ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 16 ಏಪ್ರಿಲ್ 2024, 19:49 IST
Last Updated 16 ಏಪ್ರಿಲ್ 2024, 19:49 IST
ಅಕ್ಷರ ಗಾತ್ರ

ನೆನಪು ಸದಾ ಹಸಿರು

ಕನ್ನಡ ಚಲನಚಿತ್ರರಂಗ ಕಂಡ ಪ್ರತಿಭಾವಂತರಲ್ಲಿ ದ್ವಾರಕೀಶ್ ಒಬ್ಬರು. ಆಗಿನ ಕಾಲದಲ್ಲೇ ವಿದೇಶದಲ್ಲಿ ಕನ್ನಡ ಚಿತ್ರದ ಚಿತ್ರೀಕರಣ ಮಾಡಿದವರು. ಕನ್ನಡ ಚಿತ್ರೋದ್ಯಮಕ್ಕೆ ಅದ್ದೂರಿತನವನ್ನು ಪರಿಚಯಿಸಿದವರಲ್ಲಿ ಅವರೂ ಒಬ್ಬರು. ಅನೇಕ ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಉದ್ಯಮಕ್ಕೆ ಪರಿಚಯಿಸಿ, ಪ್ರೋತ್ಸಾಹಿಸಿದವರು. ಕನ್ನಡ ಚಿತ್ರರಂಗದ ಹಾಸ್ಯದ ದಂತಕಥೆಗಳಾದ ಬಾಲಕೃಷ್ಣ ಹಾಗೂ ನರಸಿಂಹರಾಜು ಅವರಿಗೆ ಸರಿಸಮನಾಗಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿ ಮನರಂಜನೆಯ ಪರಂಪರೆಯನ್ನು ಮುಂದುವರಿಸಿದವರು.

ತಮ್ಮನ್ನು ಕುಳ್ಳ ಎಂದೇ ಕರೆದುಕೊಳ್ಳುತ್ತಿದ್ದ ದ್ವಾರಕೀಶ್, ಅನೇಕ ಸಾಧನೆಗಳ ಮೂಲಕ ಚಿತ್ರರಂಗದಲ್ಲಿ ಅತಿ ಎತ್ತರಕ್ಕೆ ಏರಿದವರು. ಅವರ ಗೆಲುವು ಮತ್ತು ಸಾಧನೆ ಪ್ರೇರಣೆ ನೀಡುವಂತಹವು. ಕನ್ನಡ ಚಿತ್ರರಸಿಕರ ಮನಗೆದ್ದು, ಚಿತ್ರರಂಗದ ಹಾದಿಯನ್ನು ಬೆಳಗಿಸಿ, ಉದ್ಯಮವನ್ನು ಉನ್ನತೀಕರಿಸಿದವರು. ಅವರ ನೆನಪು ಸದಾ ಹಸಿರು. 

⇒ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರು

ದ್ವಿತೀಯ ಭಾಷೆಯಾಗಿ ತೆಲುಗು: ಅನವಶ್ಯಕ ಹೇಳಿಕೆ 

ಕರ್ನಾಟಕದಲ್ಲಿ 1.35 ಕೋಟಿ ತೆಲುಗು ಭಾಷಿಕರು ಇರುವುದರಿಂದ ತೆಲುಗನ್ನು ದ್ವಿತೀಯ ಭಾಷೆಯಾಗಿ ಬೋಧಿಸಬೇಕು ಎಂಬ ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ಎ. ರಾಧಾಕೃಷ್ಣ ರಾಜು ಅವರ ಅಭಿಪ್ರಾಯ (ಪ್ರ.ವಾ., ಏ. 15) ಒಪ್ಪುವಂಥದ್ದಲ್ಲ. ಕರ್ನಾಟಕದಲ್ಲಿ ತೆಲುಗು ಭಾಷಿಕರಷ್ಟೇ ಅಲ್ಲ, ತಮಿಳರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಹಿಂದಿ, ಒರಿಯಾ, ಬೆಂಗಾಲಿ, ಭೋಜಪುರಿ ಮಾತನಾಡುವ ಉತ್ತರ ಭಾರತೀಯರು ಹಾಗೂ ಉರ್ದು ಮತ್ತು ರಾಜ್ಯದ ಅನೇಕ ಉಪಭಾಷೆಗಳನ್ನು ಮಾತನಾಡುವವರು ಕೂಡ ಇದ್ದಾರೆ. ಅಷ್ಟೇಏಕೆ, ಈಗ ಹಳ್ಳಿ ಹಳ್ಳಿಗಳಲ್ಲಿ ಕೂಡ ನೇಪಾಳಿಗರು ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಸಹ ಕರ್ನಾಟಕದ ಶಾಲೆಗಳಲ್ಲಿ ನೇಪಾಳಿಯನ್ನು ಬೋಧಿಸಬೇಕು ಎಂಬ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲ! ಇವರೆಲ್ಲರಿಗೂ ಅವರವರ ಮಾತೃಭಾಷೆಯಲ್ಲಿ ಶಿಕ್ಷಣ ಒದಗಿಸುವುದು ರಾಜ್ಯ ಸರ್ಕಾರಕ್ಕೆ ಹೊರೆಯಾಗುವುದಿಲ್ಲವೇ? ಇದು ಅನಗತ್ಯ ಚರ್ಚೆ, ವಿರೋಧಗಳಿಗೂ ಕಾರಣವಾಗುತ್ತದೆ ಎಂಬುದು ಗಮನಾರ್ಹ.

ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ಆಗಿರುವುದರಿಂದ ಆಯಾ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡಲು ಸೌಕರ್ಯ ಕಲ್ಪಿಸುವುದು ರಾಜ್ಯ ಸರ್ಕಾರಗಳ ಹೊಣೆ. ಇದನ್ನು ಮೀರಿ, ರಾಜ್ಯದಲ್ಲಿ ವಾಸಿಸುವ ದೇಶದ ಇತರ ಭಾಷಿಕರ ಮಾತೃಭಾಷೆಯಲ್ಲಿ ಶಿಕ್ಷಣದ ಆಶಯಗಳನ್ನು ಪೂರೈಸಲು ಮುಂದಾದರೆ, ಭಾಷೆಯ ಆಧಾರದಲ್ಲಿ ರಾಜ್ಯಗಳ ವಿಂಗಡಣೆ ಬೇಕಾಗಿತ್ತೇ ಎಂಬ ಪ್ರಶ್ನೆ ಎದುರಾಗುತ್ತದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅನೇಕ ಕಾರಣಗಳಿಂದ ವಲಸೆ ಅನಿವಾರ್ಯ. ಆಗ ಆಯಾ ರಾಜ್ಯದ ಭಾಷೆಯನ್ನು ಕಲಿಯಬೇಕು. ಇದನ್ನು ಕನ್ನಡಿಗರು
ಅನುಸರಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.

⇒ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

ರಾಷ್ಟ್ರ ನಾಯಕರ ಭಾಷಣ: ತರ್ಜುಮೆಯಾಗಲಿ

ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಲು ಎನ್‌ಡಿಎ ಮೈತ್ರಿಕೂಟವು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೊನ್ನೆ ಭಾನುವಾರ ಬೃಹತ್ ಸಾರ್ವಜನಿಕ ಸಭೆಯನ್ನು ಏರ್ಪಡಿಸಿತ್ತು. ಭಾಗವಹಿಸಿದ್ದ ಶೇ 80ರಷ್ಟು ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿ ಭಾಷಣ ಎಷ್ಟರಮಟ್ಟಿಗೆ ಅರ್ಥವಾಯಿತೋ ಗೊತ್ತಿಲ್ಲ. ಹಿಂದೆಲ್ಲಾ ರಾಷ್ಟ್ರೀಯ ಪಕ್ಷಗಳ ನಾಯಕರ ಹಿಂದಿ ಅಥವಾ ಇಂಗ್ಲಿಷ್ ಭಾಷಣಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಮತದಾರರನ್ನು ಉತ್ತೇಜಿಸಿ ಮನಮುಟ್ಟುವಂತೆ ವಿವರಿಸಲಾಗುತ್ತಿತ್ತು. ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದರೆ, ಸಭೆಗೆ ಇನ್ನಷ್ಟು ಮೆರುಗು ಬರುತ್ತಿತ್ತು. ವೇದಿಕೆಯ ಮೇಲಿದ್ದ ಹಲವು ರಾಜಕೀಯ ನಾಯಕರಿಗೂ ಮೋದಿಯವರ ಭಾಷಣ ಅರ್ಥವಾದಂತೆ ಕಾಣಲಿಲ್ಲ. 

ಜನರನ್ನು ಸೇರಿಸಿ, ತಮ್ಮ ಶಕ್ತಿ ಪ್ರದರ್ಶನ ಮಾಡುವುದಷ್ಟೇ ಮುಖ್ಯವಾಗಬಾರದು. ಮತದಾರರಿಗೆ ರಾಷ್ಟ್ರೀಯ ನಾಯಕರ ಮಾತು ಅರ್ಥವಾಗಬೇಕು. ಈ ಕಾರಣದಿಂದಲೇ, ಮೋದಿಯವರ ಭಾಷಣಕ್ಕಿಂತಲೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭಾಷಣವೇ ಹೆಚ್ಚು ಜನರನ್ನು ತಲುಪಿ, ನೆರೆದಿದ್ದ ಸಾವಿರಾರು ಮಂದಿ ಶಿಳ್ಳೆ, ಕೇಕೆ, ಚಪ್ಪಾಳೆ ತಟ್ಟಿ ಅವರು ಭಾಷಣ ಮಾಡಲು ಮತ್ತಷ್ಟು ಉತ್ತೇಜನ ನೀಡಿದರು. ಮುಂದಿನ ದಿನಗಳಲ್ಲಾದರೂ ರಾಷ್ಟ್ರೀಯ ಪಕ್ಷಗಳ ನಾಯಕರ ಭಾಷಣವನ್ನು ರಾಜ್ಯಭಾಷೆಗೆ ತರ್ಜುಮೆ ಮಾಡುವಂತಾಗಲಿ. ಆಗಷ್ಟೇ ಅದು ಮತದಾರರ ಮೇಲೆ ಹೆಚ್ಚು ಪ್ರಭಾವ ಬೀರಬಲ್ಲದು.

⇒ಬೂಕನಕೆರೆ ವಿಜೇಂದ್ರ, ಮೈಸೂರು

ಸಂಸತ್ತಿನಲ್ಲಿ ಆಳ್ವಾ ದಂಪತಿಯ ದಾಖಲೆ

ಇದು, ನಮ್ಮ ಸಂಸತ್ತಿನ ಇತಿಹಾಸದ ಅಪರೂಪದ ಸಂಗತಿ. ಸ್ವಾತಂತ್ರ್ಯಯೋಧ ಜೋಕಿಮ್ ಆಳ್ವಾ ಪ್ರಥಮ ಲೋಕಸಭೆಗೆ ಕೆನರಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅದೇ ಕಾಲಕ್ಕೆ ಅವರ ಪತ್ನಿ ವೈಲೆಟ್ ಆಳ್ವಾ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ಭಾರತದಲ್ಲಿ  ಏಕಕಾಲಕ್ಕೆ ಸಂಸದರಾಗಿದ್ದ ಮೊದಲ ದಂಪತಿ ಎಂಬ ಗೌರವಕ್ಕೆ ಅವರು ಪಾತ್ರರಾದರು. ಈ ಕಾರಣಕ್ಕೆ ಲೋಕಸಭೆಯಲ್ಲಿ ಆಳ್ವಾ ದಂಪತಿಯ ಭಾವಚಿತ್ರ ಅನಾವರಣಗೊಳಿಸಲಾಗಿದೆ ಮತ್ತು ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಗಿದೆ.

ಉಡುಪಿಯಲ್ಲಿ ಜನಿಸಿದ ಜೋಕಿಮ್ ಆಳ್ವಾ ಮುಂಬೈಯಲ್ಲಿ ಕಾನೂನು ಪದವಿ ಪಡೆದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿದರು. ಗುಜರಾತ್ ಮೂಲದ ವೈಲೆಟ್ ಅವರು ಮುಂಬೈನಲ್ಲಿ ಪ್ರಸಿದ್ಧ ವಕೀಲೆ ಆಗಿದ್ದರು. ಇಬ್ಬರೂ ಪರಸ್ಪರ ಆಕರ್ಷಿತರಾಗಿ ವಿವಾಹ ಮಾಡಿಕೊಂಡರು. ವೈಲೆಟ್ ಕೂಡ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಗಾಂಧೀಜಿ ಈ ದಂಪತಿಯ ರಾಷ್ಟ್ರೀಯ ಸೇವೆಯನ್ನು ಗುರುತಿಸಿ ಜೋಕಿಮ್ ಅವರಿಗೆ ಪತ್ರ ಬರೆದಿದ್ದರು. ವೈಲೆಟ್ ಅವರು ರಾಜ್ಯಸಭೆಯ ಪ್ರಥಮ ಮಹಿಳಾ ಉಪಸಭಾಪತಿ ಗೌರವಕ್ಕೂ ಪಾತ್ರರಾದವರು. ಕೇಂದ್ರ ಸಚಿವೆಯಾಗಿದ್ದ ಮಾರ್ಗರೇಟ್ ಆಳ್ವಾ ಈ ದಂಪತಿಯ ಸೊಸೆ. ಅವರು ಬರೆದ ‘ಕರೇಜ್ ಆ್ಯಂಡ್‌ ಕಮಿಟ್‌ಮೆಂಟ್’
ಆತ್ಮಕಥೆಯಲ್ಲಿ ತಮ್ಮ ಅತ್ತೆ, ಮಾವ ಸ್ವಾತಂತ್ರ್ಯ ಚಳವಳಿಯಲ್ಲಿ ತೋರಿದ ಧೈರ್ಯ, ಮಾಡಿದ ತ್ಯಾಗವನ್ನು ವಿವರಿಸಿದ್ದಾರೆ.

⇒ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT