾಂಪ್ರತ, ವಾಚಕರವಾಣಿ, ಭಾನುವಾರದ ಪದಬಂಧ ತುಂಬಾ ಇಷ್ಟದ ವಿಷಯಗಳಾಯ್ತು.

ನಾಗೇಶ ಹೆಗಡೆಯವರ ಅಂಕಣ, ಸಂಗತ ತಪ್ಪದೇ ಓದುತ್ತೇನೆ. ನನ್ನ ಪ್ರಜಾವಾಣಿಯ ಓದು ಹೀಗೆ 50 ವರ್ಷಗಳಿಗಿಂತ ಹಳೆಯದು. ಅದರ ಆಕಾರ, ರೂಪ, ಅಂಕಣಗಳು ಬದಲಾದರೂ, ಬೇರೆ ಅನೇಕ ಪೇಪರುಗಳು ಬಂದರೂ ನನ್ನ ಪೇಪರ್ ಬದಲಾಗಿಲ್ಲ.

-ಟಿ.ಆರ್.ರಘುನಾಥ್, ನಾಗರಬಾವಿ,

****

‘ವಿಶಾಲ, ವಿಕಾಸಮುಖಿ ವಿಚಾರಶಾಲೆ’

‘ಪ್ರಜಾವಾಣಿ’ ಅಂತ ಅಂದ ತಕ್ಷಣ ಅಥವಾ ಅದರ ಲಾಂಛನ ಶೀರ್ಷಿಕೆ ನೋಡಿದ ತಕ್ಷಣ, ಅದೊಂದು ವಿಶಾಲ, ವಿಕಾಸಮುಖಿ ವಿಚಾರಶಾಲೆಯಾಗಿಯೇ ಮನಸ್ಸಿಗೆ ಬರುತ್ತದೆ. ಯಾವುದೇ ಆಮಿಷ, ಪೂರ್ವಗ್ರಹ, ಮುಲಾಜುಗಳಿಗೆ ಒಳಗಾಗದೇ ಕನ್ನಡವೆಂಬ ಮನಸ್ಸಾಕ್ಷಿಯನ್ನು ಜೀವಂತವಾಗಿ, ಜಾಗೃತವಾಗಿ ಇರಿಸುವ ಕಾಯಕವನ್ನು ವೈದ್ಯಕೀಯದಂತೆ, ಉಪಾಸನೆಯಂತೆ ನಡೆಸಿಕೊಂಡು ಬಂದ ಧೀಮಂತ ದೈನಿಕ ಇದು.

ಸಂಗ್ರಾಮ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ಸಾರ್ಥಕವಾಗುವಂತೆ ಸಮಾಜವನ್ನು ಕಟ್ಟುವಲ್ಲಿ ಶಿಕ್ಷಣದ ಪಾತ್ರ ಎಷ್ಟು ಮಹತ್ವದ್ದೋ ಪತ್ರಿಕೋದ್ಯಮದ ಭೂಮಿಕೆಯೂ ಅಷ್ಟೇ ಮುಖ್ಯವಾಗಿತ್ತು. ಆ ನಿಟ್ಟಿನಲ್ಲಿ ಘನವಾದ ಕಾಯಕವನ್ನು ‘ಪ್ರಜಾವಾಣಿ’ ಮಾಡಲು ಸಾಧ್ಯವಾದದ್ದು ಅದರ ಬಹುಮುಖಿ, ಪುರೋಗಾಮಿ ನಿಲುವಿನಿಂದ. ಇದರ ಸ್ಥೈರ್ಯಕ್ಕೆ ನೀರೆರೆದ, ಮೊದಲ ಸಂಚಿಕೆಯಿಂದ ಈ ಸಂಚಿಕೆಯ ತನಕದ, ‘ಸಂಪಾದಕೀಯ- ಲೇಖಕ- ವರದಿಗಾರ- ವಿತರಕ- ವಾಚಕ’ ಬಳಗದ ಎಲ್ಲರನ್ನೂ ಆಭಾರಪೂರ್ವಕವಾಗಿ ನೆನೆಯಬೇಕಾದ ಕ್ಷಣ ಇದು.

ನಮ್ಮೂರು ಗೋಕರ್ಣಕ್ಕೆ ಪತ್ರಿಕೆಯ ಬಂಡಲ್ ಸಂಜೆ ಐದೂವರೆಗೆ ಹುಬ್ಬಳ್ಳಿ ಬಸ್ಸಿನಲ್ಲಿ ಬರುತ್ತಿತ್ತು. ನಾವು ಗೆಳೆಯರು, ಭಾನುವಾರವಂತೂ ನೆಂಟರಿಗೆ ಕಾದಂತೆ ಆ ಬಸ್ಸಿಗೆ ಕಾಯುತ್ತಿದ್ದೆವು. ಹಿರಿಯ ಏಜೆಂಟ
ರಾಗಿದ್ದ ಅನಂತ ಶೆಟ್ಟರ ಮಗ ಬಾಲಕೃಷ್ಣ ಶೆಟ್ಟರು ನಮಗೆ ಬಸ್‌ ಸ್ಟ್ಯಾಂಡಿನಲ್ಲೇ ಬಂಡಲ್ ಒಡೆದು ಸಂಚಿಕೆ ಕೊಡುತ್ತಿದ್ದರು. ಅವರು ಬಂಡಲ್ ತೆಗೆಯುವುದಕ್ಕೆ ನಾವು ಉತ್ಕಂಠಿತರಾಗಿ ಕಾದ ಕ್ಷಣಗಳ ಕಾಂತತ್ವ... ಪದಗಳಿಗೆ ಮೀರಿದ್ದು. ಗೌರೀಶ ಕಾಯ್ಕಿಣಿಯವರು ಹೇಳುವ ‘ಸಂಯುಕ್ತ, ಚಿಂತನಶೀಲ ತನ್ಮಯತೆ’ಯ ದಾಹ ಅದು. ಈ ದಾಹವನ್ನು ಬಿತ್ತಿದ, ಮತ್ತು ಆತ್ಮ ಗೌರವಕ್ಕಿಂತಲೂ ಮಿಗಿಲಾದ ಮೌಲ್ಯವಿಲ್ಲ ಎಂಬುದನ್ನು ಪಾರದರ್ಶಕವಾಗಿ ಮನವರಿಕೆ ಮಾಡುತ್ತಲೆ ಬಂದ, ನೆಚ್ಚಿನ ‘ಪ್ರಜಾವಾಣಿ’ಗೆ ಬೆಚ್ಚನೆ ವಂದನೆ.

-ಜಯಂತ ಕಾಯ್ಕಿಣಿ, ಸಾಹಿತಿ,ಗೋಕರ್ಣ.

****

‘ಕನ್ನಡ ನೆಲದ ಸಾಕ್ಷಿಪ್ರಜ್ಞೆ’

ಮಲೆನಾಡ ತಪ್ಪಲಲ್ಲಿ ಹುಟ್ಟಿ ಬೆಳೆದ ನನಗೆ, ಶಾಲಾ ದಿನಗಳಲ್ಲಿಯೇ ‘ಪ್ರಜಾವಾಣಿ’ಯ ಸಾಂಗತ್ಯ ದೊರಕಿದ್ದು ಭಾಗ್ಯವೇ ಸರಿ. 50 ವರ್ಷಗಳಿಗೂ ಹೆಚ್ಚು ಅವಧಿಯಿಂದ ನನ್ನ ದೈನಂದಿನ ಚಟುವಟಿಕೆಯ ಭಾಗವಾಗಿದೆ ಅದರ ಓದು. ನನ್ನ ಬುದ್ಧಿ–ಭಾವವನ್ನು ಅನನ್ಯವಾಗಿ ರೂಪಿಸಿದ ಹಾಗೂ ಕನ್ನಡ ನೆಲೆದ ಸಾಕ್ಷಿಪ್ರಜ್ಞೆಯಂತಿರುವ ‘ಪ್ರಜಾವಾಣಿ’ಯು ಅಮೃತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಅಭಿನಂದನೆಗಳು.

ನಾಲ್ಕು ದಶಕಗಳಿಂದ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವ ನನಗೆ, ನಾಡಿನ ನೆಲ-ಜಲ-ಕಾಡಿನ ರಕ್ಷಣೆಯಲ್ಲಿ ‘ಪ್ರಜಾವಾಣಿ’ ತೋರುತ್ತಿರುವ ಕಾಳಜಿ ಮತ್ತು ಜವಾಬ್ದಾರಿ ಬಹಳ ಮಹತ್ವದ್ದಾಗಿ ತೋರುತ್ತದೆ. ರೈತರು, ಮಹಿಳೆಯರು, ವನವಾಸಿಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು- ಹೀಗೆ, ಸಮಾಜದ ಎಲ್ಲ ಸ್ತರಗಳ ಜನರು ತಳಮಟ್ಟದಲ್ಲಿ ನೈಸರ್ಗಿಕ ಪರಿಸರವನ್ನು ಉಳಿಸಿ ಬೆಳೆಸಲು ಶ್ರಮಿಸುವಾಗ, ಅಂತಹ ಎಲ್ಲ ರಚನಾತ್ಮಕ ಕಾರ್ಯಗಳಿಗೆ ಗಟ್ಟಿಧ್ವನಿಯಾದದ್ದು ಈ ಪತ್ರಿಕೆ. ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿಯನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ಪರಿಸರ ಸಂರಕ್ಷಣೆಯ ಇತಿಹಾಸದಲ್ಲಿ ‘ಪ್ರಜಾವಾಣಿ’ಗೆ ಮಹತ್ವದ ಸ್ಥಾನ ಸದಾ ಇರುತ್ತದೆ ಎಂಬುದು ನನ್ನ ಖಚಿತ ನಂಬಿಕೆ.

-ಅನಂತ ಹೆಗಡೆ ಅಶೀಸರ, ಅಧ್ಯಕ್ಷರು, ವೃಕ್ಷಲಕ್ಷ ಆಂದೋಲನ, ಬೆಂಗಳೂರು

****

ನಿಮ್ಮ ಅನಿಸಿಕೆಗಳನ್ನು pvat75@prajavani.co.in ಗೆ ಕಳುಹಿಸಿ.

ಪೂರ್ಣ ಪ್ರತಿಕ್ರಿಯೆಗಳನ್ನು prajavani.net ನಲ್ಲಿ ನೋಡಬಹುದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು