ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 14 ಡಿಸೆಂಬರ್ 2023, 19:14 IST
Last Updated 14 ಡಿಸೆಂಬರ್ 2023, 19:14 IST
ಅಕ್ಷರ ಗಾತ್ರ

ದೇಹ ತಪಾಸಣೆಯಲ್ಲಿ ಎಡವಿದರೇ?

ಸಂಸತ್ತಿನ ಮೇಲಿನ ದಾಳಿಯ ಕಹಿ ನೆನಪಿನ ದಿನವೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದಿರುವ ಆಘಾತಕಾರಿ ಬೆಳವಣಿಗೆಯು ಅಲ್ಲಿನ ಭದ್ರತೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಒಟ್ಟು ಐದು ರೀತಿಯಲ್ಲಿ ಒಬ್ಬ ವ್ಯಕ್ತಿಯ ತಪಾಸಣೆ ನಡೆಸಿ ಸದನದ ಒಳಕ್ಕೆ ಬಿಡಲಾಗುತ್ತದೆ ಮತ್ತು ಒಳಗೆ ಹೋದವರನ್ನು ಕೂಡ ಅಲ್ಲಿನ ಭದ್ರತಾ ಸಿಬ್ಬಂದಿ ಗಮನಿಸುತ್ತಿರುತ್ತಾರೆ ಎಂದು ಕೇಳಿದ್ದೇವೆ. ಭದ್ರತಾ ಸಿಬ್ಬಂದಿಯು ಮೂರನೇ ಹಂತದಲ್ಲಿ ವ್ಯಕ್ತಿಗಳ ದೇಹವನ್ನು ತಡವಿ ತಪಾಸಣೆ ನಡೆಸಬೇಕು. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ದರೂ ಆ ಯುವಕರು ಸ್ಮೋಕ್ ಕ್ಯಾನ್‌ಗಳನ್ನು ಹೇಗೆ ಒಳಗೆ ತಂದರು ಎಂಬುದೇ ನಿಗೂಢ ಮತ್ತು ವಿಸ್ಮಯ.

ಮೂರನೇ ಹಂತದ ತಪಾಸಣೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮೈಮರೆತು ಭದ್ರತೆಯನ್ನು ಸಡಿಲಗೊಳಿಸಿ
ದರೇ ಎಂಬ ಪ್ರಶ್ನೆ ಮೂಡುತ್ತದೆ. ಸದನದ ಇತಿಹಾಸದಲ್ಲಿ ಇದೊಂದು ಕಪ್ಪುಚುಕ್ಕೆ. ಸದನ ನಡೆಯುವಾಗ ವೀಕ್ಷಕರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದದ್ದು ಭದ್ರತಾ ಸಿಬ್ಬಂದಿಯ ಹೊಣೆಯಾಗಿರುತ್ತದೆ. ಇಂಥ ಪ್ರಕರಣ ಯಾವುದೇ ಕಾರಣಕ್ಕೂ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ.

⇒ಮಲ್ಲತ್ತಹಳ್ಳಿ ಎಚ್. ತುಕಾರಾಂ, ಬೆಂಗಳೂರು

ಜನರ ಮಾನಸಿಕತೆ ಬದಲಾಗಲಿ

ಮನುಸ್ಮೃತಿ, ಮನುವಾದ ಎಂಬ ಪದಗಳನ್ನು ಇಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿದ್ದೇವೆ. ವಿಶೇಷವಾಗಿ, ಬ್ರಾಹ್ಮಣರನ್ನೇ ಗುರಿಯಾಗಿಟ್ಟು ಈ ಪದಗಳನ್ನು ಬಳಸಲಾಗುತ್ತಿದೆ. ಇದು ಸರಿಯಲ್ಲ. ನಾನು ಜಾತಿಯಲ್ಲಿ ಒಬ್ಬ
ಬ್ರಾಹ್ಮಣನಾಗಿದ್ದರೂ ನಮ್ಮ ಮನೆಯಲ್ಲಿ ಮಾತ್ರವಲ್ಲದೆ ಇತರ ಯಾವ ಮನೆಯಲ್ಲೂ ಈ ಗ್ರಂಥ ಇರುವುದನ್ನು ನಾನು ನೋಡಿಲ್ಲ.

ಸಮಾಜದಲ್ಲಿ ಜಾತಿ ತಾರತಮ್ಯ ಇಂದಿಗೂ ಇದೆ. ಅದು ಹೋಗಬೇಕು. ಆದರೆ ಮನುಸ್ಮೃತಿ ಗ್ರಂಥವನ್ನೇ ಮುಂದಿಟ್ಟು, ಜಾತಿ ತಾರತಮ್ಯ ಮಾಡಲಾಗುತ್ತಿದೆ ಎನ್ನುವುದು ಹಸಿ ಸುಳ್ಳು. ಯಾವ ತಂದೆ ತಾಯಿಯೂ ಕೆಟ್ಟ ಕೆಲಸ ಮಾಡಿ ಎಂದು ಮಕ್ಕಳಿಗೆ ಹೇಳಿಕೊಡುವುದಿಲ್ಲ. ಒಳ್ಳೆಯದನ್ನೇ ಹೇಳಿಕೊಡುತ್ತಾರೆ. ಜನರ ಮಾನಸಿಕತೆ ಕಾಲಕ್ಕೆ ತಕ್ಕಂತೆ ಬದಲಾಗಬೇಕಿದೆ ಅಷ್ಟೆ.⇒ಗುರು ಜಗಳೂರು, ಹರಿಹರ

ಗುರುತಿನ ಚೀಟಿಗೆ ಬಂತು ಎಲ್ಲಿಲ್ಲದ ಮಹತ್ವ

ಅದೊಂದು ಕಾಲವಿತ್ತು, ಯಾರು ಎಲ್ಲಿ ಬೇಕಾದರೂ ಸ್ವಚ್ಛಂದವಾಗಿ ಓಡಾಡಬಹುದಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದಲ್ಲಿ ಭಾರತದ ಯಾವುದೇ ಸ್ಮಾರಕವನ್ನು ವೀಕ್ಷಿಸಲು, ಅಣೆಕಟ್ಟುಗಳ ಮೇಲೆ ನಡೆದಾಡಲು ಅವಕಾಶವಿತ್ತು. ಜನಸಾಮಾನ್ಯರಿಗೆ ವಿಮಾನ ಪ್ರಯಾಣ ಗಗನಕುಸುಮವಾಗಿದ್ದಾಗ, ವಿದ್ಯಾರ್ಥಿಗಳೂ ವಿಮಾನದ ಸಮೀಪಕ್ಕೆ ತೆರಳಿ ಅದನ್ನು ಮುಟ್ಟಿ ಆನಂದಿಸಬಹುದಿತ್ತು. ಬರೀ ಗಣ್ಯರ ಒಂದು ಬಾಯಿಮಾತಿನ ಮೇಲೆ ವಿಧಾನಸೌಧವನ್ನು ವೀಕ್ಷಿಸಬಹುದಿತ್ತು. ಬಂಧುಮಿತ್ರರು ವಿದೇಶಕ್ಕೆ ತೆರಳುವಾಗ ಈಗಿನಂತೆ ಹೆಚ್ಚಿನ ನಿರ್ಬಂಧವಿಲ್ಲದೆ ವಿಮಾನದ ಸಮೀಪದವರೆಗೂ ತೆರಳಿ ಬೀಳ್ಕೊಡಬಹುದಿತ್ತು. ಪರ ಊರಿಗೆ ಹೋದಾಗ ಯಾವುದೇ ಪುರಾವೆ ತೋರಿಸದೆ ಹೋಟೆಲ್‌ ರೂಮ್‌ಗಳಲ್ಲಿ ತಂಗಬಹುದಿತ್ತು.

ಈ ಮಾತುಗಳನ್ನು ಇಂದಿನ ಯುವಜನರಿಗೆ ಹೇಳಿದರೆ ನಂಬಲಾರರು. ಯಾಕೆಂದರೆ ಈಗ ಎಲ್ಲೇ ಹೋಗಲಿ, ಎಲ್ಲ ಕಡೆಗಳಲ್ಲೂ ಗುರುತಿನ ಚೀಟಿ ತೋರಿಸಬೇಕಾದುದು ಅತ್ಯವಶ್ಯ. ಕೊನೆಗೆ ರೈಲು ನಿಲ್ದಾಣದ ಲಗೇಜ್‌ ರೂಮ್‌ನಲ್ಲಿ ಲಗೇಜ್‌ ಇಡುವುದಕ್ಕೂ ಗುರುತಿನ ಚೀಟಿ ಬೇಕೇ ಬೇಕು. ಯಾವುದೇ ಅಣೆಕಟ್ಟು ವೀಕ್ಷಣೆ, ವಿಮಾನ ನಿಲ್ದಾಣ ಪ್ರವೇಶ, ವಿಧಾನಸೌಧ ವೀಕ್ಷಣೆ ಹೀಗೆ ಎಲ್ಲಿಗೆ ಹೋಗ ಬೇಕಾದರೂ ನಿರ್ಬಂಧ ಹೇರಲಾಗಿದೆ. ಬಹುತೇಕ ದೂರದಿಂದಲೇ ನೋಡಿ ಆನಂದಿಸಬೇಕಾದ ಕಾಲ
ಘಟ್ಟದಲ್ಲಿ ನಾವಿದ್ದೇವೆ. ಇಷ್ಟೆಲ್ಲ ಬಿಗಿ ಭದ್ರತೆ ಇದ್ದರೂ ದೇಶದ ಶಕ್ತಿಕೇಂದ್ರವಾದ ಸಂಸತ್ತಿನಲ್ಲಿ ಭದ್ರತೆ ಭೇದಿಸಿ ಇಬ್ಬರು ಯುವಕರು ಸಂದರ್ಶನ ಗ್ಯಾಲರಿಯಿಂದ ಸದನದೊಳಗೆ
ಜಿಗಿದಿದ್ದಾರೆ! ಈ ಪ್ರಕರಣ ದೇಶದ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. 

⇒ಜಿ.ನಾಗೇಂದ್ರ ಕಾವೂರು, ಸಂಡೂರು

ಚಿಕಿತ್ಸೆಗೆ ನೆರವಾಗಿ

ನನ್ನ ಪತ್ನಿ ಸಬೀನಾ ನದಾಫ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಕಿಡ್ನಿ ನೀಡಲು ಆಕೆಯ ತಾಯಿ ಮತ್ತು ಸಹೋದರ ಸಿದ್ಧರಿದ್ದಾರೆ. ಆದರೆ ಆಕೆಯ ದೇಹದಲ್ಲಿ ರಕ್ತದ ಕಣಗಳು ಉತ್ಪಾದನೆಯಾದ ಕೆಲವೇ ಕ್ಷಣಗಳಲ್ಲಿ ಸಾಯುತ್ತಿವೆ. ಇಂತಹ ಸ್ಥಿತಿಯಲ್ಲಿ ಕಿಡ್ನಿಯನ್ನು ಕಸಿ ಮಾಡಿದರೆ ಅದು ಸಹ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ಈ ಕಾಯಿಲೆಯನ್ನು ಗುಣಪಡಿಸಲು ಸೊಲಿರಿಸ್‌ ಎಂಬ ಸುಮಾರು 20 ಇಂಜೆಕ್ಷನ್‌ಗಳನ್ನು ನೀಡಬೇಕಾಗುತ್ತದೆ. 10 ಲಕ್ಷಕ್ಕೆ ಒಬ್ಬರಿಗೆ ಈ ರೀತಿಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಇಂಜೆಕ್ಷನ್‌ನ ಬೆಲೆ ತಲಾ ಸುಮಾರು ₹ 1.80 ಲಕ್ಷ ಆಗಿದ್ದು, 35 ಲಕ್ಷಕ್ಕೂ ಹೆಚ್ಚು ಹಣ ಬೇಕಾಗುತ್ತದೆ.
ಶಿಕ್ಷಕನಾಗಿರುವ ನಾನು ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದೇನೆ. ಈಗಾಗಲೇ ಸುಮಾರು 6 ಲಕ್ಷಕ್ಕೂ ಹೆಚ್ಚು
ಹಣವನ್ನು ಪತ್ನಿಯ ಚಿಕಿತ್ಸೆಗಾಗಿ ಖರ್ಚು ಮಾಡಿದ್ದೇನೆ. ಈಗ ಇಂಜೆಕ್ಷನ್‌ಗೆ ಅಗತ್ಯವಾದ ಹಣವನ್ನು ಹೊಂದಿಸುವುದು ಬಹಳ ಕಷ್ಟವಾಗಿದೆ. ದಾನಿಗಳು ಧನಸಹಾಯ ಮಾಡಬೇಕೆಂದು ಕೋರುತ್ತೇನೆ. ವಿವರ: ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ, ಖಾತೆ ಸಂಖ್ಯೆ: 64095350470, ಯಲಬುರ್ಗಾ ಶಾಖೆ, ಐಎಫ್‌ಎಸ್‌ಸಿ:  SBIN0040838. ಫೋನ್‌ಪೇ ಸಂಖ್ಯೆ 7026502441, ಸಂಪರ್ಕ ಸಂಖ್ಯೆ: 7026502441.

⇒ಮರ್ದನ್‌ಸಾಬ್‌ ನದಾಫ, ಕಲಭಾವಿ, ಯಲಬುರ್ಗಾ

ಶೃಂಗಾರಸಭೆ...!

ಭೂತಾಪವನು ತಡೆಯಲೆಂದು
ದುಬೈಯಲಿ ನಡೆದ ಶೃಂಗಸಭೆ
ಬರೀ ಶೃಂಗಾರಸಭೆಯಾಗಿ

ಮಾರ್ಪಟ್ಟ ಕಥನವನು

ಅರ್ಥವತ್ತಾಗಿ ಕಟ್ಟಿಕೊಟ್ಟಿದ್ದಾರೆ
ನಾಗೇಶ ಹೆಗಡೆ (ಪ್ರ.ವಾ., ಡಿ. 14).

ಭೋಗವಸ್ತುವಿನಲಿ
ಸುಖವನರಸುವುದು

ಬರೀ ಭ್ರಮೆ,
ಭೋಗಬದುಕು ಬದುಕಲ್ಲ
ಮಿತದಲಿ ಹಿತವಿದೆ

ಮಿತವೆ ಜಗಬಾಳಿಕೆಯ ನೀತಿ

 ಸಿ.ಪಿ.ಸಿದ್ಧಾಶ್ರಮ, ಮೈಸೂರು


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT