ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು–
Published 23 ಆಗಸ್ಟ್ 2023, 20:16 IST
Last Updated 23 ಆಗಸ್ಟ್ 2023, 20:16 IST
ಅಕ್ಷರ ಗಾತ್ರ

ಶಿಕ್ಷಣ ನೀತಿ: ಪಂಥಾಹ್ವಾನ ಬೇಡ

ರಾಷ್ಟ್ರೀಯ ಶಿಕ್ಷಣ ನೀತಿಯ ಪರ ಮತ್ತು ವಿರುದ್ಧದ ನಿಲುವುಗಳು ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವುದು
ವಿಪರ್ಯಾಸದ ಸಂಗತಿ. ಶಿಕ್ಷಣ ತಜ್ಞರಲ್ಲಿ ಕೆಲವರು ಈ ನೀತಿಯ ಪರವಾಗಿದ್ದರೆ, ಇನ್ನು ಕೆಲವರು ವಿರುದ್ಧವಾಗಿದ್ದಾರೆ. ನಾವು ಯಾರನ್ನು ಅನುಸರಿಸಬೇಕು?

ಮುಖ್ಯಮಂತ್ರಿ ನೇತೃತ್ವದಲ್ಲಿ ಶಿಕ್ಷಣ ನೀತಿ ಕುರಿತು ನಡೆದ ಚರ್ಚೆಯಲ್ಲಿ ಕುಲಪತಿಗಳು ಪರ ಅಥವಾ ವಿರೋಧದ ಯಾವ ಅಭಿಪ್ರಾಯವನ್ನೂ ಖಚಿತವಾಗಿ ವ್ಯಕ್ತಪಡಿಸಿಲ್ಲವೆಂದರೆ ಏನರ್ಥ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು 8 ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಅವರು ತಿರುಗೇಟು ನೀಡಿದ್ದು ಏನನ್ನು ಸೂಚಿಸುತ್ತದೆ? ಚರ್ಚೆ ರಾಜಕೀಯ ಮುಕ್ತವಾಗಿರಲಿ. ಪಂಥಾಹ್ವಾನ ನೀಡುವಂಥ ಬೆಳವಣಿಗೆ ಒಳ್ಳೆಯದಲ್ಲ.

ಶಿವಕುಮಾರ ಬಂಡೋಳಿ, ಹುಣಸಗಿ

ಅಮಾನವೀಯ ವ್ಯವಸ್ಥೆಗೆ ಕನ್ನಡಿ

ಹದಿನಾಲ್ಕು ತಿಂಗಳ ಬಾಕಿ ವೇತನಕ್ಕೆ ಆಗ್ರಹಿಸಿ ಕನಕಪುರ ತಾಲ್ಲೂಕಿನಲ್ಲಿ ಇಬ್ಬರು ಪೌರ ಕಾರ್ಮಿಕರು ತಮ್ಮ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದು, ನಮ್ಮ ವ್ಯವಸ್ಥೆಯ ಅಮಾನವೀಯ ಮುಖವನ್ನು ತೋರಿಸುತ್ತದೆ. ಇಡೀ ಸಮಾಜವನ್ನು ಶುಚಿಯಾಗಿ ಇಟ್ಟುಕೊಳ್ಳುವಲ್ಲಿ ಪೌರಕಾರ್ಮಿಕರ ಪಾತ್ರ ದೊಡ್ಡದು. ಸಕಾಲಕ್ಕೆ ವೇತನ ನೀಡದಿದ್ದರೆ ಅವರು ಕುಟುಂಬ ನಿರ್ವಹಿಸುವುದು ಹೇಗೆ? ಅವರ ಸೇವೆಯನ್ನು ಪಡೆದ ಮೇಲೆ ಅವರಿಗೆ ಸಲ್ಲಬೇಕಾದ ವೇತನವನ್ನು ಕಾಲಕಾಲಕ್ಕೆ ಪಾವತಿಸಬೇಕು. ಇಂಥವರ ಹೊಟ್ಟೆಯ ಮೇಲೆ ಹೊಡೆಯುವುದು ಯಾವ ನ್ಯಾಯ? ‘ನೊಂದವರ ನೋವ ನೋಯದವರೆತ್ತ ಬಲ್ಲರು?’ ಎಂಬ ಅಕ್ಕಮಹಾದೇವಿಯ ವಚನ ಇಂತಹ ಕಲ್ಲು ಮನಸ್ಸಿನ ಅಮಾನವೀಯ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.

ನಮ್ಮ ಸಂವಿಧಾನದ ಸಮಾನತೆಯ ಆಶಯವು ಬರೀ ಹೇಳಿಕೊಳ್ಳುವುದಕ್ಕೆ ಸೀಮಿತವೇ? ವಾಸ್ತವದಲ್ಲಿ ಅಳವಡಿಸಿ
ಕೊಳ್ಳಲು ಆಗುವುದಿಲ್ಲವೇ? ಕನಿಷ್ಠಪಕ್ಷ ಸ್ವಲ್ಪ ಮಾನವೀಯತೆಯಾದರೂ ಬೇಡವೇ ನಮ್ಮ ಆಡಳಿತಶಾಹಿಗೆ?

ಬಸೆಟ್ಟೆಪ್ಪ ಡಿ.ಎಂ., ಬೆಂಗಳೂರು

ಲಿಂಗ ಸಮಾನತೆಗೆ ಪೂರಕ ಕ್ರಮ

ತರಗತಿಯ ಬೋಧನಾ ಸಮಯದಲ್ಲಿ ಕೆಲವು ಪದಗಳಿಗೆ ವಾಕ್ಯ ರಚಿಸುವಾಗ ‘ಬೆವರು ಸುರಿಸಿ’ ಎನ್ನುವ ಪದಕ್ಕೆ ನಾನು, ‘ಹೊಲದಲ್ಲಿ ಬೆವರು ಸುರಿಸಿ ದುಡಿದು ಬಂದ ಅಮ್ಮನಿಗೆ ಅಪ್ಪ ಕಾಫಿ ಮಾಡಿಕೊಟ್ಟರು’ ಎಂದು ಬರೆಸಿದೆ. ಮಕ್ಕಳು ಒಂದು ಕ್ಷಣ ಮುಸಿಮುಸಿ ನಕ್ಕರು. ಆಗ ಪ್ರಶ್ನೆಗಳನ್ನು ಕೇಳುತ್ತಾ ಕೇಳುತ್ತಾ, ಕೆಲಸ ಅಥವಾ ಉದ್ಯೋಗ ಎನ್ನುವುದು ಗಂಡು, ಹೆಣ್ಣು ಇಬ್ಬರಲ್ಲೂ ಸಮಾನವಾಗಿ ಹಂಚಿಕೆಯಾಗಿರುತ್ತದೆ ಎಂಬುದನ್ನು ಅವರೇ ಅರಿತುಕೊಂಡರು. ಡಾ. ಕೆ.ಎಸ್.ಪವಿತ್ರ ಅವರು ಹೇಳಿದಂತೆ (ಸಂಗತ, ಆ. 22), ಲಿಂಗ ಸಮಾನತೆಯ ಮನಃಸ್ಥಿತಿ
ಯನ್ನು ಬೆಳೆಸಲು ಇಂತಹ ಸಣ್ಣ ಸಣ್ಣ ಸಂಗತಿಗಳು ಗಮನಾರ್ಹ ಪಾತ್ರವನ್ನು ವಹಿಸುತ್ತವೆ.

ಸುವರ್ಣ ಸಿ.ಡಿ., ತರೀಕೆರೆ

ಶಿಕ್ಷಕರಲ್ಲಿ ವಿಭಜನೆ ತರವಲ್ಲ

ಸುಮಾರು ಏಳೆಂಟು ವರ್ಷಗಳಿಂದ ಸರ್ಕಾರಿ ಶಾಲೆಗಳಿಗೆ ಆಸರೆಯಾಗಿರುವುದು ಅತಿಥಿ ಶಿಕ್ಷಕರು. ಕೆಲವು ಶಾಲೆ
ಗಳಲ್ಲಿ ಇಂದಿಗೂ ಕಾಯಂ ಶಿಕ್ಷಕರೇ ಇಲ್ಲ. ಇಂತಹ ಕಡೆ ಪ್ರಮುಖ ಪಾತ್ರ ವಹಿಸುವವರು ಅತಿಥಿ ಶಿಕ್ಷಕರು. ಆದರೆ ಇಷ್ಟೆಲ್ಲ
ಸೇವೆ ಸಲ್ಲಿಸಿದರೂ ಅತಿಥಿ ಶಿಕ್ಷಕರ ಯಾವ ದಾಖಲೆಯನ್ನೂ ಶಿಕ್ಷಣ ಇಲಾಖೆಯು ನಿರ್ವಹಿಸುವುದಿಲ್ಲ. ಇನ್ನು ಅವರ ಹಾಜರಾತಿ ದಾಖಲಾಗುವುದು ಹಳೆಯ ನೋಟ್‌ಪುಸ್ತಕದಲ್ಲಿ. ಸಂಬಳ ಆದ ನಂತರ ಆ ಪುಸ್ತಕ ಲೆಕ್ಕಕ್ಕಿಲ್ಲದಂತೆ
ಮಾಯವಾಗುತ್ತದೆ. ಅತಿಥಿ ಶಿಕ್ಷಕರಿಗೆ ತರಬೇತಿ ನೀಡಲು ಸಹ ಹಿಂದೇಟು ಹಾಕಲಾಗುತ್ತದೆ. ಒಟ್ಟಾರೆ, ಕಾಯಂ ಶಿಕ್ಷಕರಂತೆಯೇ ಇವರಿಂದ ಸೇವೆ ಪಡೆದರೂ ಇವರು ಇರುವುದು ಸಂಬಳಕ್ಕಾಗಿ ಮಾತ್ರ ಎಂದು ಶಿಕ್ಷಣ ಇಲಾಖೆಯು ತಿಳಿದಿರುವಂತಿದೆ. ಅತಿಥಿ ಶಿಕ್ಷಕರನ್ನು ಇತರ ಶಿಕ್ಷಕರಿಂದ ಹೀಗೆ ವಿಭಜಿಸಿ ನೋಡುವುದು ಸರಿಯಲ್ಲ.

ಸಣ್ಣಮಾರಪ್ಪ, ಚಂಗಾವರ, ಶಿರಾ

ಆನು ಒಲಿದಂತೆ ಹಾಡುವುದೇ ಅಭಿವ್ಯಕ್ತಿ ಸ್ವಾತಂತ್ರ್ಯ

ಕುವೆಂಪು ವಿರಚಿತ ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆ ಧಾಟಿಯಲ್ಲೇ ಹಾಡಬೇಕೆಂದು ಈ ಹಿಂದಿನ ಸರ್ಕಾರ ಆದೇಶ ಹೊರಡಿಸಿರುವುದನ್ನು ಪ್ರಶ್ನಿಸಿ, ಸಿ.ಅಶ್ವತ್ಥ್ ಅವರ ಅನುಯಾಯಿ ಗಾಯಕ ಕಲಾವಿದರು ಕೋರ್ಟಿನ ಮೆಟ್ಟಿಲೇರಿರುವುದು ಈಗ ಚರ್ಚೆಯ ವಿಷಯವಾಗಿದೆ. ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವತ್ಥ್ ಇಬ್ಬರೂ ಸಂಗೀತ ದಿಗ್ಗಜರು. ಬದುಕಿದ್ದಾಗ ಇಬ್ಬರೂ ಪರಸ್ಪರ ಸ್ನೇಹ, ಗೌರವದಿಂದ ಇದ್ದವರು. ಅವರು ಹೋದ ಮೇಲೆ ಅವರ ಅನುಯಾಯಿ ಗಾಯಕ ಕಲಾವಿದರು ರಾಗದ ಬೆನ್ನು ಹತ್ತಿ ಶತ್ರುತ್ವದ ದಾರಿ ಹಿಡಿಯುವ ವಾತಾವರಣ ಸೃಷ್ಟಿಯಾಗಿರುವುದು ಸರಿಯಲ್ಲ.

‘ತಾಳಮಾನ ಸರಿಸವನರಿಯೆ/ ಓಜೆ ಬಜಾವಣೆಯ ಲೆಕ್ಕವನರಿಯೆ/ ಅಮೃತಗಣ ದೇವಗಣವನರಿಯೆ/ ಕೂಡಲಸಂಗಮ ದೇವಾ/ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂದಿರುವ ಬಸವಣ್ಣನವರು, ಹನ್ನೆರಡನೇ ಶತಮಾನದಲ್ಲಿಯೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಸಾರಿದ್ದಾರೆ. ಲಯ ವಿನ್ಯಾಸದಲ್ಲಿ ಹಾಡು ಕಟ್ಟುವ, ಸ್ವರ, ವ್ಯಾಕರಣ ಪಾಂಡಿತ್ಯಕ್ಕಿಂತಲೂ ಸಾಹಿತ್ಯ ಮತ್ತು ಸಮಾಜದ ಸಂಬಂಧ ಬೆಸೆಯುವುದೇ ಹಾಡಿನ ಮುಖ್ಯ ಉದ್ದೇಶವಾಗಬೇಕು. ‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎನ್ನುವ ಪಂಪಕವಿಯ ದೇಶಪ್ರೇಮ, ‘ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ, ಬಾಯಿ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ ಪದವಾಡ್ತೀನಿ’ ಎನ್ನುವ ಜಿ.ಪಿ.ರಾಜರತ್ನಂ ಅವರ ಕನ್ನಡದ ಬದ್ಧತೆ ಅರ್ಥವಾಗಲು ಕನ್ನಡಿಗರು ಯಾವ ರಾಗ ಕಲಿಯಬೇಕು? ಆದ್ದರಿಂದ ಈ ವಿಷಯದಲ್ಲಿ ಸರ್ಕಾರವು ಚರ್ಚೆಗೆ ಅವಕಾಶ ಕಲ್ಪಿಸಿ, ಆನು ಒಲಿದಂತೆ ಹಾಡುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ಆದೇಶ ಹಿಂಪಡೆದು, ಕಲಾವಿದರು ಮತ್ತು ಕನ್ನಡಿಗರ ಸಂಬಂಧವನ್ನು ಬೆಸೆಯುವ ಕೆಲಸ ಮಾಡಲಿ.

ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT