ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 19 ಮೇ 2024, 22:30 IST
Last Updated 19 ಮೇ 2024, 22:30 IST
ಅಕ್ಷರ ಗಾತ್ರ

ಹಣ್ಣಾಗಿಸಲು ರಾಸಾಯನಿಕ ಬಳಕೆ

ಮಾವಿನ ಹಣ್ಣಿನ ಈ ಋತುವಿನಲ್ಲಿ ಕೆಲ ವ್ಯಾಪಾರಸ್ಥರು ರಾಸಾಯನಿಕಗಳನ್ನು ಬಳಸಿ ಮಾವನ್ನು ಹಣ್ಣಾಗಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಜೊತೆಗೆ ಹಣ್ಣುಗಳು ತಾಜಾ ಮತ್ತು ಆಕರ್ಷಕವಾಗಿ ಕಾಣಲು ಕೆಲವರು ರಾಸಾಯನಿಕಯುಕ್ತ ಬಣ್ಣದ ನೀರಿನಲ್ಲಿ ಮುಳುಗಿಸುತ್ತಿದ್ದಾರೆ. ಇಂತಹ ಹಣ್ಣುಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ, ಹಣ್ಣುಗಳನ್ನು ಖರೀದಿಸುವಾಗ ಸರಿಯಾಗಿ ಪರಿಶೀಲಿಸಬೇಕು. ಜೊತೆಗೆ, ರಾಸಾಯನಿಕ ಬಳಸಿ ಹಣ್ಣಾಗಿಸುವ ವ್ಯಾಪಾರಸ್ಥರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು.

– ಚನ್ನಕೇಶವ ಜಿ.ಕೆ., ತರೀಕೆರೆ

ಬಾರದ ಗೌರವಧನ: ಉಪನ್ಯಾಸಕರಿಗೆ ಹೊರೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಡಿಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ - 1ರ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಏಪ್ರಿಲ್ ಮೊದಲ ವಾರ ಮುಗಿದಿದೆ. ಆದರೆ ಈ
ಕಾರ್ಯದಲ್ಲಿ ಪಾಲ್ಗೊಂಡಿದ್ದ ಉಪನ್ಯಾಸಕರಿಗೆ ಇದುವರೆಗೂ ಆ ಸಂಬಂಧದ ಗೌರವಧನ ಬಂದಿಲ್ಲ. ಈ ಮೊದಲು ಮೌಲ್ಯಮಾಪನದ ಕೊನೆಯ ದಿನವೇ ಮೌಲ್ಯಮಾಪಕರಿಗೆ ಗೌರವಧನವನ್ನು ಚೆಕ್ ರೂಪದಲ್ಲಿ ಆಯಾ ಮೌಲ್ಯಮಾಪನ ಕೇಂದ್ರದಲ್ಲಿಯೇ ವಿತರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಗೌರವಧನವನ್ನು ಉಪನ್ಯಾಸಕರ ಖಾತೆಗಳಿಗೆ ನೇರವಾಗಿ, ಆದರೆ ಬಹಳ ವಿಳಂಬವಾಗಿ ಜಮಾ ಮಾಡಲಾಗುತ್ತಿದೆ. ಹಿಂದಿನ ವರ್ಷ ಮೌಲ್ಯಮಾಪನ ಪೂರ್ಣಗೊಳಿಸಿದ ಎರಡು– ಮೂರು ತಿಂಗಳ ನಂತರ ಗೌರವಧನ ಜಮೆಯಾಗಿತ್ತು.

ಇದರಿಂದ ಅನುದಾನರಹಿತ ಕಾಲೇಜುಗಳ ಉಪನ್ಯಾಸಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಏಕೆಂದರೆ, ಬೇಸಿಗೆ ರಜೆಯಲ್ಲಿ ಅವರಿಗೆ ಸಂಬಳ ಇರುವುದಿಲ್ಲ. ಮೌಲ್ಯಮಾಪನ ಕಾರ್ಯಕ್ಕೆ ಬೇರೆ ಊರುಗಳಿಗೆ ಸ್ವಂತ ಖರ್ಚಿನಲ್ಲಿ ಅವರು ಹಾಜರಾಗಬೇಕಾಗುತ್ತದೆ. ಅಲ್ಲದೆ ಒಂದು ವಾರದ ವಸತಿ ಮತ್ತು ಊಟದ ವೆಚ್ಚವನ್ನು ಭರಿಸಬೇಕಾಗುತ್ತದೆ. ಖಾಸಗಿ ಕಾಲೇಜುಗಳ ಉಪನ್ಯಾಸಕರ ಹಿತದೃಷ್ಟಿಯಿಂದ ಮೊದಲಿನಂತೆ ಮೌಲ್ಯಮಾಪನದ ಕೊನೆಯ ದಿನ ಅಥವಾ ಮುಗಿದ ಎರಡು– ಮೂರು ದಿನಗಳಲ್ಲಿ ಗೌರವಧನ ಜಮಾ ಮಾಡಲು ಇಲಾಖೆ ಕ್ರಮ ಕೈಗೊಳ್ಳಬೇಕು.

– ಅಶೋಕ ಓಜಿನಹಳ್ಳಿ, ಕೊಪ್ಪಳ 

ದೀಪ ಆರಿಸದೇ ಹಣಕ್ಕಾಗಿ ಕಾಯುವವರು!

‘ರಾಜಕಾರಣಕ್ಕೆ ಆಗಲಿ ನೀತಿಯ ದೀಕ್ಷೆ’ ಎಂಬ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ, ಮೇ 18) ಇಂದಿನ ರಾಜಕಾರಣಿಗಳ ನೈತಿಕ ಅಧಃಪತನದ ಬಗ್ಗೆ ತುಂಬಾ ಚೆನ್ನಾಗಿ ಚರ್ಚಿಸಿದೆ. ಕೆಲವು ವರ್ಷಗಳ ಹಿಂದೆ ರಾಜಕಾರಣಿಯೊಬ್ಬರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ, ‘ರಾಜಕಾರಣಿಗಳು ಭ್ರಷ್ಟರಾದರೆ ಅದು ಯಾವತ್ತಾದರೂ ಸರಿಯಾಗಬಹುದೇನೊ ಎಂದು ಸಮಾಧಾನಪಟ್ಟುಕೊಳ್ಳಬಹುದಿತ್ತು. ಆದರೆ ಪ್ರಜಾಪ್ರಭುತ್ವದ ತಾಯಿಬೇರಾಗಿರುವ ಮತದಾರರೇ ಆ ಹಂತಕ್ಕೆ ಬಂದು ತಲುಪುವುದಿದೆಯಲ್ಲಾ ಅದು ತುಂಬಾ ಆತಂಕದ ವಿಷಯ’ ಎಂದಿದ್ದರು. ಅವರ ಈ ಮಾತುಗಳು ನನ್ನ ಮನದಲ್ಲಿ ಸದಾ ಮಾರ್ದನಿಸುತ್ತಿರುತ್ತವೆ.

ಈ ಹಿಂದೆ ಚುನಾವಣೆಯ ಹಿಂದಿನ ದಿನ ಕೂಲಿಕಾರ್ಮಿಕರಿಗೆ ಅವರು ತಮ್ಮ ಕೂಲಿ ಕೆಲಸ ಬಿಟ್ಟು ಮತ ಹಾಕಲು ಬರುತ್ತಾರಲ್ಲಾ ಎನ್ನುವ ಕಾರಣದಿಂದ ಕೆಲವೆಡೆ ಖರ್ಚಿಗೆ ಕಾಸು ಕೊಡುವ ಪರಿಪಾಟ ಇತ್ತು. ರೈತಾಪಿ ವರ್ಗ ಹಾಗೂ ಆರ್ಥಿಕವಾಗಿ ಒಂದಷ್ಟು ಸುಸ್ಥಿತಿಯಲ್ಲಿದ್ದವರ ಮನೆಗಳಿಗೆ ಹಣ ಕೊಡಲು ಹೋಗುವುದಕ್ಕೆ ಪಕ್ಷಗಳ ಕಾರ್ಯಕರ್ತರು ಹೆದರುತ್ತಿದ್ದರು. ಏಕೆಂದರೆ ಅವರಿಂದ ವಾಚಾಮಗೋಚರವಾಗಿ ಬೈಸಿಕೊಂಡು ಬರಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಲಕ್ಷಾಂತರ ರೂಪಾಯಿ ಆದಾಯ ಇರುವವರೂ ಚುನಾವಣೆಯ ಹಿಂದಿನ ದಿನ ಹಣ ಕೊಡದಿದ್ದರೆ ‘ನಮಗೇಕೆ ಕೊಡಲಿಲ್ಲ’ ಎಂದು ಕ್ಯಾತೆ ತೆಗೆಯುತ್ತಾರೆ. ಅಂದು ಇಡೀ ರಾತ್ರಿ ದೀಪ ಆರಿಸದೇ ಕಾಯುತ್ತಿರುತ್ತಾರೆ. ಮೊನ್ನೆ ಲೋಕಸಭಾ ಚುನಾವಣೆಯಲ್ಲಿ ಹಣ ಕೊಡಲಿಲ್ಲ ಎಂದು ಮತದಾನ ಬಹಿಷ್ಕರಿಸಿದ ಪ್ರಕರಣಗಳೂ ಕೆಲವೆಡೆ ನಡೆದಿವೆ. ಇದಕ್ಕೆಲ್ಲಾ ಅವರು ಕೊಡುವ ಉತ್ತರ, ‘ರಾಜಕಾರಣಿಗಳು ಗೆದ್ದು ಹೋದ ಮೇಲೆ ನಮ್ಮ ಕೈಗೆ ಸಿಕ್ಕುವುದಿಲ್ಲ. ಅವರು ಬೇಕಾದಷ್ಟು ಹಣ ಮಾಡಿಕೊಳ್ಳುತ್ತಾರೆ. ಸಿಕ್ಕಷ್ಟು ತೆಗೆದುಕೊಳ್ಳಲು ನಮಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಅವಕಾಶ. ಅದನ್ನೇಕೆ ನಾವು ಕಳೆದುಕೊಳ್ಳಬೇಕು’ ಎಂದು. ಹಾಗಾದರೆ ನಾವು ಎಂತಹ ದುಃಸ್ಥಿತಿಯತ್ತ ಸಾಗುತ್ತಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. 

– ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ಬ್ರಹ್ಮಾಂಡ ಭ್ರಷ್ಟಾಚಾರ: ಜಾಣ ಕುರುಡು ಏಕೆ?

ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹವು ನಿರಾಶಾದಾಯಕವಾಗಿರುವ ಕುರಿತು ಪತ್ರಿಕೆಯು ‘ಒಳನೋಟ’ದಲ್ಲಿ ಬೆಳಕು ಚೆಲ್ಲಿದೆ (ಪ್ರ.ವಾ., ಮೇ 19). ಸರ್ಕಾರ ಪ್ರತಿವರ್ಷ ಗ್ರಾಮ ಪಂಚಾಯಿತಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಒದಗಿಸುತ್ತಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪಡೆಯಲು ಸದಸ್ಯರ ನಡುವೆ ತೀವ್ರ ಪೈಪೋಟಿ ನಡೆಯುತ್ತದೆ. ಅದಕ್ಕಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ಕುರ್ಚಿ ಗಿಟ್ಟಿಸಿಕೊಳ್ಳುವ ವ್ಯಕ್ತಿಯು ಗ್ರಾಮದ ಅಭಿವೃದ್ಧಿಗಿಂತ ತಾನು ಹೂಡಿಕೆ ಮಾಡಿದ ಬಂಡವಾಳವನ್ನು ಲಾಭಸಮೇತ ಹಿಂಪಡೆಯಲು ಆಸಕ್ತಿ ವಹಿಸುತ್ತಾನೆ. ಹೀಗಾಗಿಯೇ, ತಮಗೆ
ದೊರೆತ ಎಲ್ಲಾ ಅನುದಾನವನ್ನು ಬಳಸಿ ಕಾಮಗಾರಿ ಮಾಡಲಾಗಿದೆ ಎಂದು ದಾಖಲಾತಿಯಲ್ಲಿ ತೋರಿಸಲಾಗುತ್ತದೆ.

ಸರ್ಕಾರಿ ಪ್ರಾಯೋಜಿತ ಅತಿ ದೊಡ್ಡ ಕಾರ್ಯಕ್ರಮವಾಗಿರುವ ಉದ್ಯೋಗ ಖಾತರಿ ಯೋಜನೆಯಲ್ಲಿ ಅತಿಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೊದಲುಗೊಂಡು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೂ ಶಾಮೀಲಾಗಿರುತ್ತಾರೆ. ಹೀಗಾಗಿಯೇ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ದೂರು ನೀಡಿದರೂ ಅವರು ಜಾಣ ಕುರುಡುತನ ಪ್ರದರ್ಶಿಸುತ್ತಾರೆ.

ಇಂತಹ ಬೆಳವಣಿಗೆಗಳಿಂದ ಜನರು ಪಂಚಾಯತ್ ರಾಜ್ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ.
ತಮ್ಮಿಂದ ಸಂಗ್ರಹಿಸಲಾಗುವ ಕರವನ್ನು ತಮ್ಮ ಹಾಗೂ ತಮ್ಮ ಊರಿನ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂಬ ನಂಬಿಕೆಯೂ ಇಲ್ಲದೆ ತೆರಿಗೆ ಕಟ್ಟಲು ಅವರು ಹಿಂದೇಟು ಹಾಕುತ್ತಾರೆ. ಹಾಗಾಗಿ, ಸರ್ಕಾರವು ತೆರಿಗೆ ಸಂಗ್ರಹಿಸುವ ಗುರಿ ನಿಗದಿಪಡಿಸಿದರಷ್ಟೇ ಸಾಲದು. ಸಂಗ್ರಹಿಸಿದ ತೆರಿಗೆ ಹಾಗೂ ತಾನು ನೀಡಿದ ಅನುದಾನವು ಸಮರ್ಪಕವಾಗಿ
ಬಳಕೆಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ.

–ಸುರೇಶ ಎಮ್. ತಾಕತರಾವ, ಹಲ್ಯಾಳ, ಅಥಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT