ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: 21 ಸೆಪ್ಟೆಂಬರ್ 2024

Published : 20 ಸೆಪ್ಟೆಂಬರ್ 2024, 22:55 IST
Last Updated : 20 ಸೆಪ್ಟೆಂಬರ್ 2024, 22:55 IST
ಫಾಲೋ ಮಾಡಿ
Comments

ಸಾಧಕರನ್ನು ಗುರುತಿಸುವ ಮಾನದಂಡ ಬದಲಾಗಲಿ

ವಿಶೇಷ ಸಾಧನೆ ಮಾಡಿದ ಸಾಧಕರಿಗೆ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡುವುದು ವಾಡಿಕೆ. ಆದರೆ ಪ್ರಸ್ತುತ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳುಗೌರವ ಡಾಕ್ಟರೇಟ್ ನೀಡುವುದರಲ್ಲಿ ತಾ ಮುಂದುನಾ ಮುಂದು ಎಂಬಂತೆ ಜಿದ್ದಿಗೆ ಬಿದ್ದಿವೆ. ರಾಜ್ಯದಲ್ಲಿನ ವಿಶ್ವವಿದ್ಯಾಲಯವೊಂದು ಕನ್ನಡದ ಪ್ರಮುಖ ಚಿತ್ರನಟರೊಬ್ಬರಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾದಾಗ, ಅವರು ‘ನನಗಿಂತಲೂ ಸಾಧನೆ ಮಾಡಿದ ಹಿರಿಯರಿಗೆ ಕೊಟ್ಟರೆ ಸರಿಯೆನಿಸುತ್ತದೆ’ ಎಂದರಲ್ಲದೆ, ಈಗಲೇ ಆ ಗೌರವವನ್ನುಸ್ವೀಕಾರ ಮಾಡುವಷ್ಟು ವೈಯಕ್ತಿಕವಾಗಿ ಸಾಧನೆ ಮಾಡಿಲ್ಲವೆಂದು ಸವಿನಯವಾಗಿಯೇ ತಿರಸ್ಕರಿಸಿದರು.

ವಿಶ್ವವಿದ್ಯಾಲಯಗಳು ಈಗಾಗಲೇ ಜನಪ್ರಿಯ ಆಗಿರುವವರ ಬೆನ್ನುಹತ್ತುವ ಬದಲು ಎಲೆಮರೆ ಕಾಯಿಯಂತೆ ಸಾಧನೆ ಮಾಡಿದವರನ್ನು ಗುರುತಿಸಿ, ಅವರಿಗೆ ಗೌರವ ಡಾಕ್ಟರೇಟ್ ನೀಡಿದರೆ ಅದರಿಂದ ಆ ಪದವಿಯ ಮೌಲ್ಯವೂ ಹೆಚ್ಚುತ್ತದೆ. ಈ ದಿಸೆಯಲ್ಲಿ ಯೋಚಿಸುವುದು ಒಳಿತು.

– ದಿವಾಕರ್ ಡಿ., ಮಂಡ್ಯ

ವ್ಯರ್ಥವಾಯಿತು ಪರೀಕ್ಷೆ ತಯಾರಿ

ಇದೇ 14 ಮತ್ತು 15ರಂದು ನಿಗದಿಯಾಗಿದ್ದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳ ಪರೀಕ್ಷೆಗಾಗಿ ತಯಾರಿ ನಡೆಸಿ, ಪರೀಕ್ಷೆ ಬರೆಯಬೇಕಾದ ಕೇಂದ್ರಕ್ಕೆ ಮುಂಚೆಯೇ ಹೋಗಿ ಕುಳಿತಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆ ಮುಂದೂಡಿಕೆಯ ವಿಷಯ ವಿಚಲಿತರನ್ನಾಗಿಸಿದೆ. ನಾಲ್ಕೈದು ತಿಂಗಳಿನಿಂದ ತಯಾರಿ ನಡೆಸಿ, ಎಲ್ಲಾ ಸಿದ್ಧತೆಗಳೊಂದಿಗೆ ದೃಢವಾಗಿ ಪರೀಕ್ಷೆ ಬರೆಯಲು ಹೋಗಿದ್ದ ನನ್ನಂತಹ ಎಷ್ಟೋ ಆಕಾಂಕ್ಷಿಗಳಿಗೆ ಇದು ಆಘಾತವನ್ನು ತಂದಿದೆ. ಪರೀಕ್ಷೆಯ ತಯಾರಿ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ.

– ವಿಶ್ವಪೂರ್ವ ಸತ್ಯಂಪೇಟೆ, ಸುರಪುರ, ಯಾದಗಿರಿ

ಜಗತ್ತಿಗೇ ನೀತಿ ಪಾಠ ಹೇಳುವವರು...

ಖಾಲಿಸ್ತಾನಿ ಉಗ್ರ ಸಂಘಟನೆಯ ಮುಖ್ಯಸ್ಥ ಗುರು ಪತ್ವಂತ್ ಸಿಂಗ್ ಪನ್ನು ದೂರಿನ ಮೇರೆಗೆ ಅಮೆರಿಕದ ಕೋರ್ಟ್ ಭಾರತಕ್ಕೆ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರಿಗೆ ಸಮನ್ಸ್ ಜಾರಿ ಮಾಡಿರುವುದು ಉದ್ಧಟತನದ ನಡೆ. ಅಮೆರಿಕದ ಶಾಲೆಗಳಲ್ಲಿ ಪ್ರತಿವರ್ಷ ನಡೆಯುವ ಶೂಟೌಟ್ ಪ್ರಕರಣಗಳಲ್ಲಿ ಹಲವಾರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಾರೆ. ಜಗತ್ತಿಗೆ ನೀತಿ ಪಾಠ ಹೇಳುವ ಅಮೆರಿಕದಲ್ಲೇ ಕಾನೂನು ಸುವ್ಯವಸ್ಥೆಯ ಗಂಭೀರ ಸಮಸ್ಯೆ ಇದೆ. ತನ್ನಲ್ಲೇ ಇಷ್ಟೊಂದು ಸಮಸ್ಯೆಗಳು ಇರುವ ಆ ದೇಶ, ಒಬ್ಬ ಭಯೋತ್ಪಾದಕನ ದೂರಿಗೆ ಸ್ಪಂದಿಸಿ ಭಾರತಕ್ಕೆ ಸಮನ್ಸ್ ಜಾರಿ ಮಾಡಿದ್ದು ಖಂಡನೀಯ. ಅಮೆರಿಕದ ‘ದೊಡ್ಡಣ್ಣನ ನೀತಿ’ಗೆ ತಕ್ಕ ಉತ್ತರವನ್ನು ಭಾರತ ನೀಡಿದ್ದು ಶ್ಲಾಘನೀಯ.

– ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ವಿಶ್ವಗುರು ಆದರ್ಶ ಆಚರಣೆಯಲ್ಲಿ ಬರಲಿ!

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ತಲೆದಂಡ ಕೇಳುವ, ಅವರ ನಾಲಿಗೆ ಕತ್ತರಿಸಬೇಕು ಎನ್ನುವ, ಅವರ ಅಜ್ಜಿಗೆ ಆದ ಗತಿಯೇ ಇವರಿಗೂ ಆಗುತ್ತದೆ ಎಂದೆಲ್ಲ ತಮ್ಮ ನಾಲಿಗೆ ಹರಿಯಬಿಡುವ ಬಿಜೆಪಿ ನಾಯಕರನ್ನು ಸಭ್ಯತೆ, ಸಂಸ್ಕೃತಿ ಇರುವ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಹೇಗಾದರೂ ಸಹಿಸಿಕೊಂಡಿದೆಯೋ?

ಪಂಡಿತ್ ಜವಾಹರಲಾಲ್‌ ನೆಹರೂ ಅವರು ಪ್ರತಿಪಕ್ಷದ ನಾಯಕ ಲೋಹಿಯಾ ಎಂದಾದರೂ ಸಭೆಗೆ ಬಾರದೇ ಇದ್ದರೆ ‘ಯಾಕೆ, ಅವರು ಕ್ಷೇಮವಾಗಿ ಇದ್ದಾರೆಯೇ?’ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಆದರೆ ‘ಭಾರತದ ವಿಶ್ವಗುರು’ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ವಿಶ್ವಗುರುವಿನ ಆದರ್ಶವು ಆಚರಣೆಯಲ್ಲಿ ಬೇಡವೇ?

– ಪ್ರೊ. ಶಿವರಾಮಯ್ಯ, ಬೆಂಗಳೂರು

ಕಾಯುವ ಸಂಕಷ್ಟ ಅರಿವಾಗುವುದೆಂದು?

ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಕೆಲಸಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾದ ಸಂಕಷ್ಟವನ್ನು ಬಣ್ಣಿಸುತ್ತಾ ಸಮಯದ ಮಹತ್ವವನ್ನು ತಿಳಿಸಿದ್ದಾರೆ ಸದಾಶಿವ್‌ ಸೊರಟೂರು (ಸಂಗತ, ಸೆ. 20). ಇತ್ತೀಚೆಗೆ ನನಗೂ ಬಹಳ ಹೊತ್ತು ಕಾಯುವಂತಹ ಇಂತಹುದೇ ಒಂದು ಪ್ರಸಂಗ ಎದುರಾಯಿತು. ಅನಾರೋಗ್ಯದ ನಿಮಿತ್ತ ನಾನು ಚಿತ್ರದುರ್ಗದಲ್ಲಿ ವೈದ್ಯರೊಬ್ಬರ ಬಳಿ ಹೋದಾಗ ಮಧ್ಯಾಹ್ನ 3.33ರಿಂದ ಸಂಜೆ 5.55ರ ತನಕ ಕಾಯಬೇಕಾಯಿತು. ವೈದ್ಯರು ತಮ್ಮ ನರ್ಸಿಂಗ್ ಹೋಮ್‌ನ ಆಡಳಿತಾತ್ಮಕ ಮಾತುಕತೆ, ಆ ಸಂಬಂಧದ ಕಡತಗಳಿಗೆ ಸಹಿ ಮಾಡುವುದರ ಜೊತೆಗೆ ಫೋನ್ ಅಟೆಂಡ್ ಮಾಡುತ್ತಾ ನಡುನಡುವೆ ರೋಗಿಗಳ ತಪಾಸಣೆ ಮಾಡುತ್ತಿದ್ದರು.

ದೂರದ ಊರುಗಳಿಂದ ಅಥವಾ ಎಲ್ಲೆಲ್ಲಿಂದಲೋ ತಪಾಸಣೆಗಾಗಿ ಬಂದಿದ್ದ ರೋಗಿಗಳನ್ನು ಪರೀಕ್ಷಿಸಿ ನಂತರ ತಮ್ಮ ಕೆಲಸ ಮಾಡಿಕೊಂಡಿದ್ದರೆ ಎಷ್ಟೊಂದು ಜನರಿಗೆ ಅನುಕೂಲವಾಗುತ್ತಿತ್ತು. ಯಾರ್‍ಯಾರಿಗೆ ಏನೇನು ತುರ್ತಿನ ಕೆಲಸಗಳು ಇರುತ್ತವೋ ಗೊತ್ತಿರುವುದಿಲ್ಲ. ಕಾಯಿಸುವುದು ಅನುಚಿತ ಎಂದೆನಿಸಿತಾದರೂ ಯಾರೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಸ್ಪತ್ರೆ ಸದಾ ರೋಗಿಗಳಿಂದ ತುಂಬಿರುತ್ತದೆ ಎಂಬ ಹೆಸರು ಪಡೆಯಲು ಈ ರೀತಿ ಮಾಡುವುದಿದೆ ಎಂದು ಅಲ್ಲಿದ್ದ ಒಬ್ಬರು ಹೇಳಿದರು. ಇರಬಹುದು ಅಂದುಕೊಂಡೆ. ಸಾರ್ವಜನಿಕರ ಸಮಯ ಹಾಳು ಮಾಡಿ ತಮ್ಮ ಕೀರ್ತಿ, ಪ್ರತಿಷ್ಠೆ ಹೆಚ್ಚಿಸಿಕೊಳ್ಳುವುದಾದರೆ ಸಮಯಕ್ಕೆಲ್ಲಿದೆ ಬೆಲೆ? ಮುತ್ತು ಕಳೆದರೆ ಸಿಕ್ಕೀತು, ಹೊತ್ತು ಕಳೆದರೆ ಸಿಕ್ಕೀತೇ ಎನ್ನುವ ನಾಣ್ಣುಡಿ ಇಂತಹ ಜನರಿಗೆ ಅರ್ಥವಾಗುವುದಾದರೂ ಯಾವಾಗ?

– ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT