ಕನ್ನಡಿಗರಿಗೆ ಉದ್ಯೋಗ: ಅರಿಯಬೇಕಿದೆ ಹೊಣೆ

ರಾಜ್ಯದಲ್ಲಿನ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ಮೇರೆಗೆ ಉದ್ಯೋಗ ಲಭಿಸುವಂತೆ ಆಗಬೇಕು ಎಂಬ ಕೂಗು ಇಂದು ನಿನ್ನೆಯದಲ್ಲ. ಆಡಳಿತದ ಚುಕ್ಕಾಣಿ ಹಿಡಿದ ನಾಯಕರು ಈ ದಿಸೆಯಲ್ಲಿ ಪೂರಕವಾಗಿ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಎಷ್ಟರಮಟ್ಟಿಗೆ ಸಫಲವಾಗಿದೆ ಎಂಬುದರ ಆತ್ಮಾವಲೋಕನಕ್ಕೆ ಇದು ಸಕಾಲ. ‘ಇನ್ವೆಸ್ಟ್ ಕರ್ನಾಟಕ’ ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಕರ್ನಾಟಕದಲ್ಲಿ 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯದಲ್ಲಿ ಇರುವ ಕಾನೂನುಗಳು ಪ್ರಬಲವಾಗಿ ಇಲ್ಲದಿರು ವುದರಿಂದಲೇ ಕನ್ನಡಿಗರಿಗೆ ಉದ್ಯೋಗಗಳಲ್ಲಿ ವಂಚನೆಯಾಗುತ್ತಿದೆ.

ಹಿಂದೆ ರಾಜ್ಯದಲ್ಲಿ ಹೂಡಿಕೆ ಮಾಡಿದವರು ಸರ್ಕಾರ ನೀಡಿದ ಎಲ್ಲ ಸಹಾಯವನ್ನೂ ಪಡೆದು, ಕನ್ನಡಿಗರಿಗೆ ಉದ್ಯೋಗ ಕೊಡುವ ಮಾತು ಬಂದಾಗ ‘ನಾವು ಅರ್ಹತೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದ್ದರು. ಬಂಡವಾಳ ಹೂಡಿಕೆ, ಉದ್ಯಮಶೀಲತೆಗೆ ಪ್ರೋತ್ಸಾಹ ಎಲ್ಲವೂ ಸರಿಯೇ. ಆದರೆ ಇದು ಈ ನಾಡಿನ ಜನರನ್ನು ಒಳಗೊಳ್ಳದಿದ್ದರೆ ಅದಕ್ಕೆ ಅರ್ಥವಿಲ್ಲ. ಎಲ್ಲ ಸವಲತ್ತುಗಳನ್ನೂ ಪಡೆದು ಕರ್ನಾಟಕದಲ್ಲಿ ಉದ್ಯಮ ಕಟ್ಟುವವರು ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಸಾಮಾಜಿಕ ಜವಾಬ್ದಾರಿ ಪೂರೈಸುವಂತೆ ಸರ್ಕಾರ ನೋಡಿಕೊಳ್ಳಬೇಕು.

–ಬಾಬು ಶಿರಮೋಜಿ, ಬೆಳಗಾವಿ

ಎಸೆಯಬೇಕಿರುವುದು ಅರಬ್ಬಿ ಸಮುದ್ರಕ್ಕಲ್ಲ...!

ಪರಿಸರ ಉಳಿಸಲು ಇರುವ ನಿಯಮಗಳನ್ನು ಉಲ್ಲಂಘಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂಉದ್ಯಮಿಗಳನ್ನು ಅರಬ್ಬಿ ಸಮುದ್ರಕ್ಕೆ ಎಸೆಯಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಅವರು ಹೇಳಿರುವುದನ್ನು (ಪ್ರ.ವಾ., ಫೆ. 16) ಓದಿ ಸಂತೋಷವಾಯಿತು. ಆದರೆ ಆ ಹೇಳಿಕೆಯಲ್ಲಿ ಒಂದು ಬದಲಾವಣೆ ಮಾಡಬೇಕಾಗಿದೆ. ಅಂಥವರನ್ನು ಸದ್ಯಕ್ಕೆ ತಕ್ಕಮಟ್ಟಿಗೆ ಸ್ವಚ್ಛವಾಗಿರುವ ಅರಬ್ಬಿ ಸಮುದ್ರಕ್ಕೆ ಎಸೆದು ಅದನ್ನೂ ಮಲಿನ ಮಾಡುವುದರ ಬದಲು, ಬೆಂಗಳೂರಿನ ಕುಪ್ರಸಿದ್ಧ ವೃಷಭಾವತಿ ನದಿಗೆ ಎಸೆಯುವುದು ಒಳ್ಳೆಯದು.

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಬದ್ಧತೆ ಯನ್ನು ನಾವು ತೋರಬೇಕಿದೆ. ಸಂಬಂಧಿಸಿದ ಅಧಿಕಾರಿಗಳು ಈ ದಿಸೆಯಲ್ಲಿ ವಿವಿಧ ಹಂತಗಳಲ್ಲಿ ಕಟ್ಟುನಿಟ್ಟಿನ ಕ್ರಮ ಗಳನ್ನು ತೆಗೆದುಕೊಳ್ಳಬೇಕು.

– ಕಡೂರು ಫಣಿಶಂಕರ್, ಬೆಂಗಳೂರು

ಸಚಿವ ಸ್ಥಾನಕ್ಕೆ ಗೌರವ ತಾರದ ಮಾತು

ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಅವನ್ಯಾರೋ... ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ... ಅವನು ಒಂದು ವರದಿ ಕೊಟ್ಟ. ಅದನ್ನು ಇಟ್ಟುಕೊಂಡು ಈ ಆಟ ಆಡುತ್ತಿದ್ದಾರೆ’ (ಪ್ರ.ವಾ., ಫೆ. 16) ಎಂಬಿತ್ಯಾದಿ ನುಡಿಮುತ್ತುಗಳನ್ನು ಎಚ್.ಡಿ. ಕುಮಾರಸ್ವಾಮಿ ಉದುರಿಸಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು, ಪ್ರಸ್ತುತ ಕೇಂದ್ರ ಸಚಿವರಾಗಿರುವ ಇವರಿಂದ ಇಂತಹ ಮಾತು ಬರಬಾರದಿತ್ತು. ಈ ರಾಜಕಾರಣಿಗಳಿಗೆ ಅಧಿಕಾರಿಗಳ ವರ್ತನೆ ತಮ್ಮ ಪರವಾಗಿ ಇದ್ದರೆ ಅವರಿಗೆ ಗೌರವ ಕೊಡುತ್ತಾರೆ. ಇಲ್ಲವಾದಲ್ಲಿ ಈ ರೀತಿ ಏಕವಚನದಲ್ಲಿ ನಿಂದಿಸಿ ಅಗೌರವಯುತವಾಗಿ ಮಾತನಾಡಿ ಸಮಾಜದಲ್ಲಿ ಅವರ ಸ್ಥಾನವನ್ನು ಕುಗ್ಗಿಸಲು ಪ್ರಯತ್ನಿಸುತ್ತಾರೆ.

ಕಾನೂನಿನ ಅನ್ವಯ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಏಕವಚನದಲ್ಲಿ ಸಂಬೋಧಿಸಿ ಅವರನ್ನು ಮಾನಸಿಕ ವಾಗಿ ಕುಗ್ಗಿಸುವುದು ಸರಿಯಲ್ಲ. ಎಲ್ಲ ಮನುಷ್ಯರಿಗೂ ಅವರದೇ ಆದ ಸ್ವಾಭಿಮಾನ, ಆತ್ಮಗೌರವ, ಬಂಧುಬಳಗ ಇರು ತ್ತದೆ ಎಂಬುದನ್ನು ರಾಜಕಾರಣಿಗಳು ಅರಿಯುವುದು ಅವಶ್ಯ.

– ಕೆ.ಎಂ.ನಾಗರಾಜು, ಮೈಸೂರು

ಆಲಿಸಬೇಕಿದೆ ‘ಕಾಡಿನ ಶಬ್ದ’!

‘ವೇಗದ ಬದುಕಿನಲ್ಲಿಯೂ ಆಲಿಸುವ, ಗ್ರಹಿಸುವ, ಕಲಿಯುವ ಸಂಯಮ ಮೂಡಬೇಕು’ ಎಂಬ ವಿಚಾರವನ್ನು ಸತೀಶ್ ಜಿ.ಕೆ. ತೀರ್ಥಹಳ್ಳಿ ಅವರು ಹಲವು ಉದಾಹರಣೆಗಳ ಮೂಲಕ ಅರ್ಥಗರ್ಭಿತವಾಗಿ ವಿವರಿಸಿದ್ದಾರೆ (ಸಂಗತ, ಫೆ. 15). ಈ ಬರಹ ನನಗೆ ‘ಕಾಡಿನ ಶಬ್ದ’ ಎಂಬ ಹಳೆಯ ಕಥೆಯೊಂದನ್ನು ಜ್ಞಾಪಕಕ್ಕೆ ತಂದಿತು. ಆಗ ಚೀನಾದಲ್ಲಿ ರಾಜಕುಮಾರನೊಬ್ಬ ಗುರುಗಳು ತಿಳಿಸಿದಂತೆ ಕಾಡೊಂದರ ವಿಶಿಷ್ಟ ಶಬ್ದದ ಅನ್ವೇಷಣೆ ಯಲ್ಲಿ ತೊಡಗಿ, ಕಡೆಯಲ್ಲಿ ಗುರುವಿನ ಮಾರ್ಗದರ್ಶನದ ಮಾತುಗಳಿಂದ ಹೇಗೆ ಹೆಚ್ಚಿನ ತಿಳಿವಳಿಕೆಯನ್ನು ಗಳಿಸಲು ಸಾಧ್ಯವಾಯಿತು ಎಂಬುದನ್ನು ನಿರೂಪಿಸುವ ಒಂದು ಪ್ರಸಿದ್ಧವಾದ ಕಥೆ ಇದು. ‘ಕಾಡಿನ ಶಬ್ದ’ವನ್ನು ಆಲಿಸುವುದು ಎಂದರೆ ಬರೀ ಆನೆ, ಸಿಂಹದಂತಹ ಪ್ರಾಣಿಗಳು ಘೀಳಿಡುವುದು, ಗರ್ಜಿಸುವುದನ್ನು ಕೇಳುವುದಲ್ಲ. ಜಲಪಾತದ ಶಬ್ದ, ಪಕ್ಷಿಗಳ ಕಲರವ ಹಾಗೆಯೇ ಕಾಡಿನಲ್ಲಿ ಕತ್ತಲು ಹೆಚ್ಚಾದ ಹಾಗೆ ಚುರುಕಾಗುವ ನೂರಾರು ಕ್ರಿಮಿಕೀಟಗಳು ಹೊರಡಿಸುವ ಸೂಕ್ಷ್ಮ ಧ್ವನಿಗಳನ್ನು ಆಲಿಸುವುದೂ ಸೇರಿದೆ ಎಂಬ ತಿಳಿವಳಿಕೆ ರಾಜಕುಮಾರನಿಗೆ ಉಂಟಾಗುತ್ತದೆ.

‘ಕಾಡಿನ ಶಬ್ದಗಳನ್ನು ಆಲಿಸಿದ ನೀನು ಮುಂದಿನ ರಾಜನಾಗಿ ರಾಜ್ಯವನ್ನು ಮುನ್ನಡೆಸುವ ಸಮಯದಲ್ಲಿ ಗಮನಿಸಬೇಕಾದ ಸಂಗತಿಗಳು ಇವು’ ಎಂದು ಗುರು ವಿವರಿಸುತ್ತಾನೆ. ‘ಒಬ್ಬ ದಕ್ಷ, ಜನಪ್ರಿಯ ರಾಜನಾಗಬೇಕಾದರೆ ಶಬ್ದಗಳನ್ನು ಬರೀ ಕೇಳುವುದಲ್ಲ, ಆಲಿಸಬೇಕು. ಗದ್ದಲದ ನಡುವೆಯೂ ಮಿಡಿಯುತ್ತಿರಬಹುದಾದ ಸೂಕ್ಷ್ಮ ಧ್ವನಿ, ಸಪ್ಪಳಗಳನ್ನು ಕೇಳುವ ಮತ್ತು ಮನಸ್ಸಿನಲ್ಲಿ ನೋಡುವ ಶಕ್ತಿ ಗಳಿಸಿಕೊಳ್ಳಬೇಕು. ಆಗ ಮಾತ್ರ ರಾಜನಾದವನು ತನ್ನ ಪ್ರಜೆಗಳ ಹೃದಯದ ಮಿಡಿತ, ಅವರು ನೇರವಾಗಿ ಹೇಳದೇ ಇರುವ ಮತ್ತು ಹೇಳಲಾಗದ ಮಾತುಗಳನ್ನು ಆಲಿಸಬಲ್ಲ, ಕೇಳಬಲ್ಲ ಕೂಡಾ. ಈ ಶಕ್ತಿ ಪಡೆದುಕೊಂಡ ರಾಜ ತನ್ನ ಪ್ರಜೆಗಳ ಕಷ್ಟಸುಖಗಳನ್ನು ಅರಿತು ಅವರಲ್ಲಿ ಬೇಕಾದ ಧೈರ್ಯ ಮತ್ತು ಜೀವನೋತ್ಸಾಹವನ್ನು ತುಂಬಬಲ್ಲ. ರಾಜನಾದವನಿಗೆ ಯಾವಾಗ ಸ್ವಾರ್ಥಸಾಧಕರ ಬೂಟಾಟಿಕೆಯ, ಅಬ್ಬರದ, ಹೊಗಳಿಕೆಯ ಮಾತುಗಳಷ್ಟೇ ಕೇಳತೊಡಗುತ್ತವೋ ಆಗ ಅವನ ಅಧೋಗತಿ ಪ್ರಾರಂಭ ವಾಗುತ್ತದೆ. ರಾಜ್ಯಕ್ಕೆ ನಿಜವಾದ ಹಿತ ಬಯಸುವ ವ್ಯಕ್ತಿಗಳ ಅಭಿಪ್ರಾಯಗಳು, ಸಲಹೆ ಸೂಚನೆಗಳನ್ನು ಆಲಿಸುವ ಗುಣ ಅವನಲ್ಲಿ ಇರಬೇಕು’ ಎಂದು ಬೋಧಿಸುತ್ತಾನೆ. ಈ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರೆ ತಪ್ಪಾಗಲಾರದು.

– ಎಂ.ರವೀಂದ್ರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.