ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 29 ಏಪ್ರಿಲ್ 2024, 19:29 IST
Last Updated 29 ಏಪ್ರಿಲ್ 2024, 19:29 IST
ಅಕ್ಷರ ಗಾತ್ರ

ಶವಸಂಸ್ಕಾರಕ್ಕೆ ದೇಣಿಗೆ ಷರತ್ತು ಸರಿಯಲ್ಲ

ಗೌರಿಬಿದನೂರಿನಲ್ಲಿ ದೇಗುಲಕ್ಕೆ ದೇಣಿಗೆ ನೀಡಲಿಲ್ಲವೆಂಬ ಕಾರಣಕ್ಕೆ ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಸಮುದಾಯದ ಮುಖಂಡರು ಅಡ್ಡಿಪಡಿಸಿದ್ದನ್ನು (ಪ್ರ.ವಾ., ಏ. 29) ತಿಳಿದು ಅಚ್ಚರಿಯಾಯಿತು. ಒಬ್ಬ ವ್ಯಕ್ತಿಯ ಶವಸಂಸ್ಕಾರಕ್ಕೆ ಏನಿಲ್ಲ ಅಂದರೂ ಕನಿಷ್ಠ ಹತ್ತು ಸಾವಿರ ರೂಪಾಯಿ ಖರ್ಚು ಬರುತ್ತದೆ. ಅದನ್ನು ಹೊಂದಿಸುವುದೇ ಕೆಲವರಿಗೆ ಕಷ್ಟದ ವಿಷಯವಾಗಿರುವಾಗ, ಇನ್ನು ದೇಗುಲಕ್ಕೆ ದೇಣಿಗೆಯನ್ನೂ ನೀಡಬೇಕೆಂಬುದು ಅತಿಶಯವಲ್ಲವೇ? ಅಲ್ಲದೆ ದೇಗುಲಕ್ಕೆ ದೇಣಿಗೆಯನ್ನು ಶವಸಂಸ್ಕಾರದ ಸಂದರ್ಭದಲ್ಲಿ ವಸೂಲು ಮಾಡುವ ಪದ್ಧತಿ ವರ್ಷಗಳಿಂದಲೂ ಇಲ್ಲಿ ಪಾಲನೆಯಾಗುತ್ತಿರುವುದು ಸರಿಯಲ್ಲ. ದೇಣಿಗೆ ಪಡೆಯಲೇಬೇಕಿದ್ದರೆ ಮದುವೆಯಂತಹ ಒಳ್ಳೆಯ ಕಾರ್ಯಗಳು ನಡೆಯುವಾಗ ಸಂಗ್ರಹಿಸುವುದು ಸಮಂಜಸ. ಅಲ್ಲದೆ, ಯಾವುದೇ ಒಂದು ಕುಟುಂಬಕ್ಕೆ ದೇಣಿಗೆ ಕೊಡುವ ಸಾಮರ್ಥ್ಯ ಇದೆಯೇ ಎಂಬುದನ್ನು ಊರಿನ ಹಿರಿಯರು ತಿಳಿದು ನಂತರ ದೇಣಿಗೆ ಪಡೆಯುವುದು ಸೂಕ್ತ.

⇒ಬಾಲಕೃಷ್ಣ ಎಂ.ಆರ್., ಬೆಂಗಳೂರು

ಸಿಇಟಿ ಗೊಂದಲ: ಮರುಪರೀಕ್ಷೆ ಸೂಕ್ತ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಬೇಜವಾಬ್ದಾರಿತನದಿಂದಾಗಿ ಈ ಸಲದ ಸಿಇಟಿಯು ಗೊಂದಲದ ಗೂಡಾಗಿದೆ. ಲಕ್ಷಾಂತರ ಮಕ್ಕಳ ಶೈಕ್ಷಣಿಕ ಜೀವನದ ಜೊತೆ ಆಟವಾಡುತ್ತಿರುವ ಪ್ರಾಧಿಕಾರವು ಪಠ್ಯದಲ್ಲಿ ಇಲ್ಲದ ಐವತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ನೀಡಿದ್ದರಿಂದ, ಪ್ರತಿಭಾವಂತ ಮಕ್ಕಳು ತಮ್ಮ ನಿಜವಾದ ರ್‍ಯಾಂಕಿಂಗ್‌ನಿಂದ ವಂಚಿತರಾಗುವಂತೆ ಆಗಿದೆ. ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ನೋಡಿ ದಿಗ್ಭ್ರಮೆಗೊಂಡು ಗೊಂದಲಕ್ಕೀಡಾಗಿ, ಅರ್ಧದಲ್ಲೇ ಕೊಠಡಿಯಿಂದ ಹೊರಬಂದ ಮಕ್ಕಳು ಬಹಳಷ್ಟು ಮಂದಿ ಇದ್ದಾರೆ.

ಈ ನಡುವೆ, ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಹೊರಗಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನ ಮಾಡಲು ಉನ್ನತ ಶಿಕ್ಷಣ ಇಲಾಖೆಯು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಇದರಿಂದ ಮಕ್ಕಳ ನಿಜವಾದ ಪ್ರತಿಭೆಯನ್ನು ಅರಿಯಲು ಸಾಧ್ಯವೇ? ಹಾಗಾಗಿ, ತಡವಾದರೂ ಸರಿಯೇ ಮರುಪರೀಕ್ಷೆ ನಡೆಸಿ ಮಕ್ಕಳ ನಿಜವಾದ ಪ್ರತಿಭೆಯನ್ನು ಅಳೆಯಬೇಕಿದೆ. ಹಾಗಾಗದಿದ್ದಲ್ಲಿ ಮಕ್ಕಳು, ಪೋಷಕರು ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ ಬಂದು, ಪ್ರಕ್ರಿಯೆ ತಡವಾಗಬಹುದು. ಅದರಿಂದಾಗಿ ಸರ್ಕಾರ ಮತ್ತಷ್ಟು ಮುಜುಗರಕ್ಕೆ ಒಳಗಾಗುವ ಸಂದರ್ಭ ಬರಬಹುದು.

⇒ದೇವರಹಳ್ಳಿ ಲೋಕೇಶ್, ಪಾಂಡವಪುರ

ಲೈಂಗಿಕ ದೌರ್ಜನ್ಯ ಆರೋಪ: ತಾರ್ಕಿಕ ಅಂತ್ಯ ಕಾಣಲಿ

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು ತತ್ಸಂಬಂಧಿತ ವಿಡಿಯೊ ತುಣುಕುಗಳು ಪೆನ್‌ಡ್ರೈವ್ ಮುಖಾಂತರ ಸಾರ್ವಜನಿಕರ ನಡುವೆ ಹರಿದಾಡುತ್ತಿವೆ. ಜೊತೆಗೆ ಎಫ್‌ಐಆರ್ ದಾಖಲಾಗಿದ್ದು ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ. ಇಂತಹ ಆರೋಪಗಳು ಅಥವಾ ಕೃತ್ಯಗಳು ಆಗಾಗ ಕೇಳಿಬರುತ್ತವೆ. ಆರೋಪಿಗಳು ‘ಈ ವಿಡಿಯೊದಲ್ಲಿ ಇರುವುದು ನಾನಲ್ಲ, ತಂತ್ರಜ್ಞಾನದ ಕೈಚಳಕ...’ ಎಂದೆಲ್ಲ ಹೇಳಿ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಾರೆ. ದಿನಗಳು ಉರುಳಿದಂತೆ ಅಂತಿಮವಾಗಿ ಏನೂ ಆಗೇ ಇಲ್ಲ ಎಂಬಂತೆ ಆರೋಪಿಗಳು ನಿರಾಳರಾಗುತ್ತಾರೆ ಮತ್ತು ಜನ ಸಹ ಮರೆತು ಸುಮ್ಮನಾಗುತ್ತಾರೆ. 

ಇಂತಹ ಗಂಭೀರ ಆರೋಪ ಕೇಳಿಬಂದಾಗ ಪೊಲೀಸರು ಮತ್ತು ನ್ಯಾಯಾಂಗವು ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ನೀಡಬೇಕು ಇಲ್ಲವಾದರೆ ಆರೋಪದಿಂದ ವ್ಯಕ್ತಿಯನ್ನು ಮುಕ್ತಗೊಳಿಸಬೇಕು. ಅನೇಕ ಬಾರಿ ಇವೆರಡೂ ಆಗದೆ ಪ್ರಕರಣ ನಿಂತಲ್ಲೇ ನಿಲ್ಲುವಂತೆ ಆಗುತ್ತದೆ. ಇದು ಸರಿಯಲ್ಲ.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ನ್ಯಾಯ ಸಿಗಲಿ, ಕಠಿಣ ಕ್ರಮ ಜರುಗಲಿ 

ಲೈಂಗಿಕ ಕಿರುಕುಳ ಆರೋಪದ ಮೇಲೆ ಎಚ್‌.ಡಿ.ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಸಹಾಯಕ ಹೆಣ್ಣುಮಕ್ಕಳ ಮೇಲೆ ಈ ರೀತಿಯ ದೌರ್ಜನ್ಯ ನಡೆಸಿರುವುದು ನಿಜವೇ ಆಗಿದ್ದರೆ ಅದು ಅಸಹನೀಯ. ‘ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದಿದ್ದಾರೆ ರೇವಣ್ಣ ಅವರ ಸಹೋದರ
ಎಚ್‌.ಡಿ.ಕುಮಾರಸ್ವಾಮಿ. ಅಲ್ಲಿಗೆ, ಗೌಡರ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಲಿ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಲಿ.

⇒ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ

ಮೊದಲ ಮತ: ನಿರಾಸೆ ಮೂಡಿಸಿದ್ದೇಕೆ?

2024ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 1.85 ಕೋಟಿ ಹೊಸ ಮತದಾರರು ತಮ್ಮ ಮೊದಲ ಮತ ಚಲಾವಣೆ ಮಾಡಲಿದ್ದಾರೆ ಎಂಬುದು ಸಂತೋಷದ ವಿಷಯ. ನನ್ನ ಮಕ್ಕಳೂ ಸೇರಿದಂತೆ ಅನೇಕ ಯುವಕ, ಯುವತಿಯರು ಚುನಾವಣಾ ಆಯೋಗದ ಜಾಲತಾಣದಲ್ಲಿ ಆನ್‌ಲೈನ್ ಮೂಲಕ ಪೋಷಕರ ಎಪಿಕ್ ಕಾರ್ಡಿನ ಸಂಖ್ಯೆ ಜೋಡಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿದ್ದಾರೆ. ಅರ್ಜಿ ನೋಂದಣಿ ಆಗಿ ಸ್ವೀಕೃತಿ ಸಂಖ್ಯೆ ಪಡೆದು ಕಾತರದಿಂದ ಕಾಯುತ್ತಿದ್ದರೂ ವೋಟರ್ ಐ.ಡಿ ಕಾರ್ಡ್ ಅಥವಾ ಚುನಾವಣಾ ಪಟ್ಟಿಯಲ್ಲಿ ತಮ್ಮ ಹೆಸರು ಕಾಣದೆ ನಿರಾಶರಾಗಿದ್ದಾರೆ. ನಾನು ಮತ ಹಾಕಲು ಹೋದ ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಯನ್ನು ಈ ಬಗ್ಗೆ ವಿಚಾರಿಸಿದಾಗ ‘ಗೊತ್ತಿಲ್ಲ ಸರ್, ನನ್ನ ಮಗಳೂ ಮೊದಲನೇ ಬಾರಿ ಮತ ಹಾಕಲು ನೋಂದಾಯಿಸಿದ್ದಳು, ಆದರೆ ಅವಳ ಹೆಸರೂ ಇಲ್ಲ, ಎಪಿಕ್ ಕಾರ್ಡ್ ಕೂಡ ಬಂದಿಲ್ಲ’ ಎಂದರು.

ವೋಟ್‌ ಹಾಕುವಂತೆ ಪ್ರೋತ್ಸಾಹಿಸುವ ರೀತಿಯಲ್ಲಿಯೇ ಆಯೋಗವು ನೋಂದಣಿ ಪ್ರಕ್ರಿಯೆಯ ಬಗ್ಗೆಯೂ ಹೆಚ್ಚು ಗಮನ ನೀಡಬೇಕಲ್ಲವೇ? ಆಧಾರ್ ಕಾರ್ಡ್ ಸಂಖ್ಯೆಯ ಬ್ಯಾಕ್‌ಗ್ರೌಂಡ್ ವೆರಿಫಿಕೇಷನ್ ಆಧಾರದ ಮೇಲೆ ಅನೇಕ ಸರ್ಕಾರಿ ಸೇವೆಗಳನ್ನು ಸೇವಾ ಸಿಂಧು ಜಾಲತಾಣದಲ್ಲಿ ಈಗಾಗಲೇ ವರ್ಷಗಳಿಂದ ಸರ್ಕಾರ ನೀಡುತ್ತಾ ಬಂದಿದೆ. ಇದೇ ಮಾದರಿಯಲ್ಲಿ ಚುನಾವಣಾ ಆಯೋಗ ಕೂಡ ತನ್ನ ಜಾಲತಾಣದಲ್ಲೇ ಆಧಾರ್ ಸಂಖ್ಯೆ ಆಧಾರದ ಮೇಲೆ ವೋಟರ್ ಐ.ಡಿ ಕಾರ್ಡ್ ಕೊಡುವುದು ದೊಡ್ಡ ಸವಾಲೇನಲ್ಲ.

⇒ಸುರೇಶ ಎಸ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT